ವಿಶ್ವಕ್ಕೆ ರಾಜ್ಯದ ಅದ್ಭುತ ಪ್ರವಾಸಿ ತಾಣಗಳ ಪರಿಚಯ ಮಾಡಿಸುವ ದೃಷ್ಟಿಯಿಂದ ಪ್ರವಾಸೋದ್ಯಮ ಇಲಾಖೆ ಹಾಗೂ ಕರ್ನಾಟಕ ಟೂರಿಸಮ್ ಸೊಸೈಟಿಯ ಸಹಯೋಗದೊಂದಿಗೆ ಫೆಬ್ರವರಿ 26 ರಿಂದ 28 ರವರೆಗೆ ಕರ್ನಾಟಕ ಇಂಟರನ್ಯಾಶನಲ್ ಟೂರಿಸಮ್ ಎಕ್ಸ್‌ಪೋವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಎಕ್ಸಪೋವನ್ನು ಉದ್ಘಾಟಿಸುವರು ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರಾದ ಎಚ್ ಕೆ ಪಾಟೀಲ್ ಹೇಳಿದರು.
ಇಂದು ಬೆಂಗಳೂರಿನ ರ್ಕ್ಯೂಟ್ ಹೌಸ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಫೆಬ್ರವರಿ 27 ಮತ್ತು 28 ರಂದು 2 ದಿನಗಳ ಕಾಲ ವ್ಯವಹಾರಿಕ ಸಭೆಗಳು ನಡೆಯಲಿವೆ. ನಮ್ಮ ರಾಜ್ಯದಲ್ಲಿ ಅಸಂಖ್ಯಾತ ಪ್ರವಾಸಿ ತಾಣಗಳು, ಸ್ಮಾರಕಗಳು ಇವೆ. 25 ಸಾವಿರಕ್ಕೂ ಹೆಚ್ಚು ಅರಕ್ಷಿತ ಸ್ಮಾರಕಗಳಿದ್ದು, ಅವುಗಳಲ್ಲಿ 800ಕ್ಕೂ ಹೆಚ್ಚು ಸ್ಮಾರಕಗಳನ್ನು ರಕ್ಷಿತ ಸ್ಮಾರಕಗಳಾಗಿ ಘೋಷಿಸಲಾಗಿದೆ. ಮುಂದಿನ ಪೀಳಿಗೆಗೆ ಇವುಗಳ ಮಹತ್ವವನ್ನು ತಿಳಿಸಲು ಹಾಗೂ ಅವುಗಳ ಸಂರಕ್ಷಣೆಯ ಮಹತ್ವವನ್ನು ತಿಳಿಸುವ ಮಹಾತ್ಕಾರ್ಯಕ್ಕೆ ನಮ್ಮ ಸರ್ಕಾರ ಮುಂದಾಗಿದೆ. ನಮ್ಮ ಕಲೆ, ಸಂಸ್ಕೃತಿ, ಪರಂಪರೆ, ಇತಿಹಾಸ, ಕರಕುಶಲ ಉತ್ಪನ್ನಗಳು, ಪಾಕ ಪದ್ಧತಿ, ನೃತ್ಯ ಪ್ರಕಾರಗಳು, ಜೀವನ ಶೈಲಿ, ಅತಿಥಿ ಸತ್ಕಾರ ಇತ್ಯಾದಿಗಳನ್ನು ಈ ಸಂದರ್ಭದಲ್ಲಿ ಪ್ರದರ್ಶನ ಮಾಡಲಾಗುವುದು” ಎಂದರು.
ಇದನ್ನು ಓದಿದ್ದೀರಾ? ರಾಜಕೀಯ ತಂತ್ರಕ್ಕೆ ಬಿಜೆಪಿಯವರಿಂದ ಅಧಿವೇಶನ ಬಳಕೆ: ಎಚ್ ಕೆ ಪಾಟೀಲ್ ಕಿಡಿ
“ಪ್ರವಾಸೋದ್ಯಮದ ಸಮಗ್ರ ಬೆಳವಣಿಗೆಗೆ ಒತ್ತಾಸೆಯಾಗಿ ನಿಲ್ಲುವುದು ನಮ್ಮ ಸರ್ಕಾರದ ಗುರಿಯಾಗಿದ್ದು, ಅದರ ಪೈಕಿ ಎಕ್ಸ್‌ಪೋ ಒಂದು ಬಹುಮುಖ್ಯವಾದ ಚಟುವಟಿಕೆಯಾಗಿದೆ. ಕೆಲವೇ ಕೆಲವು ರಾಜ್ಯಗಳು ಈ ಮಾದರಿಯ ಬಿ2ಬಿ ಸಮಾವೇಶಗಳನ್ನು ದೇಶದಲ್ಲಿ ಆಯೋಜನೆ ಮಾಡುತ್ತಿದ್ದು, ಅದರಲ್ಲಿ ನಮ್ಮ ರಾಜ್ಯವು ಒಂದಾಗಿದೆ. ನಮ್ಮ ಈ ಕ್ರಮಕ್ಕೆ ಕೇಂದ್ರ ಸರ್ಕಾರವು ಬೆಂಬಲ ನೀಡಿದ್ದು, ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯವು ಈ ಸಮಾವೇಶದಲ್ಲಿ ಭಾಗವಹಿಸುತ್ತಿದೆ” ಎಂದು ಹೇಳಿದರು.
