ಇಂಟರ್‌ನೆಟ್ ಬೆಲೆ ನಿಯಂತ್ರಿಸಲು ಕೋರಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದು, “ಇದು ಮುಕ್ತ ಮಾರುಕಟ್ಟೆ” ಎಂದು ಹೇಳಿದೆ. ಸದ್ಯ ದೇಶದಲ್ಲಿ ಬಹುತೇಕ ಎಲ್ಲಾ ಸಂಸ್ಥೆಗಳು ಇಂಟರ್‌ನೆಟ್ ಬೆಲೆಯನ್ನು ಏರಿಸಿವೆ. ಈ ಬೆಲೆಯನ್ನು ನಿಯಂತ್ರಿಸುವಂತೆ ಕೋರಿ ಅರ್ಜಿ ಸಲ್ಲಿಸಲಾಗಿದೆ.
ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರ ದ್ವಿಸದಸ್ಯ ಪೀಠವು ಅರ್ಜಿಯನ್ನು ವಜಾಗೊಳಿಸಿದೆ. ಹಲವು ಸಂಸ್ಥೆಗಳ ಇಂಟರ್‌ನೆಟ್ ಸೇವೆಯನ್ನು ಬಳಸುತ್ತಿರುವ ಗ್ರಾಹಕರಾದ ರಜತ್ ಎಂಬವರು ಈ ಅರ್ಜಿಯನ್ನು ಸಲ್ಲಿಸಿದ್ದಾರೆ.
ಇದನ್ನು ಓದಿದ್ದೀರಾ? ವಾಟ್ಸಾಪ್‌ನಲ್ಲಿ ಇಂಟರ್‌ನೆಟ್ ಇಲ್ಲದೆ ಫೈಲ್‌ಗಳು, ಇಮೇಜ್‌ಗಳ ಶೇರಿಂಗ್ ಆಯ್ಕೆ
“ಇದು ಮುಕ್ತ ಮಾರುಕಟ್ಟೆಯಾಗಿದೆ. ಇಂಟರ್‌ನೆಟ್ ಬಳಸಲು ಹಲವು ಆಯ್ಕೆಗಳಿವೆ. ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್ ಕೂಡಾ ಇಂಟರ್‌ನೆಟ್ ಸೇವೆಯನ್ನು ನೀಡುತ್ತದೆ” ಎಂದು ಸುಪ್ರೀಂ ಕೋರ್ಟ್ ಪೀಠ ಹೇಳಿದೆ.
ಆದರೆ ಇಂಟರ್‌ನೆಟ್ ಮಾರುಕಟ್ಟೆಯಲ್ಲಿ ಬಹುತೇಕ ಷೇರುಗಳನ್ನು ಜಿಯೋ ಮತ್ತು ರಿಲಯನ್ಸ್ ನಿಯಂತ್ರಿಸುತ್ತದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಈ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್ ಪೀಠವು, “ನೀವು ಕೇಂದ್ರೀಕರಣದ ಬಗ್ಗೆ ಆರೋಪ ಮಾಡುವುದಾದರೆ, ಭಾರತದ ಸ್ಪರ್ಧಾ ಆಯೋಗಕ್ಕೆ ಅರ್ಜಿ ಸಲ್ಲಿಸಿ” ಎಂದು ಪೀಠವು ಸಲಹೆ ನೀಡಿದೆ.
ದೇಶದಲ್ಲಿ ರಿಲಯನ್ಸ್ ಜಿಯೋ ಇಂಟರ್‌ನೆಟ್ ಮಾರುಕಟ್ಟೆಯನ್ನು ತನ್ನ ಹತೋಟಿಗೆ ಪಡೆದುಕೊಂಡಿದೆ. ಆರಂಭದಲ್ಲಿ ಉಚಿತ ಸಿಮ್, ಉಚಿತ ಇಂಟರ್‌ನೆಟ್ ನೀಡುವ ಮೂಲಕ ಜನರು ಇತರೆ ಇಂಟರ್‌ನೆಟ್ ತೊರೆದು ಜಿಯೋ ಇಂಟರ್‌ನೆಟ್ ಅನ್ನು ಬಳಸುವಂತೆ ಮಾಡಿದ ರಿಲಯನ್ಸ್ ಬಳಿಕ ಇಂಡಸ್ಟ್ರಿಯನ್ನು ಆವರಿಸಿಕೊಂಡಿದೆ. ಬಿಎಸ್‌ಎನ್‌ಎಲ್ ಸೇವೆಗೆ ಪ್ರಾಧಾನ್ಯತೆ ನೀಡಬೇಕಾದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಪರೋಕ್ಷವಾಗಿ, ಪ್ರತ್ಯಕ್ಷವಾಗಿ ರಿಲಯನ್ಸ್ ಸಂಸ್ಥೆಗೆ ಸಹಾಯ ಮಾಡಿದೆ.
