ವಿದ್ಯುತ್ ಸರಬರಾಜು ಮಾಡದ ಬೆಸ್ಕಾಂ ರೈತರ ಬದುಕಿನಲ್ಲಿ ಚೆಲ್ಲಾಟ ಆಡುತ್ತಿದೆ. ಮನಬಂದಂತೆ ಕಣ್ಣಾಮುಚ್ಚಾಲೆಯಾಡುವ ಬೆಸ್ಕಾಂ ಹಾಗೂ ಕೆಪಿಟಿಸಿಎಲ್ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ ತಾಲ್ಲೂಕಿನ ರೈತ ಸಂಘ ಸದಸ್ಯರು ವ್ಯವಸ್ಥೆ ವಿರುದ್ಧ ಘೋಷಣೆ ಕೂಗಿ ಕಚೇರಿ ಆವರಣದಲ್ಲಿ ಅಡುಗೆ ತಯಾರಿಸಿ ಪ್ರತಿಭಟನೆ ನಡೆಸಿದರು.
ಗುಬ್ಬಿ ಪಟ್ಟಣದ ಬಸ್ ನಿಲ್ದಾಣ ಬಳಿ ಜಮಾಯಿಸಿದ್ದ ರೈತ ಸಂಘದ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ತಾಲ್ಲೂಕಿನ ನೂರಾರು ರೈತರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಹಾಗೂ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಮಾನವ ಸರಪಳಿ ನಿರ್ಮಿಸಿ ಕೆಲ ಕಾಲ ರಸ್ತೆ ತಡೆ ಮಾಡಿ ನಂತರ ಬೆಸ್ಕಾಂ ಕಚೇರಿ ಕಡೆಗೆ ಪಾದಯಾತ್ರೆ ಮೂಲಕ ರೈತರು ತೆರಳಿದರು.
ಪ್ರತಿಭಟನಾ ಸಭೆಯನ್ನುದೇಶಿಸಿ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ ದೇಶದ ಬೆನ್ನೆಲುಬು ಎನಿಸಿದ ರೈತ ವರ್ಗವನ್ನೇ ನಿಷ್ಕ್ರಿಯತೆ ಮಾಡುವ ಕೇಂದ್ರ ಸರ್ಕಾರ ರೈತರ ಪಂಪ್ ಸೆಟ್ ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸಿ ಕೃಷಿ ಕ್ಷೇತ್ರವನ್ನೇ ಖಾಸಗೀಕರಣ ಗೊಳಿಸಲು ಹುನ್ನಾರ ನಡೆಸಿದೆ. ರೈತ ಹೋರಾಟಕ್ಕೆ ಕಿಂಚಿತ್ತೂ ಬೆಲೆ ನೀಡದ ಕೇಂದ್ರ ಸರ್ಕಾರ 720 ಮಂದಿ ರೈತರನ್ನು ಬಲಿ ಪಡೆದಿದೆ. ನಂತರ ಸಾಲ ಮನ್ನಾ, ಖಾಸಗೀಕರಣ ಇಲ್ಲ, ರೈತರಿಗೆ ಪರಿಹಾರ, ಮೀಟರ್ ಅಳವಡಿಕೆ ಇಲ್ಲ ಎಂದು ಮಾತುಕೊಟ್ಟು ಈಗ ಮಾತು ತಪ್ಪಿದೆ ಎಂದು ಕಿಡಿಕಾರಿದರು.

