ಸಾಂಪ್ರದಾಯಿಕ ಅನಿಷ್ಠ ಪದ್ದತಿಗಳಿಂದ ತುಷ್ಠಿಕರಿಸಿ ಮೂಲೆಗೆ ತಳ್ಳಿದ ಮಹಿಳೆಯರನ್ನು ದಾಸರು ವಿಶೇಷ ಸ್ಥಾನಮಾನ ನೀಡಿದ್ದಾರೆ ಎಂದು ಸಾಹಿತಿ ಡಾ.ಡಾ.ರೇಣುಕಾ ಎಂ.ಸ್ವಾಮಿ ಹೇಳಿದರು.
ಬೀದರ ನಗರದ ಅಹಿಲ್ಯಾಬಾಯಿ ಹೊಳ್ಕರ್ ಪ್ರೌಢ ಶಾಲೆಯಲ್ಲಿ ಅಖಿಲ ಭಾರತ ದಾಸ ಸಾಹಿತ್ಯ ಪರಿಷತ್ತು ವತಿಯಿಂದ ಶನಿವಾರ ಆಯೋಜಿಸಿದ ʼದಾಸರ ದೃಷ್ಠಿಯಲ್ಲಿ ಸ್ತ್ರೀ ಪರಿಕಲ್ಪನೆʼ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ‘ಸ್ತ್ರೀ ಸಮಾಜದ ಬುನಾದಿ, ಕುಟುಂಬದಲ್ಲಿ ಶಾಂತಿ, ಸಮೃದ್ಧಿ ನೆಲೆಸಲು ಹೆಣ್ಣು ಕಾರಣ. ಮಹಿಳೆ ಮನೆ, ಮನ, ಮಾನವನನ್ನು ಉದ್ಧರಿಸಬಲ್ಲಳು ಎಂಬುದಕ್ಕೆ ಪುರಂದರದಾಸರ ಜೀವನವೇ ಸಾಕ್ಷಿಯಾಗಿದೆ’ ಎಂದರು.
ʼಮಹಿಳೆಯು ತಾಯಿ, ಮಡದಿ, ಅಕ್ಕ ಹೀಗೆ ಹಲವು ಪಾತ್ರಗಳಿಂದ ಜೀವನವನ್ನು ಕಟ್ಟುವಳು. ಅದಕ್ಕೆ ಹೆಣ್ಣಿನ ಸಂತತಿ ಸಾವಿರವಾಗಲಿ, ವನಿತೆ ಬಿಟ್ಟು ತಪವಿಲ್ಲ ಎಂದಿದ್ದಾರೆ. ಹರಪನಹಳ್ಳಿ ಭೀಮವ್ವ, ಹೇಳವನಕಟ್ಟೆ ಗಿರಿಯಮ್ಮ, ಗಲಗಲಿ ಅವ್ವ , ಜೀವೂಬಾಯಿ ಅಂಬಾಬಾಯಿ, ಯಾದಿಗಿರಿಯಮ್ಮ ಇತರರು ಮಹಿಳಾ ಹರಿದಾಸರಾಗಿ ದಾಸ ಸಾಹಿತ್ಯ ಮತ್ತು ಸಮಾಜಕ್ಕೆ ಅನನ್ಯ ಕೊಡುಗೆಯನ್ನು ನೀಡಿದ್ದಾರೆʼ ಎಂದರು.
ಅಹಿಲ್ಯಾಬಾಯಿ ಹೊಳ್ಕರ್ ಪ್ರೌಢ ಶಾಲೆ ಮುಖ್ಯಗುರು ಸೈಯದ್ ಸಲಾವೋದ್ದೀನ್ ಮಾತನಾಡಿ, ʼಭಾರತೀಯ ಭಕ್ತಿ ಸಾಹಿತ್ಯ ಕ್ಷೇತ್ರದಲ್ಲಿ ದಾಸ ಸಾಹಿತ್ಯಕ್ಕೆ ವಿಶಿಷ್ಟವಾದ ಸ್ಥಾನವಿದೆ. ಅದಮ್ಯ ಭಕ್ತಿ ತಳಹದಿಯಲ್ಲಿ ರಚಿತಗೊಂಡ ಈ ಸಾಹಿತ್ಯ ಭಗವಂತ ಭಕ್ತಿ, ಬದುಕು, ಸಾಹಿತ್ಯ ಸಂಗೀತ ಗುಣಗಳ ಸಂಗಮವಾಗಿದೆ. ಧರ್ಮ, ಸತ್ಯ ಸಿದ್ಧಾಂತದ ಚೌಕಟ್ಟಿನಲ್ಲಿ ಮನುಷ್ಯನ ವ್ಯಕ್ತಿತ್ವ ವಿಕಾಸನಗೊಳಿಸುತ್ತಾ ಬದುಕು ಕಟ್ಟಿದ ಸಂಸ್ಕೃತಿ ಚಿಂತಕರು ಹರಿದಾಸರುʼ ಎಂದು ಬಣ್ಣಿಸಿದರು.
ಅಖಿಲ ಭಾರತ ದಾಸ ಸಾಹಿತ್ಯ ಪರಿಷತ್ತು, ರಾಷ್ಟ್ರೀಯ ಅಧ್ಯಕ್ಷ ಡಾ.ರವೀಂದ್ರ ಲಂಜವಾಡಕರ ಅಧ್ಯಕ್ಷತೆ ವಹಿಸಿ ಮಾತನಾಡಿ, ʼಆರೋಗ್ಯಕರ ಸಮಾಜ ರಚನೆಗೆ ಆರೋಗ್ಯಕರ ಮನಸ್ಸುಗಳ ಅಗತ್ಯವಿದೆ. ಹರಿದಾಸರು ಆರೋಗ್ಯ ಸೂತ್ರಗಳಾದ ಸತ್ಯ, ಧರ್ಮ, ಭಕ್ತಿ, ಮಾನವೀಯತೆ, ಸತ್ಕರ್ಮಾಚರಣೆ, ಸದಾಚಾರಣೆಗಳನ್ನು ಅಮೂಲಾಗ್ರವಾಗಿ ಬೋಧಿಸಿದ್ದಾರೆ. ದಾಸರು ಜನರಲ್ಲಿ ಮನುಷ್ಯನ್ನು ಜಾಗೃತಗೊಳಿಸಿ, ಸ್ವಾಭಿಮಾನ ಮತ್ತು ನೈತಿಕ ಜೀವನ ನಡೆಸಲು ಪ್ರೇರೇಪಿಸಿದ್ದಾರೆ. ಜನ ಮನ್ನಣೆ ಪಡೆದ ಅತ್ಯಮೂಲ್ಯ ಹರಿದಾಸರ ಸಾಹಿತ್ಯವನ್ನು ಸಮಾಜಕ್ಕೆ ತಿಳಿಸುವುದು ಅಗತ್ಯವಿದೆʼ ಎಂದರು.
ಈ ಸುದ್ದಿ ಓದಿದ್ದೀರಾ? ಬೀದರ್ | ತುಕ್ಕು ಹಿಡಿಯುತ್ತಿವೆ ಕೃಷಿ ಉತ್ಪನ್ನ ಮಾರುಕಟ್ಟೆ ಸ್ಥಾಪಿಸಿದ ಶುದ್ಧ ನೀರಿನ ಘಟಕ!
ಕಾರ್ಯಕ್ರಮದಲ್ಲಿ ಬಾಲಮ್ಮಾ, ರಾಜಕುಮಾರ ಶೇರಿಕಾರ, ಅಹಿಲ್ಯಾವತಿ, ಬಾಲಮ್ಮಾ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.