ಹಳೆಯ ಉತ್ಪನ್ನಗಳ ಜೊತೆಗೆ ಹೊಸದಾಗಿ ಮಾರುಕಟ್ಟೆಗೆ ಕಾಲಿಡುತ್ತಿರುವ ಖಾಸಗಿ ಉತ್ಪನ್ನಗಳಂತೂ ಕನ್ನಡವನ್ನು ಲೆಕ್ಕಕ್ಕೇ ಇಟ್ಟಿಲ್ಲ. ರಾಜ್ಯದಲ್ಲಿ ಮಾರಾಟವಾಗುವ ಶೇ.99 ರಷ್ಟು ಖಾಸಗಿ ಉತ್ಪನ್ನಗಳ ಮೇಲೆ ಇಂಗ್ಲಿಷ್ ಇಲ್ಲವೇ ಹಿಂದಿ ಮಾತ್ರವೇ ಕಂಡು ಬರುತ್ತದೆ. ನಾಮಫಲಕಗಳ ಒಟ್ಟಾರೆ ವಿಸ್ತೀರ್ಣದಲ್ಲಿ ಕನ್ನಡ ಭಾಷೆಯನ್ನು ಶೇ.60ರಷ್ಟು ಪ್ರದರ್ಶಿಸುವುದು ರಾಜ್ಯದಲ್ಲಿ ಕಡ್ಡಾಯವಾಗಿದೆ. ಆದರೆ, ಉತ್ಪನ್ನಗಳ ಮೇಲೆ ಕನ್ನಡ ಕಡ್ಡಾಯವಾಗುವುದು ಎಂದು?
ರಾಜ್ಯದಲ್ಲಿ ಮಾರಾಟವಾಗುವ ಖಾಸಗಿ, ರಾಜ್ಯ ಸರ್ಕಾರಿ ಹಾಗೂ ಕೇಂದ್ರ ಸರ್ಕಾರದ ಉತ್ಪನ್ನಗಳ ಮೇಲಿನ ಗುರುತನ್ನು (ಲೇಬಲ್) ಕನ್ನಡದಲ್ಲೇ ಮುದ್ರಿಸಲು ರಾಜ್ಯದಲ್ಲಿ ಕಡ್ಡಾಯ ಮಾಡಿ ಆದೇಶ ಹೊರಡಿಸುತ್ತೇವೆ ಎಂದಿದ್ದ ಸಿಎಂ ಸಿದ್ದರಾಮಯ್ಯ ಅವರ ಘೋಷಣೆ ಕೇವಲ ರಾಜ್ಯೋತ್ಸವ ಭಾಷಣಕ್ಕೆ ಸೀಮಿತವಾದಂತಿದೆ!
ಹಳೆಯ ಉತ್ಪನ್ನಗಳ ಜೊತೆಗೆ ಹೊಸದಾಗಿ ಮಾರುಕಟ್ಟೆಗೆ ಕಾಲಿಡುತ್ತಿರುವ ಖಾಸಗಿ ಉತ್ಪನ್ನಗಳಂತೂ ಕನ್ನಡವನ್ನು ಲೆಕ್ಕಕ್ಕೇ ಇಟ್ಟಿಲ್ಲ. 2023ರ ವಿಧಾನಸಭಾ ಚುನಾವಣೆಗೂ ಮುನ್ನ ಕನ್ನಡಿಗರ ಹೆಮ್ಮೆಯ ಬ್ರ್ಯಾಂಡ್ ‘ನಂದಿನಿ‘ಯನ್ನು ನುಂಗಲು ಹೊರಟಿದ್ದ ಗುಜರಾತ್ ಮೂಲದ ‘ಅಮುಲ್’ ಈಗ ಕೆಎಂಎಫ್ ವಿರುದ್ಧ ನೇರವಾಗಿ ದರ ಸಮರ ಸಾರಿ, ಮೊಸರಿನ ಉತ್ಪನ್ನಗಳನ್ನು ರಾಜ್ಯದಲ್ಲಿ ಬಿಡುಗಡೆ ಮಾಡಿದೆ. ಆ ಎಲ್ಲ ಉತ್ಪನ್ನಗಳ ಮೇಲೂ ಇಂಗ್ಲಿಷ್ ರಾರಾಜಿಸಿದೆಯೇ ವಿನಾ ಕನ್ನಡದ ಸುಳಿವಿಲ್ಲ.
