ಬೆಂಗಳೂರು ಕೇಂದ್ರಿಕೃತ ಕಲಾವಿದರನ್ನು ಪ್ರೋತ್ಸಾಹಿಸುವುದರ ಹೊರತಾಗಿಯೂ ಉತ್ತರ ಕರ್ನಾಟಕ ಸೇರಿದಂತೆ ಹಿಂದುಳಿದ ಪ್ರದೇಶಗಳ ಕಲಾವಿದರನ್ನು ಮುನ್ನೆಲೆಗೆ ತರುವ ಕೆಲಸವಾಗಬೇಕೆಂದು ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟರು.
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕು ರನ್ನ ವೈಭವದ ಎರಡನೇ ದಿನವಾದ ಭಾನುವಾರ ಮುಧೋಳದ ರನ್ನ ಕ್ರೀಡಾಂಗಣದಲ್ಲಿ ಜರುಗಿದ ಸಮಾರಂಭದಲ್ಲಿ ಸಾಧಕರನ್ನು ಸನ್ಮಾನಿಸಿ ಮಾತನಾಡಿದರು.
“ಉತ್ತರ ಕರ್ನಾಟಕದಲ್ಲಿ ಸಮರ್ಥ ಕಲಾವಿದರಿದ್ದಾರೆ. ಅವರಿಗೆ ವೇದಿಕೆ ಸಿಗುವ ಕೆಲಸವಾಗಬೇಕು” ಎಂದು ವೇದಿಕೆಯಲ್ಲಿದ್ದ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅವರಿಗೆ ಸಲಹೆ ನೀಡಿದರು.
“ಅಖಂಡ ವಿಜಯಪುರ ಜಿಲ್ಲೆಯು ರನ್ನ ಹುಟ್ಟಿದ ನಾಡು. ಇಲ್ಲಿ ಜನಸಿರುವ ನಾವುಗಳೇ ಪುಣ್ಯವಂತರು. ನಾವು ರನ್ನನಂತೆ ಆಗದಿದ್ದರೂ ಅವರು ಜನ್ಮತಾಳಿದ ಭೂಮಿಯಲ್ಲಿ ಜನಿಸಿರುವುದು ಹೆಮ್ಮೆಯ ಸಂಗತಿ” ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಮಾತನಾಡಿ, “ರನ್ನ ಸೇರಿದಂತೆ ಮಹಾಪುರಷರನ್ನು ಯಾವುದೇ ಜಾತಿ, ಧರ್ಮಕ್ಕೆ ಸೀಮಿತಗೊಳಿಸುವ ಕೆಲಸವಾಗಬಾರದೆಂಬ ಕಾರಣಕ್ಕಾಗಿಯೇ ನಮ್ಮ ಇಲಾಖೆಯಿಂದ ಜಯಂತಿ ಹಾಗೂ ಉತ್ಸವಗಳನ್ನು ಸಂಘಟಿಸುತ್ತಿದ್ದೇವೆ. ಇಂಥ ಕಾರ್ಯಕ್ರಮಗಳ ಮೂಲಕ ಯುವಸಮೂಹಕ್ಕೆ ಮಹಾಪುರುಷರ ಕೊಡುಗೆಗಳನ್ನು ಪರಿಚಯಿಸುವ ಕೆಲಸ ಮಾಡಲಾಗುತ್ತಿದೆ” ಎಂದರು.
“ಬಾಗಲಕೋಟೆ ಜಿಲ್ಲೆಯಲ್ಲಿ ಚಾಲುಕ್ಯ ಹಾಗೂ ರನ್ನ ಉತ್ಸವಗಳು ಅದ್ಧೂರಿಯಾಗಿ ಜರುಗುತ್ತವೆ. ನಾನು ಚಿಕ್ಕಿಂದಿನಿಂದಲೂ ಚಾಲುಕ್ಯ ಉತ್ಸವ ನೋಡುತ್ತ ಬೆಳೆದಿದ್ದೇನೆ. ರನ್ನ ಉತ್ಸವಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ₹2 ಕೋಟಿ ಅನುದಾನ ಒದಗಿಸಲಾಗಿದೆ. ಮುಂದಿನ ವರ್ಷ ಇನ್ನೂ ಹೆಚ್ಚಿನ ಅನುದಾನವನ್ನು ನೀಡಲಾಗುವುದು” ಎಂದು ಭರವಸೆ ನೀಡಿದರು.
