ಬೆಳಗಾವಿ ಜಿಲ್ಲೆಯ ಬಾಳೆಕುಂದ್ರಿ ಗ್ರಾಮದಲ್ಲಿ ಕೆಎಸ್‌ಆರ್‌ಟಿಸಿ ಚಾಲಕ, ನಿರ್ವಾಹಕ ಮೇಲೆ ಹಲ್ಲೆ ಘಟನೆ ಖಂಡಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆ ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಪಿ. ಪೃಥ್ವಿಕ್ ಶಂಕರ ಅವರ ಮುಖಾಂತರ ಗೃಹ ಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಸಂಘಟನೆ ಜಿಲ್ಲಾಧ್ಯಕ್ಷ ಬಿ.ಎನ್.ವಿಶ್ವನಾಥ ನಾಯಕ ಮಾತನಾಡಿ, ʼಬೆಳಗಾವಿಯ ಗಡಿ ಭಾಗದಲ್ಲಿ ಎಂಇಎಸ್ ಮರಾಠಿ ಪುಂಡರ ಹಾವಳಿ ಹೆಚ್ಚಾಗಿದ್ದು, ಕನ್ನಡಿಗರ ಮೇಲೆ ಹಲ್ಲೆಗಳು ನಿರಂತರವಾಗಿ ಹೆಚ್ಚಾಗುತ್ತಿದ್ದು, ಸಾರಿಗೆ ಇಲಾಖೆಯ ನಿರ್ವಾಹಕರು ಕನ್ನಡದಲ್ಲಿ ಮಾತನಾಡಿದ್ದಕ್ಕೆ ವಿರೋಧ ವ್ಯಕ್ತಪಡಿಸಿದಲ್ಲದೆ ಮರಾಠಿ ಭಾಷೆಯಲ್ಲಿ ಮಾತನಾಡುವಂತೆ ಹಲ್ಲೆ ನಡೆಸಿದ್ದು ಅತ್ಯಂತ ಖಂಡನೀಯ. ಹಲ್ಲೆ ನಡೆಸಿದ ಎಂಇಎಸ್ ಪುಂಡರನ್ನು ಗಡಿಪಾರು ಮಾಡಬೇಕುʼ ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಭೀಮು ಪೂಜಾರಿ, ಅಶೋಕರಡ್ಡಿ ಯಲ್ಹೇರಿ, ಮಲ್ಲಿಕಾರ್ಜುನ ಹತ್ತಿಕುಣಿ, ರಂಗನಾಥ ನಾಯಕ, ಈಶಪ್ಪ ಕಪನೂರ, ನವಾಜ ಖಾದ್ರಿ, ನಾಗರಾಜ ಸಾಹುಕಾರ, ರಾಜು ಹತ್ತಿಕುಣಿ, ಸುರೇಶ ಕಲ್ ಪಟ್ಟಿ, ಮರಲಿಂಗ ನಕ್ಕಲ್ ಮತ್ತಿತರಿದ್ದರು.