ಮದುವೆ ಸಂಭ್ರಮದಲ್ಲಿ ಮುಳುಗಿದ್ದ ಜನರು ತಮ್ಮ ಮನೆಗಳಿಗೆ ಬೀಗಹಾಕಿ ಮದುವೆಗೆ ತೆರಳಿದ್ದ ವೇಳೆ ಹತ್ತಕ್ಕೂ ಹೆಚ್ಚು ಮನೆಗಳಲ್ಲಿ ಸರಣಿ ಕಳ್ಳತನ ನಡೆದಿರುವ ದುರ್ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.
ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕು ಬಿಳಿಚೋಡು ಸಮೀಪದ ಮುಗಿದರಾಗಿಹಳ್ಳಿ ಗ್ರಾಮದ ಮನೆಯೊಂದರಲ್ಲಿ ಮದುವೆ ಸಂಭ್ರಮ ಮನೆಮಾಡಿತ್ತು. ಊರಿನವರು ಹಾಗೂ ಸಂಬಂಧಿಕರನ್ನು ಮದುವೆಗೆ ಆಹ್ವಾನಿಸಿದ್ದರು. ಗ್ರಾಮದ ಬಹಳಷ್ಟು ಕುಟುಂಬದವರು ತಮ್ಮ ಮನೆಗಳಿಗೆ ಬೀಗಹಾಕಿ ಕುಟುಂಬ ಸಮೇತರಾಗಿ ವಿವಾಹ ಸಮಾರಂಭಕ್ಕೆ ತೆರಳಿದ್ದರು.
ಇದೇ ಅವಕಾಶವನ್ನು ಬಳಸಿಕೊಂಡಿರುವ ಕಳ್ಳರು ಭಾನುವಾರ ಮುಂಜಾನೆ ಸುಮಾರು ಹತ್ತಕ್ಕೂ ಹೆಚ್ಚು ಮನೆಗಳಲ್ಲಿ ಕಳ್ಳತನ ಎಸಗಿದ್ದಾರೆ. ಮನೆಯಲ್ಲಿ ಇರುವಂಥ ಬಂಗಾರದ ಆಭರಣಗಳು, ಬೆಳ್ಳಿ ಒಡವೆಗಳು ನಗದು ದೋಚಿದ್ದಾರೆ ಹಾಗೂ ಹೆಣ್ಣುಮಕ್ಕಳು ಆಪತ್ಕಾಲಕ್ಕೆ ಹಣ ಕೂಡಿಡುವ ‘ದುಬ್ಬೇಗಡಿಗಿ’ಯನ್ನೂ ಹೊತ್ತುಕೊಂಡು ಅಪಹರಿಸಿದ್ದಾರೆ. ರಾಧಮ್ಮ, ಅನಿತಾ, ಅಂಜಿನಪ್ಪ, ಸುರೇಶ್, ಹನುಮಂತಪ್ಪ, ಚೌಡಮ್ಮ ಎನ್ನುವವರ ಮನೆಗಳು ಸೇರಿದಂತೆ ಒಟ್ಟು 11 ಮನೆಗಳನ್ನು ದೋಚಿದ್ದಾರೆ.

ಇದೇ ದಿನ ದಾವಣಗೆರೆ ತಾಲೂಕಿನ ಎಲೆ ಬೇತೂರು ಗ್ರಾಮದಲ್ಲಿ ಮದುವೆಗೆಂದು ಇಟ್ಟಿದ್ದ ಮದುಮಗಳ ಒಡವೆಗಳನ್ನು ಕದ್ದಿದ್ದಾರೆ. ಕಷ್ಟಪಟ್ಟು ಮಗಳ ಮದುವೆಗೆಂದು ಕೂಡಿಟ್ಟಿದ್ದ ಆಭರಣಗಳನ್ನು ಕಳೆದುಕೊಂಡ ತಂದೆ ತಾಯಿ ಕಣ್ಣೀರಿಟ್ಟಿದ್ದಾರೆ.
ಈಗ ಬಿಳಿಚೋಡು ಪೊಲೀಸ್ ಠಾಣೆ ಮತ್ತು ದಾವಣಗೆರೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ದೂರಿನ ಅನ್ವಯ ಪೊಲೀಸ್ ಇಲಾಖೆ ಕ್ರಮ ಕೈಗೊಂಡು, ಕಳ್ಳರ ಹೆಡೆಮುರಿ ಕಟ್ಟಲು ತನಿಖೆಗೆ ಇಳಿದಿದೆ. ಕುಟುಂಬಗಳಿಗೆ ಪರಿಹಾರ ಸಿಗುತ್ತ ಎಂಬುದನ್ನು ಕಾದು ನೋಡಬೇಕಾಗಿದೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ರೈತನ ಮನೆ ಬಾಗಿಲಿಗೆ ನೋಟೀಸ್, ರೈತ ಸಂಘ ಆಕ್ರೋಶ, ಫೈನಾನ್ಸ್ ಗೆ ಮುತ್ತಿಗೆ.
‘ಕಳ್ಳತನ ಮಾಡಿ ಓಡಿಹೋಗಿರುವ ಕಳ್ಳರನ್ನು ಪೊಲೀಸ್ ಇಲಾಖೆಯು ಹಿಡಿದು, ಕಳೆದುಕೊಂಡಿರುವಂತ ಆಭರಣಗಳು ಹಾಗೂ ನಗದು ಮರಳಿ ಕೊಡಿಸುವಂತಾಗಲಿ” ಎಂದು ಆಭರಣ ಕಳೆದುಕೊಂಡ ನೊಂದವರು ಅಳಲು ತೋಡಿಕೊಂಡಿದ್ದಾರೆ.
ವರದಿ: ಸಿಟಿಜನ್ ಜರ್ನಲಿಸ್ಟ್- ಅಜ್ಜಯ್ಯ ಮದಕರಿ, ಬಿಳಿಚೋಡು.