ಒಡಿಶಾದ ಕಳಿಂಗ ಇನ್ಟ್‌ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ (ಕೆಐಐಟಿ) ಕ್ಯಾಂಪಸ್‌ನಲ್ಲಿ 20 ವರ್ಷದ ನೇಪಾಳಿ ಬಿಟೆಕ್ ವಿದ್ಯಾರ್ಥಿನಿಯ ಸಾವು ವ್ಯಾಪಕ ಪ್ರತಿಭಟನೆಗಳು, ರಾಜತಾಂತ್ರಿಕ ಹಸ್ತಕ್ಷೇಪ, ಬಂಧನ ಮತ್ತು ಉನ್ನತ ಮಟ್ಟದ ತನಿಖೆಗಳಿಗೆ ಕಾರಣವಾಗಿದೆ. ತನ್ನ ಹಾಸ್ಟೆಲ್ ಕೊಠಡಿಯಲ್ಲಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆಕೆ ಕ್ಯಾಂಪಸ್‌ನಲ್ಲಿ ನಿರಂತರ ಕಿರುಕುಳ ಅನುಭವಿಸಿದ್ದರು ಎಂದು ವರದಿಯಾಗಿದೆ.
ವಿದ್ಯಾರ್ಥಿನಿಯ ಸಾವಿನಿಂದ ನೇಪಾಳಿ ವಿದ್ಯಾರ್ಥಿಗಳು ಆಕ್ರೋಶಗೊಂಡಿದ್ದು, ಪ್ರತಿಭಟನೆಗಳನ್ನು ನಡೆಸಿದ್ದಾರೆ. ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಹತ್ತಿಕ್ಕಲು ಕೆಐಐಟಿ ಅಮಾನವೀಯವಾಗಿ, ವಿಕೃತವಾಗಿ ನಡೆದುಕೊಂಡಿದೆ ಎಂದು ಆರೋಪಿಸಲಾಗಿದೆ. ಹಲವಾರು ನೇಪಾಳಿ ವಿದ್ಯಾರ್ಥಿಗಳು ಕ್ಯಾಂಪಸ್ ತೊರೆದು, ನೇಪಾಳಕ್ಕೆ ಮರಳಿದ್ದಾರೆ. ಪರಿಸ್ಥಿತಿ ಉಲ್ಬಣಗೊಂಡಿದ್ದು, ಭಾರತ ಮತ್ತು ನೇಪಾಳ ನಡುವಿನ ರಾಜತಾಂತ್ರಿಕ ವಿಷಯವಾಗಿ ಮಾರ್ಪಟ್ಟಿದೆ.
ಕ್ಯಾಂಪಸ್‌ನಲ್ಲಿ ನಡೆದದ್ದೇನು?
ಕೆಐಐಟಿ ವಿಶ್ವವಿದ್ಯಾಲಯವು ಬಿಜು ಜನತಾದಳದ (ಬಿಜೆಡಿ) ಹಿರಿಯ ನಾಯಕ ಮತ್ತು ಮಾಜಿ ಸಂಸದ ಅಚ್ಯುತ ಸಮಂತ ಸ್ಥಾಪಿಸಿ, ನಡೆಸುತ್ತಿರುವ ವಿಶ್ವವಿದ್ಯಾಲಯ. ಈ ವಿಶ್ವವಿದ್ಯಾಲಯಕ್ಕೆ ರಾಜಕೀಯ ಬೆಂಬಲವೂ ಇದೆ. ಇಲ್ಲಿ, ಮೂರನೇ ವರ್ಷದ ಬಿಟೆಕ್ (ಕಂಪ್ಯೂಟರ್ ಸೈನ್ಸ್) ವಿದ್ಯಾರ್ಥಿನಿ ಪ್ರಕೃತಿ ಲಾಮ್ಸಲ್ ಕಳೆದ ಭಾನುವಾರ ಮಧ್ಯಾಹ್ನ ತನ್ನ ಹಾಸ್ಟೆಲ್ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಮೊದಲಿಗೆ, ಆಕೆ ಸಾವನ್ನು ಆತ್ಮಹತ್ಯೆಯೆಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ, ಆಕೆ ಸಾವಿಗೆ ಹಲವಾರು ಕಾರಣಗಳಿವೆ ಎಂದು ಕ್ಯಾಂಪಸ್‌ನಲ್ಲಿ ಪ್ರತಿಭಟನೆಗಳು ಆರಂಭವಾದವು.
