ಆರ್ಥಿಕವಾಗಿ ಹಿಂದುಳಿದ ಹೆಣ್ಣುಮಕ್ಕಳು, ದಲಿತರು, ಹಿಂದುಳಿದ ವರ್ಗಗಳ ಮಕ್ಕಳು, ಉನ್ನತ ಶಿಕ್ಷಣ ಪಡೆಯುವ ಉದ್ದೇಶದಿಂದ ಸ್ಥಾಪನೆಯಾದ ನೂತನ ಹಾವೇರಿ ವಿಶ್ವವಿದ್ಯಾಲಯವನ್ನು ರಾಜ್ಯ ಸರಕಾರ ಅನುದಾನದ ನೆಪವೊಡ್ಡಿ ಮುಚ್ಚಲು ಮುಂದಾಗಿದೆ. ಸರಕಾರದ ನಡೆಯು ಹಾವೇರಿ ಜಿಲ್ಲೆಯ ಜನರ ಕೆಂಗಣ್ಣಿಗೆ ಗುರಿಯಾಗಿದೆ. ಹಾವೇರಿ ವಿಶ್ವವಿದ್ಯಾಲಯವನ್ನು ಉಳಿಸಿಕೊಳ್ಳಲು ಹೋರಾಟಕ್ಕೆ ಜಿಲ್ಲೆಯ ಜನರು ಸಜ್ಜಾಗಿದ್ದಾರೆ.
ಹಾವೇರಿ ತಾಲೂಕಿನ ಸಮೀಪದ ಕೆರೆಮತ್ತಿಹಳ್ಳಿಯಲ್ಲಿ ನೂತನವಾಗಿ ಹಾವೇರಿ ವಿಶ್ವವಿದ್ಯಾಲಯ ಆರಂಭವಾಗಿದೆ. ಈ ಮೊದಲು ಕರ್ನಾಟಕ ವಿಶ್ವವಿದ್ಯಾಲಯ ಅಧೀನದಲ್ಲಿ ಸ್ನಾತಕೋತ್ತರ ಕೇಂದ್ರ ನಡೆಯುತ್ತಿತ್ತು. ಈ ಸ್ನಾತಕೋತ್ತರ ಕೇಂದ್ರವನ್ನು ಈ ಹಿಂದಿನ ಬಿಜೆಪಿ ಸರಕಾರದ ಆಡಳಿತದ ಅವಧಿಯಲ್ಲಿ 23 ಮಾರ್ಚ್ 2023ರಂದು ನೂತನ ಹಾವೇರಿ ವಿಶ್ವವಿದ್ಯಾಲಯವಾಗಿ ಬದಲಾಯಿಸಿ ಅನುದಾನವಿಲ್ಲದೆ ಆರಂಭಗೊಂಡಿತು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಸಚಿವ ಸಂಪುಟ ಸಮಿತಿಯಲ್ಲಿ ವಿವಿಯನ್ನು ಮುಚ್ಚುವ ನಿರ್ಧಾರಕ್ಕೆ ಬರಲಾಗಿದೆ. ಇದು ಜಿಲ್ಲೆಯಾದ್ಯಂತ ವಿರೋಧದ ಅಲೆ ಏಳಲು ಮೂಲ ಕಾರಣವಾಗಿದೆ.
