ಇಡೀ ಜಗತ್ತೇ ಹವಾಮಾನ ಬದಲಾವಣೆಯ ದುಷ್ಪರಿಣಾಮಗಳಿಂದ ಕಂಗಾಲಾಗಿ ಮುಂದಿನ ಭವಿಷ್ಯದ ಬಗ್ಗೆ ಚಿಂತಿಸುತ್ತಿದ್ದರೆ, ಅಧಿಕಾರ ವಹಿಸಿಕೊಂಡ ಮೊದಲ ದಿನವೇ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ಯಾರಿಸ್ ಒಪ್ಪಂದದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ. ಅಧಿಕಾರಕ್ಕೆ ಬಂದ ನಂತರದಲ್ಲಿ ʻಸಂಪೂರ್ಣ ಅಮೆರಿಕದ ಮರುಸ್ಥಾಪನೆʼ ಘೋಷಣೆಯೊಂದಿಗೆ ಅವರು ಸಹಿ ಹಾಕಿದ ಮೊದಲ 50 ಕಾರ್ಯಾದೇಶಗಳಲ್ಲಿ ಒಂದು ಪ್ಯಾರಿಸ್ ಒಪ್ಪಂದದಿಂದ ಹಿಂದೆ ಸರಿಯುವುದಾಗಿದೆ. ಇಂಗಾಲದ ಹೊರಸೂಸುವಿಕೆಯಲ್ಲಿ ಅಮೆರಿಕ ವಿಶ್ವದಲ್ಲಿಯೇ 2ನೇ ಸ್ಥಾನದಲ್ಲಿದೆ.
ʻವಸುದೈವ ಕುಟುಂಬಕಂʼ ಅನ್ನುವ ಸಾಮೂಹಿಕ ಪ್ರಜ್ಞೆ ಇಲ್ಲದಿದ್ದರೆ, ಹವಾಮಾನ ಬದಲಾವಣೆಯ ದುಷ್ಪರಿಣಾಮಗಳನ್ನು ತಪ್ಪಿಸಲು ಯಾರಿಗೂ ಸಾಧ್ಯವಿಲ್ಲ ಅನ್ನುವುದು ಚಿಕ್ಕ ಮಕ್ಕಳಿಗೂ ತಿಳಿದಿರುವ ವಿಷಯ. ಆದರೆ ಆಳುವ ನಾಯಕರಿಗೆ ಸಮುದ್ರದ ನೀರಿನ ಮಟ್ಟ ಹೆಚ್ಚಾದರೆ ರಿಯಲ್ ಎಸ್ಟೇಟ್ ಅವಕಾಶಗಳು ಹೆಚ್ಚುತ್ತವೆ ಅನ್ನುವ ಯೋಚನೆ ಮೊಳೆತರೆ ಏನಾಗಬಹುದು? ಇದಕ್ಕೆ ಅತ್ಯುತ್ತಮ ಉದಾಹರಣೆ ಪ್ಯಾರಿಸ್ ಒಪ್ಪಂದದಿಂದ ಹೊರಬರಲು ಟ್ರಂಪ್ ತೆಗೆದುಕೊಂಡಿರುವ ನಿರ್ಧಾರ.
ತಾಪಮಾನ ಹೆಚ್ಳಳದಿಂದ ಉಂಟಾಗುತ್ತಿರುವ ಜಾಗತಿಕ ಹವಾಮಾನ ಬದಲಾವಣೆಯ ದುಷ್ಪರಿಣಾಮಗಳನ್ನು ತಗ್ಗಿಸಲು 2015 ರಲ್ಲಿ ಸುಮಾರು 200 ದೇಶಗಳು ಫ್ರಾನ್ಸ್‌ನ ರಾಜಧಾನಿ ಪ್ಯಾರಿಸ್‌ನಲ್ಲಿ ಒಪ್ಪಂದವೊಂದಕ್ಕೆ ಸಹಿ ಹಾಕಿದವು. 2016, ನವೆಂಬರ್ 4ರಲ್ಲಿ ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಜಾಗತಿಕ ಮಟ್ಟದಲ್ಲಿ ಉಪಕ್ರಮಗಳನ್ನು ತೆಗೆದುಕೊಳ್ಳುವ ನಿಟ್ಟಿನಲ್ಲಿ ರೂಪಿಸಲಾದ ಈ ಮೊತ್ತಮೊದಲ ಒಪ್ಪಂದ ಪ್ಯಾರಿಸ್ ಒಪ್ಪಂದ ಎಂಬ ಹೆಸರಿನಲ್ಲಿ ಅನುಷ್ಠಾನಕ್ಕೆ ಬಂದಿತು.
ಪ್ರಪ್ರಥಮ ಬಾರಿಗೆ ಜಾಗತಿಕ ಮಟ್ಟದಲ್ಲಿ ಹವಾಮಾನ ಬದಲಾವಣೆಗೆ ಕಾರಣೀಭೂತವಾಗುವ ಚಟುವಟಿಕೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆ ರೂಪಿಸಿರುವ ಯುನೈಟೆಡ್ ನೇಶನ್ಸ್ ಫ್ರೇಮ್‌ವರ್ಕ್ ಕನ್‌ವೆನ್‌ಶನ್ ಆನ್ ಕ್ಲೈಮೇಟ್ ಚೇಂಜ್ (United Nations Framework Convention on Climate Change/ UNFCCC) ಅಡಿಯಲ್ಲಿ ವಿವಿಧ ರಾಷ್ಟ್ರಗಳನ್ನು ಒಗ್ಗೂಡಿಸುವ ಪ್ರಯತ್ನ ಇದು. ಅಭಿವೃದ್ಧಿಶೀಲ ದೇಶಗಳಿಗೆ ಹೆಚ್ಚಿನ ಸಹಾಯ ಮಾಡುವ ಭರವಸೆಯೊಂದಿಗೆ ರೂಪಿಸಲಾಗಿರುವ ಈ ಒಪ್ಪಂದ, ಇಡೀ ವಿಶ್ವವೇ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಎದುರಿಸುತ್ತಿರುವ ಕಾಲಘಟ್ಟದಲ್ಲಿ ಪರಿವರ್ತನೆಗೆ ನಾಂದಿ ಹಾಡುವ ಪ್ರಯತ್ನವಾಗಿ ಮೂಡಿಬಂದಿದೆ.