ಇದು ಕೇವಲ ‘ಅಮುಲ್‘ ಕಥೆ ಮಾತ್ರವಲ್ಲ. ರಾಜ್ಯದಲ್ಲಿ ಮಾರಾಟವಾಗುವ ಶೇ.99 ರಷ್ಟು ಖಾಸಗಿ ಉತ್ಪನ್ನಗಳ ಮೇಲೆ ಇಂಗ್ಲಿಷ್ ಇಲ್ಲವೇ ಹಿಂದಿ ಮಾತ್ರವೇ ಕಂಡು ಬರುತ್ತದೆ. ಇದಕ್ಕೆ ಕಾನೂನಿನಲ್ಲೇ ಅವಕಾಶವಿದೆ. ಆದರೆ ಉತ್ಪನ್ನಗಳ ತಯಾರಕರು ಆಯಾ ರಾಜ್ಯದ ಸ್ಥಳೀಯ ಭಾಷೆಗಳನ್ನು ಬಳಸಬಹುದು ಎಂದು ಉಲ್ಲೇಖಿಸಿದ್ದರೂ ಖಾಸಗಿ ಕಂಪನಿಗಳು ಅತ್ತ ಕಣ್ಣೆತ್ತಿಯೂ ನೋಡುತ್ತಿಲ್ಲ. ಸ್ಥಳೀಯ ಭಾಷೆ ಬಳಕೆ ಕಡ್ಡಾಯ ಅಲ್ಲದಿರುವುದೇ ಇದಕ್ಕೆ ಕಾರಣ.
2024ರಲ್ಲಿ ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ವಿಧೇಯಕ -2024’ ಫೆಬ್ರವರಿ 15 ರಂದು ಕರ್ನಾಟಕ ವಿಧಾನಸಭೆಯು ಅಂಗೀಕರಿಸಿದ ಮೇಲೆ ನಾಮಫಲಕಗಳ ಒಟ್ಟಾರೆ ವಿಸ್ತೀರ್ಣದಲ್ಲಿ ಕನ್ನಡ ಭಾಷೆಯನ್ನು ಮೇಲ್ಭಾಗದಲ್ಲಿ ಶೇ.60 ರಷ್ಟು (60 ಕನ್ನಡ-40 ಇತರೆ ಭಾಷೆ) ಪ್ರದರ್ಶಿಸುವುದು ರಾಜ್ಯದಲ್ಲಿ ಕಡ್ಡಾಯವಾಗಿದೆ. ಆದರೆ, ಉತ್ಪನ್ನಗಳ ಮೇಲೆ ಕನ್ನಡ ಕಡ್ಡಾಯವಾಗುವುದು ಎಂದು?

'ಸಮಗ್ರ ಕನ್ನಡ ಅನುಷ್ಠಾನ ವಿಧೇಯಕ-2022' ಜಾರಿ ಯಾವಾಗ?
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಈ ವಿಚಾರವಾಗಿ 'ಈ ದಿನ.ಕಾಂ' ಜೊತೆ ಮಾತನಾಡಿ, "ಉತ್ಪನ್ನಗಳ ಮೇಲೆ ಕನ್ನಡ ಕಡ್ಡಾಯ ಇರಬೇಕು ಎಂದು ಸರ್ಕಾರದ ಹಿಂದಿನ ಮುಖ್ಯ ಕಾರ್ಯದರ್ಶಿಯಾಗಿದ್ದ ವಂದಿತಾ ಶರ್ಮಾ ಅವರಿಗೆ ಪತ್ರ ಬರೆಯಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಕಳೆದ ನವೆಂಬರ್‌ನಲ್ಲಿ ಈ ಬಗ್ಗೆ ಘೋಷಣೆ ಮಾಡಿದ್ದರು. ನಂತರ ರಾಜ್ಯದಲ್ಲಿ ಬೇರೆ ಬೇರೆ ಪ್ರಕರಣಗಳು ಮುನ್ನೆಲೆಗೆ ಬಂದು ಈ ವಿಚಾರ ಹಿಂದಕ್ಕೆ ಸರಿಯಿತು" ಎಂದರು.
