ಕೃಷಿ ಉದ್ದೇಶಕ್ಕೆ ಉಚಿತ ವಿದ್ಯುತ್ ಪೂರೈಕೆ ಮಾಡಲಾಗುತ್ತಿದ್ದರೂ, ರೈತರೊಬ್ಬರಿಗೆ ಬರೋಬ್ಬರಿ 3 ಲಕ್ಷ ರೂ. ವಿದ್ಯುತ್ ಬಿಲ್ ವಿಧಿಲಾಗಿರುವ ಘಟನೆ ಇಂಧನ ಸಚಿವ ಕೆ.ಜೆ ಜಾರ್ಜ್ ಅವರ ಉಸ್ತುವಾರಿ ಜಿಲ್ಲೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಜಿಲ್ಲೆಯ ಬಿಕ್ಕರಣೆ ಗ್ರಾಮದ ರೈತರ ಉಮೇಶ್ ಎಂಬವರಿಗೆ ಮೆಸ್ಕಾಂ (ಮಂಗಳೂರು ವಿದ್ಯುತ್ ಸರಬರಾಜು ನಿಗಮ ನಿಯಮಿತ) 3,20,076 ರೂ.ಗಳ ಬಿಲ್ ವಿಧಿಸಿದೆ. ಕೃಷಿಗಾಗಿ 10 ಎಚ್‌ಪಿ ಮೋಟಾರ್ ಬಳಕೆ ಮಾಡಿರುವುದಕ್ಕೆ ಬಿಲ್ ನೀಡಲಾಗಿದ್ದು, ಬಿಲ್ ಪಾವತಿಸದಿದ್ದರೆ, ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿಯೂ ಹೇಳಿದೆ.
ಎಸ್ ಬಂಗಾರಪ್ಪ ಅವರುಇ ಮುಖ್ಯಮಂತ್ರಿಯಾಗಿದ್ದಾಗ ಕೃಷಿ ಉದ್ದೇಶಕ್ಕೆ 10 ಎಚ್‌ಪಿ ಮೋಟಾರ್ ಬಳಕೆಗೆ ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಿದ್ದರು. ಅಂದಿನಿಂದಲೂ ರಾಜ್ಯಾದ್ಯಂತ ಕೃಷಿಗೆ ಉಚಿತ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ. ಅಂತೆಯೇ, ರೈತ ಉಮೇಶ ಅವರು 13 ವರ್ಷಗಳ ಹಿಂದೆ ತಮ್ಮ ಜಮೀನಿನಲ್ಲಿ ಬೋರ್‌ವೆಲ್ ಕೊರೆಸಿ, 10 ಎಚ್‌ಪಿ ಮೋಟಾರ್ ಅವಳವಡಿಸಿದ್ದರು.
ಇದೀಗ, ಆಲ್ದೂರು ಮೆಸ್ಕಾಂ ಉಪ ವಿಭಾಗವು 13 ವರ್ಷಗಳ ಬಳಿಕ ಏಕಾಏಕಿ 3 ಲಕ್ಷ ರೂ.ಗಳ ವಿದ್ಯುತ್ ಬಿಲ್ ನೀಡಿದೆ. ಬಿಲ್ ಕಂಡು ರೈತ ಉಮೇಶ್ ಕಂಗಾಲಾಗಿದ್ದಾರೆ.
ಆದಾಗ್ಯೂ, ‘ಕಾಫಿ ಬೆಳೆಗಾರರಿಗೆ ಉಚಿತವಾಗಿ ವಿದ್ಯುತ್ ಪೂರೈಕೆ ಮಾಡಲಾಗುವುದಿಲ್ಲ. ಹೀಗಾಗಿಯೇ, ವಿದ್ಯುತ್ ಬಿಲ್ ನೀಡಿದ್ದೇವೆ’ ಎಂದು ಮೆಸ್ಕಾಂ ಅಧಿಕಾರಿಗಳು ಹೇಳಿಕೊಂಡಿದ್ದಾರೆ. ಆದರೆ, 13 ವರ್ಷಗಳಿಂದ ಬಿಲ್ ಕೊಡದೆ ಈಗ ಏಕಾಏಕಿ ಬಿಲ್ ಕೊಟ್ಟು, 15 ದಿನಗಳ ಒಳಗೆ ಪಾವತಿ ಮಾಡುವಂತೆ ಎಚ್ಚರಿಕೆ ನೀಡಿರುವುದೇಕೆ ಎಂದು ಉಮೇಶ್ ಪ್ರಶ್ನಿಸಿದ್ದಾರೆ.