ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಲೋಕಸಭಾ ಕ್ಷೇತ್ರಗಳ ಪುನರ್‌ವಿಂಗಡಣೆಯ ಪರಿಣಾಮದ ಕುರಿತು ಚರ್ಚಿಸಲು ಮಾರ್ಚ್ 5ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದ್ದಾರೆ.
ಸಭೆಗೆ 40 ನೋಂದಾಯಿತ ರಾಜಕೀಯ ಪಕ್ಷಗಳನ್ನು ಆಹ್ವಾನಿಸಲಾಗಿದೆ. ತಮಿಳುನಾಡಿನ ಎಲ್ಲ ರಾಜಕೀಯ ಪಕ್ಷಗಳು ಈ ಸಭೆಯಲ್ಲಿ ಭಾಗವಹಿಸಿ ಒಗ್ಗಟ್ಟಿನಿಂದ ಧ್ವನಿ ಎತ್ತುವಂತೆ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಮನವಿ ಮಾಡಿದ್ದಾರೆ.
ಸಂಪುಟ ಸಭೆ ಬಳಿಕ ಮಾತನಾಡಿದ ಸಿಎಂ ಸ್ಟಾಲಿನ್, ತಮಿಳುನಾಡಿನಲ್ಲಿ ಕುಟುಂಬ ಯೋಜನೆಗಳ ಯಶಸ್ವಿ ಅನುಷ್ಠಾನದಿಂದ ರಾಜ್ಯವನ್ನು ಅನಾನುಕೂಲಕ್ಕೆ ತಳ್ಳಿದೆ. ಜನಗಣತಿಯ ಆಧಾರದ ಮೇಲೆ ಕ್ಷೇತ್ರಗಳ ಪುನರ್‌ವಿಂಗಡಣೆ ಜಾರಿಗೊಳಿಸಿದರೆ ನಮ್ಮ ಜನಸಂಖ್ಯೆ ಕಡಿಮೆ ಇರುವುದರಿಂದ ತಮಿಳುನಾಡು 8 ಕ್ಷೇತ್ರಗಳನ್ನು ಕಳೆದುಕೊಳ್ಳಲಿದೆ. ಇದರಿಂದ ಸಂಸತ್ತಿನಲ್ಲಿ ತಮಿಳುನಾಡು ಪ್ರಾತಿನಿಧ್ಯ ಕಳೆದುಕೊಳ್ಳಲಿದೆ ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸುಭದ್ರ ಸರ್ಕಾರವನ್ನು ಅಭದ್ರಗೊಳಿಸುತ್ತಿರುವ ಕಾಂಗ್ರೆಸ್ಸಿಗರು
ಪ್ರಸ್ತುತ ತಮಿಳುನಾಡು 39 ಸಂಸದರನ್ನು ಹೊಂದಿದೆ ಮತ್ತು ಜನಗಣತಿಯ ಆಧಾರದಲ್ಲಿ ಕ್ಷೇತ್ರಗಳ ಪುನರ್‌ವಿಂಗಡಣೆಯಾದರೆ ಸಂಸದರ ಸಂಖ್ಯೆ 31ಕ್ಕೆ ಇಳಿಯಬಹುದು. ಕ್ಷೇತ್ರ ಪುನರ್‌ವಿಂಗಡಣೆಯಲ್ಲದೆ ತ್ರಿಭಾಷಾ ನೀತಿ, ಎನ್ಇಪಿಯನ್ನು ವಿರೋಧಿಸಲು ಸಿದ್ಧವಾಗಿದೆ ಎಂದು ಪ್ರತಿಪಾದಿಸಿದ ಸ್ಟಾಲಿನ್, ಮತ್ತೊಂದು ಭಾಷಾ ಯುದ್ಧವನ್ನು ಪುನರುಜ್ಜೀವನಗೊಳಿಸುವ ಚಟುವಟಿಕೆಗಳಲ್ಲಿ ಕೇಂದ್ರ ಸರಕಾರ ತೊಡಗಿಸಿಕೊಂಡಿದೆ ಎಂದು ಆರೋಪಿಸಿದರು.
ಕ್ಷೇತ್ರಗಳ ಪುನರ್‌ವಿಂಗಡಣೆ ಕೇವಲ ತಮಿಳುನಾಡಿಗೆ ಮಾತ್ರವಲ್ಲ, ದಕ್ಷಿಣ ಭಾರತದ ಮೇಲೆ ಪರಿಣಾಮ ಬೀರಲಿದೆ. ದೇಶದ ಜನಸಂಖ್ಯೆಯಲ್ಲಿ ಪ್ರಗತಿ ಸಾಧಿಸದ, ಬೆಳವಣಿಗೆಯಲ್ಲಿ ಹಾಗೂ ರಾಷ್ಟ್ರೀಯ ಪ್ರಗತಿಯಲ್ಲಿ ಕೊಡುಗೆ ನೀಡಿದ ರಾಜ್ಯಗಳಿಗೆ ಪ್ರಜಾಸತ್ತಾತ್ಮಕ ಪ್ರಕ್ರಿಯೆಯು ದಂಡ ವಿಧಿಸಬಾರದು. ನಮಗೆ ಸಂಯುಕ್ತ ವ್ಯವಸ್ಥೆಯನ್ನು ಎತ್ತಿಹಿಡಿಯಲು ನ್ಯಾಯೋಚಿತ, ಪಾರದರ್ಶಕ ಹಾಗೂ ಸಮಾನ ವಿಧಾನದ ಅಗತ್ಯವಿದೆ ಎಂದು ಎಂಕೆ ಸ್ಟಾಲಿನ್ ತಿಳಿಸಿದ್ದಾರೆ.