ಕೈಗಾರಿಕಾ ಕ್ರಾಂತಿಯ ನಂತರದ ಘಟ್ಟದಲ್ಲಿ ಏರಿಕೆಯಾಗಿರುವ ಜಾಗತಿಕ ತಾಪಮಾನ (1.5 ಡಿಗ್ರಿ ಸೆಲ್ಸಿಯಸ್) ವನ್ನು ಇನ್ನೂ ಏರದಂತೆ ಮತ್ತು ಆದಷ್ಟು 2 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಇರುವಂತೆಯೇ ನೋಡಿಕೊಳ್ಳುವುದು; ಜಾಗತಿಕ ಮಟ್ಟದಲ್ಲಿ ತಾಪಮಾನ ಏರಿಕೆಗೆ ಪ್ರಮುಖ ಕಾರಣವಾಗಿರುವ ಇಂಗಾಲದ ಹೊರಸೂಸುವಿಕೆಯನ್ನು ತಗ್ಗಿಸುವುದು; ಮತ್ತು ವಿಶ್ವದಾದ್ಯಂತ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಉಪಕ್ರಮಗಳನ್ನು ಹೆಚ್ಚು ಹೆಚ್ಚು ಕಾರ್ಯರೂಪಕ್ಕೆ ತರುವುದು ಈ ಒಪ್ಪಂದದ ಮುಖ್ಯ ಅಂಶಗಳು.
ಪ್ಯಾರಿಸ್ ಒಪ್ಪಂದದಲ್ಲಿ ಹೇಳಿರುವ ಬದ್ಧತೆಗಳೇನು?
ಈ ಒಪ್ಪಂದವು ಜಾಗತಿಕ ತಾಪಮಾನವನ್ನು ತಗ್ಗಿಸುವ ನಿಟ್ಟಿನಲ್ಲಿ ಎಲ್ಲಾ ದೇಶಗಳು ಕಾರ್ಯತತ್ಪರವಾಗಬೇಕು ಎಂದು ಸೂಚಿಸಿದೆ. ಏಕೆಂದರೆ ಕೇವಲ 0.1 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೆಚ್ಚಳವು ಸಹ ಭೂಗ್ರಹಕ್ಕೆ ಬಿಸಿಯ ಅಲೆಗಳು, ಹೆಚ್ಚು ತೀವ್ರವಾದ ಬಿರುಗಾಳಿ ಮತ್ತು ಕಾಡ್ಗಿಚ್ಚಿನಂತಹ ಹೆಚ್ಚಿನ ಅಪಾಯಗಳನ್ನು ತರುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಈಗಾಗಲೇ ಸಾಕಷ್ಟು ಮುನ್ನೆಚ್ಚರಿಕೆಯನ್ನು ನೀಡಿದ್ದಾರೆ. ತಾಪಮಾನದ ಹೆಚ್ಚಳವು 2 ಡಿಗ್ರಿ ಸೆಲ್ಸಿಯಸ್‌ಗೆ ಹತ್ತಿರವಾಗುತ್ತಿದ್ದಂತೆ ಅದರ ಪರಿಣಾಮಗಳು ಹೆಚ್ಚು ತೀವ್ರವಾಗುತ್ತವೆ ಎಂದು ವಿಜ್ಞಾನಿಗಳು ಆತಂಕವನ್ನೂ ವ್ಯಕ್ತಪಡಿಸಿದ್ದಾರೆ.
ಇದರೊಂದಿಗೆ 0.1 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೆಚ್ಚಳವು ಸಹ ಸಮುದ್ರ ಮಟ್ಟ ಏರಿಕೆಗೆ ಕಾರಣವಾಗುವುದರಿಂದ ಲಕ್ಷಾಂತರ ಜನರು ಪ್ರವಾಹದಂತಹ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ. ಹವಳದ ದಿಬ್ಬಗಳು ನಾಶವಾಗುತ್ತವೆ. ಸುಮಾರು 2050ರ ವೇಳೆಗೆ ನೂರು ಮಿಲಿಯನ್ ಜನರು ಹವಾಮಾನ ಸಂಬಂಧಿತ ಅಪಾಯಗಳಿಗೆ ಮತ್ತು ಬಡತನಕ್ಕೆ ಗುರಿಯಾಗುವ ಸಾಧ್ಯತೆ ಇದೆ ಎಂದು ವರದಿಗಳು ಎಚ್ಚರಿಸುತ್ತವೆ.
ಒಪ್ಪಂದದಲ್ಲಿ ಹೇಳಿರುವಂತೆ 1.5 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ಕಾಯ್ದುಕೊಳ್ಳುವ ಗುರಿಯನ್ನು ಸಾಧಿಸಲು ವಿವಿಧ ದೇಶಗಳು ತಮ್ಮ ದೇಶದ ಗರಿಷ್ಠ ಕಾರ್ಬನ್ ಹೊರಹೊಮ್ಮುವಿಕೆಯ ದರವನ್ನು ನಿಗದಿಗೊಳಿಸಬೇಕಿದೆ. ಆಗ ಮಾನವನ ಚಟುವಟಿಕೆಗಳಿಂದ ಹೊರಹೊಮ್ಮುವ ಇಂಗಾಲದ ದರ ಹಾಗೂ ವಾತಾವರಣದಲ್ಲಿ ಸ್ವಾಭಾವಿಕವಾಗಿ ನಡೆಯುವ ಇಂಗಾಲದ ನಿವಾರಣಾ ಪ್ರಕ್ರಿಯೆ (ಉದಾ: ದ್ಯುತಿ ಸಂಶ್ಲೇಷಣೆ) ಇವು ಎರಡರ ನಡುವೆ ಸಮತೋಲನವನ್ನು ಸಾಧಿಸಬಹುದು.

ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸಲು ಪ್ರತಿಯೊಂದು ದೇಶವು ದೃಢ ಸಂಕಲ್ಪದಿಂದ ಕೊಡುಗೆಗಳನ್ನು ನೀಡಬೇಕು ಎಂದು ಪ್ಯಾರಿಸ್ ಒಪ್ಪಂದ ಹೇಳುತ್ತದೆ. ಇದರೊಂದಿಗೆ ಪ್ರತಿ ದೇಶವು ಪ್ರತಿ ಐದು ವರ್ಷಕ್ಕೊಮ್ಮೆ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸುವ ನಿಟ್ಟಿನಲ್ಲಿ ತಮ್ಮ ದೇಶದಲ್ಲಿ ಕೈಗೊಳ್ಳಲಾಗಿರುವ ಪ್ರಯತ್ನಗಳನ್ನು ಪ್ರದರ್ಶಿಸಬೇಕು ಅದಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ನೀಡುವಲ್ಲಿ ಸ್ಪಷ್ಟತೆ ಮತ್ತು ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕು ಎಂಬ ಅಂಶ ಈ ಒಪ್ಪಂದದ ಭಾಗ.
ಅರಣ್ಯ ಸಂರಕ್ಷಣೆಯೂ ಸೇರಿದಂತೆ ಪ್ಯಾರಿಸ್ ಒಪ್ಪಂದ ಸದಸ್ಯ ರಾಷ್ಟ್ರಗಳಿಗೆ ಪ್ರಕೃತಿ ಸಹಜವಾಗಿಯೇ ಇಂಗಾಲದ ಹೊರಹೊಮ್ಮಿವಿಕೆಯನ್ನು ತಡೆಗಟ್ಟಬಲ್ಲ ಮೂಲವನ್ನು ಸಂರಕ್ಷಿಸಲು ಮತ್ತು ಅದನ್ನು ಹೆಚ್ಚಿಸಲು ಉತ್ತೇಜಿಸುತ್ತದೆ. ಈ ಒಪ್ಪಂದದ ಇನ್ನೊಂದು ಪ್ರಮುಖ ಅಂಶವೆಂದರೆ ಹವಾಮಾನ ಬದಲಾವಣೆಗೆ ಹೊಂದಾಣಿಕೆ ಪ್ರಕ್ರಿಯೆಯ ರೂಪು ರೇಷೆಗಳನ್ನು ರೂಪಿಸುವುದರೊಂದಿಗೆ ಹೊಂದಾಣಿಕೆಯ ಪ್ರಯತ್ನಗಳನ್ನು ಗಮನಾರ್ಹವಾಗಿ ಬಲಪಡಿಸುವ ಗುರಿಯನ್ನು ಹೊಂದಿದೆ. ಜೊತೆಗೆ ಮುಖ್ಯವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳ ಹೊಂದಾಣಿಕೆಯ ಪ್ರಯತ್ನಗಳನ್ನು ಗುರುತಿಸಬೇಕು ಎನ್ನುತ್ತದೆ.
ಪ್ಯಾರಿಸ್ ಒಪ್ಪಂದವು ಹವಾಮಾನ ಬದಲಾವಣೆಯಿಂದ ಉಂಟಾಗುವ ತೀವ್ರತರ ಮತ್ತು ನಿಧಾನಗತಿಯ ಘಟನೆಗಳು ಸೇರಿದಂತೆ, ಹವಾಮಾನ ಬದಲಾವಣೆಯ ಪ್ರತಿಕೂಲ ಪರಿಣಾಮಗಳಿಂದ ಉಂಟಾಗುವ ನಷ್ಟ ಮತ್ತು ಹಾನಿಯ ಅಪಾಯವನ್ನು ಕಡಿಮೆ ಮಾಡುವಲ್ಲಿ ಸುಸ್ಥಿರ ಅಭಿವೃದ್ಧಿಯ ಪಾತ್ರವನ್ನು ಗುರುತಿಸುತ್ತದೆ. ಜೊತೆಗೆ ಸದಸ್ಯ ರಾಷ್ಟ್ರಗಳು ಸಹಕಾರಿ ವಿಧಾನದ ಮೂಲಕ ಬೆಂಬಲವನ್ನು ನೀಡುವಂತೆ ಸೂಚಿಸುತ್ತದೆ.
ಪ್ಯಾರಿಸ್ ಒಪ್ಪಂದವು ಅಭಿವೃದ್ಧಿಶೀಲ ರಾಷ್ಟ್ರಗಳು ಸ್ವಚ್ಛ, ಹವಾಮಾನದಿಂದ ಕೂಡಿದ ಭವಿಷ್ಯವನ್ನು ನಿರ್ಮಿಸುವ ನಿಟ್ಟಿನಲ್ಲಿ ಮಾಡುವ ಪ್ರಯತ್ನಗಳನ್ನು ಬೆಂಬಲಿಸುವಲ್ಲಿ ಅಭಿವೃದ್ಧಿ ಹೊಂದಿದ ದೇಶಗಳ ಬದ್ಧತೆಗಳನ್ನು ಪುನರುಚ್ಚರಿಸುತ್ತದೆ. ಜೊತೆ ಜೊತೆಗೆ ಇದೇ ಮೊದಲ ಬಾರಿಗೆ ಇತರ ಸದಸ್ಯ ರಾಷ್ಟ್ರಗಳಿಂದ ಸ್ವಯಂಪ್ರೇರಿತ ಕೊಡುಗೆಗಳನ್ನು ಈ ಒಪ್ಪಂದ ಪ್ರೋತ್ಸಾಹಿಸುತ್ತದೆ. ಇದರೊಂದಿಗೆ ಈಗಾಗಲೇ ಒದಗಿಸಲಾದ ಹಣಕಾಸಿನ ಕುರಿತು ಪ್ರತಿ ಎರಡು ವರ್ಷಗಳಿಗೊಮ್ಮೆ ಮಾಹಿತಿಯನ್ನು ಸಲ್ಲಿಸಲು ಈ ಒಪ್ಪಂದ ಅನುವು ಮಾಡಿಕೊಡುತ್ತದೆ.
