ಸಮಾಜ ಮುಖ್ಯ ವಾಹಿನಿಗೆ ಬರಲು ಕೇವಲ ವೇದಿಕೆಗಳ ಮೇಲಿರುವವರು ಸಂಘಟಿತರಾದರೆ ಸಾಲದು ವೇದಿಕೆಯ ಮುಂಭಾಗದಲ್ಲಿರುವವರೂ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಚಿವ ಎಸ್ ಮಧು ಬಂಗಾರಪ್ಪ ಅಭಿಪ್ರಾಯಪಟ್ಟರು.
ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ಮಲೆನಾಡು ದೇವಾಂಗ ಸಮಾಜ ಹಮ್ಮಿಕೊಂಡಿದ್ದ ಸುವರ್ಣ ಮಹೋತ್ಸವ ಕಟ್ಟಡದ ಉದ್ಘಾಟನೆಯಲ್ಲಿ ಮಾತನಾಡಿದ ಅವರು, “ನಮ್ಮ ತಂದೆ ಎಸ್.ಬಂಗಾರಪ್ಪ ಮುಖ್ಯಮಂತ್ರಿಯಾಗಲು ದೇವಾಂಗ ಸಮಾಜವೇ ಕಾರಣ. ಅವರ ಸಹಕಾರ ಇಲ್ಲದಿದ್ದರೆ ತಮ್ಮ ತಂದೆ ಮುಖ್ಯಮಂತ್ರಿಯಾಗುತ್ತಿರಲಿಲ್ಲ. ದೇವಾಂಗ ಸಮಾಜದ ಅಭಿವೃದ್ಧಿಗೆ ಸರ್ಕಾರದಿಂದ ಎಲ್ಲ ಸಹಕಾರ ನೀಡಲಾಗುವುದು. ಬೇಡಿಕೆ ಇದ್ದರೆ ಸಮಾಜಗಳು ಕೇಳಿ ಪಡೆಯಬೇಕು. ಸರ್ಕಾರ ಈಡೇರಿಸದಿದ್ದರೆ ಹೋರಾಡಿ ತೆಗೆದುಕೊಳ್ಳಬೇಕು. ಪ್ರತಿಯೊಬ್ಬರೂ ಸಂಘಟಿತರಾಗಬೇಕು” ಎಂದರು.

“ನಾರಾಯಣ ಗುರುಗಳ ಆಶಯದಂತೆ ಸಂಘಟನೆಯಿಂದ ಬಲಯುತರಾಗಿ ಎಂಬುದು ಕೇವಲ ಈಡಿಗ ಸಮಾಜಕ್ಕೆ ಮಾತ್ರವಲ್ಲ ಎಲ್ಲ ಹಿಂದುಳಿದ ಹಾಗೂ ಶೋಷಿತ ವರ್ಗದವರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಹೇಳಿದ್ದಾರೆ. ನಾವು ಸಂಘಟಿತರಾಗಿ ಜನಪ್ರತಿನಿಧಿಗಳನ್ನು ಪ್ರಶ್ನಿಸದೆ ಹೋದರೆ ಪ್ರತಿನಿಧಿಗಳು ಭಾಷಣ ಮತ್ತು ಘೋಷಣೆಗೆ ಮಾತ್ರ ಸೀಮಿತರಾಗುತ್ತಾರೆ. ನಿಮ್ಮ ಹಕ್ಕುಗಳನ್ನು ಕೇಳಿ, ಕೊಡದೆ ಇದ್ದಾಗ ಕಸಿದುಕೊಳ್ಳುವರಾಗಬೇಕು” ಎಂದರು.
“ದೇವಾoಗ ಸಮಾಜದ ಅಭಿವೃದ್ಧಿಗಾಗಿ ಸರ್ಕಾರದಿಂದ ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪನೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಮಾತನಾಡಿ ಮುಂದಿನ ದಿನಗಳಲ್ಲಿ ಸಮಾಜದ ಅಭಿವೃದ್ಧಿಗಾಗಿ ನಿಗಮ ಸ್ಥಾಪನೆ ಮಾಡಲಅಗುವುದು” ಎಂದು ಹೇಳಿದರು.

