ಫಿಲ್ಮ್‌ ಫೆಸ್ಟಿವಲ್‌ | ಚಾಮಯ್ಯ ಮೇಷ್ಟ್ರೇ… ನಿಮ್ಮನ್ನು ಮರೆಯುವುದುಂಟೆ!

Date:

Advertisements

ಅಶ್ವಥ್ ಅವರು ಮೈಸೂರು ಮಹಾರಾಜ ಕಾಲೇಜು ವಿದ್ಯಾರ್ಥಿ. ಈ ಕಾಲೇಜು ಅಂಗಳ ಅನೇಕಾನೇಕ ಹೆಸರಾಂತ ಕಲಾವಿದರು, ತಂತ್ರಜ್ಞರು, ರಾಜಕಾರಣಿಗಳು, ಆಡಳಿತಗಾರರನ್ನು ಸೃಷ್ಟಿಸಿದೆ. ಇಲ್ಲಿನ ಕಲೆ ಮತ್ತು ಸಾಂಸ್ಕೃತಿಕ ವಾತಾವರಣ ಅಶ್ವಥರಲ್ಲಿದ್ದ ಕಲಾವಿದನನ್ನು ಪೋಷಿಸಿದೆ. ಬಹುಶಃ ಈ ಹಂಬಲವೇ ಅವರು ರಾಜ್ಯ ಸರ್ಕಾರದ ನೌಕರಿ ತೊರೆಯುವಂತೆ ಮಾಡಿ ಕಲೆಯನ್ನು ಅಪ್ಪುವಂತೆ ಮಾಡಿತು

ಚಿತ್ರದುರ್ಗದ ನೆಲದಲ್ಲಿ ಕಾಲಿಟ್ಟ ಕೂಡಲೇ ನೆನಪಿನಂಗಳದಿಂದ ಚಾಮಯ್ಯ ಮೇಷ್ಟ್ರು, ರಾಮಾಚಾರಿ ವರ್ತಮಾನದ ಅಂಗಳದಲ್ಲಿ ಕಾಲಿರಿಸುತ್ತಾರೆ. ಕೋಟೆಯಂಗಳದಲ್ಲಿ ಅಲೆದಾಡುವಾಗಲೂ ಇವರು ನಡೆದಾಡಿದ ದೃಶ್ಯಗಳು ಕಣ್ಮುಂದೆ ಬರುತ್ತವೆ. ತರಾಸು ಸೃಷ್ಟಿಸಿದ ಪಾತ್ರಗಳನ್ನು ನಿರ್ದೇಶಕ ಪುಟ್ಟಣ್ಣ ಕಣಗಾಲ್ ಮತ್ತಷ್ಟೂ ಆಪ್ತವಾಗಿ ಕನ್ನಡಿಗರ ಮುಂದೆ ಇರಿಸಿದರು.

ಇಂಥ ಚಾಮಯ್ಯ ಮೇಷ್ಟ್ರಿಗೆ ಇದೇ ಮಾರ್ಚ್ 25ಕ್ಕೆ (ಜನನ ಮಾರ್ಚ್ 25, 1925) ನೂರು ವರ್ಷ! ಮೈಸೂರಿನ ಕರಗನಹಳ್ಳಿ ಸುಬ್ಬರಾಯ ಅಶ್ವಥನಾರಾಯಣ ಅಲಿಯಾಸ್ ಕೆ.ಎಸ್. ಅಶ್ವಥ್ ತಾವು ಅಭಿನಯಿಸಿದ ಪಾತ್ರಗಳಿಗೆ ಮಾಡಿದ ಪರಕಾಯ ಪ್ರವೇಶದಿಂದ ಕನ್ನಡಿಗರ ಮನದಲ್ಲಿ ಎಂದೂ ಜೀವಂತ. ಇಂಥ ಕಲಾವಿದರಿಗೆ ಸಾವಿಲ್ಲ ಎನ್ನುವುದು ಅತಿಶಯೋಕ್ತಿ ಅಲ್ಲ! ಕರ್ನಾಟಕ ಚಲನಚಿತ್ರ ಅಕಾಡೆಮಿ ಇದೇ ಮಾರ್ಚ್ 1ರಿಂದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜಿಸಿದೆ. ಇದೇ ಸಂದರ್ಭದಲ್ಲಿ ಶತಮಾನೋತ್ಸವ ಸ್ಮರಣೆ ಕಾರ್ಯಕ್ರಮದಲ್ಲಿ ಮೇರುನಟ ಅಶ್ವಥ್ ವೀಕ್ಷಕರ ಮುಂದೆ ನೆನಪಾಗಿ ಸುಳಿಯುತ್ತಾರೆ.