“ಪ್ರವಾಸೋದ್ಯಮ ವಲಯದ ಎಲ್ಲಾ ಭಾಗಿದಾರರನ್ನು ಒಂದೇ ಸೂರಿನಡಿ ಕರೆತಂದು ಈ ವಲಯದ ಆಗುಹೋಗುಗಳ ಬಗ್ಗೆ ಚರ್ಚೆ ನಡೆಸಿ ಮಾರ್ಗೋಪಾಯಗಳನ್ನು ಪಡೆಯುವ ಉದ್ದೇಶ ನಮ್ಮದಾಗಿದೆ. ಹೋಟೆಲ್ ಉದ್ಯಮಿದಾರರು, ಟ್ರಾವೆಲ್ ಏಜೆನ್ಸಿಗಳು, ಹೋಂಸ್ಟೇ ಮಾಲೀಕರು, ಕೃಷಿ ಪ್ರವಾಸೋದ್ಯಮದ ಪ್ರವರ್ತಕರು, ಪ್ರವಾಸಿ ಮಾರ್ಗದರ್ಶಿಗಳು, ಮಹಿಳಾ ಉದ್ಯಮಿದಾರರು ಈ ವಲಯಕ್ಕೆ ಸಂಬಂಧಪಟ್ಟವರೆಲ್ಲರೂ ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ” ಎಂದು ತಿಳಿಸಿದರು.
“ಪಾರದರ್ಶಕ ಸ್ಪರ್ಧಾತ್ಮಕ ಪ್ರಕ್ರಿಯೆ ಮೂಲಕ ದೇಶಿ, ವಿದೇಶಿ ಖರೀದಿದಾರರನ್ನು ಆಯ್ಕೆ ಮಾಡಲಾಗಿದೆ. 36 ದೇಶಗಳ 300 ಜನರ ಸಂದರ್ಶನ ನಡೆಸಿ, ಸುಮಾರು 110ಕ್ಕೂ ಹೆಚ್ಚು ವಿದೇಶಿ ಖರೀದಿದಾರರು, ಏಜೆಂಟ್‌ಗಳು ಮತ್ತು 15ಕ್ಕೂ ಹೆಚ್ಚು ವಿದೇಶಿ ಟ್ರಾವೆಲ್ ಮಾಧ್ಯಮದವರನ್ನು ಆಯ್ಕೆ ಮಾಡಲಾಗಿರುತ್ತದೆ. ಅಲ್ಲದೇ 858 ಕ್ಕೂ ಹೆಚ್ಚು ದೇಶಿಯ ಖರೀದಿದಾರರ ಸಂದರ್ಶನ ನಡೆಸಿ, ಸುಮಾರು 235ಕ್ಕೂ ಹೆಚ್ಚು ದೇಶಿಯ ಖರೀದಿದಾರರು ಮತ್ತು 20ಕ್ಕೂ ಹೆಚ್ಚು ದೇಶಿ ಟ್ರಾವೆಲ್ ಮಾಧ್ಯಮದವರನ್ನು ಆಯ್ಕೆ ಮಾಡಲಾಗಿದೆ” ಎಂದು ಮಾಹಿತಿ ನೀಡಿದರು.
ಇದನ್ನು ಓದಿದ್ದೀರಾ? ನೇಹಾ ಕೊಲೆ | ನಿರಂಜನ್ ಮನೆಗೆ ಸಚಿವ ಎಚ್ ಕೆ ಪಾಟೀಲ್ ಭೇಟಿ, ನಿರಂಜನ್ ಜೊತೆ ಸಿಎಂ ಮಾತು
“ಮಾರಾಟಗಾರರು ಮತ್ತು ಖರೀದಿದಾರರ ನಡುವೆ ಸಂಪರ್ಕ ಸೇತುವೆಯಾಗಿ ಪ್ರವಾಸೋದ್ಯಮ ಇಲಾಖೆಯು ಎಕ್ಸ್‌ಪೋ ಮೂಲಕ ಕೆಲಸ ಮಾಡುತ್ತಿದೆ. 3 ದಿನಗಳಲ್ಲಿ ಸರಿ ಸುಮಾರು 16,000 ವ್ಯಾಪಾರ ಸಭೆಗಳು ನಡೆಯಲಿವೆ. ಭಾಗವಹಿಸುವ ಪ್ರತಿ ಭಾಗಿದಾರನು ಕಡ್ಡಾಯವಾಗಿ 40 ಸಭೆಗಳನ್ನು 2 ದಿನಗಳಲ್ಲಿ ನಮ್ಮ ಭಾಗಿದಾರರೊಂದಿಗೆ ಮಾಡುವಂತೆ ವ್ಯವಸ್ಥೆ ಮಾಡಲಾಗಿರುತ್ತದೆ” ಎಂದು ವಿವರಿಸಿದರು.
