ಮೈಸೂರಿನ ಏಕಲವ್ಯ ನಗರ ಹಾಗೂ ಚಾಮುಂಡೇಶ್ವರಿ ರೈಲ್ವೆ ಬಡಾವಣೆಯ ನಿವಾಸಿಗಳಿಗೆ ಕಾವೇರಿ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವಂತೆ, ಸರ್ಕಾರದಿಂದ ಮಂಜೂರಾಗಿ ಕಾಮಗಾರಿ ಪೂರ್ಣಗೊಂಡಿದ್ದರೂ ಈ ಎರಡು ಬಡಾವಣೆಗಳಿಗೆ ನಗರ ನೀರು ಸರಬರಾಜು ಒಳಚರಂಡಿ ಮಂಡಳಿಯವರು ನೀರನ್ನು ಪೂರೈಕೆ ಮಾಡದೆ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ, ಮೈಸೂರಿನ ಸರಸ್ವತಿಪುರಂನಲ್ಲಿರುವ ಜಲಮಂಡಳಿ ಕಾರ್ಯಪಾಲಕ ಅಭಿಯಂತ ಆಸೀಫ್ ಖಲೀಲ್ ರವರಿಗೆ ಮನವಿ ಪತ್ರ ಸಲ್ಲಿಸಿದರು.
ದಸಂಸ ಮುಖಂಡ ನಿಂಗರಾಜ್ ಮಲ್ಲಾಡಿ ಮಾತನಾಡಿ ” ಏಕಲವ್ಯ ನಗರ ಹಾಗೂ ಚಾಮುಂಡೇಶ್ವರಿ ಬಡಾವಣೆಯ ನಿವಾಸಿಗಳು ಕಲುಷಿತ ನೀರನ್ನು ಕುಡಿದು ಅನೇಕ ರೋಗ, ರುಜಿನಗಳಿಂದ ಬಳಲುತ್ತಾ ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಆದ್ದರಿಂದ ಜಲಮಂಡಳಿ ವತಿಯಿಂದ ಕೂಡಲೆ ಶುದ್ಧ ಕುಡಿಯವು ನೀರನ್ನು ಪೂರೈಕೆ ಮಾಡಿಕೊಡಬೇಕು ಎಂದು ಅಧಿಕಾರಿಗಳಲ್ಲಿ ಮನವಿ ಮಾಡಿರುವುದಾಗಿ ” ಹೇಳಿದರು.
ಮನವಿ ಸ್ವೀಕರಿಸಿ ಮಾತನಾಡಿದ ಕಾರ್ಯಪಾಲಕ ಅಭಿಯಂತ ಆಸೀಫ್ ಖಲೀಲ್ ” ಕಾಮಗಾರಿ ಪೂರ್ಣಗೊಂಡಿದ್ದು, ಕೆಲವು ತಾಂತ್ರಿಕ ಕಾರಣದಿಂದ ಈ ಎರಡೂ ಬಡಾವಣೆಗಳಿಗೆ ಶುದ್ಧ ಕುಡಿಯುವ ನೀರನ್ನು ಪೂರೈಕೆ ಮಾಡಲಾಗಿಲ್ಲ. ಕೂಡಲೇ ಮೇಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಗಳನು ಪರಿಹರಿಸಿ ನೀರನ್ನು ಪೂರೈಕೆ ಮಾಡಲಾಗುವುದು ” ಎಂದರು.

ಬಳಿಕ, ಜಲದರ್ಶಿನಿಯಲ್ಲಿ ದಸಂಸ ಕಾರ್ಯಕರ್ತರ ಸಭೆ ನಡೆಸಿ ದಲಿತರ, ಅಲೆಮಾರಿ ಸಮುದಾಯಗಳ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವರಿಕೆ ಮಾಡಿ ಈ ಬಾರಿಯ ಬಜೆಟ್ ನಲ್ಲಿ ಜಾರಿ ಮಾಡುವಂತೆ ಹಾಕ್ಕೋತ್ತಾಯ
ಸಲ್ಲಿಸುವ ನಿರ್ಣಯ ಕೈಗೊಂಡರು.
