ಒಂದು ಪ್ರದೇಶವನ್ನು ತೆಕ್ಕೆಗೆ ತೆಗೆದುಕೊಳ್ಳಲು ಇರುವ ಉತ್ತಮ ಮಾರ್ಗವೆಂದರೆ ಆ ಪ್ರದೇಶದ ಸಂಸ್ಕೃತಿಯನ್ನು ಅಳಿಸಿ, ಭಾಷೆಯನ್ನು ನಾಶ ಮಾಡುವುದು ಎಂದು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಹೇಳಿದ್ದಾರೆ.
ಅಖಿಲ ಭಾರತ ಮರಾಠಿ ಸಾಹಿತ್ಯ ಸಮ್ಮೇಳನದ ಪ್ರತಿನಿಧಿಗಳೊಂದಿಗೆ ಸಂವಹನ ನಡೆಸಿರುವ ಧನಕರ್, “ಶತಮಾನಗಳ ಹಿಂದೆ ಭಾರತಕ್ಕೆ ಬಂದ ಆಕ್ರಮಣಕಾರರು ನಮ್ಮ ಭಾಷೆ, ಸಂಸ್ಕೃತಿ, ಧಾರ್ಮಿಕ ಸ್ಥಳಗಳನ್ನು ಬುಡಮೇಲು ಮಾಡಿ, ಅವರ ಭಾಷೆ-ಸಂಸ್ಕೃತಿಗಳನ್ನು ಹೇರಿ ದಬ್ಬಾಳಿಕೆ ನಡೆಸುತ್ತಿದ್ದರು. ಅನಾಗರಿಕತೆ ಮತ್ತು ಸೇಡಿನ ಮನೋಭಾವವು ವಿಪರೀತವಾಗಿತ್ತು” ಎಂದು ಹೇಳಿದ್ದಾರೆ.
“ಸರ್ಕಾರಿ ವೆಬ್‌ಸೈಟ್‌ನಲ್ಲಿ ‘ಮೊಘಲ್ ಸಾಮ್ರಾಜ್ಯವು ಶ್ರೇಷ್ಠವಾದದ್ದು’ ಎಂಬ ಹೇಳಿಕೆಯನ್ನು ತೆಗೆದುಹಾಕಲಾಗಿದೆ. ಅವರು ನಮ್ಮ ಭಾಷೆ, ಸಂಸ್ಕೃತಿ ಹಾಗೂ ಧಾರ್ಮಿಕ ಸ್ಥಳಗಳ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ. ಅವರು ನಮ್ಮನ್ನು ನೋಯಿಸಲು ನಮ್ಮ ಭಾಷೆಗಳನ್ನು ನಾಶ ಮಾಡಲು ಯತ್ನಿಸಿದರು. ನಮ್ಮ ಭಾಷೆ ಪ್ರವರ್ಧಮಾನಕ್ಕೆ ಬರದಿದ್ದರೆ, ನಮ್ಮ ಇತಿಹಾಸವೂ ಪ್ರವರ್ಧಮಾನಕ್ಕೆ ಬರುವುದಿಲ್ಲ” ಎಂದು ಹೇಳಿದ್ದಾರೆ.
ಆದಾಗ್ಯೂ, ಧನಕರ್ ಅವರು ಭಾರತದ ಮೇಲಿನ ಇತರ ಆಕ್ರಮಣಗಳ ಬಗ್ಗೆ ಮಾತ್ರವೇ ಮಾತನಾಡಿದ್ದಾರೆ. ಆದರೆ, ಅವರ ಹೇಳಿಕೆಯು, ಅವರದ್ದೇ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದಕ್ಷಿಣ ರಾಜ್ಯಗಳನ್ನು ತನ್ನ ವಶಕ್ಕೆ ಪಡೆಯಲು ಯತ್ನಿಸುತ್ತಿರುವ, ಹಿಂದಿ ಹೇರಿಕೆಗೆ ಹವಣಿಸುತ್ತಿರುವುದನ್ನೂ ಪ್ರತಿನಿಧಿಸುತ್ತದೆ. ಧನಕರ್ ಹೇಳುವಂತೆಯೇ, ಬಿಜೆಪಿಯು ಉತ್ತರ ಹಿಂದಿ ಭಾಷೆಯನ್ನು ದಕ್ಷಿಣದ ರಾಜ್ಯಗಳ ಮೇಲೆ ಹೇರಲು ನಾನಾ ರೀತಿಯಲ್ಲಿ ಯತ್ನಿಸುತ್ತಿದೆ ಎಂದು ವಿಶ್ಲೇಷಕರು ಹೇಳುತ್ತಾರೆ.
