ಬೆಂಗಳೂರು ಜನತೆ ಕುಡಿಯುವ ನೀರನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡುವುದನ್ನು ಜಲಮಂಡಳಿ ನಿಷೇಧಿಸಿದ್ದು ನಿಯಮ ಉಲ್ಲಂಘಿಸಿದವರಿಗೆ 5 ಸಾವಿರ ದಂಡ ವಿಧಿಸುತ್ತಿದೆ. ಜಲಮಂಡಳಿ ಸಿಬ್ಬಂದಿ ಕಳೆದ 7 ದಿನಗಳಲ್ಲಿ ಕುಡಿಯುವ ನೀರನ್ನು ಪೋಲು ಮಾಡಿದವರ ವಿರುದ್ಧ ತಪಾಸಣೆ ನಡೆಸಿ ದೂರುಗಳನ್ನು ದಾಖಲಿಸಿದ್ದು, ದಂಡ ವಸೂಲಿ ಮಾಡಿ ಕ್ರಮ ಕೈಗೊಂಡಿರುವ ಬಗ್ಗೆ ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾದ್ ಮನೋಹರ್ ಮಾಹಿತಿ ನೀಡಿದ್ದಾರೆ.
ಕುಡಿಯುವ ನೀರನ್ನು ಅನಗತ್ಯವಾಗಿ ಪೋಲು ಮಾಡುವವರ ವಿರುದ್ಧ ‘ದಂಡ’ದ ಅಭಿಯಾನ ನಡೆಸುತ್ತಿರುವ ಜಲಮಂಡಳಿಗೆ ಒಂದು ವಾರದಲ್ಲಿ 112 ಪ್ರಕರಣಗಳನ್ನು ದಾಖಲಾಗಿದ್ದು, ₹5.60 ಲಕ್ಷ ದಂಡ ವಸೂಲಿಯಾಗಿದೆ. ಫೆ.23ರವರೆಗೆ 112 ಪ್ರಕರಣಗಳನ್ನು ದಾಖಲಿಸಲಾಗಿದ್ದು, ಇದರಲ್ಲಿ ದಕ್ಷಿಣ ವಲಯದಲ್ಲಿ ಹೆಚ್ಚು ಪ್ರಕರಣಗಳು (33) ದಾಖಲಾಗಿವೆ. ಉತ್ತರ ವಲಯದಲ್ಲಿ 23, ಪಶ್ಚಿಮ ವಲಯದಲ್ಲಿ 28, ಪೂರ್ವ ವಲಯದಲ್ಲಿ 28 ಪ್ರಕರಣಗಳು ದಾಖಲಾಗಿವೆ.
ಬೇಸಿಗೆ ಅವಧಿಯಲ್ಲಿ ರಾಜಧಾನಿ ಬೆಂಗಳೂರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದು ಎಂದು ಐಐಎಸ್‌ಸಿ ವಿಜ್ಞಾನಿಗಳು ವರದಿ ಸಲ್ಲಿಸಿದ್ದು, ಬೆಂಗಳೂರು ನಗರದಲ್ಲಿ ಕುಡಿಯುವ ನೀರನ್ನು ವಾಹನಗಳ ಸ್ವಚ್ಚತೆಗೆ, ಕೈದೋಟಕ್ಕೆ, ಕಟ್ಟಡ ನಿರ್ಮಾಣಕ್ಕೆ, ಮನೋರಂಜಕವಾಗಿ ಕಾರಂಜಿಯಂತಹ ಆಕರ್ಷಕ ವ್ಯವಸ್ಥೆಗೆ, ಸಿನಿಮಾ ಮಂದಿರ ಮತ್ತು ಮಾಲ್‌ಗಳಲ್ಲಿನ ಕುಡಿಯುವ ನೀರಿನ ಹೊರತು ಇನ್ನಿತರೆ ಬಳಕೆಗೆ, ರಸ್ತೆ ನಿರ್ಮಾಣ ಹಾಗೂ ಸ್ವಚ್ಚತೆಗೆ ಬಳಸಲು ಬೆಂಗಳೂರು ನೀರುಸರಬರಾಜು ಮತ್ತು ಒಳಚರಂಡಿಕಾಯ್ದೆ-1964ರ ಕಲಂ 33 ಮತ್ತು 34ರ ಅನುಸಾರ ನೀಷೇಧಿಸಲಾಗಿದೆ.
