ಉತ್ತಮ ಬಡ್ಡಿಯನ್ನು ಒದಗಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ಯೋಜನೆಯಡಿ ಖಾತೆ ತೆರೆಯಲು ಕೆಲವೇ ದಿನಗಳು ಬಾಕಿ ಇವೆ.
ಮಹಿಳಾ ಸಮ್ಮಾನ್ ಉಳಿತಾಯ ಖಾತೆ ಕುರಿತು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಳೆದ ವರ್ಷ ಮಂಗಳೂರು ವಿಭಾಗದಲ್ಲಿ 23793 ಮಹಿಳಾ ಸಮ್ಮಾನ್ ಉಳಿತಾಯ ಖಾತೆ ರಚನೆಯಾಗಿದ್ದವು. ಈ ವರ್ಷ ಹತ್ತು ತಿಂಗಳ ಅವಧಿಯಲ್ಲಿ ಸುಮಾರು 11194 ಖಾತೆಗಳು ರಚನೆಯಾಗಿ ಮಾಹಿಳೆಯರು ನಗದು ಠೇವಣಿ ಇರಿಸಿದ್ದಾರೆ.
2023ರ ಏಪ್ರಿಲ್ 01ರಿಂದ ಜಾರಿಗೆ ಬಂದಿರುವ ಈ ಯೋಜನೆಯು ಇದೇ ಮಾರ್ಚ್ 31ರಂದು ಮುಕ್ತಾಯಗೊಳ್ಳಲಿದೆ. ಎರಡು ವರ್ಷದ ಅವಧಿಗೆ ಮಹಿಳೆಯರು ಈ ಯೋಜನೆಯಡಿ ಠೇವಣಿ ಇಡಲು ಅವಕಾಶವಿದೆ. ಕನಿಷ್ಟ 1 ಸಾವಿರದಿಂದ 2 ಲಕ್ಷಗಳ ವರೆಗೆ ಠೇವಣಿ ಇಟ್ಟರೆ ಶೇ. 7.5ರಷ್ಟು ಆಕರ್ಷಕ ಬಡ್ಡಿಯೊಂದಿಗೆ 2 ವರ್ಷದ ನಂತರ ಹಣವನ್ನು ಹಿಂದಿರುಗಿಸುವ ಯೋಜನೆ ಇದಾಗಿದೆ. ಮಹಿಳಾ ಸಬಲೀಕರಣವನ್ನು ದೃಷ್ಟಿಯಲ್ಲಿಟ್ಟುಕೊಂಡು ಸರ್ಕಾರ ಈ ನಡೆಗೆ ಮುಂದಾಗಿದೆ.
2 ಲಕ್ಷ ಠೇವಣಿ ಇರಿಸಿದ ಖಾತೆದಾರರಿಗೆ ಬಡ್ಡಿ ಸಹಿತ 2,32,044 ರೂ ಹಣವನ್ನು ಹಿಂದಿರುಗಿಸಲಾಗುತ್ತದೆ. ಚಿಕ್ಕಮಕ್ಕಳಿಂದ ಹಿಡಿದು ಎಲ್ಲಾ ವಯೋಮಾನದ ಮಹಿಳೆಯರಿಗಾಗಿ ಈ ಯೋಜನೆ ರೂಪಿಸಲಾಗಿದೆ. ಒಬ್ಬ ಮಹಿಳೆಗೆ ಒಂದೇ ಠೇವಣಿಗೆ ಅವಕಾಶವಿದ್ದು, ಮತ್ತೊಮ್ಮೆ ಠೇವಣಿ ಇಡ ಬಯಸಿದರೆ ಮೂರು ತಿಂಗಳ ಬಳಿಕ ಇಡಬಹುದಾಗಿದೆ.
ಈ ಸುದ್ದಿ ಓದಿದ್ದೀರಾ?:ದಕ್ಷಿಣ ಕನ್ನಡ | ಬಜಾಲ್ ವಾರ್ಡ್ ಅಭಿವೃದ್ಧಿಗೆ ಜನಪ್ರತಿನಿಧಿ, ಅಧಿಕಾರಿಗಳ ನಿರ್ಲಕ್ಷ್ಯ: ಡಿವೈಎಫ್ಐ ಆರೋಪ
ಎಲ್ಲಾ ವರ್ಗದ ಮಹಿಳೆಯರಿಗೆ ಈ ಯೋಜನೆ ಅನುಕೂಲವಾಗಲಿದ್ದು, ಪ್ರತಿಯೊಬ್ಬರೂ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಅಂಚೆ ಇಲಾಖೆ ಪ್ರಕಟಣೆ ತಿಳಿಸಿದೆ.
