ಈ ದಿನ ಸಂಪಾದಕೀಯ | ಸುಭದ್ರ ಸರ್ಕಾರವನ್ನು ಅಭದ್ರಗೊಳಿಸುತ್ತಿರುವ ಕಾಂಗ್ರೆಸ್ಸಿಗರು

Date:

Advertisements
ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಯಾವ ರೀತಿ ಅಧಿಕಾರ ಹಂಚಿಕೆಯಾಗಿದೆ, ಏನು ಮಾತುಕತೆಯಾಗಿದೆ ಎಂದು ಇಬ್ಬರೂ ಹೇಳುತ್ತಿಲ್ಲ. ಬದಲಿಗೆ, ಇಬ್ಬರೂ ತಮ್ಮ ತಮ್ಮ ಆಪ್ತರನ್ನು ಎತ್ತಿಕಟ್ಟಿ ತಮಾಷೆ ನೋಡುತ್ತಿದ್ದಾರೆ.

ಕರ್ನಾಟಕ ಕಾಂಗ್ರೆಸ್ ಪಕ್ಷಕ್ಕೆ ಒಂದು ಕರಾಳ ಇತಿಹಾಸವಿದೆ. ಆ ಪಕ್ಷಕ್ಕೆ ಬಹುಮತ ಬಂದಾಗಲೆಲ್ಲ, ತನ್ನ ವೈಫಲ್ಯಗಳ ಭಾರಕ್ಕೆ ತಾನೇ ಬಲಿಯಾಗಿದೆ.

ಬಹುಮತ ಬಂದಾಗಲೆಲ್ಲ, ಪುಡಿ ಪುಢಾರಿಗಳಿಗೆ ಅಧಿಕಾರದ ಮದವೇರುತ್ತದೆ. ಸನ್ಮಾನ, ಮೆರವಣಿಗೆ, ಮೆರೆದಾಟ ಮೇರೆ ಮೀರುತ್ತದೆ. ಅಧಿಕಾರಕ್ಕೇರಿದವರ ದರ್ಪ-ದುರಹಂಕಾರ ದುಪ್ಪಟ್ಟಾಗುತ್ತದೆ. ಸರ್ಕಾರಿ ಕಾರ್ಯಕ್ರಮಗಳು ಜನರಿಗೆ ತಲುಪದೆ; ಕಚೇರಿಗಳಲ್ಲಿ ಲಂಚ ರುಷುವತ್ತಿಲ್ಲದೆ ಕೆಲಸಗಳಾಗದೆ; ಆಯ್ಕೆ ಮಾಡಿದ ಮತದಾರರಿಗೆ ಜಿಗುಪ್ಸೆ ಹುಟ್ಟಿಸುತ್ತದೆ. ಕೆಟ್ಟ ಆಡಳಿತದಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಇದು ಬಹುಮತ ಪಡೆದ ಕಾಂಗ್ರೆಸ್ ಪಕ್ಷದ ರೋಗ.

ರಾಜಕಾರಣದಲ್ಲಿ ಪ್ರಾಮಾಣಿಕರನ್ನು ಹುಡುಕುವುದು ಕಷ್ಟ. ಇದ್ದುದರಲ್ಲಿಯೇ ಪ್ರಾಮಾಣಿಕ ಎಂದು ಹೆಸರು ಪಡೆದಿದ್ದ ವೀರೇಂದ್ರ ಪಾಟೀಲ್, 1989ರಲ್ಲಿ ಕಾಂಗ್ರೆಸ್ ಪಕ್ಷದ ನೇತೃತ್ವ ವಹಿಸಿದ್ದರು. ಆ ಸಂದರ್ಭದಲ್ಲಿ ಕಾಂಗ್ರೆಸ್ 178 ಸ್ಥಾನಗಳ ಅಭೂತಪೂರ್ವ ಬಹುಮತ ಗಳಿಸಿತ್ತು. ಅದು ಕಾಂಗ್ರೆಸ್ ಪಕ್ಷದ ಅಲ್ಲಿಯವರೆಗಿನ ಅತಿದೊಡ್ಡ ಗೆಲುವಾಗಿತ್ತು. ಪಕ್ಷವನ್ನು ಮುನ್ನಡೆಸಿದ್ದ ವೀರೇಂದ್ರ ಪಾಟೀಲ್ ಮುಖ್ಯಮಂತ್ರಿಗಳಾದರು.

