ಇದೀಗ ಒಕ್ಕೂಟ ಸರ್ಕಾರದ ದಬ್ಬಾಳಿಕೆಯು ಪರಮೋಚ್ಛ ತುದಿಯನ್ನು ತಲುಪಿಬಿಟ್ಟಿದೆ. ಕೇಂದ್ರದ ನೀತಿಗಳನ್ನು ಪಾಲಿಸದಿದ್ದರೆ ರಾಜ್ಯಗಳಿಗೆ ಅನುದಾನವನ್ನೇ ನೀಡುವುದಿಲ್ಲ ಎಂಬ ಬೆದರಿಕೆ ರಾಜಕಾರಣವನ್ನು ಮೋದಿ ಸರ್ಕಾರ ಅನುಸರಿಸುತ್ತಿದೆ. ತನ್ನ ನ್ಯೂ ಎಜುಕೇಶನ್ ಪಾಲಿಸಿಯನ್ನು (ಎನ್‍ಇಪಿ) ಅನುಸರಿಸುತ್ತಿಲ್ಲ ಎಂದು ಹೇಳಿ ತಮಿಳುನಾಡಿಗೆ ಅದು ಶಿಕ್ಷಣಕ್ಕೆ ಸಂಬಂಧಿಸಿದ ಅನುದಾನವನ್ನು ನಿಲ್ಲಿಸಿದೆ. ಇದನ್ನು ಬೆದರಿಕೆ ಎನ್ನದೇ ಮತ್ತೇನು ಹೇಳಬಹುದು!
ಭಾರತವು ಜನತಂತ್ರದಿಂದ ರಾಜತಂತ್ರದ ಕಡೆ ಸಾಗುತ್ತಿದೆಯೇ? ಡೆಮೊಕ್ರಸಿಯಿಂದ ಡಿಕ್ಟೇಟರ್‌ಶಿಪ್ ಕಡೆಗೆ ದೇಶವನ್ನು ಕೊಂಡೊಯ್ಯಲಾಗುತ್ತಿದೆಯೇ? ಪ್ರಜಾಪ್ರಭುತ್ವದಿಂದ ರಾಜಪ್ರಭುತ್ವದ ಕಡೆಗೆ ನಾಡು ಹೋಗುತ್ತಿದೆಯೇ? ಒಕ್ಕೂಟ ಸರ್ಕಾರವು ರಾಜ್ಯಗಳ ಮೇಲೆ ದಬ್ಬಾಳಿಕೆ ನಡೆಸುತ್ತಿದೆಯೇ? ರಾಜ್ಯಗಳನ್ನು ಒಕ್ಕೂಟ ಸರ್ಕಾರ ಮತ್ತು ಅದರ ಮಂತ್ರಿಗಳು ಬೆದರಿಸುತ್ತಿದ್ದಾರೆಯೇ/ ಹೆದರಿಸುತ್ತಿದ್ದಾರೆಯೇ? ಉದಾ: ವಿತ್ತಮಂತ್ರಿ ಭಿನ್ನಮತವನ್ನು ಸಹಿಸುವುದಿಲ್ಲ. ಶಿಕ್ಷಣ ಮಂತ್ರಿ ಅಶಿಕ್ಷಿತನಂತೆ ವರ್ತಿಸುತ್ತಿದ್ದಾನೆ. ಒಕ್ಕೂಟ ತತ್ವದ ಉಲ್ಲಂಘನೆ ನಡೆಯುತ್ತಿದೆ. ಒಕ್ಕೂಟ ವ್ಯವಸ್ಥೆಯ ಬಗ್ಗೆ ಬಿಜೆಪಿ ಮತ್ತು ಆರ್‌ಎಸ್‍ಎಸ್‍ಗಳು ತಾತ್ವಿಕವಾಗೇ ವಿರೋಧ ನಿಲುವು ತಳೆದಿವೆ.