ಅಶ್ವಥ್ ಅವರು ಮೈಸೂರು ಮಹಾರಾಜ ಕಾಲೇಜು ವಿದ್ಯಾರ್ಥಿ. ಈ ಕಾಲೇಜು ಅಂಗಳ ಅನೇಕಾನೇಕ ಹೆಸರಾಂತ ಕಲಾವಿದರು, ತಂತ್ರಜ್ಞರು, ರಾಜಕಾರಣಿಗಳು, ಆಡಳಿತಗಾರರನ್ನು ಸೃಷ್ಟಿಸಿದೆ. ಇಲ್ಲಿನ ಕಲೆ ಮತ್ತು ಸಾಂಸ್ಕೃತಿಕ ವಾತಾವರಣ ಅಶ್ವಥರಲ್ಲಿದ್ದ ಕಲಾವಿದನನ್ನು ಪೋಷಿಸಿದೆ. ಬಹುಶಃ ಈ ಹಂಬಲವೇ ಅವರು ರಾಜ್ಯ ಸರ್ಕಾರದ ನೌಕರಿ ತೊರೆಯುವಂತೆ ಮಾಡಿ ಕಲೆಯನ್ನು ಅಪ್ಪುವಂತೆ ಮಾಡಿತು.

WhatsApp Image 2025 02 23 at 2.18.23 PM

ಆರಂಭದಲ್ಲಿ ಅಶ್ವಥ್ ಅವರ ಕಲೆಯ ಸಸಿಗೆ ಮೈಸೂರು ಆಕಾಶವಾಣಿ ಸಹ ನೀರೆರೆದು ಪೋಷಿಸಿದೆ. ಅಂದಿನ ಕಾಲಕ್ಕೆ ರೇಡಿಯೋ ನಾಟಕಗಳು ಪ್ರಖ್ಯಾತ. ಇಲ್ಲಿಂದ ಮುಂದೆ ರಂಗಭೂಮಿಯಲ್ಲಿಯೂ ಕಾಣಿಸಿಕೊಂಡರು. ಇವರಲ್ಲಿದ್ದ ಸಮರ್ಥ ಕಲಾವಿದನನ್ನು ಕನ್ನಡ ಚಿತ್ರರಂಗ ಗುರುತಿಸಿತು. ಅಂದಿನ ಖ್ಯಾತ ಸಿನೆಮಾ ನಿರ್ದೇಶಕ ಕೆ. ಸುಬ್ರಮಣ್ಯಂ ಗುರುತಿಸಿದರು. ಸ್ತ್ರೀರತ್ನದಲ್ಲಿ ಪ್ರಮುಖ ಪಾತ್ರ ನೀಡಿದರು. ಇದು 1956ರಲ್ಲಿ ತೆರೆ ಕಂಡಿತು. ಈ ಚಿತ್ರದ ಮೂಲಕವೇ ಸಿನೆರಂಗದತ್ತ ಪಯಣ ಬೆಳೆಸಿದರೂ ಇವರು ಅಭಿನಯಿಸಿದ “ಶಿವಶರಣೆ ನಂಬಿಯಕ್ಕಾ” ಮೊದಲು 1955ರಲ್ಲಿ ತೆರೆ ಕಂಡಿತು.

ಇಷ್ಟರಲ್ಲಾಗಲೇ ಅಂದರೆ 1954ರಲ್ಲಿ ಬೇಡರ ಕಣ್ಣಪ್ಪ ಮೂಲಕ ರಾಜ್ ಕುಮಾರ್ ತಾರೆಯಾಗಿ ಬೆಳಗತೊಡಗಿದ್ದರು. ರಾಜ್ ಕುಮಾರ್, ಉದಯ ಕುಮಾರ್, ಕಲ್ಯಾಣ್ ಕುಮಾರ್ ಮತ್ತು ಅಶ್ವಥ್ ಸಮಕಾಲೀನ ನಟರು. ಆರಂಭದ ನಾಲ್ಕು ಸಿನೆಮಾಗಳಲ್ಲಿ ಅಶ್ವಥ್ ಪ್ರಮುಖ ಪಾತ್ರಗಳಲ್ಲಿ ನಟಿಸಿದರು. ನಂತರ ಪೋಷಕ ಪಾತ್ರಗಳು ಅರಸಿ ಬಂದವು.
ಗಮನಾರ್ಹ ಸಂಗತಿ ಎಂದರೆ ತಮ್ಮ ಸಮ ವಯಸ್ಸಿನ ರಾಜ್, ಉದಯ ಕುಮಾರ್, ಕಲ್ಯಾಣ ಕುಮಾರ್ ಅವರುಗಳಿಗೆ ತಂದೆಯಾಗಿ, ಅಣ್ಣನಾಗಿ ಅಶ್ವಥ್ ಅಭಿನಯಿಸಿದ್ದಾರೆ. ಈ ಮೂಲಕ ವಯಸ್ಸಿಗೂ ಅಭಿನಯಿಸುವ ಪಾತ್ರಗಳಿಗೂ ಸಂಬಂಧವಿಲ್ಲ ಎಂಬುದನ್ನೂ ನಿರೂಪಿಸಿದ್ದಾರೆ. ಸಮರ್ಥ ಅಭಿನಯ ಬೇಡುವ ಪೋಷಕ ಪಾತ್ರಗಳಿಗೆ ಅಶ್ವಥ್ ಜೀವ ತುಂಬಿರುವ ಪರಿ ಬೆರಗು ಮೂಡಿಸುತ್ತದೆ. ಯಾವುದೇ ಪಾತ್ರ ನೀಡಿದರೂ ಅದರಲ್ಲಿ ಪರಕಾಯ ಪ್ರವೇಶ ಪಾತ್ರ ಮಾಡುತ್ತಿದ್ದರು. ಬಹುಶಃ ಈ ಕಾರಣದಿಂದಲೇ ಸಿನೆಮಾಗಳ ಆದರ್ಶ ತಂದೆ, ಹಿರಿಯ ಸಹೋದರ ಎಂದರೆ ಇವರೇ ನೆನಪಾಗುತ್ತಾರೆ. ಅಷ್ಟರ ಮಟ್ಟಿಗೆ ಪೋಷಕ ಪಾತ್ರಗಳಿಗೆ ಅಶ್ವಥತನ ತುಂಬಿದರು.

ಗಾಳಿ ಗೋಪುರ ಸಿನೆಮಾದಲ್ಲಿನ ಇವರ ಅಭಿನಯಕ್ಕೆ ಕನ್ನಡಿಗರಷ್ಟೇ ಅಲ್ಲ; ದಕ್ಷಿಣ ಭಾರತೀಯ ಚಿತ್ರರಂಗವೇ ನಿಬ್ಬೆರಗಾಯಿತು. ವರನಟ ರಾಜ್ ಕುಮಾರ್ ಸಹ ಮಾರು ಹೋದರು, ಅವರ ಅಭಿಮಾನಿಯಾದರು. ಇದರಿಂದಲೇ ರಾಜ್ ಕುಮಾರ್ ಅಭಿನಯದ ಬಹುತೇಕ ಎಲ್ಲ ಸಿನೆಮಾಗಳಲ್ಲಿಯೂ ಅಶ್ವಥ್ ಇದ್ದಾರೆ. 50-60 -70ರ ದಶಕದ ಸಿನೆಮಾಗಳಲ್ಲಿ ರಾಜ್, ಅಶ್ವಥ್, ನರಸಿಂಹರಾಜು, ಬಾಲಕೃಷ್ಣ ಒಟ್ಟಿಗೆ ಇರುವ ಸಿನೆಮಾ ಎಂದರೆ ಕನ್ನಡಿಗರ ಪಾಲಿಗೆ ರಸದೌತಣ! ಪಾರ್ವತಮ್ಮ ರಾಜ್ ಕುಮಾರ್ ಅವರು ನಿರ್ಮಿಸಿದ ಸಿನೆಮಾಗಳಲ್ಲಿಯೂ ಪ್ರಧಾನ ಪಾತ್ರ ಇದ್ದೇ ಇರುತ್ತಿತ್ತು.