Advertisements

1985ರಿಂದ 89ರವರೆಗೆ ಅಧಿಕಾರದಲ್ಲಿದ್ದ ಜನತಾ ಪಕ್ಷದ ಸರ್ಕಾರದಲ್ಲಿ, ರಾಮಕೃಷ್ಣ ಹೆಗಡೆ ಮತ್ತು ಎಚ್.ಡಿ. ದೇವೇಗೌಡ ಎಂಬ ಇಬ್ಬರು ಬಲಿಷ್ಠ ನಾಯಕರ ನಡುವಿನ ಕುರ್ಚಿ ಕಿತ್ತಾಟ ಅತಿಗೆ ಹೋಗಿತ್ತು. ದುರಾಡಳಿತದಿಂದ ಖಜಾನೆ ಖಾಲಿಯಾಗಿತ್ತು. ಇದನ್ನು ಮನಗಂಡ ಮುಖ್ಯಮಂತ್ರಿ ವೀರೇಂದ್ರ ಪಾಟೀಲರು, ರಾಜ್ಯದ ಆರ್ಥಿಕ ಸ್ಥಿತಿ ಸುಧಾರಣೆಗೆ ಎಂ. ರಾಜಶೇಖರಮೂರ್ತಿಯವರನ್ನು ಹಣಕಾಸು ಸಚಿವರನ್ನಾಗಿ ಮಾಡಿದ್ದರು. ಅವರು ರಾಜ್ಯದ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ತೆರಿಗೆ ಮತ್ತು ಲಿಕ್ಕರ್ ಲಾಬಿಯತ್ತ ಗಮನ ಹರಿಸಿ, ಸರಿದಾರಿಗೆ ತಂದಿದ್ದರು.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಮಣಿಪುರ ರಾಜ್ಯಪಾಲರ ಆದೇಶ ನಾಗರಿಕರು ಪಾಲಿಸಲಿ

ಇನ್ನೇನು ಸರ್ಕಾರ ಸುಭದ್ರವಾಗಿ, ಉತ್ತಮ ಆಡಳಿತದ ಹಾದಿಗೆ ಹೊರಳಲಿದೆ ಎನ್ನುವಾಗ, ಕೇವಲ 310 ದಿನಗಳಿಗೇ ಮುಖ್ಯಮಂತ್ರಿ ಕುರ್ಚಿಯಿಂದ ವೀರೇಂದ್ರ ಪಾಟೀಲರನ್ನು ಕೆಳಗಿಳಿಸಿದ್ದರು. ಆನಂತರ, ಲಕೋಟೆ ಮೂಲಕ ಎಸ್. ಬಂಗಾರಪ್ಪನವರನ್ನು ಹೊಸ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದ್ದರು. ಅವರನ್ನೂ ಕೆಳಗಿಳಿಸಿ ಎಂ. ವೀರಪ್ಪ ಮೊಯ್ಲಿಯವರು ಮುಖ್ಯಮಂತ್ರಿಯಾಗುವ ಮೂಲಕ, ಒಂದೇ ಅವಧಿಗೆ ಕರ್ನಾಟಕದ ಮತದಾರರು ಮೂವರು ಮುಖ್ಯಮಂತ್ರಿಗಳನ್ನು ಕಾಣುವ ‘ಭಾಗ್ಯ’ ಕರುಣಿಸಿದ್ದರು.

ಇದರ ಪರಿಣಾಮವಾಗಿ 1994ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ, ಎರಡಂಕಿಗೆ ಕುಸಿಯಿತು. ಕೇವಲ 36 ಸ್ಥಾನಗಳನ್ನು ಗೆಲ್ಲುವ ಮೂಲಕ ಹೀನಾಯ ಸೋಲು ಕಂಡಿತ್ತು. ಕಾಂಗ್ರೆಸ್ ಪಕ್ಷದ ನಾಯಕರಿಗೆ ಇದು ಪಾಠವಾಗಬೇಕಿತ್ತು. ಆದರೆ ಅವರು ಶಾಲೆಗೆ ಹೋಗುವ ಮಕ್ಕಳಲ್ಲವಲ್ಲ? ಹಾಗಾಗಿ ಪಾಠ ಪುಸ್ತಕದಲ್ಲಿಯೇ ಉಳಿಯಿತು. ಹಳೆ ರೋಗ ಅನವರತವಾಯಿತು.