ಏಕೆಂದರೆ, ಅದರ ಆದರ್ಶ ರಾಜಪ್ರಭುತ್ವವಾಗಿದೆ. ಮೋದಿ ಅವರನ್ನು ಚಕ್ರವರ್ತಿಯಂತೆ – ಮಹಾ ಸಾಮ್ರಾಟನಂತೆ ಬಿಂಬಿಸಲಾಗುತ್ತಿದೆ. ಬಿಜೆಪಿ – ಆರ್‌ಎಸ್‍ಎಸ್‍ಗಳು ಚಕ್ರವರ್ತಿ ವ್ಯವಸ್ಥೆಯ ಪರವಾಗಿದೆ. ಅದಕ್ಕೆ ಜನತಂತ್ರದ ಬಗ್ಗೆ, ಸಂವಿಧಾನದ ಬಗ್ಗೆ, ಒಕ್ಕೂಟ ವ್ಯವಸ್ಥೆಯ ಬಗ್ಗೆ ನಂಬಿಕೆ-ವಿಶ್ವಾಸವಿಲ್ಲ. ಇದನ್ನು ಮತ್ತೆ ಮತ್ತೆ ಅದು ತನ್ನ ನೀತಿ ನಿರೂಪಣೆಯಲ್ಲಿ ತೋರಿಸುತ್ತಿದೆ.
ರಾಜ್ಯಪಟ್ಟಿಯಲ್ಲಿರುವ ಕೃಷಿಯ ಬಗ್ಗೆ ಅದು 2020ರಲ್ಲಿ (ಕೊರೋನಾ ಸಂದರ್ಭದಲ್ಲಿ) ಮೂರು ಕರಾಳ ಕೃಷಿ ಕಾಯಿದೆಗಳನ್ನು ಜಾರಿಗೊಳಿಸಿದ್ದು ಇಂದು ಇತಿಹಾಸವಾಗಿದೆ. ತನಗೆ ಅಧಿಕಾರವಿಲ್ಲದ ಕ್ಷೇತ್ರಗಳಲ್ಲಿಯೂ ಅದು ಪ್ರವೇಶಿಸುತ್ತಿದೆ… ಅಲ್ಲ ಅಲ್ಲ… ನುಗ್ಗುತ್ತಿದೆ. ಸಂವಿಧಾನಾತ್ಮಕವಾದ ತೆರಿಗೆ ರಾಶಿಯ ಹಂಚಿಕೆಯಲ್ಲಿ ಕರ್ನಾಟಕವನ್ನು ಸೇರಿಸಿಕೊಂಡು ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯ ಮಾಡುತ್ರಿದೆ. ಇದರ ಬಗ್ಗೆ ಅದಕ್ಕೆ ಯಾವ ಸಂಕೋಚ ಅಥವಾ ಹಿಂಜರಿಕೆಯಿಲ್ಲ. ರಾಜ್ಯಪಾಲರುಗಳು ರಾಜಪ್ರಭುತ್ವದ ಪ್ರತಿನಿಧಿಗಳಂತೆ ವರ್ತಿಸುತ್ತಿದ್ದಾರೆ. ಇದರ ಬಗ್ಗೆ ಎಷ್ಟು ಸಾರಿ ರಾಜ್ಯಗಳು ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲೇರಬೇಕು? ಎಷ್ಟು ಸಾರಿ ತಮಿಳುನಾಡಿನ ರಾಜ್ಯಪಾಲರಿಗೆ ಸರ್ವೋಚ್ಛ ನ್ಯಾಯಾಲಯವು ಎಚ್ಚರಿಕೆ ನೀಡಬೇಕು? ಅವರ ಅಧಿಕಾರದ ಮಿತಿಯ ಬಗ್ಗೆ ಮನವರಿಕೆ ಮಾಡಿಕೊಡಬೇಕು? ರಾಜ್ಯಪಾಲರು ಜನಪ್ರತಿನಿಧಿಗಳಲ್ಲ. ಅವರು ಒಕ್ಕೂಟ ಸರ್ಕಾರ ನೇಮಿಸುವ ನೌಕರರು. ಇಂದು ಈ ರಾಜ್ಯಪಾಲರು ಒಕ್ಕೂಟ ಸರ್ಕಾರದ ಕೈಗೊಂಬೆಗಳಂತೆ ವರ್ತಿಸುತ್ತಿದ್ದಾರೆ. ಚುನಾಯಿತ ರಾಜ್ಯ ಸರ್ಕಾರಗಳ ವಿರುದ್ಧ ಖಡ್ಗ ಝಳಪಿಸುತ್ತಿದ್ದಾರೆ.