"2022ರ ಸಮಗ್ರ ಕನ್ನಡ ಅನುಷ್ಠಾನ ವಿಧೇಯಕದಲ್ಲಿ ಉತ್ಪನ್ನಗಳ ಮೇಲೆ ಕನ್ನಡ ಬಳಕೆ ಕಡ್ಡಾಯವಿದೆ. ಇದು ಅಧಿವೇಶನದಲ್ಲಿ ಮಂಡನೆಯಾಗಿ, ಕಾಯ್ದೆಯಾಗಿ ಮಾರ್ಪಟ್ಟು, ಸರ್ಕಾರದಿಂದ ಅಧಿಕೃತ ಆದೇಶವಾದಾಗ ಮಾತ್ರ ನಾವು ಇಂಗ್ಲಿಷ್ ಗುರುತನ್ನು ವಿರೋಧಿಸಬಹುದು. ಅಲ್ಲಿಯವರೆಗೂ 'ಅಮುಲ್' ಇರಲಿ ಅಥವಾ ಯಾವುದೇ ಉತ್ಪನ್ನವಿದ್ದರೂ ವಿರೋಧಿಸಲು ಸಾಧ್ಯವಿಲ್ಲ. ಕನ್ನಡ ಅಭಿವೃದ್ಧಿ ಪ್ರಾಧಿಕಾರವು ರಾಜ್ಯದಲ್ಲಿ ಮಾರಾಟವಾಗುವ ಉತ್ಪನ್ನಗಳ ಮೇಲೆ ಕನ್ನಡ ಕಡ್ಡಾಯ ಇರಬೇಕು ಎಂದು ಪ್ರಾಧಿಕಾರ ಸದಾ ಸರ್ಕಾರಕ್ಕೆ ನೆನಪಿಸುತ್ತಲೇ ಬರುತ್ತಿದೆ. ಮಾರ್ಚ್ ತಿಂಗಳ ಕೊನೆಯೊಳಗೆ ರಾಜ್ಯ ಸರ್ಕಾರದ ಆದೇಶ ಹೊರಬೀಳುವ ನಿರೀಕ್ಷೆಯಿದೆ" ಎಂದು ಆಶಾವಾದ ವ್ಯಕ್ತಪಡಿಸಿದರು.
"ಉತ್ಪನ್ನಗಳ ಮೇಲೆ '60-40' ನಿಯಮ ತರಲು ಆಗುವುದಿಲ್ಲ. ಏಕೆಂದರೆ ಕೆಲವು ಚಿಕ್ಕ ಚಿಕ್ಕ ಪೊಟ್ಟಣಗಳಿರುತ್ತವೆ. ಆದರೆ, ಕನ್ನಡದಲ್ಲಿ ಪ್ರತಿ ಉತ್ಪನ್ನಗಳ ಮೇಲೆ ಮಾಹಿತಿ ಸಿಗಬೇಕು. ಇದು ದೇಶೀ ಮತ್ತು ರಾಜ್ಯ ಭಾಷೆಯನ್ನು ಉಳಿಸುವ ಪ್ರಯತ್ನವಾಗಿಯೂ ಇರಬೇಕು. ಇದಕ್ಕೆಲ್ಲ ಪ್ರಜಾಸತ್ತಾತ್ಮಕ ತೀರ್ಮಾನಗಳು ಆಗಬೇಕು. ಸರೋಜಿನಿ ಮಹಿಷಿ ವರದಿಗೆ ಕಾನೂನಿನ ಚೌಕಟ್ಟಿಲ್ಲದ ಪರಿಣಾಮ ಅನುಷ್ಠಾನ ಸಾಧ್ಯವಾಗಿಲ್ಲ. ಯಾವುದೇ ವರದಿಗಳಿಗೆ ಕಾನೂನು ಹಾಗೂ ವಿಧೇಯಕದ ಚೌಕಟ್ಟು ಇರಬೇಕು. ಇಲ್ಲದಿದ್ದರೆ ನಿಯಮಗಳ ಪಾಲನೆ ಸಾಧ್ಯವಿಲ್ಲ" ಎಂದು ಅಭಿಪ್ರಾಯಪಟ್ಟರು.