ಇದಾದ 10 ವರ್ಷಕ್ಕೆ, 1999ರಲ್ಲಿ ಎಸ್.ಎಂ.ಕೃಷ್ಣರ ಸಾರಥ್ಯದಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ 132 ಸ್ಥಾನಗಳ ಬಹುಮತ ಪಡೆಯಿತು. ಮರಳಿ ಅಧಿಕಾರಕ್ಕೇರಿತು. ಮುಖ್ಯಮಂತ್ರಿಯಾದ ಕೃಷ್ಣರು, ಡಿ.ಕೆ. ಶಿವಕುಮಾರ್ ಅವರನ್ನು ಮುಂದಿಟ್ಟುಕೊಂಡು, ಹಿರಿಯ ಕಾಂಗ್ರೆಸ್ ನಾಯಕರನ್ನು ಮುಗಿಸಲು ಹವಣಿಸಿದರು. ಇದರ ಫಲವಾಗಿ, 2004ರ ಚುನಾವಣೆಯಲ್ಲಿ ಪಕ್ಷ 65 ಸ್ಥಾನಕ್ಕಿಳಿಯಿತು.

2023ರ ವಿಧಾನಸಭಾ ಚುನಾವಣೆಯಲ್ಲಿ, ಫ್ಯಾಸಿಸ್ಟ್ ಬಿಜೆಪಿ ಬೇಡವೆಂಬ ತೀರ್ಮಾನಕ್ಕೆ ಬಂದ ಕರ್ನಾಟಕದ ಪ್ರಜ್ಞಾವಂತ ಮತದಾರರು, ಕಾಂಗ್ರೆಸ್ ಪಕ್ಷವನ್ನು ಆಯ್ಕೆ ಮಾಡಿಕೊಂಡಿದ್ದರು. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ನಾಯಕತ್ವವನ್ನು ಒಪ್ಪಿಕೊಂಡಿದ್ದರು. 136 ಪ್ಲಸ್ 2, 138 ಸ್ಥಾನಗಳನ್ನು ಗೆಲ್ಲಿಸುವ ಮೂಲಕ ಭಾರೀ ಬಹುಮತವನ್ನು ಕೊಟ್ಟಿದ್ದರು. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ, ಡಿ.ಕೆ. ಶಿವಕುಮಾರ್ ಉಪ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದಾಗ; ಆಶ್ವಾಸನೆ ನೀಡಿದ್ದ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಾಗ ನಾಡಿನ ಜನ, ತಮ್ಮ ಆಯ್ಕೆ ತಪ್ಪಾಗಲಿಲ್ಲವೆಂದು ಭಾವಿಸಿದ್ದರು.

ಆದರೆ, ಮತದಾರರ ಆಯ್ಕೆಯನ್ನು ಅಪಮಾನಿಸುವಂತೆ, ಸರ್ಕಾರ ಕೇವಲ ಎರಡು ವರ್ಷ ಮುಗಿಸುವ ಮುನ್ನವೇ ಕಾಂಗ್ರೆಸ್ ನಾಯಕರು ಕುರ್ಚಿ ಕಿತ್ತಾಟಕ್ಕಿಳಿದಿದ್ದಾರೆ. ಅಧಿಕಾರ ಹಂಚಿಕೆ, ಐದು ವರ್ಷ ಸಿದ್ದರಾಮಯ್ಯನವರೇ ಸಿಎಂ, ಒಬ್ಬರಿಗೆ ಒಂದೇ ಹುದ್ದೆಗಳಂತಹ ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗುವ ವಿಚಾರಗಳನ್ನು ಹಾದಿ ಬೀದಿಯಲ್ಲಿ ಆಡಿ, ರಾಡಿ ಎಬ್ಬಿಸಿದ್ದಾರೆ.

ಅಸಲಿಗೆ, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಯಾವ ರೀತಿ ಅಧಿಕಾರ ಹಂಚಿಕೆಯಾಗಿದೆ, ಏನು ಮಾತುಕತೆಯಾಗಿದೆ ಎಂದು ಇಬ್ಬರೂ ಹೇಳುತ್ತಿಲ್ಲ. ಬದಲಿಗೆ, ಇಬ್ಬರೂ ತಮ್ಮ ತಮ್ಮ ಆಪ್ತರನ್ನು ಎತ್ತಿಕಟ್ಟಿ ತಮಾಷೆ ನೋಡುತ್ತಿದ್ದಾರೆ. ಮಾಧ್ಯಮಗಳು ಊಹಾತ್ಮಕ ಸುದ್ದಿಗಳನ್ನು ಸೃಷ್ಟಿಸುತ್ತ ಜನರನ್ನು ಗೊಂದಲಗೊಳಿಸುತ್ತಿವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು, ಎರಡೆರಡು ಸಲ ಖಡಕ್‌ ವಾರ್ನಿಂಗ್‌ ಕೊಟ್ಟು ‘ಬಾಯಿ ಮುಚ್ಕೊಂಡು ಕೆಲಸ ಮಾಡಿ’ ಎಂದರೂ ಕೇಳದಂತಾಗಿದ್ದಾರೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಬೆಂಗಳೂರು ಟ್ರಾಫಿಕ್‌ ಸಮಸ್ಯೆ ಪರಿಹಾರಕ್ಕೆ ದೇವರು ಬೇಕಿಲ್ಲ – ಇಚ್ಛಾಶಕ್ತಿ ಸಾಕು

ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರ ಮಾತನ್ನು ಕೇಳದಿದ್ದರೂ ಪರವಾಗಿಲ್ಲ, ಉತ್ತಮ ಆಡಳಿತವನ್ನಾದರೂ ನೀಡುತ್ತಿದ್ದಾರೆಯೇ ಎಂದರೆ- ಜನ ಕೊಟ್ಟ ಅಧಿಕಾರವನ್ನು ಜನಪರ ಕಾರ್ಯಗಳಿಗಾಗಿ ವಿನಿಯೋಗಿಸದೆ, ಸಿಕ್ಕ ಅವಕಾಶವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ಬುದ್ಧಿ-ಶಕ್ತಿಯನ್ನು ಸದ್ವಿನಿಯೋಗಿಸದೆ, ಚಿಲ್ಲರೆ ಕೆಲಸಗಳಿಗೆ ವ್ಯಯ ಮಾಡುತ್ತಿದ್ದಾರೆ. ಕೆಲವು ಸಮರ್ಥ ಸಚಿವರಿದ್ದರೂ, ಒಳಜಗಳದಿಂದಾಗಿ ಅವರ ಸಾಧನೆಗೆ ಪಕ್ಷದವರೇ ಮಸಿ ಬಳಿದಿದ್ದಾರೆ. ಐದು ಗ್ಯಾರಂಟಿಗಳು ನಾಡಿನ ಆರ್ಥಿಕತೆಗೆ ಬಲ ತುಂಬಿದ್ದರೂ, ಸರ್ಕಾರದ ಸಾಧನೆ ಎಂದು ಎದೆಯುಬ್ಬಿಸಿ ಹೇಳಿಕೊಳ್ಳಲಾರದ ಎಡವಟ್ಟುಗಳಾಗಿದ್ದಾರೆ.

ಮತ್ತೊಂದು ಕಡೆ, ಬೇಕಾದ ಜಾಗಕ್ಕೆ ವರ್ಗವಾಗಿ ಹೋಗಲು ಅಧಿಕಾರಿಗಳ ನಡುವೆ ಹರಾಜು ಪ್ರಕ್ರಿಯೆ ಚಾಲ್ತಿಗೆ ಬಂದಿದೆ. ಬಿಜೆಪಿಯ 40% ಕಮಿಷನ್, ಕಾಂಗ್ರೆಸ್‌ ಆಡಳಿತದಲ್ಲಿ 60% ಆಗಿದೆ ಎಂದು ವಿರೋಧ ಪಕ್ಷವಲ್ಲ, ಕಾಂಗ್ರೆಸ್ಸಿಗರೇ ಮಾತನಾಡಿಕೊಳ್ಳುತ್ತಿದ್ದಾರೆ. ಹಣ ಕೊಟ್ಟು ಆಯಕಟ್ಟಿನ ಜಾಗಕ್ಕೆ ಬಂದ ಅಧಿಕಾರಿಗಳು ಜನಪೀಡಕರಾಗಿದ್ದಾರೆ. ಆಡಳಿತ ಹಳಿತಪ್ಪಿಹೋಗಿದೆ. ಸುಭದ್ರ ಸರ್ಕಾರವನ್ನು ಕಾಂಗ್ರೆಸ್ಸಿಗರೇ ಅಭದ್ರ ಸ್ಥಿತಿಗೆ ದೂಡುತ್ತಿದ್ದಾರೆ.

ಕಾಂಗ್ರೆಸ್ಸಿನ ಈ ‘ಬಹುಮತ’ದ ರೋಗಕ್ಕೆ ಮದ್ದಿದೆಯೇ?

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X