ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಹಿಂದಿ ಹೇರಿಕೆ ಮಾಡುತ್ತಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಮಂದಿ ಆರೋಪಿಸಿದ್ದಾರೆ. ಈ ನಡುವೆ ಹಿಂದಿ ಕ್ರಮೇಣ ಸಾಮಾನ್ಯ ರಾಷ್ಟ್ರೀಯ ಭಾಷೆಯಾಗಿ ಪ್ರಗತಿ ಹೊಂದಬೇಕು ಎಂದು ಆರ್‌ಎಸ್‌ಎಸ್ ಕಾರ್ಯಕಾರಿಣಿ ಅರುಣ್ ಕುಮಾರ್ ಶನಿವಾರ ಹೇಳಿದ್ದಾರೆ.
ಎಬಿಪಿ ನೆಟ್‌ವರ್ಕ್‌ನ ಐಡಿಯಾಸ್ ಆಫ್ ಇಂಡಿಯಾ ಶೃಂಗಸಭೆ 2025ರಲ್ಲಿ ಮಾತನಾಡಿದ ಆರ್‌ಎಸ್‌ಎಸ್ ಜಂಟಿ ಪ್ರಧಾನ ಕಾರ್ಯದರ್ಶಿ, “ಭಾರತದಲ್ಲಿರುವ ಎಲ್ಲಾ ಭಾಷೆಗಳು ರಾಷ್ಟ್ರೀಯ ಭಾಷೆಗಳಾಗಿದ್ದು, ಪ್ರಾದೇಶಿಕ ಭಾಷೆ ಇಲ್ಲ. ತಮಿಳುನಾಡಿನ ಲಕ್ಷಾಂತರ ಜನರು ಹಿಂದಿಯಲ್ಲಿ ಕೋರ್ಸ್‌ಗಳನ್ನು ಮಾಡುತ್ತಾರೆ. ಸ್ವಾರ್ಥ ಉದ್ದೇಶಗಳಿಗಾಗಿ ಭಾಷೆಯನ್ನು ವಿರೋಧಿಸುವವರ ಬಗ್ಗೆ ಚಿಂತಿಸುವ ಅಗತ್ಯವಿಲ್ಲ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಹಿಂದಿ ಹೇರಿಕೆ | ಭಾಷಾ ಯುದ್ಧಕ್ಕೆ ತಮಿಳುನಾಡು ಸಿದ್ಧ: ಉದಯನಿಧಿ ಸ್ಟ್ಯಾಲಿನ್ ಘೋಷಣೆ
ಕೇಂದ್ರ ಸರ್ಕಾರವು ಹಿಂದಿ ಹೇರಿಕೆ ಮಾಡಲು ಎಲ್ಲಾ ರೀತಿಯ ಪ್ರಯತ್ನವನ್ನೂ ಮಾಡುತ್ತಿದೆ. ಇತ್ತೀಚೆಗೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿ ಮಾಡಿದರೆ ಮಾತ್ರ ತಮಿಳುನಾಡಿಗೆ ನಿಧಿ ಬಿಡುಗಡೆ ಮಾಡುವುದಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಬೆದರಿಕೆ ಹಾಕಿದ್ದರು. ಆದರೆ ಈ ಬೆದರಿಕೆಯನ್ನು ಸವಾಲಾಗಿ ತೆಗೆದುಕೊಂಡ ತಮಿಳುನಾಡು ಸಚಿವ ಉದಯನಿಧಿ ಸ್ಟ್ಯಾಲಿನ್, “ಧರ್ಮ ಯುದ್ಧಕ್ಕೆ ನಾವು ಸಿದ್ಧ” ಎಂದು ಹೇಳಿದ್ದರು. ಇದಾದ ಬೆನ್ನಲ್ಲೇ ಆರ್‌ಎಸ್‌ಎಸ್ ನಾಯಕ “ಹಿಂದಿ ಕ್ರಮೇಣ ಸಾಮಾನ್ಯ ರಾಷ್ಟ್ರೀಯ ಭಾಷೆಯಾಗಿ ಪ್ರಗತಿ ಹೊಂದಬೇಕು” ಎಂದು ಹೇಳಿದ್ದಾರೆ.
“ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರಿಗೆ ಏನಾಯಿತು? ವಿಶಾಲ ಮನಸ್ಸಿನ ಭಾರತದಲ್ಲಿ ಅಲ್ಪಸಂಖ್ಯಾತರನ್ನು ನಡೆಸಿಕೊಳ್ಳುವ ರೀತಿ ನಡುವೆ ಹೋಲಿಕೆಗಳನ್ನು ಮಾಡುವುದು ತಪ್ಪು” ಎಂದು ತಿಳಿಸಿದ್ದಾರೆ.
“ಭಾಷೆಯ ಕುರಿತಾದ ವಿವಾದಗಳು ದುರದೃಷ್ಟಕರ. ಪ್ರತಿಯೊಂದು ರಾಜ್ಯವು ತನ್ನ ಭಾಷೆಯನ್ನು ಅಭಿವೃದ್ಧಿಪಡಿಸಬೇಕು. ಆ ನಿರ್ದಿಷ್ಟ ಭಾಷೆಯಲ್ಲಿ ತನ್ನ ವ್ಯವಹಾರವನ್ನು ನಡೆಸಬೇಕು” ಎಂದೂ ಕೂಡಾ ಆರ್‌ಎಸ್‌ಎಸ್ ನಾಯಕ ಹೇಳಿದ್ದಾರೆ.
“ನಮಗೆ ಆಡಳಿತ ವ್ಯವಸ್ಥೆ ಇದೆ. ನಮಗೆ ಸಾಮಾನ್ಯ ರಾಷ್ಟ್ರೀಯ ಭಾಷೆ ಬೇಕು. ಒಂದು ಹಂತದಲ್ಲಿ, ಅದು ಸಂಸ್ಕೃತವಾಗಿತ್ತು. ಇಂದು ಅದು ಸಾಧ್ಯವಿಲ್ಲ. ಹಾಗಾದರೆ ಈಗ ಏನಾಗಬಹುದು? ಇಂದು ರಾಷ್ಟ್ರೀಯ ಭಾಷೆ ಹಿಂದಿ ಆಗಿರುತ್ತದೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಹಿಂದಿ ಭಾರತದ ರಾಷ್ಟ್ರಭಾಷೆಯಲ್ಲ ಎಂದ ಕ್ರಿಕೆಟಿಗ ಆರ್ ಅಶ್ವಿನ್
“ನಿಮಗೆ ಹಿಂದಿ ಬೇಡವಾದರೆ ನಿಮಗೆ ಒಂದು ರಾಷ್ಟ್ರೀಯ ಭಾಷೆ ಇರಬೇಕು. ಇಂಗ್ಲಿಷ್ ಸಾಮಾನ್ಯ ರಾಷ್ಟ್ರೀಯ ಭಾಷೆಯಾಗಲು ಸಾಧ್ಯವಿಲ್ಲ. ಅದು ಸಾಮಾನ್ಯ ವಿದೇಶಿ ಭಾಷೆಯಾಗಿರುತ್ತದೆ” ಎಂದರು.
ಆರ್‌ಎಸ್‌ಎಸ್ ಮುಖ್ಯಸ್ಥ ಎಂ.ಎಸ್. ಗೋಲ್ವಾಲ್ಕರ್ ಅವರು ಮಾತನಾಡಿ, “ಇಂಗ್ಲಿಷ್ ಅನ್ನು ಸಾಮಾನ್ಯ ರಾಷ್ಟ್ರೀಯ ಭಾಷೆಯನ್ನಾಗಿ ಮಾಡಿದರೆ, ರಾಜ್ಯಗಳ ಭಾಷೆಗಳ ಅಸ್ತಿತ್ವಕ್ಕೆ ಅಪಾಯವಿದೆ. ಹಿಂದಿ ಕ್ರಮೇಣ ಸಾಮಾನ್ಯ ರಾಷ್ಟ್ರೀಯ ಭಾಷೆಯಾಗಿ ಮುಂದುವರಿಯಬೇಕು. ಆ ಪ್ರಕ್ರಿಯೆಯು ಸ್ವಾಭಾವಿಕವಾಗಿರಬೇಕು” ಎಂದರು.