ಹಾವೇರಿ ವಿಶ್ವವಿದ್ಯಾಲಯವು ರಾಣೆಬೆನ್ನೂರು, ಹಾನಗಲ್, ಶಿಗ್ಗಾವಿ, ಸವಣೂರು, ಹಿರೇಕೆರೂರು, ರಟ್ಟಿಹಳ್ಳಿ ಹಾಗೂ ಹಾವೇರಿ ತಾಲೂಕುಗಳ ವ್ಯಾಪ್ತಿಯಲ್ಲಿ ಬರುವ 42 ಸಂಯೋಜಿತ ಪದವಿ ಕಾಲೇಜುಗಳನ್ನು ಹೊಂದಿದ್ದು, 13 ಸರ್ಕಾರಿ, 8 ಸರ್ಕಾರಿ ಅನುದಾನಿತ, 21 ಖಾಸಗಿ ಕಾಲೇಜುಗಳಿವೆ. ವಿವಿಧ ತಾಲೂಕು ಸರಕಾರಿ ಪದವಿ ಕಾಲೇಜುಗಳು ಹಾಗೂ ಖಾಸಗಿ ಕಾಲೇಜುಗಳು ಸೇರಿದಂತೆ 7 ಸ್ನಾತಕೋತ್ತರ ಕೇಂದ್ರಗಳಿವೆ. ಒಟ್ಟು 8000 ಪದವಿ ವಿದ್ಯಾರ್ಥಿಗಳು, 700 ಸ್ನಾತಕೋತ್ತರ ವಿದ್ಯಾರ್ಥಿಗಳು ಪ್ರಸ್ತುತ ವ್ಯಾಸಂಗ ಮಾಡುತ್ತಿದ್ದಾರೆ. ಸಂಯೋಜಿತ ಪದವಿ ಹಾಗೂ ಸ್ನಾತಕೋತ್ತರ ಪದವಿ ಕಾಲೇಜುಗಳ ಶುಲ್ಕ ಹಾಗೂ ವಿದ್ಯಾರ್ಥಿಗಳ ಶುಲ್ಕದ ಹಣದಲ್ಲಿ ಹಾವೇರಿ ವಿಶ್ವವಿದ್ಯಾಲಯ ನಡೆಯುತ್ತಿದೆ. ಹೀಗಿದ್ದರೂ ಕೂಡ ಕೊರತೆ ಇರುವ ಮೂಲ ಸೌಕರ್ಯಗಳನ್ನು ಒದಗಿಸಿ ವಿವಿಯ ಅಭಿವೃದ್ಧಿ ಮಾಡುವ ಬದಲಾಗಿ ಮುಚ್ಚಲು ಮುಂದಾಗಿರುವುದು ದುರಂತವೇ ಸರಿ ಎಂದು ಸ್ಥಳೀಯರು ವಿಷಾದ ವ್ಯಕ್ತಪಡಿಸಿದರು.

ಹಾವೇರಿ ವಿಶ್ವವಿದ್ಯಾಲಕ್ಕೆ 42 ಎಕರೆ ಸ್ವಂತ ಜಮೀನು ಇದ್ದು, 15 ಸುಸಜ್ಜಿತ ತರಗತಿ ಕೊಠಡಿಗಳು, ಕಂಪ್ಯೂಟರ್ ಕೇಂದ್ರ ಮತ್ತು ಗ್ರಂಥಾಲಯ ಹೊಂದಿರುವ ಜಿ+1 ಕಟ್ಟಡ, ರಸ್ತೆ, ಬೋಧಕ-ಬೋಧಕೇತರ ಸಿಬ್ಬಂದಿ ಹುದ್ದೆಗಳ ನೇಮಕ, ಹಾಸ್ಟೆಲ್, ಕ್ಯಾಂಟೀನ್ ವ್ಯವಸ್ಥೆಗಳಿದ್ದು, ಇನ್ನೂ ತಕ್ಕಷ್ಟು ಸೌಲಭ್ಯಗಳು ಒದಗಿಸಿದರೆ ಇನ್ನೂ ಅನುಕೂಲವಾಗುತ್ತದೆ.
ಎಂ.ಕಾಮ್ ಪದವಿಯನ್ನು ಸಂಜೆ ಕಾಲೇಜು ಆರಂಭಗೊಳಿಸಿದ್ದು ಗ್ರಾಮೀಣ ಮಟ್ಟದ ವಿದ್ಯಾರ್ಥಿಗಳೇ ಹೆಚ್ಚಾಗಿದ್ದಾರೆ. ಇನ್ನೂ ಹೆಚ್ಚು ಬೇರೆ ಬೇರೆ ವಿಷಯಗಳಿಗೆ ಸಂಬಂಧಿಸಿದ ಸಂಜೆ ಕಾಲೇಜು ಆರಂಭಿಸುವ ಯೋಜನೆಯನ್ನು ರೂಪಿಸಿದ್ದಾರೆ. ಶಾಲೆ ಬಿಟ್ಟ ಮಕ್ಕಳನ್ನು ಗಮನದಲ್ಲಿ ಇಟ್ಟುಕೊಂಡು ಇನ್ನೂ ಬೇರೆ ಬೇರೆ ಕೌಶಲ್ಯ ಆಧಾರಿತ ಕೋರ್ಸ್‌ಗಳನ್ನು ಆರಂಭಿಸಿ ಉದ್ಯೋಗ ಒದಗಿಸುವ ಯೋಜನೆಯನ್ನು ಆರಂಭಿಸಿದ್ದಾರೆ. ಇನ್ನೂ ಅನೇಕ ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತಹ ಯೋಜನೆಗಳನ್ನು ರೂಪಿಸಲು ಕುಲಪತಿ ಪ್ರೊ. ಸುರೇಶ ಜಂಗಮಶೆಟ್ಟಿ ಮುಂದಾಗಿದ್ದಾರೆ.