ಇಂದು ಒಕ್ಕೂಟ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ನಡುವೆ ಶ್ರೇಣೀಕೃತ ಸಂಬಂಧ ಉಂಟಾಗಿದೆ. ದೊಡ್ಡಣ್ಣನಂತೆ, ದೊಣೆನಾಯಕನಂತೆ ಒಕ್ಕೂಟ ಸರ್ಕಾರ ವರ್ತಿಸುತ್ತಿದೆ. ಒಕ್ಕೂಟ ಸರ್ಕಾರವು ಸಂವಿಧಾನದ ಅನಕ್ಷರತೆಯಿಂದ ನರಳುತ್ತಿದೆ. ಅದು ರಾಜ್ಯಗಳನ್ನು ತನ್ನ ಅಧೀನ – ಸಾಮಂತ ಘಟಕಗಳನ್ನಾಗಿ ಮಾಡುತ್ತಿದೆ.

ಇದೀಗ ಒಕ್ಕೂಟ ಸರ್ಕಾರದ ದಬ್ಬಾಳಿಕೆಯು ಪರಮೋಚ್ಛ ತುದಿಯನ್ನು ತಲುಪಿಬಿಟ್ಟಿದೆ. ಕೇಂದ್ರದ ನೀತಿಗಳನ್ನು ಪಾಲಿಸದಿದ್ದರೆ ರಾಜ್ಯಗಳಿಗೆ ಅನುದಾನವನ್ನೇ ನೀಡುವುದಿಲ್ಲ ಎಂಬ ಬೆದರಿಕೆ ರಾಜಕಾರಣವನ್ನು ಮೋದಿ ಸರ್ಕಾರ ಅನುಸರಿಸುತ್ತಿದೆ. ತನ್ನ ನ್ಯೂ ಎಜುಕೇಶನ್ ಪಾಲಿಸಿಯನ್ನು (ಎನ್‍ಇಪಿ) ಅನುಸರಿಸುತ್ತಿಲ್ಲ ಎಂದು ಹೇಳಿ ತಮಿಳುನಾಡಿಗೆ ಅದು ಶಿಕ್ಷಣಕ್ಕೆ ಸಂಬಂಧಿಸಿದ ಅನುದಾನವನ್ನು ನಿಲ್ಲಿಸಿದೆ. ಇದನ್ನು ಬೆದರಿಕೆ ಎನ್ನದೇ ಮತ್ತೇನು ಹೇಳಬಹುದು! ಪಶ್ಚಿಮ ಬಂಗಾಳಕ್ಕೆ ಸಂಬಂಧಿಸಿದಂತೆಯೂ ಅದು ದಬ್ಬಾಳಿಕೆಯ ನೀತಿ ಅನುಸರಿಸುತ್ತಿದೆ.
ಡಿಲಿಮಿಟೇಶನ್ ಎಂಬ ಪೆಡಂಭೂತ!
