- 2020ರ ಜನವರಿಯಲ್ಲಿ ನಡೆದಿದ್ದ ನಾಟಕ ಪ್ರದರ್ಶನ
- ಸಿಎಎ ವಿರೋಧಿ ಕಥಾವಸ್ತು ಹೊಂದಿದ್ದ ನಾಟಕ
ನಾಟಕ ಪ್ರದರ್ಶನವೊಂದರಲ್ಲಿ ಪ್ರದಾನಿ ಮೋದಿ ಮತ್ತು ಕೇಂದ್ರ ಸರ್ಕಾರವನ್ನು ಟೀಕಿಸಿದ್ದ ಆರೋಪದ ಮೇಲೆ ಬೀದರ್‌ನ ಶಾಹೀನ್ ಶಾಲೆಯ ವಿರುದ್ಧ ದಾಖಲಿಸಲಾಗಿದ್ದ ದೇಶದ್ರೋಹ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್‌ನ ಕಲಬುರಗಿ ಪೀಠ ವಜಾಗೊಳಿಸಿದೆ.
2020ರ ಜನವರಿಯಲ್ಲಿ ನಡೆದ ಶಾಲೆಯ ಕಾರ್ಯಕ್ರಮದಲ್ಲಿ 4ನೇ ತರಗತಿಯ ವಿದ್ಯಾರ್ಥಿಗಳು ಸಿಎಎ ವಿರುದ್ಧದ ಕಥೆಯುಳ್ಳ ನಾಟಕವನ್ನು ಪ್ರದರ್ಶನ ಮಾಡಿದ್ದರು. ನಾಟಕದಲ್ಲಿ ಮೋದಿ ವಿರುದ್ಧ ಮತ್ತು ಮತೀಯ ನಿದಂನೆಯ ಪದಗಳನ್ನು ಬಳಸಲಾಗಿದೆ ಎಂದು ಹಿಂದುತ್ವವಾದಿ ಮುಖಂಡ ನೀಲೇಶ್ ರಕ್ಷಲಾ ಎಂಬಾತ ದೇಶದ್ರೋಹ ದೂರು ದಾಖಲಿಸಿದ್ದರು.
ಅವರ ದೂರಿನ ಆಧಾರದ ಮೇಲೆ ಶಾಲೆಯ ಆಡಳಿತ ಮಂಡಳಿ ವಿರುದ್ಧ ಐಪಿಸಿ ಸೆಕ್ಷನ್ 504, 505(2), 124(ಎ), 153(ಎ) ಅಡಿಯಲ್ಲಿ ಬೀದರ್ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಪ್ರಕರಣ ನ್ಯಾಯಲಯದ ಮುಂದೆ ಬಂದಿತ್ತು. ಶಾಲೆಯ ವಿರುದ್ಧದ ಆರೋಪವನ್ನು ಆಡಳಿತ ಮಂಡಳಿ ನಿರಾಕರಿಸಿತ್ತು. ಶಾಲೆಯ ಮಕ್ಕಳನ್ನು ಪೊಲೀಸರು ದೇಶ ವಿರೋಧಿಗಳಂತೆ ನೋಡುತ್ತಿದ್ದಾರೆ. ಪ್ರತಿದಿನ ಶಾಲೆಗೆ ಬಂದು ಪರಿಶೀಲನೆ ನಡೆಸಿ, ಮಕ್ಕಳಲ್ಲಿ ಭಯ ಉಂಟು ಮಾಡುತ್ತಿದ್ದಾರೆ ಎಂದು ನ್ಯಾಯಾಲಯದಲ್ಲಿ ಹೇಳಿತ್ತು.
ಈ ಸುದ್ದಿ ಓದಿದ್ದೀರಾ?: ಕೋಲಾರ | ಸಾಲ ಮರುಪಾವತಿಗೆ ತೆರಳಿದ್ದ ಅಧಿಕಾರಿಗಳಿಗೆ ಮಹಿಳೆಯರ ತರಾಟೆ
ಒಂಬತ್ತು ವರ್ಷದಷ್ಟು ಕಿರಿಯ ಮಕ್ಕಳು ಸೇರಿದಂತೆ 85 ಮಕ್ಕಳು ಪೊಲೀಸ್ ವಿಚಾರಣೆ ಎದುರಿಸಬೇಕಾಯಿತು ಇದು ಮಕ್ಕಳ ಮನಃಸ್ಥಿತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ವಾದಿಸಿತ್ತು.
2021ರ ಆಗಸ್ಟ್ 17ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್‌ನ ಬೆಂಗಳೂರು ಪೀಠ, “ಮಕ್ಕಳನ್ನು ವಿಚಾರಣೆ ನಡೆಸುವ ವೇಳೆ ಪೊಲೀಸರು ಸಶಸ್ತ್ರಗಳೊಂದಿಗೆ ಸ್ಥಳದಲ್ಲಿರುವುದು ಬಾಲ ನ್ಯಾಯ ಕಾಯಿದೆ 2015 ಮತ್ತು ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಿದೆ” ಎಂದು ಹೇಳಿತ್ತು.
ಬಳಿಕ, ಪ್ರಕರಣವು ಕಲಬುರಗಿ ಪೀಠದ ಮುಂದೆ ಬಂದಿತ್ತು. ಇದೀಗ, ಕಲಬುರಗಿ ಪೀಠವು ವಾದ-ಪ್ರತಿವಾದಗಳನ್ನು ಆಲಿಸಿದ್ದು, ಪ್ರಕರಣವನ್ನು ವಜಾಗೊಳಿಸಿದೆ.