2023-24ರಲ್ಲಿ ಸ್ಥಾಪಿಸಲಾದ ರಾಜ್ಯದ ಹೊಸ 10 ವಿಶ್ವವಿದ್ಯಾಲಯಗಳ ಪೈಕಿ 9 ವಿಶ್ವವಿದ್ಯಾಲಯವನ್ನು ರಾಜ್ಯ ಸರ್ಕಾರ ಮುಚ್ಚುವ ಚಿಂತನೆಯಲ್ಲಿದೆ. ಅದರಲ್ಲಿ ಬಾಗಲಕೋಟೆ ವಿವಿಯು ಒಂದಾಗಿದ್ದು, ಕೂಡಲೇ ಈ ನಿರ್ಧಾರವನ್ನು ಕೈಬಿಡಬೇಕು ಎಂದು ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಜೇಶನ್ ಆಫ್ ಇಂಡಿಯಾ (ಎಸ್‌ಐಒ) ಸರ್ಕಾರಕ್ಕೆ ಮನವಿ ಮಾಡಿತು.
ಸರಿಸುಮಾರು 73 ಸಂಯೋಜಿತ ಕಾಲೇಜುಗಳು ಮತ್ತು ಅಂದಾಜು 30 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಬಾಗಲಕೋಟೆ ವಿಶ್ವವಿದ್ಯಾಲಯವನ್ನು ಬಂದ್ ಮಾಡದೆ, ವಿದ್ಯಾರ್ಥಿಗಳ ಕಲಿಕೆಗೆ ಪೂರಕ ವಾತಾವರಣವನ್ನು ಕಲ್ಪಿಸಿ, ವಿವಿಯನ್ನು ಸದೃಢಗೊಳಿಸಲು ಅಗತ್ಯ ಅನುದಾನವನ್ನು ನೀಡಬೇಕು ಎಂದು ಸಂಘಟನೆಯ ಮುಖಂಡರು ಆಗ್ರಹಿಸಿದರು.
ಹುನಗುಂದ ಶಾಸಕ ವಿಜಯಾನಂದ ಎಸ್ ಕಾಶಪ್ಪನವರ ಗೃಹ ಕಚೇರಿಗೆ ಭೇಟಿ ನೀಡಿ, 2014-15ರ ರಾಜ್ಯ ವಾರ್ಷಿಕ ಬಜೆಟ್‌ನಲ್ಲಿ ಘೋಷಣೆಯಾದ ಬಾಗಲಕೋಟೆ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಅಗತ್ಯ ಅನುದಾನ ನೀಡಬೇಕು ಮತ್ತು ತಕ್ಷಣವೇ ವೈದ್ಯಕೀಯ ಕಾಲೇಜನ್ನು ಕಾರ್ಯಾರಂಭ ಮಾಡಬೇಕು. ಈ ಎರಡು ಶೈಕ್ಷಣಿಕ ಸಂಬಂಧಿ ವಿಷಯಗಳ ಕುರಿತು ಸರ್ಕಾರ ಮಟ್ಟದಲ್ಲಿ ಧ್ವನಿಯೆತ್ತಿ, ಜಿಲ್ಲೆಯ ಜನರ ಬೇಡಿಕೆಯನ್ನು ಸಾಕಾರಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಒತ್ತಾಯ ಮಾಡಬೇಕೆಂದು ವಿನಂತಿಸಲಾಯಿತು.
ಇದನ್ನೂ ಓದಿ: ಬಾಗಲಕೋಟೆ | ಹಿಂದುಳಿದ ಪ್ರದೇಶಗಳ ಕಲಾವಿದರನ್ನು ಮುನ್ನೆಲೆಗೆ ತರಬೇಕು: ಬಸವರಾಜ ಹೊರಟ್ಟಿ
ಈ ವೇಳೆ ಎಸ್‌ಐಒ ಜಿಲ್ಲಾಧ್ಯಕ್ಷ ಮೊಹಮ್ಮದ್ ಪೀರ್ ಲಟಗೇರಿ, ಸ್ಥಾನೀಯ ಅಧ್ಯಕ್ಷ ಆಸಿಫ್ ಹುಣಚಗಿ ಹಾಗೂ ಕಾರ್ಯದರ್ಶಿ ಉಸ್ಮಾನ್ ಗನಿ ಶಿವನಗುತ್ತಿ ಮತ್ತು ನಹೀಮ್ ರಾಂಪುರ ಇತರ ಕಾರ್ಯಕರ್ತರು ಉಪಸ್ಥಿತರಿದ್ದರು.
