ರಾಷ್ಟ್ರ, ರಾಜ್ಯದ ಅಭಿವೃದ್ಧಿಯ ಹೊಣೆ, ಯುವಪೀಳಿಗೆಯ ಹೆಗಲ ಮೇಲಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್ ಹೇಳಿದರು.
ವಿಜಯನಗರ ಜಿಲ್ಲೆಯ ಕೂಡ್ಲಿಗಿ ಶಾಸಕ ಡಾ ಎನ್ ಟಿ ಶ್ರೀನಿವಾಸ್ ನೇತೃತ್ವದೊಂದಿಗೆ ನಗರದ ಜೂನಿಯರ್ ಕಾಲೇಜು ಆವರಣದಲ್ಲಿ ಸಂತೋಷ್ ಎಸ್ ಲಾಡ್ ಪೌಂಡೇಷನ್ ವತಿಯಿಂದ ಜರುಗಿದ ಬೃಹತ್ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದರು.
“ಯುವಜನರಿಗೆ ಮಾತ್ರ ದೇಶವನ್ನು ಕಟ್ಟುವಂತಹ ಮತ್ತು ನಿಭಾಯಿಸುವ ಹಾಗೂ ಅಭಿವೃದ್ಧಿಯತ್ತ ಕೊಂಡೊಯ್ಯುವಂಥ ಶಕ್ತಿಯಿದೆ. ಯುವಪೀಳಿಗೆ ದೇಶದ ಅಭಿವೃದ್ಧಿಗಾಗಿ, ಏಳಿಗೆಗಾಗಿ ಏನು ಮಾಡಬೇಕು? ಮತ್ತು ಹೇಗಿರಬೇಕು? ಎನ್ನುವ ಕುರಿತು ಚಿಂತನೆಗಳಾಗಬೇಕಿದೆ. ಆದ್ದರಿಂದ ವಾಟ್ಸ್ಯಾಪ್ ಯುನಿವರ್ಸಿಟಿಯಲ್ಲಿ ಬರುವಂತಹ ಮಾಹಿತಿಗಳ ಬಗ್ಗೆ, ಯುವಪೀಳಿಗೆ ಹೆಚ್ಚು ತಲೆ ಕೆಡಿಸಿಕೊಳ್ಳಬಾರದು” ಎಂದು ಸಲಹೆ ನೀಡಿದರು.
“ಅಮೂಲ್ಯವಾದ ಸಮಯವನ್ನು ಉತ್ತಮ ಜೀವನ ಭವಿಷ್ಯ ಕಟ್ಟಿಕೊಳ್ಳುವ ನಿಟ್ಟಿನಲ್ಲಿ, ದೇಶ ನಾಡಿನ ಅಭಿವೃದ್ಧಿಗೆ ಪೂರಕವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕಿದೆ” ಎಂದು ಕಿವುಮಾತು ಹೇಳಿದರು.
“ನಮ್ಮ ಸರ್ಕಾರದ 139 ಶಾಸಕರ ಪೈಕಿ, ರಾಜ್ಯ ಕಂಡ ಅತ್ಯಂತ ಕ್ರಿಯಾಶೀಲ, ಸರ್ವ ಸಮರ್ಥ ಸಮಗ್ರ ಸದೃಢ ಶಾಸಕರಲ್ಲಿ, ಕೂಡ್ಲಿಗಿ ಕ್ಷೇತ್ರದ ಡಾ ಎನ್ ಟಿ ಶ್ರೀನಿವಾಸ್ ಅವರೂ ಪ್ರಮುಖರಾಗಿದ್ದಾರೆ. ಜನಪರ ಕಾಳಜಿಯ, ಸರಳ ಸಜ್ಜನಿಕೆಯ ಶಾಸಕರನ್ನು ಹೊಂದಿರುವುದಕ್ಕೆ ಕೂಡ್ಲಿಗಿ ಕ್ಷೇತ್ರದ ಜನತೆ ಹೆಮ್ಮೆ ಪಡಬೇಕಿದೆ” ಎಂದರು.
“ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಹಾಗೂ ಸಚಿವರನ್ನು ಒಳಗೊಂಡಂತೆ ಎಲ್ಲರೂ ಕೂಡ ಶಾಸಕ ಡಾ ಎನ್ ಟಿ ಶ್ರೀನಿವಾಸ್ ಅವರ ಪರವಾಗಿ ಗಟ್ಟಿಯಾಗಿ ನಿಂತಿದ್ದೇವೆ. ನಾನು ಮತ್ತು ನನ್ನ ಸ್ನೇಹಿತ ಡಾ ಎನ್ ಟಿ ಶ್ರೀನಿವಾಸ್ ಈ ನೆಲದ ಮೇಲೆ ಇರುವವರೆಗೂ, ಸ್ನೇಹಿತರಾಗೇ ಬಾಂಧವ್ಯದಿಂದ ಕೂಡಿರುತ್ತೇವೆ. ನಾವೆಲ್ಲರೂ ಒಗ್ಗೂಡಿ ಕ್ಷೇತ್ರಗಳ ಸರ್ವತೋಮುಖ ಅಭಿವೃದ್ಧಿಗೆ ಪರಸ್ಪರ, ಸಹಕಾರದೊಂದಿಗೆ ಪ್ರಾಮಾಣಿಕವಾಗಿ ಜನರ ಸೇವೆ ಮಾಡುತ್ತೇವೆ. ನಾನು ನನ್ನ ಸ್ನೇಹಿತನ ಬಗ್ಗೆ ಹೊಗಳಿಕೆ ಮಾತು ಮಾತನಾಡುತ್ತಿಲ್ಲ. ಅಪ್ಪಟ ಸತ್ಯವನ್ನೇ ಹೇಳುತ್ತೇನೆ” ಎಂದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕಳಪೆ ಗುಣಮಟ್ಟದ ಔಷಧಿಗಳ ಮೇಲೆ ಗಮನ ಹರಿಸಲಾಗುತ್ತಿದೆ: ಸಚಿವ ದಿನೇಶ್ ಗುಂಡೂರಾವ್
ವೇದಿಕೆಯಲ್ಲಿ ಲೋಕಸಭಾ ಸದಸ್ಯರಾದ ಈ ತುಕಾರಾಂ, ಸಮಾಜ ಸೇವಕ ಎನ್ ಟಿ ತಮ್ಮಣ್ಣ, ಹೊಸಹಳ್ಳಿ ಮತ್ತು ಗುಡೇಕೋಟೆ, ಕೂಡ್ಲಿಗಿ ಬ್ಲಾಕ್ ಅಧ್ಯಕ್ಷರು, ಪಟ್ಟಣ ಪಂಚಾಯಿತಿ ಅಧ್ಯಕ್ಷ ಕಾವಲ್ಲಿ ಶಿವಪ್ಪನಾಯಕ, ಪಪಂ ಸದಸ್ಯರು, ವಿವಿಧ ಜನಪ್ರತಿನಿಧಿಗಳು, ಸಂಡೂರು ಪುರಸಭೆ ಅಧ್ಯಕ್ಷರು ಹಾಗೂ ಪ್ರಮುಖ ಮುಖಂಡರು ಇದ್ದರು.
ಉದ್ಯೋಗ ಮೇಳದಲ್ಲಿ ಸಂತೋಷ್ ಎಸ್ ಲಾಡ್ ಅವರ ಫೌಂಡೇಷನ್‌ನ ಸಕಲ ಸಿಬ್ಬಂದಿ ಹಾಗೂ ಶಾಸಕ ಡಾ ಎನ್ ಟಿ ಶ್ರೀನಿವಾಸ್ ಅವರ ಅಭಿಮಾನಿ ಬಳಗದವರು, ಡಿವೈಎಸ್‌ಪಿ ಮಲ್ಲೇಶಪ್ಪ, ಸಿಪಿಐ ಸುರೇಶ ವಿ ತಳವಾರ್, ಪಿಎಸ್‌ಐ ಸಿ ಪ್ರಕಾಶ್, ತಮ್ಮ ಸಿಬ್ಬಂದಿಯವರೊಂದಿಗೆ ಉಪಸ್ಥಿತರಿದ್ದು, ಮೇಳದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ತಮ್ಮ ಕರ್ತವ್ಯ ನಿಭಾಯಿಸಿದರು. ಉದ್ಯೋಗ ಮೇಳದಲ್ಲಿ ತಾಲೂಕು ಹಾಗೂ ವಿವಿಧೆಡೆಗಳಿಂದ ಅಗಮಿಸಿದ್ದ, ಸಾವಿರಾರು ಉದ್ಯೋಗಾಕಾಂಕ್ಷಿಗಳು ಮೇಳದಲ್ಲಿ ಭಾಗವಹಿಸಿದ್ದರು.
ವರದಿ: ವಿ ಜಿ ವೃಷಭೇಂದ್ರ ಕೂಡ್ಲಿಗಿ