ತಾನು ಎರಡನೇ ಬಾರಿಗೆ ಅಮೆರಿಕ ಅಧ್ಯಕ್ಷರಾದ ಬಳಿಕ ಭಾರತೀಯರು ಸೇರಿದಂತೆ ಅಕ್ರಮವಾಗಿ ನೆಲೆಸಿರುವ ವಲಸಿಗರ ಕೈಗೆ ಕೋಳ ಹಾಕಿ ಅಮೆರಿಕದಿಂದ ಹೊರದಬ್ಬಿದ ಡೊನಾಲ್ಡ್ ಟ್ರಂಪ್ ಈಗ ಶ್ರೀಮಂತ ವಲಸಿಗರಿಗೆ ಆಫರ್ ಒಂದನ್ನು ನೀಡಿದ್ದಾರೆ. 5 ಮಿಲಿಯನ್ ಡಾಲರ್ ನೀಡಿದರೆ ಅಮೆರಿಕದ ಪೌರತ್ವ ನೀಡುವ ‘ಗೋಲ್ಡ್ ಕಾರ್ಡ್’ ಆಫರ್ ಅನ್ನು ಶ್ರೀಮಂತ ವಲಸಿಗರಿಗೆ ಟ್ರಂಪ್ ನೀಡಿದ್ದಾರೆ. ಈ ಹೊಸ ಯೋಜನೆಯನ್ನು ಮಂಗಳವಾರ ಮಂಡಿಸಿದ್ದಾರೆ.
ಅಮೆರಿಕದಲ್ಲಿ ಉದ್ಯೋಗಗಳನ್ನು ಸೃಷ್ಟಿಸುವ ಅಥವಾ ಸಂರಕ್ಷಿಸುವ, ಭಾರೀ ಮೊತ್ತದ ಹಣವನ್ನು ಹೂಡಿಕೆ ಮಾಡುವ ವಿದೇಶಿ ಹೂಡಿಕೆದಾರರು ಶಾಶ್ವತ ನಿವಾಸಿಗಳಾಗಲು ಅನುವು ಮಾಡಿಕೊಡುವ ‘ಇಬಿ-5’ ವಲಸೆ ಹೂಡಿಕೆದಾರರ ವೀಸಾ ಕಾರ್ಯಕ್ರಮವನ್ನು ‘ಗೋಲ್ಡ್ ಕಾರ್ಡ್’ ಎಂದು ಬದಲಾಯಿಸುವುದಾಗಿ ಟ್ರಂಪ್ ವರದಿಗಾರರಿಗೆ ತಿಳಿಸಿದರು.
ಇದನ್ನು ಓದಿದ್ದೀರಾ? ಉಕ್ರೇನ್ ಕುರಿತ ನಿರ್ಣಯಗಳ ಮತದಾನದಿಂದ ದೂರ ಉಳಿದ ಭಾರತ: ಅಮೆರಿಕಕ್ಕೆ ಹಿನ್ನಡೆ
“ಅಮೆರಿಕದ ವ್ಯವಹಾರಗಳಲ್ಲಿ ಹೂಡಿಕೆ ಮಾಡುವ ಭರವಸೆ ನೀಡುವ ವಿದೇಶಿಯರಿಗೆ ಇಬಿ-5 ಕಾರ್ಯಕ್ರಮದಡಿಯಲ್ಲಿ ‘ಗ್ರೀನ್ ಕಾರ್ಡ್’ಗಳನ್ನು ನೀಡಲಾಗುವುದು. ನಾವು ಗೋಲ್ಡ್ ಕಾರ್ಡ್ ಮಾರಾಟ ಮಾಡಲಿದ್ದೇವೆ. ನಾವು ಆ ಕಾರ್ಡ್‌ಗೆ ಸುಮಾರು ಸುಮಾರು 5 ಮಿಲಿಯನ್ ಡಾಲರ್ (43,52,00,022.50 ಭಾರತೀಯ ರೂಪಾಯಿ) ಬೆಲೆಯನ್ನು ನಿಗದಿಪಡಿಸಲಿದ್ದೇವೆ” ಎಂದು ಟ್ರಂಪ್ ತಿಳಿಸಿದ್ದಾರೆ.