ವಿದ್ಯಾರ್ಥಿನಿ ಪ್ರಕೃತಿಗೆ ಬಿಟೆಕ್ (ಮೆಕ್ಯಾನಿಕಲ್) ವಿದ್ಯಾರ್ಥಿ ಅದ್ವಿಕ್ ಶ್ರೀವಾಸ್ತವ ಎಂಬಾತ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದಾನೆ. ಆತನ ಕಿರುಕುಳಕ್ಕೆ ಸಂಬಂಧಿಸಿದ ಆಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ, ವಿದ್ಯಾರ್ಥಿನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ. ವಿದ್ಯಾರ್ಥಿನಿ ಅಳುತ್ತಿರುವುದು ಕೇಳಿಬಂದಿದೆ.
ಆಡಿಯೋ ಹೊರ ಬಂದ ಬಳಿಕ, ಉತ್ತರ ಪ್ರದೇಶದ ಲಕ್ನೋ ನಿವಾಸಿಯಾಗಿರುವ ಅದ್ವಿಕ್‌ನನ್ನು ಸೋಮವಾರ ಭುವನೇಶ್ವರ ವಿಮಾನ ನಿಲ್ದಾಣದ ಬಳಿ ಪೊಲೀಸರು ಬಂಧಿಸಿದ್ದಾರೆ. ಆತನ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ವಿದ್ಯಾರ್ಥಿಗಳ ಮೇಲೆ ಹಲ್ಲೆ
ವಿದ್ಯಾರ್ಥಿನಿ ಸಾವಿಗೆ ವಿಶ್ವವಿದ್ಯಾಲಯ ಹೊಣೆಗಾರಿಕೆ ಒತ್ತುಕೊಳ್ಳಬೇಕು. ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಭಾನುವಾರ ಸಂಜೆ ನೇಪಾಳಿ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸಿದರು. ಆದರೆ, ಪ್ರತಿಭಟನಾನಿರತ ವಿದ್ಯಾರ್ಥಿಗಳೊಂದಿಗೆ ಸಂಯಮದಿಂದ ವರ್ತಿಸಬೇಕಿದ್ದ, ವಿದ್ಯಾರ್ಥಿಗಳ ಹಕ್ಕೊತ್ತಾಯಗಳನ್ನು ಆಲಿಸಬೇಕಿದ್ದ ವಿಶ್ವವಿದ್ಯಾಲಯ ಬಹಳ ಕ್ರೂರವಾಗಿ ನಡೆದುಕೊಂಡಿತು.
ರಾಜಕೀಯ ಪ್ರಭಾವ ಹೊಂದಿರುವ ಅಚ್ಯುತ ಸಮಂತ ಅವರ ಸೂಚನೆಯಂತೆ ವಿಶ್ವವಿದ್ಯಾನಿಲಯದ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿಗಳು ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ವಿದ್ಯಾರ್ಥಿಗಳ ಮೇಲೆ ಸಿಬ್ಬಂದಿಗಳು ಹಲ್ಲೆ ನಡೆಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
#WATCH | Odisha: A https://t.co/jHgpcuG1h1 third-year girl student from Nepal was found dead in KIIT University (Kalinga Institute of Industrial Technology) hostel in Bhubaneswar on 16th February. As per a notice issued by the University, the institute is hence closed sine die… pic.twitter.com/vVfgY140up
— ANI (@ANI) February 17, 2025
ವೀಡಿಯೊಗಳಲ್ಲಿ, ವಿದ್ಯಾರ್ಥಿಗಳ ಮೇಲೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ದೈಹಿಕ ಹಲ್ಲೆ ಮತ್ತು ಮೌಖಿಕ ನಿಂದನೆ ಮಾಡುತ್ತಿರುವುದು ಸೆರೆಯಾಗಿದೆ. ಅಲ್ಲದೆ, ಇಬ್ಬರು ಹಿರಿಯ ಅಧಿಕಾರಿಗಳು ನೇಪಾಳದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುತ್ತಿರುವುದು ಕಂಡುಬಂದಿದೆ. ಅಂತಹ ಒಂದು ಅವಹೇಳನಕಾರಿ ಹೇಳಿಕೆಯಲ್ಲಿ, ”ವಿಶ್ವವಿದ್ಯಾನಿಲಯವು ಸುಮಾರು 40,000 ವಿದ್ಯಾರ್ಥಿಗಳಿಗೆ ವ್ಯಯಿಸುತ್ತಿರುವ ಬಜೆಟ್‌ಗಿಂತ ನೇಪಾಳದ ಜಿಡಿಪಿ ಕಡಿಮೆಯಿದೆ” ಎಂಬ ನಿಂದನೆಯೂ ಒಂದು.