ಆಶ್ವಾಸನೆಗಳು ಕಾನೂನಾತ್ಮಕವಾಗಿ ಜಾರಿಗೆ ಬರಲಿ: ಎಸ್ ಜಿ ಸಿದ್ದರಾಮಯ್ಯ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್ ಜಿ ಸಿದ್ದರಾಮಯ್ಯ ಮಾತನಾಡಿ, "ಉತ್ಪನ್ನಗಳ ಮೇಲೆ ಕನ್ನಡ ಕಡ್ಡಾಯ ಮಾಡಲು 2017ರಲ್ಲೇ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ನಾನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿದ್ದಾಗ ಕರ್ನಾಟಕ ಸರ್ಕಾರದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತಕ್ಕೆ ಭೇಟಿ ನೀಡಿ, ಎಲ್ಲ ಉತ್ಪನ್ನಗಳ ಮೇಲೆ ಕನ್ನಡ ಕಡ್ಡಾಯಗೊಳಿಸಿ ಬಂದೆ. ಅದು ಈಗ ಮುಂದುವರಿದಿದೆ. ಆದರೆ ಖಾಸಗಿ ಉತ್ಪನ್ನಗಳ ಮೇಲೆ ನಿಯಂತ್ರಣವಿಲ್ಲ. ಸರ್ಕಾರ ಈ ಬಗ್ಗೆ ಆದೇಶ ಮಾಡಲೇಬೇಕು. ಕೇವಲ ಆಶ್ವಾಸನೆ ಕೊಟ್ಟರೆ ಸಾಲದು. ಆಶ್ವಾಸನೆಗಳು ಕಾನೂನಾತ್ಮಕವಾಗಿ ಜಾರಿಗೆ ಬಂದರಷ್ಟೇ ಅವುಗಳಿಗೆ ಅರ್ಥ. ಸರ್ಕಾರ ಇನ್ನಾದರೂ ಈ ಬಗ್ಗೆ ಆದೇಶ ಮಾಡುತ್ತದೆ ಎಂದು ನಿರೀಕ್ಷಿಸುವೆ" ಎಂದು ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆಯ ಮುಖ್ಯ ವಕ್ತಾರ ಅರುಣ್ ಜಾವಗಲ್ ಮಾತನಾಡಿ, “ಖಾಸಗಿ ಕಂಪನಿಗಳಿಗೆ ತಮ್ಮ ಉತ್ಪನ್ನಗಳ ಮಾರಾಟಕ್ಕೆ ಪ್ರಾದೇಶಿಕ ಭಾಷೆಗಳ ನೆಲ, ಜಲ, ಜನ ಬೇಕು. ಆದರೆ, ಪ್ರಾದೇಶಿಕ ಭಾಷೆ ಬೇಡವಾಗಿದೆ. ಮೊದಲ ತಪ್ಪು ಸರ್ಕಾರದ ನೀತಿ ನಿಯಮಗಳಲ್ಲೇ ಅಡಗಿದೆ. ಕರ್ನಾಟಕ ರಾಜ್ಯವನ್ನು ಪ್ರವೇಶಿಸುವ ಎಲ್ಲ ಉತ್ಪನ್ನಗಳ ಮೇಲೆ ಕನ್ನಡವಿರಬೇಕು. ಕರ್ನಾಟಕಕ್ಕೆ ಬರುವ ಏಜೆನ್ಸಿಗಳು ಕನ್ನಡಿಗರಿಗೆ ಸಿಗಬೇಕು. ಕನ್ನಡಿಗರು ಉದ್ಯಮ ಕಟ್ಟಬೇಕು ಎಂದು ಬಹಳ ಹಿಂದಿನಿಂದಲೂ ಆಗ್ರಹಿಸುತ್ತ ಬರಲಾಗಿದೆ. ಸಿದ್ದರಾಮಯ್ಯ ಅವರಿಗೆ ಕನ್ನಡದ ಬಗ್ಗೆ ಅಲ್ಪಸ್ವಲ್ಪ ನೈಜವಾದ ಕಾಳಜಿ ಇದೆ ಎನ್ನುವುದಾದರೆ, ಎಲ್ಲ ಉತ್ಪನ್ನಗಳ ಮೇಲೆ ಕನ್ನಡ ಇರುವುದು, ಉತ್ಪನ್ನ ಏಜೆನ್ಸಿಗಳು ಕನ್ನಡಿಗರಿಗೆ ಸಿಗಬೇಕು. ಕೂಡಲೇ ಇದು ಕಾಯ್ದೆಯಾಗಿ ಜಾರಿಗೆ ಬರಬೇಕು. ಅಧಿಕಾರ ಶಾಶ್ವತ ಅಲ್ಲ, ಸಿದ್ದರಾಮಯ್ಯ ಅವರು ಮನಸ್ಸು ಮಾಡಲಿ” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ‘ನಂದಿನಿ’ ಮೇಲೆ ಮತ್ತೆ ಅಮುಲ್ ಆಕ್ರಮಣ – ದರ ಸಮರ ತಂತ್ರ!
ಹಿಂದಿ ಹೇರಿಕೆಯನ್ನು ಕಟುವಾಗಿ ವಿರೋಧಿಸುವ ಬನವಾಸಿ ಬಳಗದ ಗಣೇಶ್ ಚೇತನ್ ಅವರು ಮಾತನಾಡಿ, “ಇದು ಬರೀ ಅಮುಲ್ ಒಂದೇ ವಿಚಾರವಲ್ಲ. ರಾಜ್ಯದಲ್ಲಿನ ಬಹಳಷ್ಟು ಉತ್ಪನ್ನಗಳ ಮೇಲೆ ಇಂಗ್ಲಿಷ್ ಇಲ್ಲವೇ ಹಿಂದಿ ಇರುತ್ತದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಸಹ ಈ ಎರಡೂ ಭಾಷೆಗಳನ್ನು ಮಾತ್ರ ಕಡ್ಡಾಯಗೊಳಿಸಿದೆ. ಪ್ರಾದೇಶಿಕ ಭಾಷೆಗಳನ್ನೂ ಬಳಸಬಹುದು ಎಂದು ಉಲ್ಲೇಖಿಸಿದೆ. ಅದರೆ, ಅದು ಕಡ್ಡಾಯವಿಲ್ಲ. ಹೀಗಾಗಿ ಇಂಗ್ಲಿಷ್ ಎಲ್ಲ ಉತ್ಪನ್ನಗಳ ಮೇಲೆ ಎದ್ದು ಕಾಣುತ್ತದೆ. ರಾಜ್ಯ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು ಉತ್ಪನ್ನಗಳ ಮೇಲೆ ಕನ್ನಡ ಕಡ್ಡಾಯ ಎಂಬ ನಿಯಮ ತಂದರೆ ಇಂತಹ ಸಮಸ್ಯೆಗಳಿಗೆ ಉತ್ತರ ಸಿಗುತ್ತದೆ. ಸರ್ಕಾರವೇ ಈ ಬಗ್ಗೆ ಕ್ರಮ ತೆಗೆದುಕೊಳ್ಳದ ಹೊರತು ನಾವು ಎಷ್ಟೇ ಮಾತನಾಡಿ, ಪ್ರತಿಭಟಿಸಿದರೂ ನ್ಯಾಯ ಸಿಗಲ್ಲ” ಎಂದರು.

‘ದಹಿ’ ವಿವಾದ
2023ರಲ್ಲಿ ಮೊಸರು ಪ್ಯಾಕೆಟ್‌ಗಳ ಮೇಲೆ ಹಿಂದಿ ಪದ ‘ದಹಿ’ ಎಂದು ನಮೂದಿಸುವಂತೆ ಹೊರಡಿಸಿದ್ದ ನಿರ್ದೇಶನಕ್ಕೆ ದಕ್ಷಿಣ ಭಾರತ, ಅದರಲ್ಲೂ ವಿಶೇಷವಾಗಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ಕಡ್ಡಿಮುರಿದಂತೆ ವಿರೋಧಿಸಿದ್ದವು.
