ಮದುವೆಯಾಗಿ ಹೊಸದಾಗಿ ಮನೆಗೆ ಬಂದ ಸೊಸೆಯ ಮೇಲೆ ಕಾಮುಕ ಮಾವ ಮತ್ತು ಆತನ ಸ್ನೇಹಿತ ಅತ್ಯಾಚಾರ ಎಸಗಿರುವ ಅಮಾನುಷ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಂಡಿಯಲ್ಲಿ ನಡೆದಿದೆ. ಸಂತ್ರಸ್ತೆ ಪತಿಯ ಮನೆಯಿಂದ ತಪ್ಪಿಸಿಕೊಂಡು ಬಂದು, ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ವರದಿಯಾಗಿದೆ.
ಸಂತ್ರಸ್ತೆ ಮತ್ತು ಆಕೆಯ ಪತಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಯುವತಿ ಪತಿ ಹೊರಹೋಗಿದ್ದ ಸಂದರ್ಭದಲ್ಲಿ ಮನೆಗೆ ಬಂದ ಮಾವ, ಆಕೆಯನ್ನು ತವರು ಮನೆಗೆ ಬಿಟ್ಟು ಬರುವುದಾಗಿ ಹೇಳಿ ಕರೆದೊಯ್ದಿದ್ದಾನೆ. ಆದರೆ, ತನ್ನ ಮನೆಗೆ ಕರೆದೊಯ್ದು, ಕಟ್ಟಿ ಹಾಕಿದ್ದಾನೆ ಎಂದು ಹೇಳಲಾಗಿದೆ.
ಆರೋಪಿ ಮಾವ ಮತ್ತು ಆತನ ಸ್ನೇಹಿತ ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ವಿಚಾರದ ಬಗ್ಗೆ ಯಾರಿಗಾದರೂ ಹೇಳಿದರೆ, ಆಕೆಯ ಪೋಷಕರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ನಿರಂತರ 15 ದಿನಗಳ ಕಾಲ ತನ್ನ ಮನೆಯಲ್ಲಿ ಕೂಡಿ ಹಾಕಿ ದೌರ್ಜನ್ಯ ಎಸಗಿದ್ದಾರೆ.
ಆರೋಪಿಗಳ ಕಣ್ತಪ್ಪಿಸಿ ಆ ಮನೆಯಿಂದ ತಪ್ಪಿಸಿಕೊಂಡ ಬಂದ ಯುವತಿ, ನಾರ್ಪೋಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ತನ್ನ ಮೇಲಾದ ದೌರ್ಜನ್ಯಗಳ ಬಗ್ಗೆ ವಿವರಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
“ಜನವರಿ 30ರಂದು ಸಂತ್ರಸ್ತೆಯನ್ನು ಆಕೆಯ ಮಾವ ಕರೆದೊಯ್ದು, ಕೂಡಿ ಹಾಕಿ, ನಿರಂತರ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದೇವೆ. ತನಿಖೆ ನಡೆಯುತ್ತಿದೆ. ಆರೋಪಿಗಳು ಪರಾರಿಯಾಗಿದ್ದು, ಶೋಧ ನಡೆಯುತ್ತಿದೆ. ಆರೋಪಿಗಳ ವಿರುದ್ಧ ಬಿಎನ್‌ಎಸ್ ಸೆಕ್ಷನ್ 64, 127(4), 351(3), 74, ಮತ್ತು 3(5) ಅಡಿಯಲ್ಲಿ ಪ್ರಕರಣ ದಾಖಲಾಗಿದೆ” ಎಂದು ನಾರ್ಪೋಲಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಭರತ್ ಕಾಮತ್ ತಿಳಿಸಿದ್ದಾರೆ.