ಹಿಂದುಳಿದ ವರ್ಗದ ಮುಖಂಡರಿಗೆ ಅವಕಾಶ ಒದಗಿಸುವಲ್ಲಿ ಬಿಜೆಪಿ ಸ್ವಲ್ಪ ಹಿಂದಿದೆ. ಇದು ಕಾಂಗ್ರೆಸ್‌ಗೆ ಅನುಕೂಲ ಮಾಡಿಕೊಡುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಪಕ್ಷದ ಹೈಕಮಾಂಡ್ ನನನ್ನು ಪರಿಗಣಿಸಿದರೆ, ಒಪ್ಪಿಕೊಂಡರೆ, ಪಕ್ಷದ ರಾಜ್ಯಾಧ್ಯಕ್ಷನಾಗಲು ನಾನೂ ಸಿದ್ದ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮರ್ ಬಂಗಾರಪ್ಪ, “ಪಕ್ಷದಲ್ಲಿ ಹಿಂದುಳಿದ ಮತ್ತು ದಲಿತ ಸಮುದಾಯದ ಮುಖಂಡರಿಗೆ ಅವಕಾಶ ಕೊಡಬೇಕು. ನನಗೇ ಕೊಡಬೇಕು ಎಂದೇನಿಲ್ಲ. ಆದರೆ, ಹಿಂದುಳಿದ ಮತ್ತು ದಲಿತ ಸಮುದಾಯದ ಯಾರಿಗೆ ಆದರೂ ಅಧ್ಯಕ್ಷ ಹುದ್ದೆ ಕೊಡುವುದರಿಂದ ಪಕ್ಷಕ್ಕೆ ಅನುಕೂಲವಾಗಲಿದೆ” ಎಂದಿದ್ದಾರೆ.
“ನಾನು ಬಂಗಾರಪ್ಪ ಅವರ ಮಗ ಎಂಬ ಕಾರಣ ಅಧ್ಯಕ್ಷ ಸ್ಥಾನ ಕೊಡಬೇಕಿಲ್ಲ. ಒಂದು ವೇಳೆ, ಆ ಕಾರಣಕ್ಕೆ ಕೊಟ್ಟರೆ, ಅದು ಯಡಿಯೂರಪ್ಪ ಮಗ ಎಂಬ ಕಾರಣಕ್ಕೆ ವಿಜಯೇಂದ್ರಗೆ ಅಧ್ಯಕ್ಷ ಹುದ್ದೆ ಕೊಟ್ಟಂತಾಗುತ್ತದೆ. ನಾವು ದೊಡ್ಡವರ ಮಕ್ಕಳಾದ ಕಾರಣಕ್ಕಾಗಿ ದೊಡ್ಡವರು ಆಗುವುದಿಲ್ಲ. ಎಲ್ಲವನ್ನೂ ಕಲಿತು ಬೆಳೆಯಬೇಕು” ಎಂದು ಹೇಳಿದ್ದಾರೆ.
“ಪಕ್ಷದ ನೇತೃತ್ವ ವಹಿಸಿಕೊಳ್ಳುವವರು ನಾಯಕತ್ವವನ್ನು ಕಲಿಯಬೇಕು, ಸಂಯಮ ರೂಡಿಸಿಕೊಳ್ಳಬೇಕು, ಜನರೊಂದಿಗೆ ಬೆರೆಯಬೇಕು. ಅಭಿಪ್ರಾಯಗಳನ್ನು ಆಲಿಸಬೇಕು. ಆದರೆ, ರಾಜ್ಯದಲ್ಲಿ ಅದಾಗುತ್ತಿಲ್ಲ. ರಾಜ್ಯದಲ್ಲಿ ಪಕ್ಷದ ಸಂಘಟನೆ ಕುಸಿದಿದೆ” ಎಂದಿದ್ದಾರೆ.