ಹರಿಹರದಲ್ಲಿ ಅವಧಿ ಮುಗಿದಿರುವ ಕ್ರೀಡಾ ಇಲಾಖೆ ಮಳಿಗೆಗಳ ಮರುಹರಾಜಿಗೆ ಕಳೆದೊಂದು ವರ್ಷದಿಂದ ಹೋರಾಟ ನೆಡೆಸುತ್ತಿರುವ ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ಜಿಲ್ಲಾಡಳಿತದ ಗಮನ ಸೆಳೆದು ಒತ್ತಡ ಹೇರಲು ದಾವಣಗೆರೆ ನಗರದ ಡಾ.ಬಿಆರ್ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಮೆ ಬಳಿ ಕುಳಿತು ಬೆಳಿಗ್ಗೆ 11ರಿಂದ ಸಂಜೆವರೆಗೂ ಹೋರಾಟ ನೆಡೆಸಿದರು.
ಹರಿಹರ ನಗರಸಭೆ ವ್ಯಾಪ್ತಿಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧೀನದಲ್ಲಿ ಒಟ್ಟು 50 ಮಳಿಗೆಗಳು ಇದ್ದು, ಸದರಿ ಮಳಿಗೆಗಳ ಬಾಡಿಗೆ ಕರಾರು ಅವಧಿಯು 2019 ರಲ್ಲೇ ಪೂರ್ಣಗೊಂಡಿದೆ. ಕೆಲ ಬಾಡಿಗೆದಾರರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇನ್ನುಳಿದ ಮಳಿಗೆ ಬಾಡಿಗೆದಾರರು ಪರವಾನಿಗೆ ಪಡೆಯದೆ ವ್ಯಾಪಾರ ಮಾಡಿಕೊಂಡು ಬರುತ್ತಿದ್ದಾರೆ. ಹಾಗೂ ಅನಧಿಕೃತವಾಗಿ ಇಲ್ಲಿಯವರೆಗೆ ನಗರಸಭೆ ವತಿಯಿಂದ ಪರವಾನಿಗೆ ನವೀಕರಿಸದೇ ಸರ್ಕಾರಕ್ಕೆ ಅಪಾರ ನಷ್ಟವಾಗಿದ್ದು, ಕಾನೂನು ಬಾಹಿರವಾಗಿ ಬಹುತೇಕ ಒಳಬಾಡಿಗೆ ಕೊಟ್ಟು ಬೇರೆ ಮಳಿಗೆ ಬಾಡಿಗೆದಾರರು ಉದ್ದಿಮೆಯನ್ನು ನಡೆಸುತ್ತಿರುವುದು ಕಾನೂನು ಬಾಹಿರ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಸಂಬಂಧಪಟ್ಟ ಎಲ್ಲಾ ಇಲಾಖೆ ಅಧಿಕಾರಿಗಳಿಗೂ, ಸರ್ಕಾರಕ್ಕೂ ಹಲವಾರು ಬಾರಿ ಮನವಿ ಸಲ್ಲಿಸದರೂ ನಿರ್ಲಕ್ಷ್ಯ ತೋರಿದ್ದಾರೆ. ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ವಿಫಲವಾಗಿದ್ದು , ಇದರಿಂದ ಆರ್ಥಿಕವಾಗಿ ಹಿಂದುಳಿದ ಬಡ ಸಾರ್ವಜನಿಕರು ಉದ್ಯೋಗ ವಂಚಿತರಾಗಿದ್ದಾರೆ. ಈ ಕೂಡಲೇ ಮರು ಹರಾಜು ಪ್ರಕ್ರಿಯೆ ಕೈಗೊಳ್ಳಬೇಕೆಂದು ಕಳೆದ 141 ದಿನಗಳಿಂದ ನಿರಂತರವಾಗಿ ಹರಿಹರ ನಗರದಲ್ಲಿ ಧರಣಿ ನಡೆಸುತ್ತಿದ್ದು, ಇದುವರೆಗೂ ಸಂಬಂಧಪಟ್ಟ ಇಲಾಖಾಧಿಕಾರಿಗಳು ಯಾವುದೇ ಮಳಿಗೆಗಳ ಹರಾಜು ಪ್ರಕ್ರಿಯೆ ಕೈಗೊಳ್ಳದೇ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿದರು.
ಸಂಘಟನೆಯ ಮುಖಂಡ ಗೋವಿಂದ ಮಾತನಾಡಿ, “ಹರಿಹರ ತಾಲೂಕು ಕ್ರೀಡಾಂಗಣದ 50 ವಾಣಿಜ್ಯ ಮಳಿಗೆಗಳ ಕರಾರು ಅವಧಿ ಮುಗಿದು ಐದು ವರ್ಷವಾದರೂ ಇಲ್ಲಿವರೆಗೂ ಮರುಹರಾಜು ನಡೆಸಿಲ್ಲ. ಕಳೆದ 141 ದಿನಗಳವರೆಗೂ ನಮ್ಮ ಜಯಕರ್ನಾಟಕ ಸಂಘಟನೆ ವತಿಯಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಅಹಿಂಸಾತ್ಮಕ ಧರಣಿ ಸತ್ಯಾಗ್ರಹ ಹಾಗೂ ಪ್ರತಿಭಟನೆ ನಡೆಸುತ್ತಿದ್ದೇವೆ. ಆದರೂ ವಾಣಿಜ್ಯ ಮಳಿಗೆಗಳನ್ನು ಮರು ಹರಾಜು ನಡೆಸುವಲ್ಲಿ ಜಿಲ್ಲಾ ಆಡಳಿತ ಹಾಗೂ ಕ್ರೀಡಾ ಇಲಾಖೆ ಅಧಿಕಾರಿಗಳು ವಿಪುಲವಾಗಿವೆ. ಈ ಮಳಿಗೆಗಳ ಮರು ಹರಾಜಿನಿಂದ ಬಡ ಹಿಂದುಳಿದ ವರ್ಗಗಳ ಜನರಿಗೆ, ನಿರುದ್ಯೋಗಿಗಳಿಗೆ ಅನುಕೂಲವಾಗಲಿದೆ. ಇದುವರೆಗೂ ನ್ಯಾಯ ದೊರಕದ ಕಾರಣ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಪ್ರತಿಮೆ ಬಳಿ ಹರಿಹರ, ದಾವಣಗೆರೆ ಆಡಳಿತದ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದು ಈ ಕೂಡಲೇ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ನಗರದಲ್ಲಿ ಪೊಲೀಸ್ ಇಲಾಖೆಯ ಸಂಚಾರ ಮತ್ತು ಹೆಲ್ಮೆಟ್ ಜಾಗೃತಿ ಅಭಿಯಾನ.
ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷ ಎಸ್ ಗೋವಿಂದ್, ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಸಿಎಚ್, ಸಂಘಟನಾ ಕಾರ್ಯದರ್ಶಿ ಮಧು ಎಮ್, ಮುಖಂಡರಾದ ಸಾಗರ್, ವಿಜಯ್, ಸಂಜೀವಪ್ಪ ಪಾಲ್ಗೊಂಡಿದ್ದರು.