“ಈ 3 ದಿನಗಳಲ್ಲಿ ನಮ್ಮ ರಾಜ್ಯದ ಶ್ರೀಮಂತ ಕಲೆ, ಸಂಸ್ಕೃತಿಯನ್ನು ಬಿಂಬಿಸುವಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು, ನಮ್ಮ ಆಹಾರ ಶೈಲಿಯ ಪರಿಚಯ, ನೆಟ್ವರ್ಕಿಂಗ್ ಮೀಟಿಂಗ್ ಗಳು, ಉಚಿತ ಮತ್ತು ಪೋಸ್ಟ್ ಎಫ್‌ಎಎಮ್ ಟೂರ್‌ಗಳು ನಡೆಯಲಿವೆ. ವಿದೇಶಿ ಏಜೆಂಟ್‌ಗಳಿಗೆ ಕಡ್ಡಾಯವಾಗಿ ಕರ್ನಾಟಕ ಹೆರಿಟೇಜ್ ಡಿಸ್ಕವರಿ, ಕರ್ನಾಟಕದ ಅತ್ಯುತ್ತಮ, ಕರಾವಳಿ ಕರ್ನಾಟಕ, ವನ್ಯಜೀವಿ ಹಾಗೂ ಬೆಟ್ಟಗಳು ಮತ್ತು ರಾಯಲ್ ಮೈಸೂರು ಹೆರಿಟೇಜ್‌ನ 5 ದಿನಗಳ ಪ್ರವಾಸ ಕಾರ್ಯಕ್ರಮ ಏರ್ಪಡಿಸಲಾಗಿದೆ. 30 ಜನರ 5 ತಂಡಗಳನ್ನಾಗಿ ವಿಂಗಡಿಸಿ,ಈ ಪ್ರವಾಸದಲ್ಲಿ ಭಾಗವಹಿಸಿದವರೆಲ್ಲರೂ ನಮ್ಮ ರಾಜ್ಯದ ಸಂಸ್ಕೃತಿಗೆ ಕಲೆಗೆ ಮಾರು ಹೋಗಿದ್ದಾರೆ” ಎಂದರು.
“ನಮ್ಮ ರಾಜ್ಯದ ಎಲ್ಲಾ ಭಾಗದ 150ಕ್ಕೂ ಹೆಚ್ಚು ಭಾಗಿದಾರರು (ಹೋಟೆಲ್, ರೆಸಾರ್ಟ್, ಹೋಂ ಸ್ಟೇ, ಟ್ರಾವೆಲ್ ಆಪರೇಟರ್ ಗಳು, ಕೃಷಿ ಪ್ರವಾಸೋದ್ಯಮ ಭಾಗಿದಾರರು) ಭಾಗವಹಿಸಲಿದ್ದು, ಎಲ್ಲರಿಗೂ ತಮ್ಮ ತಮ್ಮ ಉತ್ಪನ್ನಗಳ ಪ್ರದರ್ಶನಕ್ಕಾಗಿ ಮಳಿಗೆ ವ್ಯವಸ್ಥೆ ಮಾಡಲಾಗಿದೆ. ಅಷ್ಟೇ ಅಲ್ಲದೇ, ಕಾವೇರಿ ಹ್ಯಾಂಡಿಕ್ರಾಪ್ಟ್, ಕೆಎಸ್‌ಐಸಿ, ಕಾಫೀ ಮಂಡಳಿ, ಕೆಎಸ್‌ಡಿ ಎಲ್, ಕೆಎಂಎಫ್ ಮಳಿಗೆಗಳನ್ನು ತೆರೆಯಲಿದ್ದು, ನಮ್ಮ ರಾಜ್ಯದ ವಿವಿಧ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಇರುತ್ತದೆ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಶಾಸಕ ಬಿ ಆರ್ ಪಾಟೀಲ್ ನೇಮಕ