ಮುಂದೆ 2026ರ ನಂತರ ಡಿಲಿಮಿಟೇಶನ್ ಜಾರಿಗೆ ಬಂದ ಮೇಲೆ ದಕ್ಷಿಣ ಭಾರತದ ರಾಜ್ಯಗಳ ಸಂಸದರ ಸಂಖ್ಯೆಯು ತೀವ್ರ ಕಡಿಮೆಯಾಗುತ್ತದೆ. ಸದ್ಯ ದಕ್ಷಿಣ ಭಾರತದ ಆಂಧ್ರಪ್ರದೇಶ, ಕರ್ನಾಟಕ, ಕೇರಳ, ತಮಿಳುನಾಡು, ತೆಲಂಗಾಣ ಮತ್ತು ಪುದುಚೆರಿಗಳಲ್ಲಿನ ಸಂಸದರ ಸಂಖ್ಯೆ 130. ಡಿಲಿಮಿಟೇಶನ್ ನಂತರ ಇವು 144ಕ್ಕೇರಬಹುದು. ಅಂದರೆ ಲೋಕಸಭೆಯಲ್ಲಿ ದಕ್ಷಿಣ ಭಾರತದ ರಾಜ್ಯಗಳ ಸಂಸದರ ಪ್ರಮಾಣ ಶೇ. 23.94 ರಿಂದ (130/543.100) ಶೇ. 19.12ಕ್ಕಿಳಿಯಬಹುದು (144/753.100). ಆದರೆ ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳಲ್ಲಿನ ಸಂಸದರ ಸಂಖ್ಯೆ 174. ಇದು ಡಿಲಿಮಿಟೇಶನ್ ನಂತರ 284ಕ್ಕೇರುವ ಸಾಧ್ಯತೆಯಿದೆ. ಈ ಸಂಸದರ ಪ್ರಮಾಣವು ಸದ್ಯದ ಶೇ.32.04ರಿಂದ ಶೇ. 37.71ಕ್ಕೇರಬಹುದು.
ಒಟ್ಟಾರೆ ನಮ್ಮ ಲೋಕಸಭೆಯ ಗಾತ್ರ ಬದಲಾಗುತ್ತದೆ. ಈ ಬದಲಾವಣೆಯಲ್ಲಿ ದಕ್ಷಿಣ ಭಾರತದ ಪ್ರಾತಿನಿಧ್ಯವು ಕಡಿಮೆಯಾದರೆ ಉತ್ತರ ನಾಲ್ಕು ರಾಜ್ಯಗಳ ಪ್ರಮಾಣ ವಿಪರೀತ ಏರಿಕೆಯಾಗುತ್ತದೆ. ಈ ಬದಲಾವಣೆಯಿಂದ ಸದ್ಯದ ಒಕ್ಕೂಟ ಸರ್ಕಾರದ ಕೇಂದ್ರೀಕರಣ ನೀತಿ – ಸರ್ವಾಧಿಕಾರಿ ಆಳ್ವಿಕೆ-ಒಕ್ಕೂಟ ಮಂತ್ರಿಗಳ ದಬ್ಬಾಳಿಕೆಯು ಮಿತಿಮೀರುತ್ತದೆ. ದಕ್ಷಿಣ ರಾಜ್ಯಗಳ ಸಂಸದರ ಪಾತ್ರ ಯಕಶ್ಚಿತ್ತಾಗುತ್ತದೆ. ಸದ್ಯ ಆಂಧ್ರ, ಕೇರಳ ಮತ್ತು ತಮಿಳುನಾಡುಗಳಲ್ಲಿ ಬಿಜೆಪಿ ಒಂದು ಎಂ.ಪಿ. ಸ್ಥಾನವನ್ನು ಗೆದ್ದಿಲ್ಲ. ಸರ್ಕಾರವನ್ನು ರಚಿಸಿದ್ದರೂ ಕರ್ನಾಟಕದಲ್ಲಿ ಒಮ್ಮೆಯೂ ಬಿಜೆಪಿಯು ಬಹುಮತ ಪಡೆದು ಸರ್ಕಾರ ರಚಿಸಿಲ್ಲ. ಶಾಸಕರನ್ನು ಖರೀದಿಸಿ ಅದು ಸರ್ಕಾರ ರಚಿಸಿದೆ ಎನ್ನಲಾಗುತ್ತಿದೆ. ಆಪರೇಶನ್ ಕಮಲ ಎಂಬ ನುಡಿಗಟ್ಟು ಪ್ರಚಾರಕ್ಕೆ ಬಂದಿತು.