ಈ ಒಪ್ಪಂದವು ಪ್ರತಿಯೊಂದು ದೇಶವು ಇಂಗಾಲ ಹೊರಸೂಸುವಿಕೆಯನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ತನ್ನದೇ ಆದ ಗುರಿಗಳನ್ನು ನಿಗದಿಪಡಿಸುವುದು ಮತ್ತು ಪ್ರತಿ ಐದು ವರ್ಷಗಳಿಗೊಮ್ಮೆ ಆ ಗುರಿಯನ್ನು ಎಷ್ಟರ ಮಟ್ಟಿಗೆ ತಲುಪಲಾಗಿದೆ ಎಂಬುದನ್ನು ಪರಿಶೀಲಿಸುವುದನ್ನು ಸೂಚಿಸಿದೆ. ಶ್ರೀಮಂತ ದೇಶಗಳು ಬಡ ರಾಷ್ಟ್ರಗಳಿಗೆ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಎದುರಿಸಲು, ಹೊಂದಿಕೊಳ್ಳಲು ಮತ್ತು ನವೀಕರಿಸಬಹುದಾದ ಇಂಧನವನ್ನು ಹೆಚ್ಚು ಹೆಚ್ಚಾಗಿ ಬಳಸಲು ಹಣಕಾಸಿನ ನೆರವು ಒದಗಿಸುವ ಮೂಲಕ ಸಹಾಯ ಮಾಡುವುದನ್ನು ಉತ್ತೇಜಿಸುತ್ತದೆ.
ಪ್ಯಾರಿಸ್ ಒಪ್ಪಂದದ ಅನುಷ್ಠಾನ
ಈ ಒಪ್ಪಂದ ಜಾರಿ ಬಳಿಕ, ಅಂತಾರಾಷ್ಟ್ರೀಯ ಶೃಂಗಸಭೆಗಳಲ್ಲಿ ವಿಶ್ವ ನಾಯಕರು ಪ್ರತಿ ವರ್ಷ ತಮ್ಮ ಹವಾಮಾನ ಬದ್ಧತೆಗಳನ್ನು ಚರ್ಚಿಸಲು ಒಟ್ಟು ಸೇರುತ್ತಿದ್ದಾರೆ. ಸದಸ್ಯ ರಾಷ್ಟ್ರಗಳು ಪ್ಯಾರಿಸ್‌ನಲ್ಲಿ ಒಪ್ಪಂದಕ್ಕೆ ಸಹಿ ಹಾಕಿದಂದಿನಿಂದ ಎಂದರೆ 2015ರಿಂದ ಒಪ್ಪಂದದಲ್ಲಿ ಹೇಳಲಾದ ಬದ್ಧತೆಗಳನ್ನು ಹೇಗೆ ಅನುಷ್ಠಾನಕ್ಕೆ ತರುತ್ತಿವೆ ಎಂಬುದರ ಮೇಲೆ ನಿಗಾ ಇರಿಸಲಾಗಿದೆ.
ಒಪ್ಪಂದಕ್ಕೆ ಸಹಿ ಹಾಕುವಾಗ ಸದಸ್ಯ ರಾಷ್ಟ್ರಗಳು, ಜಾಗತಿಕ ತಾಪಮಾನ ಏರಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್‌ಗೆ ತಗ್ಗಿಸುವುದಾಗಿ ಒಪ್ಪಿಕೊಂಡವು. ಆದರೆ ವಿಶ್ವಸಂಸ್ಥೆಯ ಪ್ರಕಾರ ಪ್ರಸ್ತುತ ಅನುಷ್ಠಾನಗೊಳಿಸಲಾಗಿರುವ ಹವಾಮಾನ ಯೋಜನೆಗಳು 2100ರ ವೇಳೆಗೆ ಜಗತ್ತನ್ನು ಸುಮಾರು 2.6 ಸೆಲ್ಸಿಯಸ್‌ನಿಂದ 2.8 ಸೆಲ್ಸಿಯಸ್ ತಾಪಮಾನ ಏರಿಕೆಗೆ ಕೊಂಡೊಯ್ಯಬಹುದು. ಎಲ್ಲಾ ದೇಶಗಳು ಇಂಗಾಲದ ಹೊರಹೊಮ್ಮುವಿಕೆಯ ಪ್ರಮಾಣದಲ್ಲಿ ನಿವ್ವಳ ಶೂನ್ಯ/ನೆಟ್ ಝೀರೋ ಪ್ರತಿಜ್ಞೆಗಳನ್ನು ಸಾಧಿಸಿದಾಗ ಮಾತ್ರ ಈ ಏರಿಕೆಯು 1.9 ಸೆಲ್ಸಿಯಸ್‌ಗೆ ಇಳಿಯಬಹುದು. ಆದರೆ ಇದಕ್ಕೆ ಸದಸ್ಯ ದೇಶಗಳು ಇನ್ನಷ್ಟು ಹೆಚ್ಚಿನ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ.
ಡಿಸೆಂಬರ್ 2023ರಲ್ಲಿ ದುಬೈಯಲ್ಲಿ ನಡೆದ ಹವಾಮಾನ ಬದಲಾವಣೆಯ ಸಮಾವೇಶದಲ್ಲಿ ಪ್ಯಾರಿಸ್ ಒಪ್ಪಂದಕ್ಕೆ ಸಹಿ ಹಾಕಿದ ರಾಷ್ಟ್ರಗಳು ಮೊದಲ ಬಾರಿಗೆ “ಪಳೆಯುಳಿಕೆ ಇಂಧನಗಳ ಬಳಕೆಯಿಂದ ದೂರ ಸರಿಯಲು” ಒಪ್ಪಿಕೊಂಡವು, ಆದರೆ ಈ ನಿಟ್ಟಿನಲ್ಲಿ ದೇಶಗಳು ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಳ್ಳುವಂತೆ ಈ ಸಮಾವೇಶದಲ್ಲಿ ಒತ್ತಾಯಿಸಲಾಗಿರಲಿಲ್ಲ. ಅಲ್ಲದೆ ನವೆಂಬರ್ 2024ರಲ್ಲಿ ನಡೆದ ಸಮಾವೇಶದಲ್ಲಿ ಈ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಯಾವುದೇ ಗಮನಾರ್ಹ ಪ್ರಗತಿ ಕಂಡುಬಂದಿಲ್ಲ.