ಇದೀಗ, ಕೇಂದ್ರ ಸರ್ಕಾರ ಮತ್ತು ದಕ್ಷಿಣ ಭಾರತದ ರಾಜ್ಯಗಳ ನಡುವೆ ಮತ್ತೆ ಎನ್‌ಇಪಿ ಮತ್ತು ಹಿಂದಿ ಹೇರಿಕೆ ತಿಕ್ಕಾಟ ಮುನ್ನೆಲೆಗೆ ಬಂದಿದೆ. ಯುಜಿಸಿ ನಿಯಮಗಳ ವಿರುದ್ಧ ಕರ್ನಾಟಕ, ಕೇರಳ, ತಮಿಳುನಾಡು ಹಾಗೂ ತೆಲಂಗಾಣ ರಾಜ್ಯಗಳು ಜಂಟಿ ನಿರ್ಣಯ ಕೈಗೊಂಡಿವೆ.
ಈ ನಡುವೆ, ಕೇಂದ್ರ ಸರ್ಕಾರವು ಸಮಗ್ರ ಶಿಕ್ಷಾ ಅಭಿಯಾನದಡಿ ತಮಿಳುನಾಡಿಗೆ ಬಿಡುಗಡೆ ಮಾಡಬೇಕಿದ್ದ ಅನುದಾನದಲ್ಲಿ 1,152 ಕೋಟಿ ರೂ. ಅನುದಾನವನ್ನು ತಡೆಹಿಡಿದಿದೆ. ತಮಿಳುನಾಡು ಸರ್ಕಾರ ‘ಎನ್‌ಇಪಿ’ಯನ್ನ ಜಾರಿಗೆ ತಂದರೆ ಮಾತ್ರವೇ ಉಳಿದ ಹಣವನ್ನು ಬಿಡುಗಡೆ ಮಾಡುತ್ತೇವೆ ಎಂದು ಕೇಂದ್ರ ಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ಹೀಗಾಗಿ, ಎನ್‌ಇಪಿ ಜಾರಿ ಮಾಡಬೇಕು ಅಂತ ಒತ್ತಾಯಿಸುತ್ತಿರುವುದು ರಾಜ್ಯಗಳ ಮೇಲೆ ಹಿಂದಿ ಹೇರಿಕೆಯ ಹುನ್ನಾರದ ಭಾಗವಾಗಿದೆ ಎಂದು ತಮಿಳುನಾಡು ಸರ್ಕಾರ ಹೇಳಿದೆ. ಎನ್‌ಇಪಿ ಜಾರಿ ಮಾಡುವುದಿಲ್ಲ ಎಂದು ಕಡಾಖಂಡಿತವಾಗಿ ಹೇಳಿದೆ. ಅಲ್ಲದೆ, ತಮಿಳುನಾಡಿನಲ್ಲಿ ಹಿಂದಿ ಬೋರ್ಡ್‌ಗಳಿಗೆ ಕಪ್ಪು ಮಸಿ ಬಳಿಯುವ ಅಭಿಯಾನವೂ ನಡೆಯುತ್ತದೆ. ಚೆನ್ನೈ ಬಳಿಯ ಪೊಲ್ಲಾಚಿ ರೈಲು ನಿಲ್ದಾಣದಲ್ಲಿ ತಮಿಳು ಕಾರ್ಯಕರ್ತರು ಹಿಂದಿಯಲ್ಲಿದ್ದ ಬೋರ್ಡ್‌ಗಳಿಗೆ ಕಪ್ಪು ಮಸಿ ಬಳಿದು, ಹಿಂದಿ ಹೇರಿಕೆ ವಿರುದ್ಧ ಮತ್ತೊಮ್ಮೆ ಹೋರಾಟದ ಕಿಡಿ ಹೊತ್ತಿಸಿದ್ದಾರೆ.