ಹಕ್ಕೋತ್ತಾಯಗಳು:
- ಈ ಬಾರಿಯ ಬಜೆಟ್‌ನಲ್ಲಿ ದಲಿತರಿಗೆ ಮತ್ತು ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ಹೆಚ್ಚು ಹಣ ಮೀಸಲಿಡಬೇಕು. ಮೀಸಲಿಟ್ಟ ಹಣವನ್ನು ಗ್ಯಾರಂಟಿಗಳಿಗೆ ಬಳಕೆ ಮಾಡಿಕೊಳ್ಳಬಾರದು.
- ಮೈಸೂರು ನಗರದಲ್ಲಿ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಡಾ ಬಿ ಆರ್ ಅಂಬೇಡ್ಕರ್ ಭವನದ ಕಾಮಗಾರಿಯನ್ನು ಸರ್ಕಾರದ ವತಿಯಿಂದ ಅಗತ್ಯ ಹಣ ಬಿಡುಗಡೆಗೊಳಿಸಿ ಪೂರ್ಣಗೊಳಿಸಬೇಕು.
- ರಾಜ್ಯದ ಪರಿಶಿಷ್ಟ ಜಾತಿ/ಪಂಗಡ ಮತ್ತು ಹಿಂದುಳಿದ ಜಾತಿ ನಿರುದ್ಯೋಗಿ ಯುವಕ, ಯುವತಿಯರಿಗೆ ತರಬೇತಿ ನೀಡಿ ಕಾರ್ಖಾನೆಗಳಿಗೆ ಮಾಲೀಕತ್ವ ನೀಡುವ ಯೋಜನೆಗಳನ್ನು ಸರ್ಕಾರ ರೂಪಿಸಬೇಕು.
- ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ವೇತನದಾರರು ಸಂಕಷ್ಟದಲ್ಲಿದ್ದು, ಪ್ರತಿ ತಿಂಗಳ ಮಾಸಾಶನವನ್ನು ತಲಾ 3000 ರೂ ಗಳಿಗೆ ಹೆಚ್ಚಿಸಬೇಕು.
-
- ರಾಜ್ಯದ ಎಲ್ಲಾ ಸಂಘ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಪೌರಕಾರ್ಮಿಕ ಕುಟುಂಬಗಳಿಗೆ ನಿವೇಶನ, ವಾಸಿಸಲು ಮನೆಗಳನ್ನು ಸರ್ಕಾರ ಕಲ್ಪಿಸಿಕೊಡಬೇಕು.
- ಈ ಸುದ್ದಿ ಓದಿದ್ದೀರಾ? ಮೈಸೂರು | ತಹಶೀಲ್ದಾರ್ ನೇತೃತ್ವದಲ್ಲಿ ರೈತ ಸಭೆ; ಅಹವಾಲುಗಳಿಗೆ ಸ್ಪಂದನೆ
ಸಭೆಯಲ್ಲಿ ರಾಜ್ಯ ಅಲೆಮಾರಿ, ಅರೆ ಅಲೆಮಾರಿ ಜನಾಂಗಗಳ ಒಕ್ಕೂಟದ ರಾಜ್ಯಾಧ್ಯಕ್ಷ ವೈ ಕುಮಾರ್,ದಸಂಸ ಮುಖಂಡ ದೇವೇಂದ್ರ ಕುಳುವಾಡಿ, ಕಿರಿಜಾಜಿ ಗಜೇಂದ್ರ, ವೆಂಕಟೇಶ, ಶ್ರೀಧರ, ನಂದನ್ ಕುಮಾರ್, ಲೋಕೇಶ, ಸ್ವಾಮಿ, ಮಂಜಪ್ಪ, ಸತೀಶ, ಮಲ್ಲೇಶ, ಶ್ರೀನಿವಾಸ, ಹರೀಶ, ಅಂಗವಿಕಲರ ಸಂಘದ ಅಧ್ಯಕ್ಷ ಶಿವಶೆಟ್ಟಿ ಕೆರೆಯೂರು, ತಿಮ್ಮರಾಯಿ, ಕುಮಾರ,ಶ್ರೀಧರ, ದೇವರಾಜು, ಸಿಂಗೇಗೌಡ,ಆರಾಧ್ಯ, ಲೋಕೇಶ, ಸ್ವಾಮಿ, ಸತೀಶ, ಮಹಿಳಾ ಸದಸ್ಯರಾದ ರಾಜೇಶ್ವರಿ, ಶೈಲಜಾ, ಚಿಕ್ಕಮಾದೇವಮ್ಮ, ರಾಣಿ ಮುಂತಾದವರು ಇದ್ದರು.
