ನ್ಯಾಯಾಲಯದಲ್ಲಿ ವಿಹಾಹ ನೋಂದಿಣಿ ಮಾಡಿಕೊಳ್ಳಲು ಬಂದಿದ್ದ ಅಂತರ್ ಧರ್ಮೀಯ ದಂಪತಿಗಳ ಮೇಲೆ ವಕೀಲರ ಗುಂಪು ಹಲ್ಲೆ ನಡೆಸಿರುವ ಅಮಾನುಷ ಘಟನೆ ಮಧ್ಯಪ್ರದೇಶದ ರೇವಾದಲ್ಲಿ ನಡೆದಿದೆ. ಮುಸ್ಲಿಂ ಯುವಕ ‘ಲವ್ ಜಿಹಾದ್’ ನಡೆಸುತ್ತಿದ್ದಾನೆಂದು ಆರೋಪಿಸಿರುವ ವಕೀಲರ ಗುಂಪು ಆತನ ಮೇಲೆ ಹಲ್ಲೆಗೈದಿದೆ.
ಮುಸ್ಲಿಂ ಯುವಕ ಮತ್ತು ಹಿಂದು ಯುವತಿ ತಮ್ಮ ವಿವಾಹ ನೋಂದಣಿಗಾಗಿ ರೇವಾ ಜಿಲ್ಲಾ ನ್ಯಾಯಾಲಯಕ್ಕೆ ಬಂದಿದ್ದರು. ಈ ವೇಳೆ, ವಕೀಲರು ಯುವತಿಯ ಹೆಸರು ಕೇಳಿದ್ದಾರೆ. ಆಧಾರ್ ಕಾರ್ಡ್ ತೋರಿಸುವಂತೆ ಒತ್ತಾಯಿಸಿದ್ದಾರೆ. ಆಕೆ ತನ್ನ ಹೆಸರು ಹೇಳುತ್ತಿದ್ದಂತೆಯೇ, ಇದು ‘ಲವ್ ಜಿಹಾದ್’ ಎಂದು ಆರೋಪಿಸಿ, ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ
ಹಲ್ಲೆಯ ಬಗ್ಗೆ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. “ಯುವತಿ ಹಿಂದು ಹೆಸರನ್ನು ಹೊಂದಿದ್ದು, ಬುರ್ಖಾ ಧರಿಸಿದ್ದರು. ಇದರಿಂದ, ವಕೀಲರು ಸಿಟ್ಟಾಗಿದ್ದಾರೆ. ಆಕೆ ಮೇಲ್ಜಾತಿಗೆ ಸೇರಿದ ಹಿಂದುವಾಗಿದ್ದು, ಆಕೆಯನ್ನು ಮುಸ್ಲಿಂ ಯುವಕ ‘ಲವ್ ಜಿಹಾದ್’ ಬಲೆಗೆ ಬೀಳಿಸಿದ್ದಾರೆಂದು ವಕೀಲರು ಆರೋಪಿಸಿ, ಥಳಿಸಿದ್ದಾರೆ. ನಾವು ಯುವಕನನ್ನು ರಕ್ಷಿಸಿದ್ದೇವೆ. ಕೋರ್ಟ್ ಆವರಣದಿಂದ ಹೊರಗೆ ಕರೆತಂದಿದ್ದೇವೆ. ಯುವತಿಯನ್ನು ಹತ್ತಿರದ ಸುರಕ್ಷಿತ ಸ್ಥಳದಲ್ಲಿ ಇರಿಸಿದ್ದೇವೆ” ಎಂದು ಸಿವಿಲ್ ಲೈನ್ಸ್ ಪೊಲೀಸ್ ಅಧಿಕಾರಿ ಕಮಲೇಶ್ ಸಾಹು ತಿಳಿಸಿದ್ದಾರೆ.
An interfaith couple was allegedly assaulted by lawyers inside the district court in #MadhyaPradesh’s #Rewa while registering their marriage, as they accused the Muslim man of “#LoveJihad.”
— Hate Detector 🔍 (@HateDetectors) February 22, 2025
According to the police, the #Muslim man and #Hindu woman had come to register their… pic.twitter.com/lQLVPLf3wD
“ಸಂತ್ರಸ್ತ ಯುವಕ ಮತ್ತು ಯುವತಿ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಪ್ರೀತಿಸುತ್ತಿದ್ದರು. ಮದುವೆಯಾಗಲು ನಿರ್ಧರಿಸಿದ್ದರು. ಆದರೆ, ಅವರ ಪ್ರೀತಿಗೆ ಕುಟುಂಬಸ್ಥರು ಒಪ್ಪದ ಕಾರಣ, ನ್ಯಾಯಾಲಯದಲ್ಲಿ ವಿವಾಹವಾಗಿ, ವಿವಾಹ ನೋಂದಣಿ ಮಾಡಿಸಿಕೊಳ್ಳಲು ಬಂದಿದ್ದರು” ಎಂದು ಪೊಲೀಸ್ ಅಧಿಕಾರಿ ವಿವರಿಸಿದ್ದಾರೆ.
ಈ ವರದಿ ಓದಿದ್ದೀರಾ?: ಕೋಮುದ್ವೇಷದ ಜಾಹೀರಾತು ನೀಡಿ ವಿಕೃತಿ ಮೆರೆದ ಬಿಜೆಪಿ
ಯುವಕನ ಶರ್ಟ್ ಹರಿದು, ಹಲ್ಲೆ ನಡೆಸಲಾಗಿದೆ. ಮಾಡಿದವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಆದರೆ, ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ವರದಿಯಾಗಿದೆ. ಹಲ್ಲೆ ಘಟನೆಯಲ್ಲಿ ವಕೀಲರು ಭಾಗಿಯಾಗಿಲ್ಲವೆಂದು ರೇವಾ ಬಾರ್ ಅಸೋಸಿಯೇಷನ್ ಹೇಳಿಕೊಂಡಿದೆ.