ಡಿಸೆಂಬರ್ 29, 1972 ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು ತೆರೆಕಂಡಿತು. ಈ ಮೂಲಕ ಚಿರಂತನ ನೆನಪಿನಲ್ಲಿರುವ ಎರಡು ಪಾತ್ರಗಳು ಕನ್ನಡಿಗರ ಕಣ್ಮುಂದೆ ಬಂದವು. ಚಾಮಯ್ಯ ಮತ್ತು ರಾಮಾಚಾರಿ. ತಂಟೆಕೋರ ವಿದ್ಯಾರ್ಥಿಯನ್ನು ನಿಯಂತ್ರಿಸುವ ಮೇಷ್ಟ್ರ ಪಾತ್ರದಲ್ಲಿ ಅಶ್ಚಥ್ ಅವರ ಅಭಿನಯ ಮತ್ತಷ್ಟೂ ಪ್ರಕಾಶಿಸಿತು. ಅಂದಿನಿಂದ ಅಶ್ವಥ್ ಅವರು ಕನ್ನಡಿಗರ ಪಾಲಿಗೆ ಚಾಮಯ್ಯ ಮೇಷ್ಟ್ರು ಸಹ ಆದರು.

ಅಶ್ವಥ್ ಅವರು ಕೆಲವು ಸಿನೆಮಾಗಳಲ್ಲಿ ಖಳನಾಯಕನಾಗಿಯೂ ಅಭಿನಯಿಸಿದ್ದಾರೆ. ಖ್ಯಾತ ನಿರ್ದೇಶಕ ಸಿದ್ದಲಿಂಗಯ್ಯ ಅವರು ನಿರ್ಮಿಸಿ, ನಿರ್ದೇಶಿಸಿದ ಪರಾಜಿತ ಸಿನೆಮಾದ ಕೋಲ್ಡ್ ಬ್ಲಡೆಡ್ ಮರ್ಡರರ್ ಡಾಕ್ಟರ್ ಪಾತ್ರವನ್ನು ಮರೆಯಲು ಸಾಧ್ಯವೇ? ಅಶ್ವಥ್ ಅವರು ಅಧ್ಯಯನಶೀಲರು. ಯಾವುದೇ ಪಾತ್ರ ಒಪ್ಪಿಕೊಂಡರು ಅದರ ರೀತಿನೀತಿಗಳನ್ನು ಗಂಭೀರವಾಗಿ ಅಧ್ಯಯನ ಮಾಡುತ್ತಿದ್ದರು. ರಾಜ್ ಕುಮಾರ್ ಅಭಿನಯಿಸಿರುವ ಬೆಟ್ಟದ ಹುಲಿ ಸಿನೆಮಾದಲ್ಲಿ ಇವರು ಪೊಲೀಸ್ ಅಧಿಕಾರಿ. ಈ ಪಾತ್ರ ಒಪ್ಪಿಕೊಂಡ ನಂತರ ಸಿನೆಮಾ ನಡೆಯುವ ಕಾಲಘಟ್ಟದ ಪೊಲೀಸ್ ಅಧಿಕಾರಿ ದರ್ಜೆಯ ಸಮವಸ್ತ್ರ ಯಾವುದು, ಅಧಿಕಾರಿಗಳ ವರ್ತನೆ ತಿಳಿಯಲು ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದರು. ಅಲ್ಲಿನ ಪೊಲೀಸರೊಂದಿಗೆ ಚರ್ಚಿಸಿದ್ದರು.ಇಂಥ ಚಾಮಯ್ಯ ಮೇಷ್ಟ್ರು ಜನವರಿ 18, 2010ರಲ್ಲಿ ಕಾಲನ ಮಡಿಲಿಗೆ ಸರಿದು ಹೋದರು. ಆದರೆ ಕನ್ನಡಿಗರ ನೆನಪಿನಂಗಳಲ್ಲಿ ಜೀವಂತವಾಗಿದ್ದಾರೆ, ಇರುತ್ತಾರೆ. ಚಲನಚಿತ್ರೋತ್ಸವದ ಶತಮಾನ ಸ್ಮರಣೆ ಕಾರ್ಯಕ್ರಮದಲ್ಲಿ ಮತ್ತೊಮ್ಮೆ ಬೆಳಗುತ್ತಾರೆ.

