ಖ್ಯಾತ ನಟಿ ಪ್ರೀತಿ ಝಿಂಟಾ ಸುಮಾರು 18 ಕೋಟಿ ರೂಪಾಯಿ ಸಾಲ ಮನ್ನಾಕ್ಕೆ ಬದಲಾಗಿ ತನ್ನ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಬಿಜೆಪಿ ವಶಕ್ಕೆ ನೀಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ವರದಿಯನ್ನು ಕೇರಳ ಕಾಂಗ್ರೆಸ್ ಘಟಕ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, “ಇದೊಂದು ನೀಚ ಗಾಸಿಪ್” ಎಂದು ನಟಿ ಪ್ರೀತಿ ಝಿಂಟಾ ಹೇಳಿದ್ದಾರೆ. ಆರೋಪವನ್ನು ತಳ್ಳಿ ಹಾಕಿದ್ದಾರೆ. ಸದ್ಯ ಈ ವಿಚಾರದಲ್ಲಿ ಕೇರಳ ಕಾಂಗ್ರೆಸ್ ಮತ್ತು ನಟಿ ನಡುವೆ ವಾಕ್ಸಮರ ಏರ್ಪಟ್ಟಿದೆ.
ಕೇರಳ ಕಾಂಗ್ರೆಸ್ ಟ್ವೀಟ್‌ಗೆ ಪ್ರೀತಿ ಝಿಂಟಾ ನೀಡಿರುವ ಪ್ರತಿಕ್ರಿಯೆಗೆ ಕಾಂಗ್ರೆಸ್ ಮರು ಪ್ರತಿಕ್ರಿಯೆ ನೀಡಿದೆ. “ನಾವು ಮಾಧ್ಯಮದ ವರದಿಗಳನ್ನು ಮಾತ್ರ ಹಂಚಿಕೊಂಡಿದ್ದೇವೆ. ಆದರೆ ಈ ವರದಿ ತಪ್ಪು ಎಂದು ಸಾಬೀತಾದರೆ ನಾವು ನಮ್ಮ ತಪ್ಪನ್ನು ಒಪ್ಪಿಕೊಳ್ಳಲು ಸಿದ್ಧವಾಗಿದ್ದೇವೆ” ಎಂದು ಕಾಂಗ್ರೆಸ್ ಹೇಳಿದೆ.
ಇದನ್ನು ಓದಿದ್ದೀರಾ? ತ್ರಿಭಾಷಾ ನೀತಿ ಹೇರಿಕೆಗೆ ವಿರೋಧ: ಬಿಜೆಪಿ ತೊರೆದ ತಮಿಳು ನಟಿ ರಂಜನಾ ನಾಚಿಯಾರ್
ಹಣಕಾಸು ಅಕ್ರಮಗಳ ವರದಿಗಳ ಹಿನ್ನೆಲೆಯಲ್ಲಿ ಫೆಬ್ರವರಿ 15 ರಂದು ನ್ಯೂ ಇಂಡಿಯಾ ಕೋ-ಆಪರೇಟಿವ್ ಬ್ಯಾಂಕಿನ ಮಂಡಳಿಯನ್ನು ವಿಸರ್ಜಿಸಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧಾರ ತೆಗೆದುಕೊಂಡಿದೆ. ಇದಾದ ಬಳಿಕ ಕೆಲವು ಸುದ್ದಿಗಳು, ಊಹಾಪೋಹಗಳು ಹರಿದಾಡುತ್ತಿದೆ.
ಸೋಮವಾರ, ಕಾಂಗ್ರೆಸ್ ಕೇರಳದ ಎಕ್ಸ್ ಖಾತೆಯು ₹18 ಕೋಟಿ ಸಾಲ ಮನ್ನಾಕ್ಕೆ ಪ್ರತಿಯಾಗಿ ಝಿಂಟಾ ತನ್ನ ಸಾಮಾಜಿಕ ಮಾಧ್ಯಮ ಖಾತೆಗಳ ನಿಯಂತ್ರಣವನ್ನು ಬಿಜೆಪಿಗೆ ವರ್ಗಾಯಿಸಿದ್ದಾರೆ. ಬ್ಯಾಂಕ್ ಕುಸಿತದ ನಂತರ ಠೇವಣಿದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆರೋಪಿಸಿದ ಸುದ್ದಿ ಲೇಖನವನ್ನು ಪೋಸ್ಟ್ ಮಾಡಿದೆ.
Good to know you're managing your own account, unlike other celebs who have handed theirs over to the notorious IT cell.
— Congress Kerala (@INCKerala) February 25, 2025
Thanks for the clarification, @realpreityzinta regarding your loan position. We are glad to accept mistakes if we have made any.
