ಸರ್ಕಾರಿ ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಶ್ರಮಿಸಬೇಕು ಎಂದು ಚಾಮರಾಜನಗರ ಪುರಸಭೆ ಅಧ್ಯಕ್ಷ ಅಣ್ಣಯ್ಯ ಸ್ವಾಮಿ ಹೇಳಿದರು.
ಗುಂಡ್ಲುಪೇಟೆ ಪಟ್ಟಣದ ಊಟಿ ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 122ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ‘ಹಳೆ ಬೇರು ಹೊಸ ಚಿಗುರು’ ಸಮಾರಂಭದಲ್ಲಿ ಮಾತನಾಡಿದ ಅವರು, “ನಾನು ಸಹ ಈ ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದು, ಶಾಲಾ ಅಭಿವೃದ್ಧಿಗೆ ಪುರಸಭೆ ಬೆಂಬಲವಾಗಿ ನಿಲ್ಲುತ್ತದೆ. ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರು ಮಹತ್ವದ ಪಾತ್ರ ವಹಿಸುತ್ತಾರೆ. ಶಾಲಾ ಹಂತದಲ್ಲಿ ಮಕ್ಕಳ ಉತ್ತಮ ಭವಿಷ್ಯ ನೀಡಲು ಪ್ರತಿಯೊಬ್ಬ ಶಿಕ್ಷಕರು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು” ಎಂದರು.
ನವೀನ್ ಮೌರ್ಯ ಮಾತನಾಡಿ, “ಸಾಂಸ್ಕೃತಿಕ ಹಾಗೂ ಕ್ರೀಡಾ ಚುಟುವಟಿಕೆ ಮೂಲಕ ಪ್ರತಿಭೆಗಳನ್ನು ಗುರುತಿಸಲು ಶಾಲಾ ವಾರ್ಷಿಕೋತ್ಸವ ಉತ್ತಮ ವೇದಿಕೆ. ಮಕ್ಕಳ ಸಾಮರ್ಥ್ಯಕ್ಕೆ ಅನುಗುಣವಾಗಿ ಅವರ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ಶಿಕ್ಷಕ ವರ್ಗ ಹಾಗೂ ಪೋಷಕರು ಶ್ರಮಿಸಬೇಕು. ಪಠ್ಯಗಳ ಜೊತೆಗೆ ಮಕ್ಕಳ ಕಲಿಕಾ ಆಸಕ್ತಿ, ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸಲು ಸಾಧ್ಯ. ಕೆಲವು ಮಕ್ಕಳು ಕೇವಲ ಒಂದು ವಿಷಯಕ್ಕೆ ಮಾತ್ರ ಸೀಮಿತವಾಗಿ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗವಹಿಸಲು ಹಿಂದೇಟು ಹಾಕುತ್ತಾರೆ. ಓದು ಬರಹದ ಜೊತೆಗೆ ಉತ್ತಮವಾದ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಹವ್ಯಾಸವನ್ನು ಸಹ ರೂಢಿಸಿಕೊಳ್ಳುವುದು ಒಳ್ಳೆಯ ಬೆಳವಣಿಗೆಯಾಗಿದೆ.
ಚಿಕ್ಕಂದಿನಿಂದಲೇ ವೇದಿಕೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಬುದ್ಧಿ ಶಕ್ತಿ, ಧೈರ್ಯ ಹೆಚ್ಚಿ ಭಯ ಹೋಗಲಾಡಿಸಬಹುದು. ಹಾಗೆ ನಾನು ಕೂಡ ಈ ಶಾಲೆಯ ವಿದ್ಯಾರ್ಥಿ ಹಾಗಾಗಿ ಈ ಶಾಲೆಯಿಂದ ಶಿಕ್ಷಣ ಪಡೆದಂತಹ ವಿದ್ಯಾರ್ಥಿಗಳು ಹಲವು ಹುದ್ದೆಗಳನ್ನು ಅಲಂಕರಿಸಿದ್ದಾರೆ. ಸರ್ಕಾರಿ ಶಾಲೆ ಎಂದು ಮೂಗು ಮುರಿಯುವ ಸಂದರ್ಭದಲ್ಲಿ ಸರ್ಕಾರಿ ಶಾಲೆಯಲ್ಲಿ ಓದಿದಂತ ವಿದ್ಯಾರ್ಥಿಗಳು ಉನ್ನತ ಸ್ಥಾನಕ್ಕೆ ಹೋಗಬಹುದು ಎಂಬುದಕ್ಕೆ ನಾವುಗಳೇ ಸಾಕ್ಷಿ” ಎಂದು ಹೆಮ್ಮೆಪಟ್ಟರು.