ಈ ನಿಷೇಧ ಆದೇಶವನ್ನು ಉಲ್ಲಂಘನೆ ಮಾಡಿದಲ್ಲಿ, ಉಲ್ಲಂಘನೆ ಮಾಡುವವರ ವಿರುದ್ದ ಜಲಮಂಡಳಿಯ ಕಾಯ್ದೆ 1964 ರ ಕಲಂ 109 ರಂತೆ ₹5 ಸಾವಿರ ದಂಡ ವಿಧಿಸಲಾಗುವುದು. ಮರುಕಳಿಸಿದಲ್ಲಿ ದಂಡದ ಮೊತ್ತ ₹5 ಸಾವಿರ ಜತೆಗೆ ಹೆಚ್ಚುವರಿಯಾಗಿ ₹500 ಪ್ರತಿ ದಿನದಂತೆ ದಂಡ ಹಾಕಲಾಗುವುದು ಎಂದು ತಿಳಿಸಲಾಗಿದೆ.
ನಗರದ ಕೆಲವು ವಾರ್ಡ್‌ಗಳಲ್ಲಿ ಅಂತರ್ಜಲದ ಮಟ್ಟ ಕುಸಿಯಬಹುದು ಎಂದು ಐಐಎಸ್‌ಸಿ ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಈ ಕಾರಣದಿಂದ ಇಂಥ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರು ಕುಡಿಯುವ ನೀರನ್ನು ಅನಗತ್ಯ ಪೋಲು ಮಾಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ‘ದಂಡ ಅಭಿಯಾನ’ವನ್ನು ಇನ್ನಷ್ಟು ವ್ಯಾಪಕಗೊಳಿಸಲಾಗುವುದು’ ಎಂದು ಜಲಮಂಡಳಿ ಎಚ್ಚರಿಸಿದೆ.
ಬೆಂಗಳೂರು ಮಹಾನಗರಕ್ಕೆ ಸುಮಾರು 100 ಕಿಲೋಮೀಟರ್‌ಗಳ ದೂರದಿಂದ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಅಂತರ್ಜಲ ಕುಸಿತದಿಂದ ನೀರಿನ ಕೊರತೆ ಹೆಚ್ಚಾಗಬಹುದು ಎನ್ನುವ ಎಚ್ಚರಿಕೆಯಿಂದ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾರ್ವಜನಿಕರು ಅಮೂಲ್ಯವಾಗಿರುವ ಶುದ್ಧ ಕುಡಿಯುವ ನೀರನ್ನು ಅನಗತ್ಯವಾಗಿ ವ್ಯರ್ಥ ಮಾಡುವುದನ್ನು ನಿಲ್ಲಿಸಬೇಕು. ಈ ಮೂಲಕ ಅಗತ್ಯವಿರುವ ಜನರಿಗೆ ಹಾಗೂ ಪ್ರದೇಶಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ಜಲ ಮಂಡಳಿಯ ಜೊತೆ ಕೈಜೋಡಿಸಬೇಕು ಎಂದು ಬಿಡಬ್ಲ್ಯುಎಸ್ಎಸ್ಬಿ ಮನವಿ ಮಾಡಿದೆ.
ಸಾರ್ವಜನಿಕರಿಗೆ ಮಂಡಳಿ ನೀಡಿದ ಆದೇಶಗಳನ್ನು ಯಾರಾದರೂ ಉಲ್ಲಂಘನೆ ಮಾಡುವುದು ಕಂಡುಬಂದರೆ, ಕೂಡಲೇ ಮಂಡಳಿಯ ಕಾಲ್ ಸೆಂಟರ್ ಸಂಖ್ಯೆ 1916 ಗೆ ತಿಳಿಸಬಹುದು.
Pls provide watsup no to complain instead 1916