ಅಧಿಕಾರಿಗಳ ದೌರ್ಜನ್ಯದ ನಡುವೆಯೂ ವಿದ್ಯಾರ್ಥಿಗಳ ಪ್ರತಿಭಟನೆಗಳು ರಾತ್ರಿಯಿಡೀ ಮುಂದುವರೆದವು. ಈ ನಡುವೆ, ನೇಪಾಳದ ಎಲ್ಲ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಆವರಣದಿಂದ ಹೊರಹೋಗಬೇಕೆಂದು ಕೆಐಐಟಿ ಆದೇಶಿಸಿತು. ಇದು ಅನಿರೀಕ್ಷಿತವಾಗಿದೆ.
2025ರ ಫೆಬ್ರವರಿ 17ರಂದು ಹೇಳಿಕೆ ಬಿಡುಗಡೆ ಮಾಡಿದ ಕೆಐಐಟಿ, “ವಿಶ್ವವಿದ್ಯಾಲಯದಲ್ಲಿ ಎಲ್ಲ ನೇಪಾಳಿ ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ. ತಕ್ಷಣವೇ ನೇಪಾಳಿ ವಿದ್ಯಾರ್ಥಿಗಳು ಕ್ಯಾಂಪಸ್‌ನಿಂದ ಹೊರಹೋಗುವಂತೆ ನಿರ್ದೇಶಿಸಲಾಗಿದೆ” ಎಂದು ಹೇಳಿತು.
ವಿದ್ಯಾರ್ಥಿಗಳನ್ನು ಬಲವಂತವಾಗಿ ವಿಶ್ವವಿದ್ಯಾಲಯದ ಬಸ್‌ಗಳಿಗೆ ತುಂಬಿಕೊಂಡು ಕಟಕ್‌ನಲ್ಲಿರುವ ರೈಲ್ವೆ ನಿಲ್ದಾಣದಲ್ಲಿ ಇಳಿಸಲಾಯಿತು.
#WATCH | Bhubaneswar, Odisha | Nepal girl's death in Odisha's KIIT college, Protesting student says, "We only want a student body that is independent of the college itself and will protect us… Transparency from the faculty should be given on why such incidents are happening…… pic.twitter.com/iIYJltWIZi
— ANI (@ANI) February 18, 2025
”ಸುಮಾರು 40ಕ್ಕೂ ಹೆಚ್ಚು ಗೂಂಡಾಗಳು, ಬಾಡಿ ಬಿಲ್ಡರ್‌ಗಳು ನಮ್ಮ ಮೇಲೆ ಬೀದಿ ನಾಯಿಗಳಂತೆ ಹಲ್ಲೆ ಮಾಡಿದ್ದಾರೆ. ನಮಗೆ ಆಘಾತವಾಗಿದೆ. ಈಗ, ಸಮಸ್ಯೆ ತಿಳಿಯಾಗಿದೆ. ವಿದ್ಯಾರ್ಥಿಗಳು ವಾಪಸ್ ಬರಬಹುದು ಎನ್ನುತ್ತಿದ್ದಾರೆ. ಆದರೆ, ಭಾನುವಾರ ನಡೆದಂತೆ ಮತ್ತೆ ನಮ್ಮ ಮೇಲೆ ಹಲ್ಲೆ ನಡೆಯುವುದಿಲ್ಲ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ” ಎಂದು ನೇಪಾಳಿ ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಒಡಿಶಾ ಸರ್ಕಾರದಿಂದ ಕ್ರಮ
ವಿದ್ಯಾರ್ಥಿನಿ ಪ್ರಕೃತಿ ಸಾವಿನ ಸಂದರ್ಭ ಮತ್ತು ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ವಿಶ್ವವಿದ್ಯಾಲಯವು ಎಸಗಿದ ದೌರ್ಜನ್ಯಗಳ ಬಗ್ಗೆ ತನಿಖೆ ನಡೆಸಲು ಒಡಿಶಾ ಸರ್ಕಾರ ಮೂವರು ಸದಸ್ಯರ ಸತ್ಯಶೋಧನಾ ಸಮಿತಿಯನ್ನು ರಚಿಸಿದೆ. ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿಯಲ್ಲಿ ಉನ್ನತ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸದಸ್ಯರನ್ನು ಒಳಗೊಂಡಿದೆ.