ಪ್ಯಾರಿಸ್ ಒಪ್ಪಂದ ವಿಶ್ವದ ಶ್ರೀಮಂತ ರಾಷ್ಟ್ರಗಳು, ಅಭಿವೃದ್ಧಿಶೀಲ ದೇಶಗಳಿಗೆ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಎದುರಿಸಲು ಮತ್ತು ಹಸಿರು ಆರ್ಥಿಕತೆಯನ್ನು ನಿರ್ಮಿಸಲು ಸಹಾಯ ಮಾಡಲು ವಾರ್ಷಿಕವಾಗಿ $100 ಬಿಲಿಯನ್ ಅನುದಾನ ನೀಡುವಂತೆ ಸೂಚಿಸಿತ್ತು. ಆದರೆ 2020 ರಲ್ಲಿ ಕೇವಲ $83.3 ಬಿಲಿಯನ್ ಸಂಗ್ರಹಿಸಲಾಯಿತು. 2023 ರಲ್ಲಿ, ಸದಸ್ಯ ರಾಷ್ಟ್ರಗಳು ಹವಾಮಾನ ಬದಲಾವಣೆಯ ನಷ್ಟ ಮತ್ತು ಹಾನಿಯಿಂದ ಚೇತರಿಸಿಕೊಳ್ಳಲು ಪ್ರತ್ಯೇಕ ನಿಧಿಯನ್ನು ಸ್ಥಾಪಿಸಲು ಒಪ್ಪಿಕೊಂಡವು. ಆ ನಿಟ್ಟಿನಲ್ಲಿ ಶ್ರೀಮಂತ ರಾಷ್ಟ್ರಗಳು 2035 ರ ವೇಳೆಗೆ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ವರ್ಷಕ್ಕೆ $300 ಬಿಲಿಯನ್ ಅನುದಾನ ನೀಡಲು ಒಪ್ಪಿಕೊಂಡವು. ಆದರೆ ಈ ಮೊತ್ತವನ್ನು ಅಭಿವೃದ್ಧಿಶೀಲ ರಾಷ್ಟ್ರಗಳು “ಅತ್ಯಲ್ಪ ಮೊತ್ತ” ಎಂದು ಟೀಕಿಸಿವೆ.
ಪ್ಯಾರಿಸ್ ಒಪ್ಪಂದ ಮತ್ತು ಟ್ರಂಪ್
ಆದರೆ ಇಡೀ ಜಗತ್ತೇ ಹವಾಮಾನ ಬದಲಾವಣೆಯ ದುಷ್ಪರಿಣಾಮಗಳಿಂದ ಕಂಗಾಲಾಗಿ ಮುಂದಿನ ಭವಿಷ್ಯದ ಬಗ್ಗೆ ಚಿಂತಿಸುತ್ತಿದ್ದರೆ, ಅಧಿಕಾರ ವಹಿಸಿಕೊಂಡ ಮೊದಲ ದಿನವೇ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ಯಾರಿಸ್ ಒಪ್ಪಂದದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ. ಅಧಿಕಾರಕ್ಕೆ ಬಂದ ನಂತರದಲ್ಲಿ ʻಸಂಪೂರ್ಣ ಅಮೆರಿಕದ ಮರುಸ್ಥಾಪನೆʼ ಘೋಷಣೆಯೊಂದಿಗೆ ಅವರು ಸಹಿ ಹಾಕಿದ ಮೊದಲ 50 ಕಾರ್ಯಾದೇಶಗಳಲ್ಲಿ ಒಂದು ಪ್ಯಾರಿಸ್ ಒಪ್ಪಂದದಿಂದ ಹಿಂದೆ ಸರಿಯುವುದಾಗಿದೆ. ಇಂಗಾಲದ ಹೊರಸೂಸುವಿಕೆಯಲ್ಲಿ ಅಮೆರಿಕ ವಿಶ್ವದಲ್ಲಿಯೇ ಎರಡನೇ ಸ್ಥಾನದಲ್ಲಿದೆ.
