- ಶಾಲಾ ಪಠ್ಯ ಪರಿಷ್ಕರಣೆ ಹಿನ್ನೆಲೆಯಲ್ಲಿ ಸಭೆ ನಡೆಸಿದ ರಾಜ್ಯ ಬಿಜೆಪಿ
- ಶಿಕ್ಷಣ ಕ್ಷೇತ್ರ ಪೂರ್ವಗ್ರಹ ಪೀಡಿತ ಮನಸ್ಥಿತಿಯಿಂದ ಹೊರ ಬರಬೇಕು
ಶಾಲಾ ಮಕ್ಕಳ ಪಠ್ಯ ಪರಿಷ್ಕರಣೆಗೆ ಮುಂದಾಗಿರುವ ರಾಜ್ಯ ಸರ್ಕಾರ ಕ್ರಮದ ಕುರಿತಂತೆ ಚರ್ಚಿಸಲು ಶಿಕ್ಷಣ ಕ್ಷೇತ್ರ ಪ್ರತಿನಿಧಿತ ವಿಧಾನಪರಿಷತ್ ಸದಸ್ಯರು ಮತ್ತು ಶಿಕ್ಷಣ ಆಸಕ್ತರ ಎಂಎಲ್ಎಗಳ ಸಭೆಯನ್ನು ಬಿಜೆಪಿ ಆಯೋಜಿಸಿತ್ತು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ʼಜಗನ್ನಾಥ ಭವನʼದಲ್ಲಿ ಇಂದು ನಡೆದ ಸಭೆಯಲ್ಲಿ ರಾಜ್ಯದ ನೂತನ ಕಾಂಗ್ರೆಸ್ ಸರಕಾರವು ಪಠ್ಯಪುಸ್ತಕ ಪರಿಷ್ಕರಣೆಗೆ ಮುಂದಾಗಿರುವುದರ ಬಗ್ಗೆ ಚರ್ಚಿಸಲಾಯಿತು. ಜುಲೈನಲ್ಲಿ ಅಧಿವೇಶನ ನಡೆಯಲಿದ್ದು, ಅದಕ್ಕೂ ಮುನ್ನ ಸಭೆ ನಡೆಸಲು ಮುಂದಿನ ಕಾರ್ಯಯೋಜನೆ ರೂಪಿಸುವುದರ ಕುರಿತು ತೀರ್ಮಾನಿಸಲಾಯಿತು.
ಸಭೆ ಬಳಿಕ ಮಾತನಾಡಿದ ಮಾಜಿ ಸಚಿವ ಸಿ ಟಿ ರವಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಶಿಕ್ಷಣ ಕ್ಷೇತ್ರದಲ್ಲಿ ಸಮಗ್ರವಾಗಿ ಅವಲೋಕನ ಮಾಡದೆ, ಸಾಧಕ ಬಾಧಕ ಅಧ್ಯಯನ ಮಾಡದೆ, ರಾಜಕೀಯ ಕಾರಣಕ್ಕಾಗಿ ಪೂರ್ವಗ್ರಹ ಪೀಡಿತರಾಗಿ ಕೊಟ್ಟಿರುವ ಪಠ್ಯ ಪರಿಷ್ಕರಣೆ ಕುರಿತ ಹೇಳಿಕೆಯು ಅಸಹಿಷ್ಣು ಭಾವನೆಯಿಂದ ಕೂಡಿದೆ ಎಂದರು.
ಕೆಲವು ಮಹನೀಯರ ಪಾಠವನ್ನು ಕೈಬಿಡಬೇಕು ಎಂಬ ಹೇಳಿಕೆ ಕುರಿತು ಸಮಗ್ರವಾಗಿ ಚರ್ಚಿಸಲಾಗಿದೆ. ಶಿಕ್ಷಣ ಕ್ಷೇತ್ರವು ಪೂರ್ವಗ್ರಹಪೀಡಿತ ಮನಸ್ಥಿತಿಯಿಂದ ಹೊರಬರಬೇಕು. ಉತ್ತಮ ನಾಗರಿಕರನ್ನು ಶಿಕ್ಷಣ ತಯಾರು ಮಾಡಬೇಕು ಎಂದು ಅವರು, ಸಮಾನಮನಸ್ಕರ ಸಭೆ ನಡೆಸಿ ಸಲಹೆಗಳನ್ನು ಪಡೆಯಲಾಗುವುದು. ಅದರ ಬಳಿಕ ಮುಂದಿನ ರೂಪುರೇಷೆ ನಿರ್ಧರಿಸಲಾಗುತ್ತದೆ ಎಂದರು.
ಈ ಸುದ್ದಿ ಓದಿದ್ದೀರಾ?:ಧಮ್ಮು, ತಾಕತ್ತು ಇದ್ದರೆ ಅಡ್ಜಸ್ಮೆಂಟ್ ಮಾಡಿಕೊಂಡವರ ಹೆಸರು ಹೇಳಿ: ಸಿ ಟಿ ರವಿಗೆ ಕಾಂಗ್ರೆಸ್ ಸವಾಲು
ಇನ್ನು ಇದೇ ವಿಚಾರವಾಗಿ ಮಾತನಾಡಿದ ಮಾಜಿ ಸಚಿವ ಬಿ ಸಿ ನಾಗೇಶ್, ಪಠ್ಯ ವಿಚಾರದಲ್ಲಿ ದ್ವೇಷದಿಂದ ವರ್ತಿಸುತ್ತಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಎನ್ಸಿಆರ್ಟಿ ಸೂಚನೆ ಮೇರೆಗೆ ನಾವು ಹಿಂದೆ ಪಠ್ಯ ಬದಲಾವಣೆ ಮಾಡಿದ್ದೆವು ಎಂದು ಸ್ಪಷ್ಟಪಡಿಸಿದ ಅವರು, ತಪ್ಪುಗಳನ್ನು ಸರಿಪಡಿಸುವ ಉದ್ದೇಶ ನಮ್ಮದಾಗಿತ್ತು. ಈಗ ದ್ವೇಷದಿಂದ ಅದನ್ನು ಬದಲಾವಣೆ ಮಾಡಿದರೆ ಅದರಿಂದ ಮಕ್ಕಳು, ಪೋಷಕರ ಮೇಲೆ ದುಷ್ಪರಿಣಾಮ ಬೀರಲಿದೆ ಎಂದರು.
ಇವರು ಬದಲಾವಣೆ ಮಾಡಲೇ ಬೇಕೆಂದಿದ್ದರೆ, ಅದನ್ನು ಪೋಷಕರ ಗಮನಕ್ಕೆ ತಂದು ಮಾಡಬೇಕು ಎಂದು ನಾಗೇಶ್ ಒತ್ತಾಯಿಸಿದರು.