ತಾಲ್ಲೂಕು ದೈಹಿಕ ಶಿಕ್ಷಣ ಅಧಿಕಾರಿ ಚಿಕ್ಕ ಮಲ್ಲಪ್ಪ ಮಾತನಾಡಿ, “ಸರ್ಕಾರಿ ಬೋಧಕ ವರ್ಗ ಉತ್ತಮ ಪರಿಣಿತಿ ಹೊಂದಿದ್ದು, ನಾವೆಲ್ಲರು ಮಕ್ಕಳ ಶೈಕ್ಷಣಿಕ ಮನೋ ವಿಕಾಸಕ್ಕೆ ಬದ್ದತೆಯಿಂದ ಇರಬೇಕಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ‘ ಜಾಗೃತ ಕರ್ನಾಟಕ ‘ ರಾಜಕೀಯ ಸಂಘಟನೆಗೆ ಮೈಸೂರಿನಲ್ಲಿ ಚಾಲನೆ
ಪುರಸಭಾ ಅಧ್ಯಕ್ಷ ಮಧುಸೂದನ್, ಶಾಸಕರ ಆಪ್ತ ಸಹಾಯಕ ಮಂಜಣ್ಣ, ಎಸ್ಡಿಎಂಸಿ ಅಧ್ಯಕ್ಷ ಮೋಹನ್ ಕುಮಾರ್, ಚಲನ ಚಿತ್ರ ಸಂಕಲನಕಾರ ಸುರೇಶ್ ಗುಂಡ್ಲುಪೇಟೆ, ನಿವೃತ್ತ ಮುಖ್ಯ ಶಿಕ್ಷಕಿ ಪುಟ್ಟ ಗೋಪಮ್ಮ, ಮುಖ್ಯ ಶಿಕ್ಷಕ ಸಿದ್ದಾರ್ಥ, ಶಿಕ್ಷಕಿ ಅನಿತಾ, ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ಸುಭಾಷ್ ಮಾಡ್ರಹಳ್ಳಿ, ರಾಘವಾಪುರ ಗ್ರಾಮ ಪಂಚಾಯತಿ ಅಧ್ಯಕ್ಷ ಆರ್ ಡಿ ಉಲ್ಲಾಸ್, ಶಂಕರ್, ಸಿದ್ದರಾಜು, ಮಣಿಕಂಠಾಚಾರಿ, ಅನ್ನಪೂರ್ಣ, ಸುಮ ಮಹೇಶ್, ನಮ್ಮ ಕರ್ನಾಟಕ ಸೇನೆಯ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್, ಕಾವಲು ಪಡೆಯ ತಾಲೂಕು ಅಧ್ಯಕ್ಷ ಅಬ್ದುಲ್ ಮಾಲಿಕ್, ಕಸ್ತೂರಿ ಕನ್ನಡ ನ್ಯಾಯಪರ ವೇದಿಕೆ ತಾಲೂಕು ಅಧ್ಯಕ್ಷ ರಂಗಪ್ಪ ನಾಯಕ್, ಶಾಲಾ ಎಸ್ ಡಿ ಎಂ ಸಿ ಸದಸ್ಯರು, ಶಿಕ್ಷಕ ವರ್ಗ, ಸಿಬ್ಬಂದಿ ವರ್ಗದವರು, ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಪೋಷಕರು ಕಾರ್ಯಕ್ರಮದಲ್ಲಿ ಇದ್ದರು.