ಈ ಎಲ್ಲ ಸಂಗತಿಗಳನ್ನು ಅಥವಾ ಅಪಾಯಗಳನ್ನು ಗಮನದಲ್ಲಿಟ್ಟುಕೊಂಡು ದಕ್ಷಿಣ ಭಾರತದ ರಾಜ್ಯಗಳು ಒಟ್ಟಾಗಿ ಹೋರಾಡಬೇಕು. ಮೋದಿ ಸರ್ಕಾರದ ಒಕ್ಕೂಟ ವಿರೋಧಿ ಕ್ರಮಗಳನ್ನು ತೀವ್ರವಾಗಿ ವಿರೋಧಿಸಬೇಕು. ಇದು ಕನ್ನಡ, ತಮಿಳು, ತೆಲುಗು, ಮಲೆಯಾಳಂ, ತುಳು, ಕೊಂಕಣಿ ಭಾಷೆಗಳ ಪ್ರಶ್ನೆ ಮಾತ್ರವಲ್ಲ. ಇದು ಜನತಂತ್ರದ ಪ್ರಶ್ನೆ; ಇದು ಬಹುತ್ವ ಸಂಸ್ಕೃತಿಯ ಪ್ರಶ್ನೆ, ರಾಜಪ್ರಭುತ್ವದ ಪ್ರವೇಶದ ಪ್ರಶ್ನೆ.
ಕೆ. ಎನ್. ರಾಜಣ್ಣ, ಜಿ. ಪರಮೇಶ್ವರ, ಜಾರಕಿಹೊಳಿ, ಡಿ. ಕೆ. ಶಿವಕುಮಾರ್… ಇವರೆಲ್ಲ ಒಳಸಂಘರ್ಷವನ್ನು ಮರೆತು ಜನತಂತ್ರದ ಅಸ್ತಿತ್ವದ ಬಗ್ಗೆ ಯೋಚಿಸಬೇಕು. ಪ್ರಜಾಪ್ರಭುತ್ವಕ್ಕೆ ತಟ್ಟಿರುವ ಅಪಾಯದ ಬಗ್ಗೆ, ಮುಖ್ಯವಾಗಿ ಒಕ್ಕೂಟ ವ್ಯವಸ್ಥೆ (ಫೆಡರಲಿಜಮ್)ಗೆ ತಟ್ಟಿರುವ ಅಪಾಯದ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾಗಿದೆ. ನಾಡಿನ ಒಗ್ಗಟ್ಟು-ಸಮಗ್ರತೆ- ಐಕ್ಯತೆ ಅಪಾಯದಲ್ಲಿದೆ. ಈ ಬಗ್ಗೆ ಕರ್ನಾಟಕದ ಶಾಸಕರು, ಸಂಸದರು ಯೋಚಿಸಬೇಕು. ಇಂದಿನ ರಾಜ್ಯದ ಬಿಜೆಪಿ ಸಂಸದರು ರಾಜ್ಯದ ಅಸ್ಮಿತೆಯ ಬಗ್ಗೆ, ಸ್ವಾಯತ್ತತೆಯ ಬಗ್ಗೆ, ಕೇಂದ್ರದ ತೆರಿಗೆ ರಾಶಿಯಲ್ಲಿ ರಾಜ್ಯದ ಪಾಲಿನ ಬಗ್ಗೆ ಪಕ್ಷ ಭೇದವನ್ನು ಮರೆತು ಧೈರ್ಯದಿಂದ ಲೋಕಸಭೆಯಲ್ಲಿ ಮಾತನಾಡದಿದ್ದರೆ- ರಾಜ್ಯದ ಹಕ್ಕುಗಳನ್ನು ಪ್ರತಿಪಾದಿಸದಿದ್ದರೆ, ಪ್ರತಿನಿಧಿಸುವ ಮತದಾರರ ಹಿತವನ್ನು ಕಾಯದಿದ್ದರೆ ಅವರೆಲ್ಲರೂ ಒಂದೋ ಜೀತದಾಳುಗಳಾಗುತ್ತಾರೆ ಇಲ್ಲವೇ, ಅಪ್ರಸ್ತುತರಾಗುತ್ತಾರೆ.
