ಕಳಪೆ ಗುಣಮಟ್ಟದ ಔಷಧಿಗಳಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವುದರಿಂದ ಔಷಧಿ ತಯಾರಿಕಾ ಕಂಪೆನಿಗಳು ಗುಣಮಟ್ಟ ಕಾಯ್ದುಕೊಳ್ಳಬೇಕಿದೆ. ಹಾಗಾಗಿ, ಕಳಪೆ ಔಷಧಿಗಳ ಬಗ್ಗೆ ಹೆಚ್ಚು ಗಮನಹರಿಸಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಬೆಂಗಳೂರು ನಗರದ ಶೇಷಾದ್ರಿಪುರದಲ್ಲಿರುವ ಶಾಸಕರ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕೇಂದ್ರ ಸರ್ಕಾರಕ್ಕೆ ನಾನು ಈಗಾಗಲೇ ಪತ್ರ ಬರೆದು ಔಷಧಿಗಳ ಗುಣಮಟ್ಟದ ಬಗ್ಗೆ ಗಮನ ಸೆಳೆದಿದ್ದು, ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಬೇಕಾದ ವಿಚಾರ, ರಾಜ್ಯದ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿದಾಗ ಕೆಲವು ಔಷಧಿಗಳಲ್ಲಿ ಕಳಪೆ ಗುಣಮಟ್ಟ ಕಂಡುಬಂದಿದೆ. ಅದನ್ನು ಬೇರೆ ರಾಜ್ಯಗಳಿಗೂ ತಿಳಿಸುವುದು ನಮ್ಮ ಪತ್ರದ ಉದ್ದೇಶವಾಗಿತ್ತು” ಎಂದು ಹೇಳಿದರು.
“ಕೆಲವು ಕಂಪೆನಿಗಳು ಗುಣಮಟ್ಟದ ಔಷಧಿಗಳನ್ನು ಪೂರೈಸುತ್ತವೆ. ಇನ್ನೂ ಕೆಲವು ಕಂಪೆನಿಗಳು ಗುಣಮಟ್ಟ ಕಾಯ್ದುಕೊಳ್ಳುತ್ತಿಲ್ಲ. ಅಂತಹ ಔಷಧಿಗಳನ್ನು ಈಗಾಗಲೇ ನಿಷೇಧ ಮಾಡಲಾಗಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಕಂಡಕ್ಟರ್ ಮೇಲಿನ ಹಲ್ಲೆ ಪ್ರಕರಣ; ʼಬೆಳಗಾವಿ ಚಲೋʼ ಕೈಬಿಡಬೇಕೆಂದು ಸತೀಶ್ ಜಾರಕಿಹೊಳಿ ಮನವಿ
“ರಾಜ್ಯದಲ್ಲಿ ಬಾಣಂತಿಯರ ಸಾವಿಗೆ ಕಾರಣವಾದ ಐವಿ ದ್ರಾವಣ ತಯಾರಿಸಿದ ಪಶ್ಚಿಮ ಬಂಗಾಳದ ಕಂಪೆನಿ ಮುಚ್ಚಿದೆ. ಅವರು ಹಲವು ಬಗೆಯ ಔಷಧಿಗಳನ್ನು ತಯಾರಿಸುತ್ತಿದ್ದರು. ನಮ್ಮ ಅಧಿಕಾರಿಗಳ ತಂಡ ಅಲ್ಲಿಗೆ ತೆರಳಿ ಪರಿಶೀಲನೆ ನಡೆಸಿದಾಗ ಈಗ ಉತ್ಪಾದನೆಯನ್ನು ಸ್ಥಗಿತಗೊಳಿಸಿರುವುದು ಸ್ಪಷ್ಟವಾಗಿದೆ” ಎಂದು ಹೇಳಿದರು.