ತಮಿಳುನಾಡು ಸಹಕಾರ ಹಾಲು ಉತ್ಪಾದಕರ ಒಕ್ಕೂಟ ಒಂದು ಹೆಜ್ಜೆ ಮುಂದೆ ಹೋಗಿ, ಹಿಂದಿಯ ‘ದಹಿ’ ಶಬ್ದ ಬಳಸುವುದಿಲ್ಲ. ತಮಿಳು ಶಬ್ದ ‘ತಯಿರ್’ ಮಾತ್ರ ಬಳಸುತ್ತೇವೆ. ಇಂತಹ ಬಳಕೆಯನ್ನು ಶಾಶ್ವತವಾಗಿಯೇ ದಕ್ಷಿಣದಿಂದ ನಿಷೇಧಿಸಲಾಗುವುದು” ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಕಟುವಾಗಿ ಪ್ರತ್ಯುತ್ತರ ನೀಡಿದ್ದರು. ಈಗಲೂ ತಮಿಳುನಾಡಿನಲ್ಲಿ ಯಾವುದೇ ಉತ್ಪನ್ನ ಮಾರಾಟವಾದರೂ ಮೊದಲ ಆದ್ಯತೆ ತಮಿಳು ಭಾಷೆಗೆ. ನಂತರದ ಸ್ಥಾನದಲ್ಲಿ ಇಂಗ್ಲಿಷ್ ಬಳಕೆಯಿದೆ. ಇದನ್ನು ತಮಿಳುನಾಡು ಸರ್ಕಾರ ಕಾಯ್ದೆಯಾಗಿಯೇ ಜಾರಿಗೆ ತಂದಿದೆ.
‘ದಹಿ’ ವಿವಾದದ ವೇಳೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಿದ್ದರಿಂದ ಆ ಬಗ್ಗೆ ತುಟಿ ಬಿಚ್ಚಲಿಲ್ಲ. ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ “ಕೆಎಂಎಫ್ ಮೇಲೆ ಅಮಿತ್ ಶಾ ಕಣ್ಣು ಬಿದ್ದಿದ್ದೇ ತಡ, ನೇಮಕಾತಿಯ ಹೊಣೆಯನ್ನು ಗುಜರಾತ್ ಮೂಲದ ಏಜೆನ್ಸಿಗೆ ವಹಿಸಲಾಯ್ತು. ಕೆಎಂಎಫ್ ನೇಮಕಾತಿಗಳಲ್ಲಿ ಅಕ್ರಮ ನಡೆಯಿತು. ಮೊಸರಿನ ಪ್ಯಾಕ್ ಮೇಲೆ ಹಿಂದಿಯ ‘ದಹಿ’ ಬರೆಯುವುದು ಕಡ್ಡಾಯವಾಯಿತು. ಇದೆಲ್ಲವೂ ಕರ್ನಾಟಕದ ‘ನಂದಿನಿ’ಯನ್ನು ಬಲಿ ಕೊಡಲು ನಡೆಸಿದ ಬಲಿಪೀಠದ ತಯಾರಿ” ಎಂದು ಗಂಭೀರವಾಗಿ ಆರೋಪಿಸಿತ್ತು.
ವಿರೋಧ ಹೆಚ್ಚಾಗಿದ್ದರಿಂದ ವಿಧಿಯಿಲ್ಲದೇ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (ಎಫ್‌ಎಸ್‌ಎಸ್‌ಎಐ) ತನ್ನ ಆದೇಶವನ್ನು ಪರಿಷ್ಕರಿಸಿ, “ಪ್ರಾದೇಶಿಕ ಭಾಷೆಗಳನ್ನು ಪ್ಯಾಕೆಟ್ ಮೇಲೆ ಮುದ್ರಿಸಲು ಅವಕಾಶ ಕಲ್ಪಿಸಿತು. ಇಂಗ್ಲಿಷ್ ಜತೆ ಯಾವುದೇ ಪ್ರಾದೇಶಿಕ ಭಾಷೆಯನ್ನು ಬಳಸಬಹುದಾಗಿದೆ” ಎಂದಿತು.