ರಾಜಕೀಯದ ಕಾರಣಕ್ಕಾಗಿ, ದಬ್ಬಾಳಿಕೆಗಾಗಿ, ಸರ್ವಾಧಿಕಾರಿ ಆಳ್ವಿಕೆಗಾಗಿ ದಕ್ಷಿಣ ಭಾರತದ ಆರ್ಥಿಕ ಮಹತ್ವವನ್ನು ಕಡೆಗಣಿಸಿದರೆ ಅದರ ಅಪಾಯ ಇಡೀ ಭಾರತದ ಆರ್ಥಿಕ ಬೆಳವಣಿಗೆಗೆ ತಟ್ಟುತ್ತದೆ. ಉದಾ: ದೇಶದ ಜಿಡಿಪಿಗೆ ದಕ್ಷಿಣ ಭಾರತದ ಕೊಡಗೆ 2022-23ರಲ್ಲಿ ಶೇ. 32ರಷ್ಟಿದ್ದರೆ ಉತ್ತರ ಪ್ರದೇಶ, ಬಿಹಾರ ಮತ್ತು ಮಧ್ಯಪ್ರದೇಶ ರಾಜ್ಯಗಳ ಕೊಡುಗೆ ಶೇ. 16.13. ದೇಶದ ಒಟ್ಟು ನೇರ ತೆರಿಗೆ ರಾಶಿಯಲ್ಲಿ ದಕ್ಷಿಣ ಭಾರತದ ಪಾಲು ಶೇ. 25ರಷ್ಟ್ಟಿದ್ದರೆ ಉತ್ತರದ ಮೂರು ರಾಜ್ಯಗಳ ಕೊಡುಗೆ ಕೇವಲ ಶೇ. 6.82.
ಒಕ್ಕೂಟ ವ್ಯವಸ್ಥೆಯ ರಕ್ಷಣೆಯಲ್ಲಿ ತಮಿಳುನಾಡಿನ ಜೊತೆಯಲ್ಲಿ ಕರ್ನಾಟಕವು ಹೋರಾಟ ನಡೆಸಬೇಕು. ಶಿಕ್ಷಣಕ್ಕೆ ಸಂಬಂಧಿಸಿದ ದಬ್ಬಾಳಿಕೆ ಕ್ರಮವನ್ನು ವಿರೋಧಿಸಬೇಕು. ಅನುದಾನವನ್ನು ನಿರಾಕರಿಸುವುದಕ್ಕೆ ಶಿಕ್ಷಣ ಕೇಂದ್ರ ಪಟ್ಟಿಯಲ್ಲಿಲ್ಲ. ಅದಿರುವುದು ಸಂಯುಕ್ತ ಪಟ್ಟಿಯಲ್ಲಿ. ಈಗಾಗಲೇ ವೈದ್ಯಕೀಯ, ತಾಂತ್ರಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ರಾಜ್ಯಗಳ ಹಕ್ಕನ್ನು ಒಕ್ಕೂಟ ಕಸಿದುಕೊಂಡಿದೆ. ಪದವಿ ಶಿಕ್ಷಣದ ನಿಯಂತ್ರಣಕ್ಕೂ ಅದು ಮುಂದಾಗಿದೆ.
ಈ ಬಗ್ಗೆ ಕೇಂದ್ರದ ಕೇಂದ್ರೀಕರಣ ನೀತಿಯು ದೇಶದ ಸಮಗ್ರತೆಗೆ ವಿರುದ್ಧವಾದುದು. ಈ ಬಗ್ಗೆ ಒಕ್ಕೂಟ ಸರ್ಕಾರವು ಜವಾಬ್ದಾರಿಯುತವಾಗಿ ನಡೆಯಬೇಕು.

ಟಿ ಆರ್ ಚಂದ್ರಶೇಖರ
ವಿಶ್ರಾಂತ ಪ್ರಾಧ್ಯಾಪಕ, ಲೇಖಕರು