3 ವರ್ಷದ ಬಾಲಕಿಯ ಮೇಲೆ 17 ವರ್ಷದ ಕಾಮುಕ ಬಾಲಕನೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ್ದು, ವಿರೋಧಿಸಿದ ಕಾರಣ ಬಾಲಕಿಯ ಮುಖಕ್ಕೆ ಕಲ್ಲಿನಿಂದ ಹಲ್ಲೆಗೈದು ಗಂಭೀರವಾಗಿ ಗಾಯಗೊಳಿಸಿರುವ ಆಘಾತಕಾರಿ ಘಟನೆ ತಮಿಳುನಾಡಿನ ಮೈಲಾಡುತುರೈನಲ್ಲಿ ನಡೆದಿದೆ.
ಮೈಲಾಡುತುರೈ ಜಿಲ್ಲೆಯ ಸಿರ್ಕಾಳಿ ಪ್ರದೇಶದಲ್ಲಿ ಘಟನೆ ನಡೆದಿದೆ. ಬಾಲಕಿಯ ಮೇಲೆ ಕಲ್ಲಿನಿಂದ ಹಲ್ಲೆಗೈದ ಪರಿಣಾಮ, ಬಾಲಕಿಗೆ ಗಂಭೀರ ಗಾಯಗಳಾಗಿವೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪೋಕ್ಸೊ ಕಾಯ್ದೆಯಡಿ ಆರೋಪಿಯನ್ನು ಬಂಧಿಸಲಾಗಿದ್ದು, ಭೀಕರ ದಾಳಿ ನಡೆದಾಗ ಅಂಗನವಾಡಿಯಿಂದ ಹೊರಬಂದಿದ್ದ ಮಗು ಪುದುಚೇರಿಯ ಜಿಪ್ಮರ್ ಆಸ್ಪತ್ರೆಯಲ್ಲಿ ಗಂಭೀರ ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದೆ.
ಸಂತ್ರಸ್ತ ಬಾಲಕಿ ಆರೋಪಿಯ ಸಂಬಂಧಿಯೇ ಆಗಿದ್ದಾರೆ. ಬಾಲಕಿ ಅಂಗನವಾಡಿಯಲ್ಲಿದ್ದಾಗ ಅಲ್ಲಿಗೆ ತೆರಳಿದ ಆರೋಪಿ, ಮನೆಗೆ ಬಿಡುವುದಾಗಿ ಹೇಳಿ ಬಾಲಕಿಯನ್ನು ಅಂಗನವಾಡಿಯಿಂದ ಕರೆದೊಯ್ದಿದ್ದಾನೆ. ಅಂಗನವಾಡಿ ಕೇಂದ್ರದ ಬಳಿಕ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಮೈಲಾಡುತುರೈ ಪೊಲೀಸ್ ವರಿಷ್ಠಾಧಿಕಾರಿ ಜಿ. ಸ್ಟಾಲಿನ್ ಹೇಳಿದ್ದಾರೆ.
ಆತನ ಕೃತ್ಯಕ್ಕೆ ಬಾಲಕಿ ವಿರೋಧ ವ್ಯಕ್ತಪಡಿಸಿದ್ದು, ಕುಪಿತಗೊಂಡ ಆರೋಪಿ ಆಕೆಗೆ ಕಲ್ಲಿನಿಂದ ತಲೆಗೆ ಹಲ್ಲೆ ಮಾಡಿದ್ದಾರೆ. ಪರಿಣಾಮ, ಆಕೆಯ ಹಣೆ ಮತ್ತು ಕಣ್ಣುಗಳಿಗೆ ಗಂಭೀರ ಗಾಯಗಳಾಗಿವೆ ಎಂದು ಅವರು ತಿಳಿಸಿದ್ದಾರೆ.
ಗಾಯಗೊಂಡಿದ್ದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ನೀಡಲಾಗುತ್ತಿದೆ.
ಆರೋಪಿ ವಿರುದ್ಧ ಸಿರ್ಕಾಝಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯ ಸೆಕ್ಷನ್ 6 ಆರ್/ಡಬ್ಲ್ಯೂ 5(ಎಂ), 5(ಆರ್) ಮತ್ತು 9(ಐ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ. ಆತನನ್ನು ಬಾಲ ನ್ಯಾಯ ಮಂಡಳಿ ಎದುರು ಹಾಜರುಪಡಿಸಿ, ಬಂಧನಕ್ಕೆ ಒಳಪಡಿಸಲಾಗಿದೆ.
ಗಮನಿಸಿ: ಅತ್ಯಾಚಾರವು ಒಂದು ಗಂಭೀರ ಸಾಮಾಜಿಕ ದುಷ್ಕೃತ್ಯ. ಈ ಕ್ರೂರ ಕೃತ್ಯವು ಸಮಾಜದ ನೈತಿಕತೆ ಮತ್ತು ಮಾನವೀಯತೆಯನ್ನು ಕುಂದಿಸುತ್ತದೆ. ಅತ್ಯಾಚಾರವನ್ನು ತಡೆಯುವುದು ಮತ್ತು ಅತ್ಯಾಚಾರ ಮುಕ್ತ ಸಮಾಜವನ್ನು ನಿರ್ಮಿಸುವುದು ನಮ್ಮೆಲ್ಲರ ಜವಾಬ್ದಾರಿ. ಮಹಿಳೆಯರು ಭಯಮುಕ್ತವಾಗಿ ಬದುಕಲು ಹಣ್ಣುಮಕ್ಕಳ ಸುರಕ್ಷತೆ, ಗೌರವ ಮತ್ತು ನ್ಯಾಯವನ್ನು ಕಾಪಾಡಲು ನಾವು ಒಗ್ಗೂಡಿ ಹೋರಾಡಬೇಕು. ಪ್ರತಿಯೊಬ್ಬರೂ ಸಮಾನತೆ ಮತ್ತು ಭದ್ರತೆಯಿಂದ ಬದುಕುವ ಹಕ್ಕನ್ನು ಹೊಂದಿದ್ದಾರೆ. ಅತ್ಯಾಚಾರದ ವಿರುದ್ಧ ಕಠಿಣ ಕಾನೂನು ಜಾರಿಯಾಗಬೇಕು ಮತ್ತು ಸಮಾಜದಲ್ಲಿ ಜಾಗೃತಿ ಮೂಡಿಸಬೇಕು. ನಮ್ಮ ಕುಟುಂಬಗಳಲ್ಲಿ, ಶಾಲೆಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಹೆಣ್ಣುಮಕ್ಕಳ ಜೊತೆ ಗೌರವ ಮತ್ತು ಸಂವೇದನೆಯಿಂದ ನಡೆದುಕೊಳ್ಳಬೇಕು. ಮಹಿಳೆಯರ ರಕ್ಷಣೆಯ ಹೊಣೆ ನಮ್ಮೆಲ್ಲರದ್ದಾಗಿದೆ.