ಆದರೂ ಟ್ರಂಪ್ ಇದನ್ನು ಪರಿಗಣಿಸದೆ, ಇನ್ನಷ್ಟು ಪಳೆಯುಳಿಕೆ ಇಂಧನಗಳನ್ನು ಸೂರೆ ಮಾಡುವ ದಿಕ್ಕಿನಲ್ಲಿ ʻಡ್ರಿಲ್ ಬೇಬಿ ಡ್ರಿಲ್ʼ ಎನ್ನುತ್ತಾ ಆನೆ ನಡೆದದ್ದೇ ಹಾದಿ ಎಂಬಂತೆ ನಡೆಯುತ್ತಿದ್ದಾರೆ. ಇದಷ್ಟೇ ಸಾಲದು ಎಂಬಂತೆ ದೇಶದಲ್ಲಿಯೂ ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಕೈಗೊಳ್ಳಲಾಗಿರುವ ಎಲ್ಲಾ ಕಾರ್ಯಕ್ರಮಗಳನ್ನು ಮತ್ತು ಅದಕ್ಕೆ ಸಂಬಂಧಿಸಿದ ಪಾರಿಭಾಷಿಕ ಶಬ್ದಗಳ ಬಳಕೆಯನ್ನು ತಕ್ಷಣವೇ ನಿಲ್ಲಿಸುವಂತೆ ಸೂಚನೆ ಹೊರಡಿಸಿದ್ದಾರೆ. ಈ ರೀತಿಯ ಒಪ್ಪಂದಗಳು “ನಮ್ಮ ದೇಶದ ಮೌಲ್ಯಗಳನ್ನು ಬಿಂಬಿಸುವುದಿಲ್ಲ ಅಥವಾ ಆರ್ಥಿಕತೆಗೆ ಮತ್ತು ಪರಿಸರಕ್ಕೆ ಸಂಬಂಧಿಸಿದ ಉದ್ದೇಶಗಳನ್ನು ಸಾಧಿಸುವಲ್ಲಿ ನಮ್ಮ ರಾಷ್ಟ್ರದ ಕೊಡುಗೆಗಳನ್ನು ಎತ್ತಿಹಿಡಿಯುವುದಿಲ್ಲ. ಈ ಒಪ್ಪಂದವು ದೇಶಕ್ಕೆ ಆರ್ಥಿಕ ಹಾನಿ ಉಂಟುಮಾಡುತ್ತದೆ ಮತ್ತು ಇದೊಂದು ಅನುಚಿತ ಹೊರೆ” ಎಂದು ಆಪಾದಿಸಿ ಟ್ರಂಪ್ ಪ್ಯಾರಿಸ್ ಒಪ್ಪಂದದಿಂದ ಹಿಂದೆ ಸರಿಯಲು ಮುಂದಾಗಿದ್ದಾರೆ.
ಈ ಹಿಂದೆ ಎಂದರೆ 2017ರ ತಮ್ಮ ಅಧಿಕಾರಾವಧಿಯಲ್ಲಿಯೂ ಟ್ರಂಪ್ ಇದೇ ನಿರ್ಧಾರ ತೆಗೆದುಕೊಂಡಿದ್ದರು. ಆದರೆ 2021 ರಲ್ಲಿ ಅಧಿಕಾರವಹಿಸಿಕೊಂಡ ಜೋ ಬೈಡೆನ್ ಮತ್ತೆ ಪ್ಯಾರಿಸ್ ಒಪ್ಪಂದಕ್ಕೆ ಕೈಜೋಡಿಸಿದ್ದರು. ಪ್ರಸ್ತುತ ವಿಶ್ವಸಂಸ್ಥೆಯ ನಿಯಮಗಳನುಸಾರ ಒಪ್ಪಂದದಿಂದ ಅಧಿಕೃತವಾಗಿ ಹೊರಬರಲು ಅಮೆರಿಕವು ಈಗ ಒಂದು ವರ್ಷ ಕಾಯಬೇಕಾಗುತ್ತದೆ.

ವರದಿಗಳ ಪ್ರಕಾರ ಭೂ ಗ್ರಹದ -ತಾಪಮಾನ ಹೆಚ್ಚಿಸುವ ಅನಿಲಗಳನ್ನು ಹೊರಸೂಸುವ ದೇಶಗಳ ಪೈಕಿ ಅಮೆರಿಕ ವಿಶ್ವದ ಎರಡನೇ ಅತಿದೊಡ್ಡ ದೇಶ. 19ನೇ ಶತಮಾನದ ಅಂತ್ಯದಿಂದಲೂ ಈ ದೇಶದ ಒಟ್ಟು ಹೊರಸೂಸುವಿಕೆಯು ಪ್ರಮಾಣ ಇತರೆ ಯಾವುದೇ ದೇಶಕ್ಕಿಂತ ಅತ್ಯಧಿಕವಾಗಿದೆ.
ವಿಶ್ವದ ದೊಡ್ಡಣ್ಣ ಎನಿಸಿರುವ, ಎಲ್ಲಾ ದೇಶಗಳು ಅಗ್ರ ಸ್ಥಾನದಲ್ಲಿ ಇರಿಸಿರುವ, ಅಮೆರಿಕವೇ ಇಂಗಾಲದ ಹೊರಹೊಮ್ಮುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ಯಾವ ಕ್ರಮಗಳನ್ನೂ ಕೈಗೊಳ್ಳದೆ, ದೇಶದಲ್ಲಿ “ರಾಷ್ಟ್ರೀಯ ಇಂಧನ ತುರ್ತುಸ್ಥಿತಿ”ಯನ್ನು ಘೋಷಿಸಿದೆ. ಈ ಮೂಲಕ ಬೈಡೆನ್ ಅಧಿಕಾರಾವಧಿಯಲ್ಲಿ ಅಮೆರಿಕದಲ್ಲಿ ಜಾರಿಯಲ್ಲಿರುವ ಹವಾಮಾನ ನಿಯಮಗಳನ್ನು ಸಡಿಲಿಸುತ್ತ, ತೈಲ ಹಾಗು ಅನಿಲ ಉತ್ಪಾದನೆಯನ್ನು ಹೆಚ್ಚಿಸುವತ್ತ ತನ್ನ ಗಮನವನ್ನು ಕೇಂದ್ರೀಕರಿಸುತ್ತಿದೆ.
ಪ್ರಮಾಣವಚನ ಸ್ವೀಕಾರದ ನಂತರ ಮಾಡಿದ ಭಾಷಣದಲ್ಲಿ ಟ್ರಂಪ್ ಪ್ಯಾರಿಸ್ ಒಪ್ಪಂದವನ್ನು ಹೀಗಳೆಯುವುದರೊಂದಿಗೆ ಅಮೆರಿಕಾದಲ್ಲಿ ತೈಲ ಮತ್ತು ಅನಿಲ ಉತ್ಪಾದನೆಯ ಹೊಸ ಶಕೆಯನ್ನು ಪ್ರಾರಂಭಿಸುತ್ತೇವೆ ಎಂದು ಶಪಥಗೈದಿದ್ದಾರೆ. ಅಮೆರಿಕಾದಲ್ಲಿ ಇತ್ತೀಚೆಗೆ ಹೆಚ್ಚು ಹೆಚ್ಚಾಗಿ ಲಭ್ಯವಾಗುತ್ತಿರುವ ಪಳೆಯುಳಿಕೆ ಇಂಧನವನ್ನು ಬಳಸಿಕೊಳ್ಳುವ ಬಗ್ಗೆ ಅವರ ಸಂಪೂರ್ಣ ಗಮನವು ಕೇಂದ್ರೀಕೃತವಾಗಿದೆ.