ನೇಪಾಳಿ ವಿದ್ಯಾರ್ಥಿಗಳನ್ನು ಬಲವಂತವಾಗಿ ಹೊರಹಾಕುವುದು ಸೇರಿದಂತೆ ಘಟನೆಯ ಬಗ್ಗೆ ಸರ್ಕಾರಕ್ಕೆ ವಿವರಗಳನ್ನು ಸಲ್ಲಿಸುವಲ್ಲಿ ಕೆಐಐಟಿ ಅಧಿಕಾರಿಗಳು ವಿಫಲರಾಗಿದ್ದಾರೆ. ಸತ್ಯಶೋಧನಾ ಸಮಿತಿಯ ವರದಿ ಬಂದ ಬಳಿಕ, ವರದಿಯ ಆಧಾರದ ಮೇಲೆ ಸೂಕ್ತ ಕಾನೂನು ಮತ್ತು ಆಡಳಿತಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವ ಸೂರ್ಯಬಂಶಿ ಸೂರಜ್ ಹೇಳಿದ್ದಾರೆ.
ಈ ವರದಿ ಓದಿದ್ದೀರಾ?: ಅನ್ನಭಾಗ್ಯದಲ್ಲಿ 10 ಕೆಜಿ ಅಕ್ಕಿಯೇ ಯಾಕೆ? ಉತ್ತಮ ಪರ್ಯಾಯಗಳೂ ಇವೆಯಲ್ಲವೇ?
ಕಟಕ್ ರೈಲ್ವೇ ನಿಲ್ದಾಣದಲ್ಲಿ ನೇಪಾಳಿ ವಿದ್ಯಾರ್ಥಿಗಳನ್ನು ಏಕೆ ಇಳಿಸಲಾಯಿತು. ಘಟನೆ ಮತ್ತು ಎದುರಾದ ಬಿಕ್ಕಟ್ಟುಗಳ ಬಗ್ಗೆ ಸರ್ಕಾರಕ್ಕೆ ಯಾಕೆ ಮಾಹಿತಿ ನೀಡಲಿಲ್ಲ ಎಂಬುದರ ಬಗ್ಗೆಯೂ ತನಿಖೆ ನಡೆಯಲಿದೆ. ಸುಮಾರು 800 ವಿದ್ಯಾರ್ಥಿಗಳು ನೇಪಾಳಕ್ಕೆ ಹಿಂದಿರುಗಿದ್ದಾರೆ. 100 ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿಯೇ ಇದ್ದಾರೆ ಎಂದು ಸುರಜ್ ಹೇಳಿದ್ದಾರೆ.
“ನೇಪಾಳದ ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ರಕ್ಷಣೆಗೆ ನಾವು ಬದ್ಧರಾಗಿದ್ದೇವೆ. ಯಾವುದೇ ತೊಂದರೆ ಎದುರಾದರೆ, ವಿದ್ಯಾರ್ಥಿಗಳು ಯಾವುದೇ ಸಂದರ್ಭದಲ್ಲಿ ಕರೆಮಾಡಬಹುದು” ಎಂದು ಪೊಲೀಸ್ ಆಯುಕ್ತ ಎಸ್ ದೇವ್ ದತ್ತ ಸಿಂಗ್ ಹೇಳಿದ್ದಾರೆ.
ಬಂಧನಗಳು ಮತ್ತು ಕಾನೂನು ಕ್ರಮ
ವಿದ್ಯಾರ್ಥಿನಿಯ ಸಾವಿಗೆ ಕಾರಣನಾಗಿದ್ದಾನೆ ಎಂದು ಆರೋಪಿಸಲಾಗಿರುವ ಆರೋಪಿ ಅದ್ವಿಕ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ, ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಹಿಂಸಾಚಾರ ನಡೆಸಿದ ಪ್ರಕರಣದಲ್ಲಿ ಐವರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಮೂವರು ವಿಶ್ವವಿದ್ಯಾಲಯದ ಹಿರಿಯ ಅಧಿಕಾರಿಗಳು – ವಿವಿಯ ಮಹಾನಿರ್ದೇಶಕ (HR) ಸಿಬಾನಂದ ಮಿಶ್ರಾ, ನಿರ್ದೇಶಕ (ಆಡಳಿತ) ಪ್ರತಾಪ್ ಕುಮಾರ್ ಚಾಮುಪತಿ ಮತ್ತು ಹಾಸ್ಟೆಲ್‌ಗಳ ನಿರ್ದೇಶಕ ಸುಧೀರ್ ಕುಮಾರ್ ರಾತ್ ಬಂಧಿತ ಅಧಿಕಾರಿಗಳು. ಅಲ್ಲದೆ, ಭದ್ರತಾ ಸಿಬ್ಬಂದಿಗಳಾದ ಜೋಗೇಂದ್ರ ಬೆಹೆರಾ ಮತ್ತು ರಾಮಕಾಂತ ನಾಯಕ್ ಅವರನ್ನು ಸಹ ಬಂಧಿಸಲಾಗಿದೆ.

ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ. ಒಂದು, ವಿದ್ಯಾರ್ಥಿನಿಯ ಸೋದರ ಸಂಬಂಧಿ ನೀಡಿದ ದೂರಿನ ಆಧಾರದ ಮೇಲೆ ದಾಖಲಾಗಿರುವ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ. ಮತ್ತೊಂದು, ವಿದ್ಯಾರ್ಥಿಗಳ ಮೇಲೆ ವಿವಿಯ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿಗಳು ನಡೆಸಿರುವ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ವಿಡಿಯೋಗಳನ್ನು ಆಧರಿಸಿ ದಾಖಲಿಸಲಾಗಿರುವ ಪ್ರಕರಣ. ಎರಡೂ ಪ್ರಕರಣಗಳ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಅಧಿಕಾರಿಗಳು ತಿಳಿಸಿದ್ದಾರೆ.
ಕ್ಷಮೆಯಾಚನೆ ಮತ್ತು ರಾಜತಾಂತ್ರಿಕ ಪರಿಣಾಮ
ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯದ ವಿಡಿಯೋವೊಂದರಲ್ಲಿ, ಕೆಐಐಟಿ ಪ್ರಾಧ್ಯಾಪಕರಲ್ಲಿ ಒಬ್ಬರಾದ ಮಂಜುಷಾ ಪಾಂಡೆ ಅವರು, “ಕೆಐಐಟಿ 40,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತ ಆಹಾರ ಮತ್ತು ಶಿಕ್ಷಣ ನೀಡುತ್ತಿದೆ. ಕೆಐಐಟಿ ಖರ್ಚು ಮಾಡುತ್ತಿರುವ ಹಣಕ್ಕಿಂತಲೂ ನೇಪಾಳದ ಜಿಡಿಪಿ ಕಡಿಮೆ ಇದೆ” ಎಂದು ನಿಂದಿಸಿದ್ದಾರೆ. ಮತ್ತೊಬ್ಬ ಸಿಬ್ಬಂದಿ ಜಯಂತಿ ನಾಥ್ ಕೂಡ ಇದೇ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ.
ವಿಡಿಯೋ ವೈರಲ್ ಆಗಿದ್ದು, ನೇಪಾಳದಿಂದ ರಾಜತಾಂತ್ರಿಕ ಹಸ್ತಕ್ಷೇಪಗಳು ವ್ಯಕ್ತವಾದ ಬಳಿಕ, ಈ ಇಬ್ಬರೂ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. “ಆ ಕ್ಷಣದ ಕೋಪದಲ್ಲಿ ನಾನು ಇಂತಹ ಹೇಳಿಕೆ ನೀಡಿದ್ದೇನೆ. ನನ್ನ ಮಾತುಗಳು ನೇಪಾಳದ ಯಾವುದೇ ವಿದ್ಯಾರ್ಥಿ ಅಥವಾ ಜನರ ಭಾವನೆಗಳಿಗೆ ನೋವುಂಟುಮಾಡಿದ್ದರೆ, ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ” ಎಂದು ಮಂಜೂಷಾ ಪಾಂಡೆ ಕ್ಷಮೆ ಕೇಳಿದ್ದಾರೆ.
@MEAIndia@PM_nepal_@DrSJaishankar@PMOIndia@MofaNepal@IndiaInNepal@EONIndia pic.twitter.com/zPsRL0wNm8
— Jayanti Nath (@JayantiNath6) February 18, 2025
ಕೆಐಐಟಿ ಕೂಡ ಕ್ಷಮೆಯಾಚಿಸಿದೆ. ನೇಪಾಳ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡಿದ ಆ ಇಬ್ಬರು ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಿದೆ.