We shared the news as… https://t.co/4aouqLaWue
ಇದಕ್ಕೆ ಪ್ರತಿಕ್ರಿಯೆ ನೀಡಿದ ಝಿಂಟಾ ರಾಜಕೀಯ ಪಕ್ಷ ಸುಳ್ಳು ಸುದ್ದಿಯನ್ನು ಹರಡಿದೆ ಎಂದು ಟೀಕಿಸಿದ್ದಾರೆ. “ಇಲ್ಲ, ನಾನು ನನ್ನ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಾನೇ ನಿರ್ವಹಿಸುತ್ತೇನೆ. ನಕಲಿ ಸುದ್ದಿಗಳನ್ನು ಪ್ರಚಾರ ಮಾಡಿದ್ದಕ್ಕಾಗಿ ನಿಮಗೆ ನಾಚಿಕೆಯಾಗಬೇಕು. ಯಾರೂ ನನ್ನ ಯಾವುದೇ ಸಾಲವನ್ನು ಮನ್ನಾ ಮಾಡಿಲ್ಲ” ಎಂದು ಹೇಳಿದ್ದಾರೆ.
“ರಾಜಕೀಯ ಪಕ್ಷ ಅಥವಾ ಅದರ ಪ್ರತಿನಿಧಿಗಳು ಸುಳ್ಳು ಸುದ್ದಿಯನ್ನು, ನೀಚ ಗಾಸಿಪ್ ಅನ್ನು ನನ್ನ ಹೆಸರು, ನನ್ನ ಚಿತ್ರ ಬಳಸಿ ಹಂಚುತ್ತಿರುವುದು ನೋಡಿ ನನಗೆ ಆಶ್ಚರ್ಯವಾಗಿದೆ. ಸಾಲ ಪಡೆಯಲಾಗಿತ್ತು ಮತ್ತು ಅದನ್ನು ಹತ್ತು ವರ್ಷಕ್ಕೂ ಮುನ್ನವೇ ಸಂಪೂರ್ಣವಾಗಿ ಮರುಪಾವತಿ ಮಾಡಲಾಗಿದೆ ಎಂದು ಸ್ಪಷ್ಟಪಡಿಸಲು ನಾನು ಬಯಸುತ್ತೇನೆ. ಭವಿಷ್ಯದಲ್ಲಿ ಯಾವುದೇ ತಪ್ಪು ತಿಳಿವಳಿಕೆ ಬರುವುದನ್ನು ಈ ಮಾಹಿತಿ ತಡೆಯುತ್ತದೆ ಎಂದು ಭಾವಿಸುತ್ತೇನೆ” ಎಂದು ಪ್ರೀತಿ ಝಿಂಟಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಝಿಂಟಾ ಎಕ್ಸ್ ಪೋಸ್ಟ್‌ಗೆ ಕೇರಳ ಕಾಂಗ್ರೆಸ್ ಸ್ಪಷ್ಟೀಕರಣ ನೀಡಿ ಪೋಸ್ಟ್ ಒಂದನ್ನು ಮಾಡಿದೆ. “ಇತರೆ ಸೆಲೆಬ್ರಿಟಿಗಳಿಗಿಂತ ಭಿನ್ನವಾಗಿ ಝಿಂಟಾ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ತಾವೇ ನಿರ್ವಹಿಸುತ್ತಿದ್ದಾರೆ ಎಂದು ತಿಳಿದುಕೊಳ್ಳುವುದು ಉತ್ತಮವಾಗಿದೆ. ತಮ್ಮ ಸಾಲದ ಬಗ್ಗೆ ಝಿಂಟಾ ಅವರೇ ಸ್ಪಷ್ಟೀಕರಣ ನೀಡಿದ್ದಾರೆ” ಎಂದು ಹೇಳಿದ್ದಾರೆ.
“ಸ್ಪಷ್ಟೀಕರಣಕ್ಕಾಗಿ ಧನ್ಯವಾದಗಳು. ನಾವು ಏನಾದರೂ ತಪ್ಪುಗಳನ್ನು ಮಾಡಿದ್ದರೆ ಅದನ್ನು ಒಪ್ಪಿಕೊಳ್ಳಲು ನಾವು ಸಂತೋಷಪಡುತ್ತೇವೆ. ಮಾಧ್ಯಮಗಳು ವರದಿ ಮಾಡಿದಂತೆ ನಾವು ಸುದ್ದಿಯನ್ನು ಹಂಚಿಕೊಂಡಿದ್ದೇವೆ” ಎಂದು ಹೇಳಿದೆ.
