ಪ್ರಧಾನಿ ನರೇಂದ್ರ ಮೋದಿ ಅವರಿಗೆ 2ನೇ ಪ್ರಧಾನ ಕಾರ್ಯದರ್ಶಿಯಾಗಿ ಆರ್‌ಬಿಐ ಮಾಜಿ ಗವರ್ನರ್ ಶಕ್ತಿಕಾಂತ ದಾಸ್ ಅವರನ್ನು ನೇಮಿಸಲಾಗಿದೆ. ಅವರ ನೇಮಕಕ್ಕೆ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಈ ಬಗ್ಗೆ ಕೇಂದ್ರ ಸರ್ಕಾರವು ಸುತ್ತೋಲೆ ಹೊರಡಿಸಿದ್ದು, “ನಿವೃತ್ತ ಐಎಎಸ್ ಅಧಿಕಾರಿ, ಆರ್‌ಬಿಐ ಮಾಜಿ ಗವರ್ನರ್ ಶಕ್ತಿಕಾಂತ ದಾಸ್ ಅವರನ್ನು ಪ್ರಧಾನ ಮಂತ್ರಿಗಳ 2ನೇ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲು ಸಂಪುಟ ನೇಮಕಾತಿ ಸಮಿತಿ ಅನುಮೋದನೆ ನೀಡಿದೆ. ದಾಸ್ ಅವರು ಅಧಿಕಾರ ವಹಿಸಿಕೊಳ್ಳುವ ದಿನಾಂಕದಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಲಾಗಿದೆ” ಎಂದು ಹೇಳಿದೆ.
ದಾಸ್ ಅವರು 2018ರ ಡಿಸೆಂಬರ್‌ನಿಂದ 2024ರ ಡಿಸೆಂಬರ್ 10ರವರೆಗೆ ಆರ್‌ಬಿಐ ಗವರ್ನರ್ ಆಗಿದ್ದರು. ಅದಕ್ಕೂ ಮುನ್ನ, ಅವರು ಕೇಂದ್ರ ಮತ್ತು ತಮಿಳುನಾಡು ರಾಜ್ಯ ಸರ್ಕಾರಗಳಲ್ಲಿ ಹಣಕಾಸು, ತೆರಿಗೆ, ಕೈಗಾರಿಕೆಗಳು, ಆರ್ಥಿಕ ವ್ಯವಹಾರಗಳು, ಕಂದಾಯ, ರಸಗೊಬ್ಬರ ಹಾಗೂ ಮೂಲಸೌಕರ್ಯ ಇಲಾಖೆಗಳಲ್ಲಿ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದಾರೆ. 15ನೇ ಹಣಕಾಸು ಆಯೋಗದ ಸದಸ್ಯರೂ ಆಗಿದ್ದರು.