ಮೈಸೂರು ಜಿಲ್ಲೆಯ ಟಿ ನರಸೀಪುರ ಪಟ್ಟಣದಲ್ಲಿ ತಾಲೂಕು ಕೇಂದ್ರ ಕ್ರೀಡಾಂಗಣ ನಿರ್ಮಾಣಕ್ಕೆ ಕೆಎಸ್ಐಸಿ ಜಾಗವನ್ನು ಪಡೆದುಕೊಳ್ಳುವುದು ಸೂಕ್ತವಲ್ಲ. ಅನಿವಾರ್ಯವಾದರೆ ‘ಕೆಎಸ್ಐಸಿ ಉಳಿಸಿ, ಬೇರೆಡೆ ಕ್ರೀಡಾಂಗಣ ನಿರ್ಮಿಸಿ’ ಹೋರಾಟ ಮಾಡಲಾಗುವುದು ಎಂದು ದಲಿತ ಸಂಘರ್ಷ ಸಮಿತಿ(ಬಣ ರಹಿತ) ಜಿಲ್ಲಾ ಸಂಚಾಲಕ ಸಿ ಉಮಾ ಮಹಾದೇವ ಎಚ್ಚರಿಸಿದರು.
ಟಿ ನರಸೀಪುರ ಪಟ್ಟಣದ ಪಿಡಬ್ಲ್ಯೂಡಿ ಅತಿಥಿ ಗೃಹದಲ್ಲಿ ದಲಿತ ಸಂಘರ್ಷ ಸಮಿತಿ(ಬಣ ರಹಿತ)ಯಿಂದ ಕರೆದಿದ್ದ ಕೆಎಸ್‌ಐಸಿ ಉಳಿಸಿ ಸಭೆಯಲ್ಲಿ ಮಾತನಾಡಿ, “ಸರ್ಕಾರ ಹೊಸದಾಗಿ ಯಾವುದೇ ಉದ್ಯೋಗ ಸೃಷ್ಟಿಸುವಂತಹ ಸಾರ್ವಜನಿಕ ಸಂಸ್ಥೆಗಳನ್ನು ಸ್ಥಾಪನೆ ಮಾಡಿರುವುದಿಲ್ಲ. ಆಂಥದರಲ್ಲಿ ಟಿ ನರಸೀಪುರದಲ್ಲಿ ಮಹಾರಾಜರ ಕಾಲದಲ್ಲಿ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮಕ್ಕೆ, ಅದರ ಅಭಿವೃದ್ಧಿಯನ್ನು ಮುಂದಾಲೋಚಿಸಿಕೊಂಡು ಬಿಟ್ಟಿರುವ ಜಾಗವನ್ನು ಕ್ರೀಡಾಂಗಣಕ್ಕೆ ಪಡೆಯಬೇಕೆಂದು ವಿಧಾನ ಪರಿಷತ್ ಸದಸ್ಯ ಡಾ ಯತೀಂದ್ರ ಸಿದ್ದರಾಮಯ್ಯ ಹಾಗೂ ಜಿಲ್ಲಾಧಿಕಾರಿಗಳು, ಕೆಎಸ್ಐಸಿ ಜಾಗವನ್ನು ಟಿ ನರಸೀಪುರ ಪಟ್ಟಣದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಆರು ಎಕರೆ ಜಾಗವನ್ನು ಕೊಡಲು ನಿರ್ಧರಿಸಿರುವುದು ಸರಿಯಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಯಾವುದೇ ಚಿಂತನೆ ಮಾಡದೆ ‘ಎತ್ತಿಗೆ ಜ್ವರ ಬಂದರೆ ಕೋಣಕ್ಕೆ ಬರೆ’ ಎನ್ನುವ ರೀತಿಯಲ್ಲಿದೆ. ಕ್ರೀಡಾಂಗಣ ನಮ್ಮ ಮುಂದಿನ ಪೀಳಿಗೆ, ಮಕ್ಕಳಿಗೆ, ಕ್ರೀಡಾ ಪ್ರೇಮಿಗಳಗೆ ಮುಖ್ಯವಾಗಿದೆ. ಅದರ ಪರವಾದ ಹೋರಾಟಕ್ಕೆ ನಮ್ಮ ಬೆಂಬಲವು ಇದ್ದು, ಟಿ ನರಸೀಪುರದ ಪ್ರತಿಯೊಬ್ಬರ ಬೆಂಬಲವೂ ಇದೆ. ಹಾಗಂತ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮಕ್ಕೆ ಸೇರಿದ ಜಾಗವನ್ನು ವಶಕ್ಕೆ ಪಡೆಯುವುದು ಎಷ್ಟು ಸರಿ? ರೇಷ್ಮೆ ಮಾರುಕಟ್ಟೆಗೆ ಟಿ ನರಸೀಪುರ ಹೆಸರುವಾಸಿ, ಹೀಗಿರುವಾಗ ರೇಷ್ಮೆ ಮಾರುಕಟ್ಟೆ ಜಾಗ ಪಡೆದು ಅಲ್ಲಿ ಕ್ರೀಡಾಂಗಣ ಮಾಡಿದರೆ ಮಾರುಕಟ್ಟೆ ವ್ಯವಸ್ಥೆ ಹಾಳಾಗುವುದಿಲ್ಲವೇ” ಎಂದು ಪ್ರಶ್ನೆ ಮಾಡಿದರು.