2016ರಿಂದ, ಅಮೆರಿಕದಲ್ಲಿ ತೈಲ ಉತ್ಪಾದನೆಯ ಪ್ರಮಾಣ ಶೇಕಡಾ 70%ರಷ್ಟು ಹೆಚ್ಚಾಗಿದೆ ಮತ್ತು ಅಮೆರಿಕವು ಈಗ ವಿಶ್ವದ ಪ್ರಮುಖ ತೈಲ ಉತ್ಪಾದಕ ಮತ್ತು ರಫ್ತುದಾರ ರಾಷ್ಟ್ರವಾಗಿದೆ. ಅದೇ ರೀತಿ ದ್ರವೀಕೃತ ನೈಸರ್ಗಿಕ ಅನಿಲ (ಐಓಉ) ರಫ್ತುಗಳು 2016ರಲ್ಲಿ ಬಹುತೇಕ ಶೂನ್ಯವಾಗಿತ್ತು. ಆದರೆ ಇಂದು ಅಮೆರಿಕ ವಿಶ್ವದ ಪ್ರಮುಖ ರಫ್ತುದಾರ ದೇಶವಾಗಿದೆ. ಪಳೆಯುಳಿಕೆ ಇಂಧನವನ್ನು ದ್ರವರೂಪದ ಬಂಗಾರ ಎಂದು ಬಣ್ಣಿಸುತ್ತ ಟ್ರಂಪ್ ವಿದ್ಯುತ್ ವಾಹನಗಳ ಉತ್ಪಾದನೆಯನ್ನು ಸಹ ಉತ್ತೇಜಿಸುತ್ತಿಲ್ಲ.
ತನ್ನ ದೇಶ ಜಾಗತಿಕವಾಗಿ ಆರ್ಥಿಕವಾಗಿ ಮುಂಚೂಣಿಯಲ್ಲಿಯೇ ಇದ್ದರೂ, ತನ್ನ ಇಡೀ ರಾಜಕೀಯ ಇಚ್ಛಾಶಕ್ತಿಯನ್ನು ತನ್ನ ತೆರಿಗೆದಾರ ವರ್ಗಕ್ಕೋಸ್ಕರವೇ ಮುಡಿಪಾಗಿಡುತ್ತ, ಸಮಷ್ಠಿ ಹಿತವನ್ನು ಟ್ರಂಪ್ ಕಡೆಗಣಿಸುತ್ತಿದ್ದಾರೆ. ʻಯಾರು ಏನಾದರೆ ತನಗೇನಂತೆʼ ಎಂಬ ಟ್ರಂಪ್ ಅವರ ಧೋರಣೆ ಜಗತ್ತನ್ನೇ ಇಕ್ಕಟ್ಟಿಗೆ ಸಿಲುಕಿಸುತ್ತಿದೆ. ಟ್ರಂಪ್ ಅವರ ಈ ಎಲ್ಲಾ ನಿರ್ಧಾರಗಳು ಅಮೆರಿಕದ ಆರ್ಥಿಕತೆಯನ್ನು ಇನ್ನಷ್ಟು ಉತ್ತುಂಗಕ್ಕೆ ಒಯ್ಯಬಹುದು ಮತ್ತು ಡಾಲರ್‌ನ ಮೌಲ್ಯವನ್ನೂ ಏರಿಸಬಹುದು. ಆದರೆ ಡಾಲರ್ ನ ಮೌಲ್ಯದ ಏರಿಕೆ ಮತ್ತು ಜಾಗತಿಕ ಆರ್ಥಿಕತೆಯ ಕುಸಿತ ಇದೆರಡು ಜೊತೆಜೊತೆಯಲ್ಲಿಯೇ ಬರುತ್ತವೆ ಎಂದು ಆರ್ಥಿಕ ತಜ್ಞರು ಎಚ್ಚರಿಸುತ್ತಾರೆ.
ಕೇವಲ ಆರ್ಥಿಕತೆ ಅಭಿವೃದ್ಧಿ ಬಗ್ಗೆ ಮಾತ್ರ ಟ್ರಂಪ್ ಚಿಂತಿಸುತ್ತಿದ್ದಾರೆ. ಅಮೆರಿಕ ಸರ್ಕಾರದ ಭಾಗವೇ ಆಗಿರುವ ಬ್ಯುರೋ ಆಫ್ ಎಕಾನಾಮಿಕ್ ಅನಾಲಿಸಿಸ್ (ಬಿಇಎ)ನ ವರದಿ ಅಮೆರಿಕಾದ ಜಿಡಿಪಿ ವಾರ್ಷಿಕ 2.3 ಶೇಕಡಾ ದರದಲ್ಲಿ ಏರುತ್ತಿದೆ. ವಿಚಿತ್ರ ಎಂದರೆ ಅಮೆರಿಕಾದ ಜಿಡಿಪಿ 2023 ರಿಂದ 2024ಕ್ಕೆ ತುಸು ಕುಸಿತ ಕಂಡಿದೆ. ಈ ಕುಸಿತಕ್ಕೆ ಸಂಪೂರ್ಣವಾಗಿ ಅಲ್ಲದಿದ್ದರೂ ಭಾಗಶಃ ಕಾರಣ ದೇಶದಲ್ಲಿ ಬಂದೆರಗಿದ ಚಂಡಮಾರುತ /ಹರಿಕೇನ್ ಮಿಲ್ಟನ್! ಇದನ್ನು ಟ್ರಂಪ್ ಮನಗಾಣಬೇಕಿದೆ. ಅಕ್ಟೋಬರ್ 2024ರ ವೇಳೆಗೆ ಫ್ಲೋರಿಡಾದ ಭಾಗದಲ್ಲಿ ಬಂದೆರಗಿದ ಈ ಚಂಡ ಮಾರುತ ದೇಶಕ್ಕೆ ಸಾಕಷ್ಟು ನಷ್ಟಗಳನ್ನು ತಂದೊಡ್ಡುವುದರೊಂದಿಗೆ ವಾಣಿಜ್ಯ ವ್ಯವಹಾರದ ಮೇಲೂ ಸಾಕಷ್ಟು ದುಷ್ಪರಿಣಾಮಗಳನ್ನು ಬೀರಿತು ಎಂದು ವರದಿ ಹೇಳಿದೆ.