“ಇದು ನಿಮಗೆ ಗ್ರೀನ್ ಕಾರ್ಡ್ ಸವಲತ್ತುಗಳನ್ನು ನೀಡಲಿದೆ. ಇದು ಅಮೆರಿಕದ ಪೌರತ್ವಕ್ಕೆ ಒಂದು ಮಾರ್ಗವಾಗಲಿದೆ. ಶ್ರೀಮಂತ ಜನರು ಈ ಕಾರ್ಡ್ ಖರೀದಿಸುವ ಮೂಲಕ ನಮ್ಮ ದೇಶಕ್ಕೆ ಬರಬಹುದು. ಈ ಯೋಜನೆಯ ಬಗ್ಗೆ ಎರಡು ವಾರಗಳಲ್ಲಿ ವಿವರಗಳನ್ನು ನೀಡಲಾಗುವುದು” ಎಂದು ಹೇಳಿದರು.
ಇದನ್ನು ಓದಿದ್ದೀರಾ? ‘ಡಂಕಿ ಮಾರ್ಗ’ ಮೂಲಕ ಅಮೆರಿಕಕ್ಕೆ ಹೋದ 42 ಭಾರತೀಯ ಯುವಕರು 15 ವರ್ಷಗಳಿಂದ ನಾಪತ್ತೆ
ಇನ್ನು ರಷ್ಯಾದ ಉದ್ಯಮಿಗಳು ಗೋಲ್ಡ್ ಕಾರ್ಡ್‌ಗಳನ್ನು ಪಡೆಯುವ ಅರ್ಹತೆ ಹೊಂದಿರುತ್ತಾರೆಯೇ ಎಂಬ ಮಾಧ್ಯಮದ ಪ್ರಶ್ನೆಗೆ ಟ್ರಂಪ್ ಪ್ರತಿಕ್ರಿಯಿಸಿದ್ದಾರೆ. “ಅವರೂ ಕೂಡಾ ಗೋಲ್ಡ್ ಕಾರ್ಡ್‌ಗಳಿಗೆ ಅರ್ಹತೆ ಪಡೆಯುವ ಸಾಧ್ಯತೆಯಿದೆ. ಹೌದು, ಪ್ರಾಯಶಃ ಪಡೆಯಬಹುದು. ಕೆಲವು ರಷ್ಯಾದ ಉದ್ಯಮಿಗಳು ಕೂಡಾ ತುಂಬಾ ಒಳ್ಳೆಯ ಜನರು ಎಂದು ತಿಳಿದಿದೆ” ಎಂದರು.
ವಿದೇಶಿ ಹೂಡಿಕೆದಾರರಿಂದ ಉದ್ಯೋಗ ಸೃಷ್ಟಿ ಮತ್ತು ಬಂಡವಾಳ ಹೂಡಿಕೆಯ ಮೂಲಕ ಯುಎಸ್ ಆರ್ಥಿಕತೆಯನ್ನು ಉತ್ತೇಜಿಸಲು 1990ರಲ್ಲಿ ಅಮೆರಿಕ ಇಬಿ-5 ವಲಸೆ ಹೂಡಿಕೆದಾರರ ಕಾರ್ಯಕ್ರಮವನ್ನು ಪ್ರಾರಂಭಿಸಿದೆ.
ತಾನು ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಹಲವು ವಿವಾದಾತ್ಮಕ ಯೋಜನೆಗಳನ್ನು, ನೀತಿಗಳನ್ನು ಜಾರಿ ಮಾಡಿರುವ ಟ್ರಂಪ್, ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಆಮದು ಸುಂಕವನ್ನು ಹೆಚ್ಚಿಸಿದ್ದಾರೆ.