“ಹಿರಿಯ ನಟ ಶ್ರೀನಿವಾಸ್ ಮೂರ್ತಿ ಅವರ ಕವಿರತ್ನ ಕಾಳಿದಾಸ ಚಲನ ಚಿತ್ರದ ಭೋಜರಾಜನ ಪಾತ್ರವನ್ನು ನಮ್ಮ ತಂದೆ ಸದಾ ಆಸ್ವಾದಿಸುತ್ತಿದ್ದರು. ಚಿತ್ರನಟಿ ಉಮಾಶ್ರೀ ಅವರನ್ನು ಗುರುತಿಸಿ ಮೊದಲು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕೊಟ್ಟಿದ್ದು ನಮ್ಮ ತಂದೆ, ಅವರ ಮಗನಾಗಿ ಸದಾ ನಿಮ್ಮೊಂದಿಗೆ ಇರುತ್ತೇನೆ” ಎಂದು ಭರವಸೆ ನೀಡಿದರು.
ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, “ಸರ್ಕಾರದ ಮತ್ತು ಸಮಾಜದ ನಡುವೆ ಸೇತುವೆಯಾಗಿ ಜನಪ್ರತಿನಿಧಗಳು ಕೆಲಸ ಮಾಡುತ್ತೇವೆ. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ರಾಜ್ಯಗಳಲ್ಲಿರುವ ನೇಕಾರ, ದೇವಾಂಗ ಸಮಾಜದವರು ಹತ್ತಿ ಮತ್ತು ರೇಷ್ಮೆ ಬೆಳೆದು ತಮ್ಮ ವೃತ್ತಿಯನ್ನು ನಿಯತ್ತಿನಿಂದ ಮಾಡಿಕೊಂಡು ಬರುತ್ತಿದ್ದಾರೆ. ಸಮಾಜದ ಪ್ರತಿಯೊಬ್ಬರೂ ಮುಖ್ಯವಾಹಿನಿಗೆ ಬರಲು ಬೇಕಾದ ಎಲ್ಲಾ ಪ್ರಯತ್ನಗಳನ್ನು ಪ್ರಾಮಾಣಿಕವಾಗಿ ಮಾಡಲಾಗುವುದು” ಎಂದರು.

ದೇವಾಂಗ ಸಮಾಜದ ಅಧ್ಯಕ್ಷ ಪಿ.ಆರ್.ಗಿರಿಯಪ್ಪ, ಸಮುದಾಯ ಭವನ ಕಟ್ಟಡ ಅಭಿವೃದ್ಧಿಗೊಳಿಸಲು ಇನ್ನೂ ಎರಡು ಕೋಟಿ ರೂಪಾಯಿ ಅನುದಾನ ನೀಡುವಂತೆ ಸಚಿವ ಮಧು ಬಂಗಾರಪ್ಪ ಅವರನ್ನು ಕೇಳಿಕೊಂಡರು.
ಈ ಸುದ್ದಿ ಓದಿದ್ದೀರಾ?: ಶಿವಮೊಗ್ಗ | ಸಿಲಿಂಡರ್ ಸ್ಫೋಟ; ತಪ್ಪಿದ ಭಾರೀ ಅನಾಹುತ
ಹಂಪಿ ಹೇಮಕೂಟದ ಗಾಯತ್ರಿ ಪೀಠದ ಪೀಠಾಧ್ಯಕ್ಷ ಶ್ರೀ ದಯಾನಂದಪುರಿ ಸ್ವಾಮೀಜಿ, ಧಾರವಾಡದ ಕವಲಗೇರಿ ಶಿವಾನಂದ ಮಠದ ಶ್ರೀ ಶಿವಾನಂದ ಸ್ವಾಮೀಜಿಗಳು ಸಮಾರಂಭದ ಸಾನ್ನಿಧ್ಯ ವಹಿಸಿದ್ದರು.ಇದೇ ಸಂದರ್ಭದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು.