“ಶಾಲಾ ಮಕ್ಕಳಿಗೆ ವಿಶೇಷವಾಗಿ ಅಗತ್ಯ, ಸೌಲಭ್ಯಗಳೊಡನೆ ಪ್ರತ್ಯೇಕ ಸ್ಥಳದಲ್ಲಿ, ಪ್ರಶಾಂತವಾದ ವಾತಾವರಣದಲ್ಲಿ ಕ್ರೀಡಾಂಗಣ ಮಾಡಬೇಕು. ನಿತ್ಯ ವಾಯು ವಿಹಾರಕ್ಕೆ, ಕ್ರೀಡಾಪಟುಗಳು ಅಭ್ಯಾಸ ನಡೆಸಲು ಅನುಕೂಲವಾಗುವಂತೆ ಇರಬೇಕು. ಅದು ಬಿಟ್ಟು ಜನ ಜಂಗುಳಿಯ ಮಾರುಕಟ್ಟೆ ಜಾಗದಲ್ಲಿ ಕ್ರೀಡಾಂಗಣ ಮಾಡುವುದು ಸರಿಯಲ್ಲ. ಇದಕ್ಕಾಗಿ ಪ್ರತ್ಯೇಕ ಸ್ಥಳ ನಿಗದಿಪಡಿಸವೇಕು. ಕೆಎಸ್‌ಐಸಿ ಉಳಿಸಿ, ಅಭಿವೃದ್ಧಿಪಡಿಸಿ. ಮುಂದಿನ ದಿನಗಳಲ್ಲಿ ತಾಲೂಕಿನ ನಿರುದ್ಯೋಗಿ ಯುವಜನರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಶಾಸಕರು, ಸಚಿವರು ಯೋಚಿಸಬೇಕು. ಅಧಿಕಾರಿಗಳು ಈ ಬಗ್ಗೆ ಕ್ರಮವಹಿಸಬೇಕು” ಎಂದರು.
“ಟಿ ನರಸೀಪುರ ತಾಲೂಕು ತಲಕಾಡು ಭಾಗದ ಮೆದನಿ, ಬಣವೆ, ಮಡವಾಡಿ ಭಾಗದಲ್ಲಿ ಸುಮಾರು 800 ಎಕರೆಯಷ್ಟು ಫಲವತ್ತಾದ ಸರ್ಕಾರಿ ಭೂಮಿ ಭೂಗಳ್ಳರ ಪಾಲಾಗಿದೆ. ನೀಲಸೋಗೆ ಮತ್ತು ಕೇತುಪುರ ವ್ಯಾಪ್ತಿಯಲ್ಲಿ ಸರ್ಕಾರದ ಜಮೀನು ಇದೆ. ಇದೆಲ್ಲದರ ಕಡೆ ಅಧಿಕಾರಿಗಳು ಗಮನ ಹರಿಸಬೇಕು” ಎಂದು ಹೇಳಿದರು.
“ಕರ್ನಾಟಕ ರೇಷ್ಮೆ ಉದ್ಯಮ ಈಗಷ್ಟೇ ಚೇತರಿಕೆಯಾಗುತ್ತಿದ್ದು, ಟಿ ನರಸೀಪುರದಲ್ಲಿ ರೇಷ್ಮೆ ನೂಲು ತೆಗೆಯುವ ಘಟಕಕ್ಕೆ ಇನ್ನೂ ಹೆಚ್ಚಿನ ಯಂತ್ರಗಳು ಬರಬೇಕಿದೆ. ಅದಕ್ಕಾಗಿ ಈಗಿರುವ ಜಾಗ ಬೇಕಾಗುತ್ತದೆ. ನಿಗಮವು ಹಲವು ಯೋಜನೆಗಳನ್ನು ಹಾಕಿಕೊಂಡಿದೆ. ಕೆಎಸ್‌ಐಸಿಯ ರೇಷ್ಮೆಸೀರೆ ದೇಶಾದ್ಯಂತ ಹೆಸರು ಗಳಿಸಿದ್ದು ಕರ್ನಾಟಕದ ಹೆಮ್ಮೆಯ ಸಂಸ್ಥೆಯಾಗಿದೆ. ಹೀಗಿರುವಾಗ ಅದರ ಅಭಿವೃದ್ಧಿಗೆ ಪಶುಸಂಗೋಪನೆ ಮತ್ತು ರೇಷ್ಮೆ ಇಲಾಖೆ ಸಚಿವ ಕೆ ವೆಂಕಟೇಶ್, ಕೆಎಸ್‌ಐಸಿ ನಿಗಮದ ಬೋರ್ಡ್ ಚೇರ್ಮನ್ ಹಾಗೂ ಉನ್ನತ ಅಧಿಕಾರಿಗಳು