ಅಂಚೆ ಕಚೇರಿಗಳು ಜನ ಸಾಮಾನ್ಯರ ಜೀವನಕ್ಕೆ ಅವಶ್ಯವಾದಂತಹ ಸೇವೆಗಳನ್ನು ಮನೆಬಾಗಿಲಿನಲ್ಲಿ ಆಧುನಿಕ ತಂತ್ರಜ್ಞಾನದೊಂದಿಗೆ ನೀಡುವ ಮೂಲಕ ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತವಾಗಿವೆ ಮತ್ತು ಬದಲಾದ ಕಾಲ ಘಟ್ಟದಲ್ಲಿ ಅಂಚೆ ಇಲಾಖೆಯ ಜನಸೇವೆ ಅತ್ಯಂತ ಶ್ಲಾಘನೀಯ ಎಂದು ದಕ್ಷಿಣ ಕನ್ನಡದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಕೋಟೆಕಾರಿನ ಮಾಡೂರಿನಲ್ಲಿ ಹೊಸ ಶಾಖಾ ಅಂಚೆ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಹೊಸ ಶಾಖಾ ಅಂಚೆ ಕಚೇರಿಯನ್ನು ಉದ್ಘಾಟಿಸಿದ ಕೋಟೆಕಾರು ಪಟ್ಟಣ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ದಿವ್ಯಾ ಸತೀಶ್ ಶೆಟ್ಟಿ ಮಾತನಾಡಿ, ಅಂಚೆ ಇಲಾಖೆ ವೃದ್ಧರ, ಅಶಕ್ತರ, ಮಹಿಳೆಯರ, ಮಕ್ಕಳ ಪಾಲಿಗೆ ಆಶಾಕಿರಣವಾಗಿದ್ದು ಮಾಡೂರಿನ ಹೊಸ ಅಂಚೆ ಕಚೇರಿಯ ಸೇವೆಯನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಮತ್ತು ಈ ನಿಟ್ಟಿನಲ್ಲಿ ಕೋಟೆಕಾರು ಪಟ್ಟಣ ಪಂಚಾಯತ್ ಸರ್ವ ಸಹಕಾರ ನೀಡಲಿದೆ ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಹಿರಿಯ ಅಂಚೆ ಅಧಿಕ್ಷಕರಾದ ಎಂ ಸುಧಾಕರ ಮಲ್ಯ ಇವರು, ನೂತನ ಮಾಡೂರು ಶಾಖಾ ಅಂಚೆ ಕಚೇರಿಯಲ್ಲಿ ಲಭ್ಯವಾಗುವ ಅಂಚೆ ಸೇವೆಗಳ ಬಗ್ಗೆ ಮಾಹಿತಿ ನೀಡಿ ಮಾಡೂರಿನ ಜನತೆ ಅಂಚೆ ಉಳಿತಾಯ ಖಾತೆಗಳು, ಅಂಚೆ ಜೀವವಿಮೆ, ನಾಗರಿಕ ಕೇಂದ್ರಿತ ಸೇವೆಗಳು, ಆಧಾರ್ ಸೇವೆಗಳು, ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಸೇವೆಗಳ ಸಂಪೂರ್ಣ ಉಪಯೋಗ ಪಡೆದುಕೊಳ್ಳಲು ಕರೆ ನೀಡಿದರು.
ಇದನ್ನು ಓದಿದ್ದೀರಾ? ಪಾಕ್ ವಿರುದ್ಧ ಭರ್ಜರಿ ಶತಕ: ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆದ ‘ಕಿಂಗ್ ಕೊಹ್ಲಿ’
ಮುಖ್ಯ ಅತಿಥಿಗಳಾದ ಕೋಟೆಕಾರ್ ಪಟ್ಟಣ ಪಂಚಾಯತ್ ಸದಸ್ಯರಾದ ಸುಜಿತ್ ಮಾಡೂರು ಮಾತನಾಡಿ, ಶಾಖ ಅಂಚೆ ಕಚೇರಿ ಉದ್ಘಾಟನೆಗೊಳ್ಳಬೇಕಾದರೆ ಅದರ ಹಿಂದೆ ಸಹಕಾರ ನೀಡಿದ ಅಂಚೆ ಇಲಾಖೆಯನ್ನು ಮತ್ತು ನಳಿನ್ ಕುಮಾರ್ ಕಟೀಲ್ ಮಾಜಿ ಸಂಸದರು ಇವರ ಸಹಕಾರವನ್ನು ಸ್ಮರಿಸಿ, ಮುಂದೆ ಇದನ್ನು ಉಪ ಅಂಚೆ ಕಚೇರಿಯಾಗಿ ಮೇಲ್ದರ್ಜೆಗೇರಿಸಲು ಊರವರ ಸಹಕಾರದಿಂದ ಪರಿಪೂರ್ಣ ಪ್ರಯತ್ನವನ್ನು ಮಾಡುತ್ತೇನೆ ಎಂದರು.
ಉದ್ಯಮಿ ಉದಯ್ ಕುಮಾರ್ ಉಪಸ್ಥಿತರಿದ್ದರು.ಉಪ ಅಂಚೆ ಅಧೀಕ್ಷಕರಾದ ಪಿ ದಿನೇಶ್ ಸ್ವಾಗತಿಸಿದರು. ಅಂಚೆ ನಿರೀಕ್ಷಕ ಪ್ರದೀಪ್ ಭಂಡಾರಿ ವಂದಿಸಿದರು, ಸಿದ್ದರಾಮ ಇವರು ಪ್ರಾರ್ಥಿಸಿದರು. ದಯಾನಂದ ಕತ್ತಲ್ ಸಾರ್ ನಿರೂಪಿಸಿದರು. ನೂತನ ಮಾಡೂರು ಶಾಖಾ ಅಂಚೆ ಕಚೇರಿ 24.02.2025 ರಿಂದ ಅಂಚೆ ಸೇವೆಯನ್ನು ನೀಡಲಿದೆ.