Advertisements
ಕುಮಾರ ರೈತ
ಕುಮಾರ ರೈತ
+ posts

ಪತ್ರಕರ್ತ, ಕೃಷಿ ಇವರ ಆಸಕ್ತಿಯ ಕ್ಷೇತ್ರ. ಹಲವು ಪತ್ರಿಕೆಗಳಿಗೆ ಕೃಷಿ ಲೇಖನಗಳನ್ನು ಬರೆಯುತ್ತಿದ್ದಾರೆ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಕುಮಾರ ರೈತ
ಕುಮಾರ ರೈತ
ಪತ್ರಕರ್ತ, ಕೃಷಿ ಇವರ ಆಸಕ್ತಿಯ ಕ್ಷೇತ್ರ. ಹಲವು ಪತ್ರಿಕೆಗಳಿಗೆ ಕೃಷಿ ಲೇಖನಗಳನ್ನು ಬರೆಯುತ್ತಿದ್ದಾರೆ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು: ಕೆ ವಿ ಪ್ರಭಾಕರ್

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು. ನೋಟಕ್ಕೆ...

ಪ್ರಣಮ್ ದೇವರಾಜ್ ಅಭಿನಯದ ‘S/O ಮುತ್ತಣ್ಣ’ ಸೆ.12ಕ್ಕೆ ತೆರೆಗೆ

ಪುರಾತನ ಫಿಲಂಸ್ ನಿರ್ಮಾಣದ ಶ್ರೀಕಾಂತ್ ಹುಣಸೂರು ನಿರ್ದೇಶನದ ಡೈನಮಿಕ್ ಹೀರೊ ದೇವರಾಜ್...

3 ಈಡಿಯಟ್ಸ್ ಖ್ಯಾತಿಯ ಹಿರಿಯ ನಟ ಅಚ್ಯುತ್ ಪೋತರ್ ನಿಧನ

3 ಈಡಿಯಟ್ಸ್ ಖ್ಯಾತಿಯ ಹಿರಿಯ ನಟ ಅಚ್ಯುತ್ ಪೋತರ್ ಅವರು ಆಗಸ್ಟ್...

ಬೆಂಗಳೂರು | ಹವಾಮಾನ ಕ್ರಿಯೆಗೆ ಪರಿಣಾಮಕಾರಿ ಕೊಡುಗೆ ನೀಡಲು ಅದರ ಮಹತ್ವ ತಿಳಿಯುವುದು ಅಗತ್ಯ: ಪ್ರೀತಿ ಗೆಹ್ಲೋಟ್

ಹವಾಮಾನ ಕ್ರಿಯೆಗೆ ಪರಿಣಾಮಕಾರಿಯಾಗಿ ಕೊಡುಗೆ ನೀಡಲು, ಮಕ್ಕಳು ಅದರ ಮಹತ್ವ ಮತ್ತು...

Download Eedina App Android / iOS

X