“ಅದ್ಧೂರಿ ರನ್ನ ಉತ್ಸವ ಸಂಘಟಿಸಿದ ಸಚಿವ ಆರ್ ಬಿ ತಿಮ್ಮಾಪುರ, ಜಿಲ್ಲಾಧಿಕಾರಿ ಕೆ ಎಂ ಜಾನಕಿ ಹಾಗೂ ಜಿಲ್ಲಾಡಳಿತವನ್ನು ಅಭಿನಂದಿಸಲಾಗುವುದು” ಎಂದರು.
ಸಕ್ಕರೆ ಮತ್ತು ಜವಳಿ ಸಚಿವ ಶಿವಾನಂದ ಪಾಟೀಲ ಮಾತನಾಡಿ, “ಹಿಂದೆ ಹಲವು ವರ್ಷಗಳ ಕಾಲ ರನ್ನ ಉತ್ಸವವನ್ನು ಆಚರಿಸಲಾಗಿತ್ತು. ಆದರೆ ಕೋವಿಡ್, ಅತಿವೃಷ್ಟಿ, ಅನಾವೃಷ್ಟಿಯಂಥ ಕಾರಣಗಳಿಂದ ಉತ್ಸವ ನಿಂತುಹೋಗಿತ್ತು. ಆದರೆ ಈಗ ಸಚಿವ ಆರ್ ಬಿ ತಿಮ್ಮಾಪೂರ ಅವರ ಪ್ರಯತ್ನದ ಫಲವಾಗಿ ಅದ್ಧೂರಿ ಉತ್ಸವ ನಡೆಯುತ್ತಿರುವುದು ಖುಷಿಯ ಸಂಗತಿ” ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಫೂರ ಮಾತನಾಡಿ, “ರನ್ನ ಉತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಸೇರಿ ಎಲ್ಲರ ಸಹಕಾರವನ್ನು ಸ್ಮರಿಸುವುದಾಗಿ ಹೇಳಿದರು. ರನ್ನನ ಕಾಲದ ಶಾಸನಗಳು ರೂಗಿ ಗ್ರಾಮದಲ್ಲಿ ಪತ್ತೆಯಾಗಿದ್ದು, ಅವುಗಳ ಸಂಶೋಧನೆ ಕಾರ್ಯ ನಡೆಯಬೇಕಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಹಳೆಯ ವೈಷಮ್ಯದ ಹಿನ್ನೆಲೆ ಮಹಿಳೆಯ ಭೀಕರ ಕೊಲೆ
ವಿಧಾನ ಪರಿಷತ್ ಸದಸ್ಯ ಪಿ ಎಚ್ ಪೂಜಾರ ಮಾತನಾಡಿ, “ರನ್ನ ಕುರಿತಾದ ಸಂಶೋಧನೆಗೆ ಹೆಚ್ಚಿನ ಒತ್ತು ಸಿಗಬೇಕು. ಈ ಕುರಿತಾಗಿ ಸಂಶೋಧನೆಯಲ್ಲಿ ತೊಡಗಿರುವವರಿಗೆ ಪ್ರೋತ್ಸಾಹ ಒದಗಿಸುವ ಕೆಲಸವಾಗಬೇಕು” ಎಂದರು.
ಬಂಡಿಗಣಿ ಮಠದ ಬಸವಗೋಪಾಲ, ನೀಲಮಾಣಿಕ ಮಠದ ಚಕ್ರವರ್ತಿ ಶ್ರೀದಾನೇಶ್ವರ ಸ್ವಾಮೀಜಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ವಿಪ ಸದಸ್ಯೆ ಉಮಾಶ್ರೀ, ಜಿಲ್ಲಾಧಿಕಾರಿ ಕೆ ಎಂ ಜಾನಕಿ, ಜಿಪಂ ಸಿಇಒ ಶಶಿಧರ ಕುರೇರ, ಎಸ್‌ಪಿ ಅಮರನಾಥ ರೆಡ್ಡಿ, ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಎಸಿ ಶ್ವೇತಾ ಬೀಡಿಕರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರಣಕುಮಾರ ಜೈನಾಪುರ ಇದ್ದರು.