“ಪುರಾತತ್ವ, ವಸ್ತು ಸಂಗ್ರಹಾಲಯಗಳು, ಪರಂಪರೆ ಇಲಾಖೆ, ಸುವರ್ಣ ರಥ, ಪ್ರವಾಸೋದ್ಯಮ ಇಲಾಖೆ ಮಳಿಗೆಗಳನ್ನು ತೆರೆಯಲಾಗುವುದು. ಯೋಗಪಟುಗಳಿಂದ ಯೋಗ ಪ್ರದರ್ಶನ ಏರ್ಪಡಿಸಲಾಗಿದ್ದು, ರೋಸ್ ವುಡ್ ಇನ್ ಲೇ ಕಾರ್ವೀಂಗ್, ಸಂಡೂರು ಕಸೂತಿ, ಬಿದ್ರಿ ಮುಂತಾದ ಕಲೆಗಳ ಚಟುವಟಿಕೆಗಳ ಪ್ರದರ್ಶನ ನೀಡಲಾಗುವುದು. ದೇಶಿ ಮತ್ತು ವಿದೇಶಿ ಪ್ರವಾಸಿಗರನ್ನು ನಿಯಮಿತವಾಗಿ ಈ ಸಮಾವೇಶದ ಮೂಲಕ ರಾಜ್ಯಕ್ಕೆ ಸೆಳೆಯುವುದು ಮತ್ತು ಈ ಸಮಾವೇಶದಲ್ಲಿ ಭಾಗವಹಿಸುವ ಟ್ರಾವೆಲ್ ಅಪರೇಟರ್ ಗಳು ನಮ್ಮ ರಾಜ್ಯದ ಪ್ರಚಾರ ರಾಯಭಾರಿಗಳಾಗಿ ತಮ್ಮ ತಮ್ಮ ದೇಶದ ಪ್ರವಾಸಿಗರನ್ನು ನಮ್ಮ ರಾಜ್ಯಕ್ಕೆ ನಿಯಮಿತವಾಗಿ ಕಳುಹಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶಗಳಾಗಿವೆ. ಇದರಿಂದಾಗಿ ನಮ್ಮ ರಾಜ್ಯಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಉಂಟಾಗಲಿದೆ” ಎಂದರು.
“ಮುಂದಿನ ವರ್ಷಗಳಲ್ಲಿ ಅಂದಾಜು 1 ಕೋಟಿ ದೇಶಿ ಪ್ರವಾಸಿಗರು ಮತ್ತು 1 ಲಕ್ಷ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ಈ ಮೂಲಕ ನಮ್ಮ ರಾಜ್ಯಕ್ಕೆ ವಿದೇಶಿ ವಿನಿಮಯ ಹೆಚ್ಚಾಗಲಿದೆ ಹಾಗೂ ನೇರ ತೆರಿಗೆ ಮತ್ತು ಪರೋಕ್ಷ ತೆರಿಗೆ ಮೂಲಕ ರಾಜ್ಯಕ್ಕೆ ಅದಾಯ ಬರುತ್ತದೆ. ಮುಂದಿನ 3-4 ವರ್ಷಗಳಲ್ಲಿ ಅಂದಾಜು 2,750 ಕೋಟಿ ಆದಾಯ ರಾಜ್ಯಕ್ಕೆ ಬರುವ ನಿರೀಕ್ಷೆಯಿದೆ. ಆದಾಯದ ಜೊತೆಗೆ ಆರ್ಥಿಕ ಚಟುವಟಿಕೆಗಳು ಗರಿಗೆದರಿ ಸ್ಥಳೀಯರಿಗೆ ಉದ್ಯೋಗಾವಕಾಶಗಳು ಹೆಚ್ಚಾಗಲಿವೆ. ಕುಶಲ, ಅರೆಕುಶಲ ಯುವಕ ಯುವತಿಯರಿಗೆ ತಮ್ಮ ತಮ್ಮ ಸ್ಥಳಗಳಲ್ಲಿ ಉದ್ಯೋಗಗಳು ದೊರೆಯಲಿದ್ದು, ದೊಡ್ಡ ನಗರಗಳಿಗೆ ವಲಸೆ ಹೋಗುವುದು ತಪ್ಪುತ್ತದೆ. ವಿವಿಧ ವಲಯಗಳ ಜೊತೆಗೆ ಪ್ರವಾಸೋದ್ಯಮ ಬೆಳವಣಿಗೆ ಹೊಂದಲಿದೆ” ಎಂದು ಸಚಿವ ಎಚ್ ಕೆ ಪಾಟೀಲ್ ತಿಳಿಸಿದರು.
ಮಾಜಿ ಸಂಸದರಾದ ಎಂ.ಎಂ. ಹಿಂಡಸಗೇರಿ, ಮುಖಂಡರಾದ ಸದಾನಂದ ಡಂಗನವರ, ಮಹೇಂದ್ರ ಸಿಂಘಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