ವಿಶ್ವವಿದ್ಯಾಲಯ ಆರಂಭದಿಂದಲೂ ಅನುದಾನ ಇಲ್ಲ. ಹಾವೇರಿ ವಿಶ್ವವಿದ್ಯಾಲಯಕ್ಕೆ ಯಾವುದೇ ರೀತಿಯಿಂದ ಅನುದಾನ ಇದುವರೆಗೂ ಬಂದಿಲ್ಲ. ಆಳುವ ಸರಕಾರಗಳು ವಿಶ್ವವಿದ್ಯಾಲಯಗಳಿಗೆ ಅನುದಾನ ನೀಡಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ನೀಡಬೇಕು. ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ದೊರೆಯುವಂತೆ ಮಾಡಬೇಕು. ಅದು ಬಿಟ್ಟು ಮುಚ್ಚುವ ನಿರ್ಧಾರ ಎಷ್ಟರ ಮಟ್ಟಿಗೆ ಸರಿ ಎಂದು ಹಾವೇರಿ ಜನರು ಸರಕಾರವನ್ನು ಪ್ರಶ್ನೆ ಮಾಡುತ್ತಿದ್ದಾರೆ.
ಈ ಹಿಂದೆ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಪಾಲಕರು, ಒಂದು ಸಣ್ಣ ಕೆಲಸಕ್ಕೂ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಹೋಗಬೇಕಿತ್ತು. ಈಗ ಸ್ಥಳೀಯವಾಗಿ ಹಾವೇರಿ ವಿಶ್ವವಿದ್ಯಾಲಯ ಆರಂಭವಾಗಿದ್ದರಿಂದ ಸಾಕಷ್ಟು ಅನುಕೂಲವಾಗುತ್ತದೆ. ಸಿಬ್ಬಂದಿಗಳ ನೇಮಕ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸಿ ವಿಶ್ವವಿದ್ಯಾಲಯಗಳನ್ನು ಬಲಪಡಿಸಬೇಕು. ಅದುಬಿಟ್ಟು ವಿಶ್ವವಿದ್ಯಾಲಯ ಮುಚ್ಚಲು ಮುಂದಾಗಿರುವುದು ಸರಿಯಲ್ಲ. ಹಾವೇರಿ ಜಿಲ್ಲೆಯ ಪ್ರಗತಿಪರ ಚಿಂತಕರು, ಹೋರಾಟಗಾರರು, ಶಿಕ್ಷಣ ಪ್ರೇಮಿಗಳು ಹಾಗೂ ಪ್ರಜ್ಞಾವಂತರು ಹಾವೇರಿ ವಿಶ್ವವಿದ್ಯಾಲಯವನ್ನು ಮುಚ್ಚಲು ಬಿಡುವುದಿಲ್ಲ ಎನ್ನುತ್ತಿದ್ದಾರೆ.
ಇದನ್ನೂ ಓದಿ:ಹಾವೇರಿ | ವ್ಯಕ್ತಿತ್ವ ನಿರ್ಮಾಣ ಹೊಂದಲು ಪರಸ್ಪರ ಸಂವಹನ ಕಲೆ ಬಹು ಮುಖ್ಯವಾಗಿದೆ: ಕುಮಾರ ಬೆಣ್ಣಿ
ಈಗಾಗಲೇ ಹಾವೇರಿಯ ಶಿಕ್ಷಣ ಪ್ರೇಮಿಗಳು, ಪ್ರಗತಿಪರ ಚಿಂತಕರು, ಸಾಹಿತಿಗಳು ಹಾಗೂ ಪ್ರಜ್ಞಾವಂತರು ಹಾವೇರಿ ವಿಶ್ವವಿದ್ಯಾಲಯ ಉಳಿಸಿಕೊಳ್ಳಲು ಹಾವೇರಿ ಜಿಲ್ಲೆಯ ಎಲ್ಲ ಶಾಸಕರಿಗೆ ಮನವಿ ಪತ್ರಗಳನ್ನು ನೀಡಿ, ಹಾವೇರಿ ವಿಶ್ವವಿದ್ಯಾಲಯ ಉಳಿಸಿಕೊಳ್ಳಲು ಸರಕಾರದ ಮೇಲೆ ಒತ್ತಡ ಹಾಕಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಅಗತ್ಯ ಬಿದ್ದರೆ ಬೀದಿಗಿಳಿದು ಹೋರಾಟಕ್ಕೂ ಸಿದ್ದರಿದ್ದೇವೆ ಎನ್ನುತ್ತಿದ್ದಾರೆ.
ವಿಶೇಷ ವರದಿ : ಶರಣಪ್ಪ ಎಚ್ ಸಂಗನಾಳ

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.