ಕನ್ನಡ ಹೀಯಾಳಿಸುವುದು ನಾಡದ್ರೋಹ!
ದಿ.ದೇವರಾಜ ಅರಸು ಅವರ ಅವಧಿಯಲ್ಲಿ 1973ರ ನವೆಂಬರ್ 1 ರಂದು ಮೈಸೂರು ರಾಜ್ಯಕ್ಕೆ ಇಡೀ ರಾಜ್ಯಕ್ಕೆ ‘ಕರ್ನಾಟಕ’ ಎಂದು ಮರುನಾಮಕರಣ ಮಾಡಿ 50 ವರ್ಷಗಳ ಸಂದ ಸಮಯದಲ್ಲಿ ಸುವರ್ಣ ಸಂಭ್ರಮವನ್ನು ಕಾಂಗ್ರೆಸ್ ಸರ್ಕಾರ ಉತ್ಸುಕತೆಯಿಂದ ಆಚರಿಸಿತು. 2023ರ ನವೆಂಬರ್ 1ರಿಂದ ‘ಹೆಸರಾಯಿತು ಕರ್ನಾಟಕ, ಉಸಿರಾಯಿತು ಕನ್ನಡ’ ಎಂಬ ಘೋಷವಾಕ್ಯದಡಿ ಕನ್ನಡ ನಾಡು, ನುಡಿ, ನೆಲ, ಜಲದ ಮಹತ್ವ ಪ್ರಚುರಪಡಿಸುವುದರೊಂದಿಗೆ ಇಡೀ ವರ್ಷವನ್ನು ಕನ್ನಡದ ಹೆಸರಲ್ಲಿ ಸರ್ಕಾರ ಸಂಭ್ರಮವನ್ನು ಆಚರಿಸಿದೆ.
“ನಾನು ಅಧಿಕಾರದಲ್ಲಿರುವಾಗ ಕನ್ನಡಕ್ಕೆ ಚ್ಯುತಿಯಾಗಲು ಬಿಡುವುದಿಲ್ಲ. ಮನುಷ್ಯ ಮನುಷ್ಯನನ್ನು ಪ್ರೀತಿಸುವ ವಿಷಯದಲ್ಲಿ ಉದಾರತನವಿರಬೇಕೇ ಹೊರತು ಭಾಷೆ ಸಂಸ್ಕೃತಿಯ ವಿಚಾರಕ್ಕಲ್ಲ. ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷೆ ಎಂಬ ಸ್ಥಾನಮಾನ ದೊರೆತಿದೆ. ಕನ್ನಡಕ್ಕೆ ಸೂಕ್ತ ಗೌರವ ಸಿಗುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ. ರಾಜ್ಯದಲ್ಲಿ ಮಾರಾಟವಾಗುವ ಉತ್ಪನ್ನಗಳ ಮೇಲೆ ಇಂಗ್ಲಿಷ್‌ನಲ್ಲಿ ಮಾತ್ರ ಹೆಸರು ಮುದ್ರಿತವಾಗಿರುತ್ತದೆ. ಇನ್ನು ಮುಂದೆ ಕನ್ನಡದಲ್ಲೂ ಹೆಸರು ಮುದ್ರಿಸುವುದನ್ನು ಕಡ್ಡಾಯಗೊಳಿಸಲಾಗುವುದು. ಕನ್ನಡವನ್ನು ಹೀಯಾಳಿಸುವುದು ನಾಡದ್ರೋಹ. ಉಲ್ಲಂಘನೆ ಕಂಡುಬಂದರೆ ಸರ್ಕಾರದಿಂದ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದಿದ್ದ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದರು.
ಈ ಎಚ್ಚರಿಕೆಗೆ ಇನ್ನಾದರೂ ಶಕ್ತಿ ಬರಲಿ.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.