ಹಿಂದಿ ಕಿರುತೆರೆಯ ಪ್ರಸಿದ್ಧ ಹಾಸ್ಯ ಕಾರ್ಯಕ್ರಮ ʻಕಪಿಲ್ ಶರ್ಮಾ ಶೋʼದ ಮಾಜಿ ಸಹ ನಟ, ಖ್ಯಾತ ಹಾಸ್ಯನಟ ತೀರ್ಥಾನಂದ್ ರಾವ್, ಫೇಸ್‌ಬುಕ್ ಲೈವ್‌ನಲ್ಲಿ ಮಾತನಾಡುತ್ತಿದ್ಧ ವೇಳೆಯೇ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬುಧವಾರ ನಡೆದಿದೆ.
‘ಲಿವ್-ಇನ್’ ಸಂಬಂಧ ಹೊಂದಿದ್ದ ಗೆಳತಿಯ ಕಿರುಕುಳದ ಕಾರಣದಿಂದ ಆತ್ಮಹತ್ಯೆಗೆ ಮಾಡಿಕೊಳ್ಳುತ್ತಿರುವುದಾಗಿ ತೀರ್ಥಾನಂದ್ ವಿಡಿಯೋದಲ್ಲಿ ಹೇಳಿದ್ಧಾರೆ.
ʻ2022ರ ಅಕ್ಟೋಬರ್‌ನಲ್ಲಿ ಭೇಟಿಯಾದ ಮಹಿಳೆಯೊಂದಿಗೆ ‘ಲಿವ್-ಇನ್’ ಸಂಬಂಧವನ್ನು ಹೊಂದಿದ್ದೇನೆ. ಮದುವೆಯಾಗುವಂತೆ ಆಕೆ ನನ್ನನ್ನು ‘ಭಾವನಾತ್ಮಕವಾಗಿ ಬ್ಲ್ಯಾಕ್‌ಮೇಲ್’ ಮಾಡಿ ಹಣ ವಸೂಲಿ ಮಾಡುತ್ತಾಳೆ’ ಎಂದು ರಾವ್ ಹೇಳಿದ್ದಾರೆ.
ʻಈ ಮಹಿಳೆಯಿಂದಾಗಿ ನಾನು ಇದೀಗ ₹3-4 ಲಕ್ಷ ಸಾಲದಲ್ಲಿದ್ದೇನೆ. ನನ್ನ ವಿರುದ್ಧ ಭಾಯಂದರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ ಯಾವ ಕಾರಣಕ್ಕಾಗಿ ನನ್ನ ವಿರುದ್ಧ ಆಕೆ ದೂರು ದಾಖಲಿಸಿದ್ದಾಳೆ ಎಂಬುದು ನನಗೆ ತಿಳಿದಿಲ್ಲ. ಪದೆ ಪದೇ ಕರೆ ಮಾಡಿ ಭೇಟಿಯಾಗಬೇಕೆಂದು ಒತ್ತಾಯಿಸುತ್ತಿದ್ದಳುʼ ಎಂದು ತೀರ್ಥಾನಂದ್ ವಿಡಿಯೋದಲ್ಲಿ ಹೇಳಿದ್ದಾರೆ.
‘ಜೂನಿಯರ್ ನಾನಾ ಪಾಟೇಕರ್’ ಎಂದು ಸ್ನೇಹಿತರ ವಲಯದಲ್ಲಿ ಕರೆಯಲ್ಪಡುತ್ತಿದ್ದ ತೀರ್ಥಾನಂದ್, ಫೇಸ್‌ಬುಕ್ ಲೈವ್‌ನಲ್ಲಿ ಮಾತನಾಡುತ್ತಿರುವ ನಡುವೆಯೇ, ಕೀಟನಾಶಕವನ್ನು ಬಾಟಲಿಯಿಂದ ಗ್ಲಾಸ್‌ವೊಂದಕ್ಕೆ ಸುರಿದು ಕುಡಿಯುತ್ತಿರುವುದು ವಿಡಿಯೋದಲ್ಲಿದೆ.
ವಿಡಿಯೋ ನೋಡಿದ ಬಳಿಕ ನಟನ ಮನೆಗೆ ಧಾವಿಸಿದ ಸ್ನೇಹಿತರು, ರಾವ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತೀರ್ಥಾನಂದ್ ಆತ್ಮಹತ್ಯೆಗೆ ಯತ್ನಿಸುತ್ತಿರುವುದು ಇದು ಮೊದಲೇನಲ್ಲ. 2021ರಲ್ಲಿ ಆರ್ಥಿಕ ತೊಂದರೆಗೆ ಸಿಲುಕಿದ್ದೇನೆ ಎಂದು ಹೇಳಿದ್ದ ಹಾಸ್ಯನಟ ಆತ್ಮಹತ್ಯೆಗೆ ಯತ್ನಿಸಿದ್ದರು.