ಆದಾಗ್ಯೂ, ನೇಪಾಳ ಸರ್ಕಾರ ಈ ವಿಷಯವನ್ನು ಹಗುರವಾಗಿ ಪರಿಗಣಿಸಿಲ್ಲ. “ಸಮರ್ಥನೀಯ ಮತ್ತು ಕಾನೂನು ರೀತಿಯಲ್ಲಿ ಸಮಸ್ಯೆಯನ್ನು ಪರಿಹರಿಸದಿದ್ದರೆ, ಒಡಿಶಾದ ವಿಶ್ವವಿದ್ಯಾಲಯಗಳಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ನಿರಾಕ್ಷೇಪಣಾ ಪ್ರಮಾಣಪತ್ರಗಳನ್ನು (ಎನ್‌ಒಸಿ) ನೀಡುವುದನ್ನು ಸ್ಥಗಿತಗೊಳಿಸುತ್ತೇವೆ” ಎಂದು ಕಠಿಣವಾಗಿ ಪ್ರತಿಕ್ರಿಯಿಸಿದೆ, ಒಡಿಶಾ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ನೇಪಾಳದ ಪ್ರಧಾನಿ ಕೆ.ಪಿ. ಶರ್ಮಾ ಓಲಿ ವೈಯಕ್ತಿಕವಾಗಿ ಮಧ್ಯಪ್ರವೇಶಿಸಿದ್ದು, ತಮ್ಮ ಸರ್ಕಾರವು ರಾಜತಾಂತ್ರಿಕ ಮಾರ್ಗಗಳ ಮೂಲಕ ಈ ವಿಷಯವನ್ನು ಪರಿಹರಿಸುತ್ತದೆ. ದೆಹಲಿಯಲ್ಲಿರುವ ನಮ್ಮ ರಾಯಭಾರ ಕಚೇರಿಯು ಬಾಧಿತ ವಿದ್ಯಾರ್ಥಿಗಳಿಗೆ ಸಲಹೆ ನೀಡಲು ಒಡಿಶಾಗೆ ಅಧಿಕಾರಿಗಳನ್ನು ಕಳುಹಿಸಿದೆ ಎಂದು ಹೇಳಿದ್ದಾರೆ. ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಭಾರತದಲ್ಲಿ ನೇಪಾಳದ ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಾತ್ರಿಪಡಿಸುತ್ತೇವೆ ಎಂದು ಪ್ರತಿಕ್ರಿಯಿಸಿದೆ.
ಒಡಿಶಾದಲ್ಲಿ ರಾಜಕೀಯ ಪರಿಣಾಮ
ಕೆಐಐಟಿಯಲ್ಲಿನ ವಿದ್ಯಾರ್ಥಿನಿಯ ಸಾವು ಮತ್ತು ವಿದ್ಯಾರ್ಥಿಗಳ ಮೇಲಿನ ದಮನವು ಒಡಿಶಾದಲ್ಲಿ ರಾಜಕೀಯ ಜ್ವಾಲೆಯನ್ನು ಹುಟ್ಟುಹಾಕಿದೆ. ಪ್ರಕರಣವನ್ನು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ. ಆದರೆ, ಒಡಿಶಾದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿರುವ ಬಿಜೆಪಿ, ಕೆಐಐಟಿ ಸಂಸ್ಥಾಪಕ ಅಚ್ಯುತ ಸಮಂತ ಅವರನ್ನು ಬಂಧಿಸಬೇಕೆಂದು ಕರೆ ಕೊಟ್ಟಿದೆ. ಇದಕ್ಕೆ ಪ್ರತಿಯಾಗಿ, ಬಿಜೆಪಿ ಸರ್ಕಾರದ ಆಡಳಿತದಲ್ಲಿ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಬಿಜೆಡಿ ಆರೋಪಿಸಿದೆ.
ಒಡಿಶಾ ವಿಧಾನಸಭೆಯಲ್ಲಿಯೂ ಈ ವಿಷಯವನ್ನು ಪ್ರಸ್ತಾಪಿಸಲಾಗಿದ್ದು, ಪಕ್ಷಾತೀತವಾಗಿ ಎಲ್ಲ ಪಕ್ಷಗಳ ಹಲವು ಶಾಸಕರು ಘಟನೆಯನ್ನು ಖಂಡಿಸಿದ್ದಾರೆ. “ಕೆಐಐಟಿಯಲ್ಲಿನ ಬೆಳವಣಿಗೆಗಳು ರಾಜ್ಯಕ್ಕೆ ಕೆಟ್ಟ ಹೆಸರು ತಂದಿವೆ. ಇದನ್ನು ಸಹಿಸಲು ಸಾಧ್ಯವಿಲ್ಲ” ಎಂದು ಕಾಂಗ್ರೆಸ್ ಶಾಸಕರೊಬ್ಬರು ಹೇಳಿದ್ದಾರೆ.