ಕಳೆದ ಮೂರು ವರ್ಷಗಳಿಂದ ಬಾಕಿ ಉಳಿಸಿಕೊಂಡಿರುವ ರಾಜ್ಯದ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನವನ್ನು ಕೂಡಲೇ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿ ಎಐಡಿಎಸ್ಒ ಪ್ರತಿಭಟನೆ ನಡೆಸಿತು.
ಎಐಡಿಎಸ್ಓ ಜಿಲ್ಲಾ ಕಾರ್ಯದರ್ಶಿ ನಿತಿನ್ ಮಾತನಾಡಿ, “ಕಳೆದ ಮೂರು ವರ್ಷಗಳಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಸರಿಯಾಗಿ ವಿದ್ಯಾರ್ಥಿ ವೇತನ ಲಭ್ಯವಾಗುತ್ತಿಲ್ಲ. ಬಹುತೇಕ ವಿದ್ಯಾರ್ಥಿಗಳು ಸರ್ಕಾರದಿಂದ ದೊರೆಯುವ ವಿದ್ಯಾರ್ಥಿ ವೇತನದ ಮೇಲೆ ಅವಲಂಬಿತರಾಗಿಯೇ ಪದವಿ ಹಾಗೂ ಉನ್ನತ ಶಿಕ್ಷಣವನ್ನು ಪ್ರವೇಶಿಸುವ ಸಾಹಸಕ್ಕೆ ಮುಂದಾಗುತ್ತಾರೆ. ಇಲ್ಲವಾದಲ್ಲಿ ಶಿಕ್ಷಣವನ್ನು ತೊರೆಯುತ್ತಾರೆ. ಶಿಕ್ಷಣದ ವ್ಯಾಪಾರೀಕರಣವು ಈಗಾಗಲೇ ಬಡ ವಿದ್ಯಾರ್ಥಿಗಳ ಶಿಕ್ಷಣದ ಕನಸುಗಳನ್ನು ಸೀಮಿತ ಗೊಳಿಸುತ್ತಿದೆ. ಹೀಗಿರುವಾಗ ವಿದ್ಯಾರ್ಥಿ ವೇತನವನ್ನು ಕಡಿತಗೊಳಿಸುತ್ತಿರುವುದು ಶಿಕ್ಷಣ ವಿರೋಧಿ ಹಾಗೂ ವಿದ್ಯಾರ್ಥಿ ವಿರೋಧಿ ನಡೆಯಾಗಿದೆ. ತಾನು ಬಡ ಜನರ ಪರ ಎಂದು ಹೇಳಿಕೊಳ್ಳುವ ರಾಜ್ಯ ಕಾಂಗ್ರೆಸ್ ಸರ್ಕಾರ ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನವನ್ನು ಕೂಡ ಕಡಿತಗೊಳಿಸಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಉಪಾಧ್ಯಕ್ಷೆ ಸ್ವಾತಿ ಮಾತನಾಡಿ, “ಎಐಡಿಎಸ್ಒ ವಿದ್ಯಾರ್ಥಿ ಸಂಘಟನೆಯು ಕಳೆದ ಒಂದು ತಿಂಗಳಿಂದ ರಾಜ್ಯಾದ್ಯಂತ ವಿದ್ಯಾರ್ಥಿ ವೇತನ ಕುರಿತಾಗಿ ಸಮೀಕ್ಷೆ ನಡೆಸಿದಾಗ ತಿಳಿದು ಬಂದಿರುವ ಆಘಾತಕಾರಿ ವಿಷಯವೇನೆಂದರೆ, ಪದವಿ, ಸ್ನಾತಕೋತ್ತರ ಇಂಜಿನಿಯರಿಂಗ್ ಮತ್ತು ಮೆಡಿಕಲ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ದೊರೆತಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ 2022ರಲ್ಲಿ ಸುಮಾರು ಶೇ. 40 ವಿದ್ಯಾರ್ಥಿಗಳಿಗೆ, 2023 ರಲ್ಲಿ ಶೇ. 65 ವಿದ್ಯಾರ್ಥಿಗಳಿಗೆ, 2024 ರಲ್ಲಿ ಶೇಕಡ. 95 ರಷ್ಟು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಬಂದಿಲ್ಲದೆ ಇರುವುದು ಶೋಚನೀಯ. ರಾಜ್ಯದಲ್ಲಿ ಒಟ್ಟು 4,90,372 ವಿದ್ಯಾರ್ಥಿಗಳಿದ್ದು, ಅದರಲ್ಲಿ ಮೈಸೂರು ಜಿಲ್ಲೆಯ 37,482 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಬಂದಿಲ್ಲ. ಜನರ ತೆರಿಗೆಯನ್ನು ಶಿಕ್ಷಣಕ್ಕೆ ಆದ್ಯತೆ ನೀಡಿ ವಿನಿಯೋಗಿಸದೆ ಸರ್ಕಾರವು ಜನರನ್ನು ವಂಚಿಸಿದೆ. ವಿದ್ಯಾರ್ಥಿ ವೇತನವು ಸರ್ಕಾರಗಳು ಕೊಡುವ ಭಿಕ್ಷೆ ಅಲ್ಲ ಬದಲಿಗೆ ವಿದ್ಯಾರ್ಥಿಗಳ ಹಕ್ಕಾಗಿದೆ. ಸರ್ಕಾರದ ಈ ವಂಚನೆಯ ವಿರುದ್ಧ ಧ್ವನಿ ಎತ್ತಲು ಎಐಡಿಎಸ್‌ಒ ಕರ್ನಾಟಕ ರಾಜ್ಯ ಸಮಿತಿಯು ಮಾರ್ಚ್ 1, 2025ರಂದು ಬೆಂಗಳೂರಿನಲ್ಲಿ ‘ವಿದ್ಯಾರ್ಥಿವೇತನ ಉಳಿಸಿ’ ಪ್ರತಿಭಟನೆಗೆ ಕರೆ ನೀಡಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ‘ ಜಾಗೃತ ಕರ್ನಾಟಕ ‘ ರಾಜಕೀಯ ಸಂಘಟನೆಗೆ ಮೈಸೂರಿನಲ್ಲಿ ಚಾಲನೆ
ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯೆ ಹೇಮಾ, ಜಿಲ್ಲಾಧ್ಯಕ್ಷೆ ಚಂದ್ರಕಲಾ, ಜಿಲ್ಲಾ ಪದಾಧಿಕಾರಿಗಳಾದ ಚಂದನ, ಚಂದ್ರಿಕಾ, ದಿಶ, ಅಂಜಲಿ, ನಂದೀಶ್, ಅಭಿಷೇಕ್, ರಾಕೇಶ್, ಮಹಾರಾಜ, ಯುವರಾಜ ಹಾಗೂ ಶಾರದಾ ವಿಲಾಸ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಇದ್ದರು.