ವಿಯಟ್ನಾಮ್ ದೇಶಕ್ಕೆ ತೆರಳಿ ಅಲ್ಲಿನ ರೇಷ್ಮೆ ಕೃಷಿ ಹಾಗೂ ಸಿಲ್ಕ್ ಸೀರೆ ನೇಯ್ಗೆ ಘಟಕಗಳಿಗೆ ಭೇಟಿಕೊಟ್ಟು ನಮ್ಮ ಕರ್ನಾಟಕದಲ್ಲಿ ರೇಷ್ಮೆ ಕೃಷಿ ಮತ್ತು ಸೀರೆ ಉತ್ಪಾದನೆ ಮತ್ತು ಅಭಿವೃದ್ಧಿಗೆ ಸಂಬಂಧಪಟ್ಟಂತೆ ಮಾತುಕತೆ ನಡೆಸಿದ್ದಾರೆ. ಹೀಗಿರುವಾಗ ಜನಪ್ರತಿನಿದಿಗಳು ಏಕಪಕ್ಷೀಯ ನಿರ್ಧಾರ ಕೈಗೊಳ್ಳುವುದು ಎಷ್ಟು ಸರಿ?” ಎಂದರು.
“ಕಾರ್ಖಾನೆ ಪಕ್ಕ ಕ್ರೀಡಾಂಗಣ ನಿರ್ಮಾಣ ಸರಿಯಲ್ಲ. ಹಾಗೆಯೇ ಈಗ ವಶಕ್ಕೆ ಪಡೆಯಲು ಉದ್ದೇಶಿಸಿರುವ ಜಾಗವೂ ಕ್ರೀಡಾಂಗಣಕ್ಕೆ ಸಾಕಾಗುವುದಿಲ್ಲ. ಈಗಾಗಲೇ ರೇಷ್ಮೆಮಾರುಕಟ್ಟೆ ಕಟ್ಟಡದ ಜಾಗವನ್ನು ತೆಗೆದುಕೊಂಡು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮಾಡಲಾಗಿದೆ. ಈಗ ರೇಷ್ಮೆ ಫ್ಯಾಕ್ಟರಿ ಜಾಗವನ್ನು ವಶಕ್ಕೆ ಪಡೆದು ಕ್ರೀಡಾಂಗಣ ಮಾಡುತ್ತೇವೆ ಎನ್ನುವುದು ಸರಿಯಲ್ಲ. ಸದರಿ ಯೋಚನೆಯನ್ನು ಕೈಬಿಡಬೇಕು ಇದಕ್ಕೆ ದಲಿತ ಸಂಘರ್ಷ ಸಮಿತಿ(ಬಣ ರಹಿತ) ಇದಕ್ಕೆ ವ್ಯಾಪಕ ವಿರೋಧ ವ್ಯಕ್ತಪಡಿಸುತ್ತದೆ ಮತ್ತು ಈ ನಿಟ್ಟಿನಲ್ಲಿ ಹೋರಾಟ ಮಾಡಬೇಕಾಗುತ್ತದೆ” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ‘ಜಾಗೃತ ಕರ್ನಾಟಕ’ ರಾಜಕೀಯ ಸಂಘಟನೆಗೆ ಮೈಸೂರಿನಲ್ಲಿ ಚಾಲನೆ
ಜಿಲ್ಲಾ ಸಂಘಟನಾ ಸಂಚಾಲಕರಾದ ಆಲತ್ತೂರು ಶಿವರಾಜು, ಮೂಡಹಳ್ಳಿ ಮಹದೇವ್, ಅಶೋಕ್ ಕೆ ಎಂ ವಾಡಿ, ಚಂದ್ರು ಅಶೋಕಪುರಂ, ಮಹೇಶ್ ಸುತ್ತೂರು, ತಾಲೂಕು ಸಂಚಾಲಕ ಆಲತ್ತೂರು ಶಿವರಾಜು, ತಾಲೂಕು ಸಂಚಾಲಕ ಶಿವಪ್ರಕಾಶ್ ಕೇತುಪುರ, ಚಂದಳ್ಳಿ ಮಲ್ಲೇಶ್, ರಘು, ನಿರಂಜನ್, ಪ್ರದೀಪ್, ಮನೋರಂಜನ್, ನೇತ್ರಾವತಿ ಹೆಚ್, ಪವಿತ್ರ, ಸುಮಿತ್ರಾ, ನಂದಿನಿ, ಕಲಾ, ರೂಪ, ಪಲ್ಲವಿ ಸೇರಿದಂತೆ ಇತರರು ಇದ್ದರು.