ಇದುವರೆಗೆ ಅಟ್ಲಾಂಟ ಕಂಡ ಐದು ಭೀಕರ ಚಂಡಮಾರುತಗಳ ಪೈಕಿ ಇದೂ ಒಂದು ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ. ಹವಾಮಾನ ಬದಲಾವಣೆಯಿಂದಾಗಿ ರೂಪುಗೊಳ್ಳುವ ಚಂಡಮಾರುತಗಳ ಸಂಖ್ಯೆ ಕಡಿಮೆಯಾದರೂ, ಅವುಗಳ ತೀವ್ರತೆ ಬಹಳ ಹೆಚ್ಚಿರುತ್ತದೆ ಎಂಬ ಅಂಶವನ್ನು ವಿಜ್ಞಾನಿಗಳು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಹವಾಮಾನ ಬದಲಾವಣೆ ತಂದೊಡ್ಡಬಹುದಾದ ಅಪಾಯಗಳನ್ನು ಕಡೆಗಣಿಸುತ್ತಿರುವ ದೇಶಕ್ಕೆ ಈ ಚಂಡಮಾರುತ ಎಚ್ಚರಿಕೆಯ ಕರೆಗಂಟೆಯಾಗಿ ಬಂದಿದೆ. ಪ್ರಕೃತಿ ವಿಕೋಪವನ್ನು ದೇಶ ಭೀಕರವಾಗಿ ಅನುಭವಿಸಿದ ನಂತರವೂ ಪ್ರಕೃತಿಯನ್ನು ಟ್ರಂಪ್ ಕಡೆಗಣಿಸುತ್ತಿರುವುದು ಮೂರ್ಖತನದ ಪರಮಾವಧಿ ಎನ್ನಬಹುದಷ್ಟೇ.
ʻʻಕಟ್ಟಕಡೆಯ ಮರ ಧರೆಗುರುಳಿದ ನಂತರದಲ್ಲಿ, ಕಟ್ಟಕಡೆಯ ಮೀನು ನಿಮ್ಮ ಹೊಟ್ಟೆಯನ್ನು ಸೇರಿದ ಆನಂತರದಲ್ಲಿ, ಮತ್ತು ಕಟ್ಟಕಡೆಯ ತೊರೆ ವಿಷಯುಕ್ತವಾದ ಬಳಿಕವಷ್ಟೇ ನಿಮ್ಮರಿವಿಗೆ ಬರುತ್ತದೆ, ಹಣ ನಿಮ್ಮ ಹಸಿವನ್ನು ಇಂಗಿಸಲಾರದುʼʼ. ಮೂಲತಃ ಅಮೆರಿಕದ ನಿವಾಸಿಯೊಬ್ಬರು ಹೇಳಿರುವ ಈ ಮಾತನ್ನು ಇದೀಗ ಟ್ರಂಪ್‌ಗೆ ಮತ್ತೊಮ್ಮೆ ನೆನಪಿಸಬೇಕಿದೆ.
ಪ್ರಗತಿಪರ ದೇಶಗಳು ʻಒಳಗೊಳ್ಳುವಿಕೆʼ ಹಾಗೂ ʻಸುಸ್ಥಿರತೆಯʼ ದಿಕ್ಕಿನಲ್ಲಿ ಯಾವ ಚಿಂತನೆಯನ್ನೂ ಮಾಡದೆ ಕೇವಲ ತಮ್ಮ ದೇಶದ ಆರ್ಥಿಕ ಅಭಿವೃದ್ಧಿ ಮಾತ್ರ ತಮಗೆ ಮುಖ್ಯ ಎಂಬ ಧೋರಣೆಯನ್ನೇ ಅನುಸರಿಸುತ್ತಾ ಹೋದರೆ ಭೂಗ್ರಹದ ಸ್ಥಿತಿ ಡೋಲಾಯಮಾನವಾದೀತು. ʻಎಲ್ಲರಿಗೂ ಇರುವುದು ಒಂದೇ ಭೂಮಿʼ ಎಂಬುದನ್ನು ಎಲ್ಲರೂ ಮನಗಾಣಬೇಕಿದೆ.
ಇದನ್ನೂ ಓದಿ ಭೂಮ್ತಾಯಿ | ಹವಾಮಾನ ಬದಲಾವಣೆ ವೈಪರೀತ್ಯದಿಂದ ತತ್ತರಿಸಿರುವ ದೇಶಗಳ ಪೈಕಿ 7ನೇ ಸ್ಥಾನದಲ್ಲಿದೆ ಭಾರತ!

ಡಾ ಶ್ರೀನಿಧಿ ಅಡಿಗ
ಹುಟ್ಟೂರು ಉಡುಪಿ. ಪ್ರಸ್ತುತ ಮೈಸೂರು ನಿವಾಸಿ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಎಂ.ಎ., ʻಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪರಿಸರ ಚಳವಳಿಗಳು ಮತ್ತು ಮುದ್ರಣ ಮಾಧ್ಯಮʼ ಕುರಿತಂತೆ ಡಾಕ್ಟರೇಟ್ ಮಾಡಿದ್ದಾರೆ. ವಿವಿಧ ಸಂಸ್ಥೆಗಳಲ್ಲಿ ಸ್ವತಂತ್ರ ಮಾಧ್ಯಮ ಸಮಾಲೋಚಕಿಯಾಗಿದ್ದಾರೆ