ರಾಜ್ಯದ 45 ಲಕ್ಷ ಪಂಪ್ ಸೆಟ್ ಗಳಲ್ಲಿ ಅನ್ನ ನೀಡುವ ರೈತರಿಗೆ ಕರೆಂಟ್ ನೀಡಲು ಸೋತ ಸರ್ಕಾರ ಏಳು ಗಂಟೆ ಕರೆಂಟ್ ನೀಡುವ ಭರವಸೆ ನೀಡಿತ್ತು. ಆದರೆ ಮೂರು ಗಂಟೆ ಸಹ ನೀಡುತ್ತಿಲ್ಲ. ತಾಲ್ಲೂಕಿನಲ್ಲಿ ಕರೆಂಟ್ ಬಗ್ಗೆ ಹೇಳತೀರದಾಗಿದೆ. ತಾಲ್ಲೂಕಿಗೆ ಹಂಚಿಕೆಯಲ್ಲಿ ಬರುವ 160 ಮೆಗಾ ವ್ಯಾಟ್ ನಲ್ಲಿ 20 ಮೆಗಾ ವ್ಯಾಟ್ ತುರ್ತು ಅಗತ್ಯತೆಗೆ ಮೀಸಲಿಟ್ಟು ಉಳಿದ 140 ಮೆಗಾ ವ್ಯಾಟ್ ನಲ್ಲಿ 150 ಫೀಡರ್ ಹಾಗೂ 14 ಉಪ ಸ್ಥಾವರಕ್ಕೆ ಹಂಚಿದರೂ 5 ಗಂಟೆ ಕರೆಂಟ್ ನೀಡಲು ಸಾಧ್ಯವಿಲ್ಲ. 220 ಮೆಗಾ ವ್ಯಾಟ್ ಅವಶ್ಯ ಇರುವ ಕಾರಣ ಕೂಡಲೇ ಗುಬ್ಬಿಯಲ್ಲಿ 220 ಎಂವಿ ಸ್ಟೇಷನ್ ನಿರ್ಮಿಸಿ 14 ಉಪಸ್ಥಾವರ ಮೇಲ್ದರ್ಜೆಗೇರಿಸಿ ಬಾಕಿ ಇರುವ 10 ಹೊಸ ಸ್ಥಾವರ ಆರಂಭಿಸಿ ಓವರ್ ಲೋಡ್ ತಪ್ಪಿಸಿ ರೈತರನ್ನು ಉಳಿಸಿ ಎಂದು ಮನವಿ ಮಾಡಿದರು.
ಗೊಲ್ಲಹಳ್ಳಿ ಮಠದ ಶ್ರೀ ವಿಭವ ವಿದ್ಯಾ ಶಂಕರ ಸ್ವಾಮೀಜಿ ಪ್ರತಿಭಟನಾ ನೇತೃತ್ವ ವಹಿಸಿ ಮಾತನಾಡಿ ಮನುಷ್ಯ ಕುಲವನ್ನು ಉಳಿಸುವ ರೈತ ವರ್ಗವನ್ನು ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ. ಸ್ವಾಭಿಮಾನಿ ರೈತರು ಯಾವ ಉಚಿತವನ್ನು ಕೇಳುವುದಿಲ್ಲ. ಕರೆಂಟ್ ಮತ್ತು ನೀರು ಒದಗಿಸಿದರೆ ಇಡೀ ದೇಶವನ್ನೇ ಉಳಿಸಿ ಅನ್ನದ ಕೊರತೆ ನೀಗಿಸುತ್ತಾನೆ. ಇಂತಹ ರೈತರ ಬಗ್ಗೆ ಸರ್ಕಾರ ಗಮನಹರಿಸಿ ಅವಶ್ಯ ಸವಲತ್ತು ಒದಗಿಸಬೇಕು. ಬೇಸಿಗೆಯಲ್ಲಿ ಸಂಭವಿಸುವ ತಾಂತ್ರಿಕ ಸಮಸ್ಯೆ ಅರಿತ ಅಧಿಕಾರಿಗಳು ಮೊದಲೇ ಪರ್ಯಾಯ ವ್ಯವಸ್ಥೆಗೆ ತಯಾರಿ ನಡೆಸಬೇಕಿತ್ತು. ಗುಬ್ಬಿ ತಾಲ್ಲೂಕಿನಲ್ಲಿ ಬಹುತೇಕ ರೈತರ ಸಮಸ್ಯೆ ಕರೆಂಟ್ ಎಂದು ಹೇಳಲಾಗುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ರೈತರಿಗೆ ತ್ರೀ ಫೇಸ್ ಕರೆಂಟ್ ಸರ್ಕಾರದ ನಿಯಮದಂತೆ ಏಳು ಗಂಟೆ ಒದಗಿಸಬೇಕು ಎಂದು ಒತ್ತಾಯಿಸಿದರು.

ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎನ್.ವೆಂಕಟೇಗೌಡ ಮಾತನಾಡಿ ರಾಜ್ಯದಲ್ಲಿ ಅತಿ ಹೆಚ್ಚು ಪಂಪ್ ಸೆಟ್ ಹೊಂದಿರುವ ಗುಬ್ಬಿ ತಾಲ್ಲೂಕಿನಲ್ಲಿ ಒಂದೂವರೆ ಲಕ್ಷ ಪಂಪ್ ಸೆಟ್ ಗಳಿವೆ. ಈಗಾಗಲೇ ರೈತರು ಪ್ರತಿಭಟನೆ ರುಚಿ ತೋರಿದರೂ ಎಚ್ಚೆತ್ತು ಕೊಳ್ಳದ ಬೆಸ್ಕಾಂ ಮತ್ತು ಕೆಪಿಟಿಸಿಎಲ್ ಇಲಾಖೆಗೆ ಬಿಸಿ ಮುಟ್ಟಿಸಲು ರೈತ ಸಂಘ ಬೀದಿಗಿಳಿದು ಹೋರಾಟ ನಡೆಸಿದೆ. 19 ಬೇಡಿಕೆಯಲ್ಲಿ ಏಳು ಗಂಟೆ ಗುಣಮಟ್ಟದ ಕರೆಂಟ್, ತ್ರೀ ಫೇಸ್ ಇಲ್ಲದ ವೇಳೆ ಸಿಂಗಲ್ ಕರೆಂಟ್ ಒದಗಿಸುವುದು, ಕೆಲಸ ಪೂರ್ಣಗೊಂಡ ಉಪಸ್ಥಾವರ ಆರಂಭಿಸುವುದು ಹಾಗೂ ಸುಟ್ಟ ಪರಿವರ್ತಕವನ್ನು ಕೂಡಲೇ ಬದಲಿಸಿ ಕೃಷಿಗೆ ಅನುಕೂಲ ಮಾಡುವುದು ಬಹುಮುಖ್ಯವಾಗಿ ಆಗಬೇಕಿದೆ ಎಂದು ಆಗ್ರಹಿಸಿದರು.

ನಂತರ ಸ್ಥಳಕ್ಕೆ ಆಗಮಿಸಿದ ಬೆಸ್ಕಾಂ ಇಇ ಪ್ರಶಾಂತ ಕೂಡ್ಲಿಗಿ, ಕೆಪಿಟಿಸಿಎಲ್ ಇಇ ಸೈಯದ್ ಅಹಮದ್, ಇಂಜಿನಿಯರ್ ಉಮೇಶ್, ಎಇಇ ಜಲದೇಶ್, ರಾಜೇಶ್ ಅವರು ರೈತರೊಟ್ಟಿಗೆ ಮಾತನಾಡಿ ತಾಲ್ಲೂಕಿನಲ್ಲಿ 6 ಗಂಟೆಗಳ ತ್ರೀ ಫೇಸ್ ಕರೆಂಟ್ ವ್ಯವಸ್ಥೆ ಮಾಡಲಾಗುವುದು ಹಾಗೂ ಸಿಂಗಲ್ ವ್ಯವಸ್ಥೆ ತ್ರೀ ಫೇಸ್ ಇಲ್ಲದ ವೇಳೆ ಮಾಡಲಾಗುವುದು ಎಂದು ಹೇಳಿ 19 ಬೇಡಿಕೆ ಈಡೇರಿಸುವ ಮೊದಲು ಅತ್ಯವಶ್ಯ ಕೆಲಸಗಳನ್ನು ಮಾಡಿಕೊಡುವ ಭರವಸೆ ನೀಡಿ ಪ್ರತಿಭಟನೆಗೆ ತಾತ್ಕಾಲಿಕ ತೆರೆ ಎಳೆದರು. ಬೆಸ್ಕಾಂ ಕಚೇರಿ ಆವರಣದಲ್ಲಿ ರೈತರೇ ಒಗ್ಗೂಡಿ ಅಡುಗೆ ತಯಾರಿಸಿ ಪ್ರತಿಭಟನೆಗೆ ಮತ್ತಷ್ಟು ಕಾವು ತಂದರು.
ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರಪ್ಪ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ನಾಗರತ್ನಮ್ಮ, ಯುವ ಘಟಕದ ಶಿವಕುಮಾರ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸಿ.ಜಿ.ಲೋಕೇಶ್, ತುಮಕೂರು ತಾಲ್ಲೂಕು ಅಧ್ಯಕ್ಷ ಚಿಕ್ಕಭೈರೇಗೌಡ, ಕೊರಟಗೆರೆ ತಾಲ್ಲೂಕು ಅಧ್ಯಕ್ಷ ಗಂಗಹನುಮಯ್ಯ, ಪ್ರಧಾನ ಕಾರ್ಯದರ್ಶಿ ಶಬ್ಬೀರ್ ಪಾಷ ಸೇರಿದಂತೆ ಗುಬ್ಬಿ ತಾಲ್ಲೂಕಿನ ಹೋಬಳಿ ಅಧ್ಯಕ್ಷರು, ವಿವಿಧ ಘಟಕದ ಪದಾಧಿಕಾರಿಗಳು, ನೂರಾರು ರೈತರು ಭಾಗವಹಿಸಿದ್ದರು.