ಹಾಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಹಲವು ಪಾಲಿಕೆಗಳಾಗಿ ವಿಭಜಿಸಿದ ನಂತರ ಮುಂಬರುವ ಆಗಸ್ಟ್ ತಿಂಗಳಿನಲ್ಲಿ ಅವುಗಳಿಗೆ ಚುನಾವಣೆ ನಡೆಸುವುದಾಗಿ ರಾಜ್ಯ ಸರ್ಕಾರ ಹೇಳಿದೆ. ಬೆಂಗಳೂರು ಮಹಾನಗರಪಾಲಿಕೆಗೆ ಚುನಾವಣೆಗಳು ಕಳೆದ ನಾಲ್ಕು ವರ್ಷಗಳಿಂದ ನಡೆದಿಲ್ಲ.
ಸುಪ್ರೀಮ್ ಕೋರ್ಟ್ ಮುಂದೆ ಸಲ್ಲಿಸಿರುವ ಪ್ರಮಾಣಪತ್ರವೊಂದರಲ್ಲಿ ಈ ಸಂಗತಿಯನ್ನು ಸ್ಪಷ್ಟಪಡಿಸಲಾಗಿದೆ.
2020ರ ಕರ್ನಾಟಕ ಮುನಿಸಿಪಲ್ ಕಾರ್ಪೊರೇಷನ್ (ತಿದ್ದುಪಡಿ) ಕಾಯಿದೆಯ ಪ್ರಕಾರ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) 243 ವಾರ್ಡುಗಳಿಗೆ ಬದಲಾಗಿ 198 ವಾರ್ಡುಗಳಿಗೆ ಚುನಾವಣೆ ನಡೆಸಬೇಕೆಂದು ರಾಜ್ಯ ಹೈಕೋರ್ಟು ನೀಡಿದ್ದ ಆದೇಶವನ್ನು 2020ರ ಡಿಸೆಂಬರ್ 25ರಂದು ಸುಪ್ರೀಮ್ ಕೋರ್ಟು ಅಮಾನತಿನಲ್ಲಿ ಇರಿಸಿತ್ತು. ಹಲವು ಪಾಲಿಕೆಗಳಾಗಿ ವಿಭಜಿಸಲು ‘2024ರ ಬೃಹತ್ ಬೆಂಗಳೂರು ಆಡಳಿತ ಮಸೂದೆಯನ್ನು’ ಇದೇ ಮಾರ್ಚ್ ಮೊದಲ ವಾರದಲ್ಲಿ ಶುರುವಾಗಲಿರುವ ವಿಧಾನಮಂಡಲದ ಬಜೆಟ್ ಅಧಿವೇಶದಲ್ಲಿ ಮಂಡಿಸಿ ಅಂಗೀಕಾರ ಪಡೆದು, ರಾಜ್ಯಪಾಲರ ಅಂಕಿತಕ್ಕೆ ಕಳಿಸಲಾಗುವುದು. ಉದ್ದೇಶಿತ ಕಾಯಿದೆಯ ಪ್ರಕಾರ ಬೆಂಗಳೂರು ನಗರದ ವಿಸ್ತೃತ ನಗರ ಪ್ರದೇಶವನ್ನು ಮತ್ತು ಸರ್ಕಾರ ನಿರ್ದಿಷ್ಟವಾಗಿ ಗೊತ್ತು ಮಾಡುವ ಇತರೆ ಪ್ರದೇಶಗಳನ್ನು ಬೃಹತ್ ಬೆಂಗಳೂರು ಪ್ರದೇಶ ಎಂದು ಸಾರಲಾಗುವುದು.
ನಿರ್ದಿಷ್ಟ ಪ್ರದೇಶದ ಜನಸಂಖ್ಯೆ, ಜನಸಾಂದ್ರತೆ, ಆದಾಯ ಉತ್ಪನ್ನ, ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಉದ್ಯೋಗಿಗಳ ಶೇಕಡಾವಾರು ಪ್ರಮಾಣ, ಆರ್ಥಿಕ ಪ್ರಾಮುಖ್ಯತೆ, ಆಯಾ ಪ್ರದೇಶದಲ್ಲಿ ಲಭ್ಯವಿರುವ ಮೂಲಸೌಲಭ್ಯಗಳು ಮತ್ತಿತರೆ ಅಂಶಗಳನ್ನು ಆಧರಿಸಿ ಹೊಸ ನಗರಪಾಲಿಕೆಗಳ (ಸಿಟಿ ಕಾರ್ಪೊರೇಷನ್ಸ್) ಸಂಖ್ಯೆಯನ್ನು ನಿರ್ಧರಿಸಲಾಗುವುದು. ಸಾರ್ವಜನಿಕರಿಂದ ಆಕ್ಷೇಪಣೆಗಳು-ಸಲಹೆ-ಸೂಚನೆಗಳ ನಂತರವೇ ಈ ಅಧಿಸೂಚನೆಗಳನ್ನು ಅಂತಿಮಗೊಳಿಸಲಾಗುವುದು. ಹೀಗಾಗಿ ಈ ಪ್ರಕ್ರಿಯೆಯು 45 ದಿನಗಳಲ್ಲಿ (ಮೇ.15) ಮುಕ್ತಾಯಗೊಳ್ಳುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ಸಿಟಿ ಕಾರ್ಪೊರೇಷನ್‌ಗಳ ಸ್ಥಾಪನೆಯ ನಂತರ ಕೌನ್ಸಿಲರುಗಳನ್ನು ಚುನಾಯಿಸಲು ಪ್ರತಿಯೊಂದು ಕಾರ್ಪೊರೇಷನ್ ಅನ್ನು ಕ್ಷೇತ್ರ ಮರುವಿಂಗಡಣೆ ಆಯೋಗದ (ಡಿಲಿಮಿಟೇಷನ್ ಕಮೀಷನ್) ಶಿಫಾರಸುಗಳ ಪ್ರಕಾರ ವಾರ್ಡುಗಳಾಗಿ ವಿಂಗಡಿಸಲಾಗುವುದು. ಪ್ರತಿಯೊಂದು ಕಾರ್ಪೊರೇಷನ್ ನ ವಾರ್ಡುಗಳು ಮತ್ತು ಅವುಗಳ ಹೆಸರುಗಳಿರುವ ಪ್ರತ್ಯೇಕ ಕರಡು ಅಧಿಸೂಚನೆಗಳನ್ನು ಹೊರಡಿಸಲಾಗುವುದು. ಈ ಕುರಿತ ಸಲಹೆಗಳು-ಆಕ್ಷೇಪಣೆಗಳನ್ನು ಗಮನದಲ್ಲಿರಿಸಿಕೊಂಡು ಅಂತಿಮ ಅಧಿಸೂಚನೆ ಹೊರಡಿಸಲಾಗುವುದು. ಕ್ಷೇತ್ರ ಮರುವಿಂಗಡಣೆ ಆಯೋಗ ರಚನೆ ಮತ್ತು ಅಂತಿಮ ಅಧಿಸೂಚನೆ ಪ್ರಕಟಣೆಯ ಪ್ರಕ್ರಿಯೆ 60 ದಿನಗಳಲ್ಲಿ (ಜುಲೈ.1ರ ಹೊತ್ತಿಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ರಾಜ್ಯ ಸರ್ಕಾರ ತನ್ನ ಪ್ರಮಾಣಪತ್ರದಲ್ಲಿ ವಿವರಿಸಿದೆ.
ಮರುವಿಂಗಡಣೆಗೊಂಡ ಕ್ಷೇತ್ರಗಳ ವಿವರಗಳು ಮತ್ತು ಮೀಸಲಾತಿ ವಿವರಗಳನ್ನು ರಾಜ್ಯ ಚುನಾವಣಾ ಆಯೋಗಕ್ಕೆ 2025ರ ಆಗಸ್ಟ್ 15ರ ಹೊತ್ತಿಗೆ ಸಲ್ಲಿಸಲಿದ್ದು, ಆನಂತರ ಹೊಸದಾಗಿ ರಚನೆಯಾದ ಸಿಟಿ ಕಾರ್ಪೊರೇಷನ್‌ಗಳಿಗೆ ಚುನಾವಣೆ ನಡೆಯುವ ನಿರೀಕ್ಷೆ ಇದೆ ಎಂದು ಹೇಳಿದೆ.
ಕಳೆದ ಎರಡು ದಶಕಗಳಲ್ಲಿ ಜನಸಂಖ್ಯೆ ಮತ್ತು ಭೌಗೋಳಿಕ ಪ್ರದೇಶ ಎರಡರಲ್ಲೂ ಬೆಂಗಳೂರು ಭಾರೀ ಪ್ರಮಾಣದಲ್ಲಿ ಹತ್ತಾರು ಪಟ್ಟು ಬೆಳೆದಿದೆ. ಪೌರ ಪ್ರಾಧಿಕಾರಗಳಿಗೆ ಸವಾಲಾಗಿ ಪರಿಣಮಿಸಿದೆ. ಬೆಂಗಳೂರು ಇನ್ನಷ್ಟು ಮತ್ತಷ್ಟು ಬೆಳೆಯಲಿದೆ. ಈಗಿನ ಸರ್ಕಾರಿ ಪೌರವ್ಯವಸ್ಥೆ ಇನ್ನಷ್ಟು ಸವಾಲುಗಳನ್ನು ಎದುರಿಸಲಿದೆ. ಜನಜೀವನ ಗುಣಮಟ್ಟ ಕುಸಿಯುತ್ತ ನಡೆಯಲಿದೆ. ಹವಾಮಾನ ಬದಲಾವಣೆಯೂ ಕಾರಣವಾಗಲಿದೆ. ಈ ಸವಾಲುಗಳನ್ನು ಅಧಿಕಾರ ವಿಕೇಂದ್ರೀಕರಣದ ಮೂಲಕವೇ ಎದುರಿಸಬೇಕಿದೆ. ಹೀಗಾಗಿ ಹಲವು ಸಿಟಿ ಕಾರ್ಪೊರೇಷನ್ ಗಳ ರಚನೆ ಅನಿವಾರ್ಯವಾಗಿದೆ ಎಂದು ಹೇಳಿದೆ.

ಬೆಂಗಳೂರಿನ ವಿಭಜಿತ ನಗರಪಾಲಿಕೆಗಳಿಗೆ ಆಗಸ್ಟ್ ವೇಳೆಗೆ ಚುನಾವಣೆ- ಸುಪ್ರೀಮ್ ಗೆ ರಾಜ್ಯದ ಪ್ರಮಾಣಪತ್ರ
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: