ಈ ದಿನ ಸಂಪಾದಕೀಯ | ಕೊಳೆಗೇರಿಗಳ ಜನ ನೀರು ನೆರಳು ಬೆಳಕಿಲ್ಲದೆ ನರಳಬೇಕಿರುವುದು ನಾಗರಿಕ ಸಮಾಜದ ನಾಚಿಕೆಗೇಡು

Date:

Advertisements

ಭಾರತದ ಸಂವಿಧಾನದ ಪ್ರಕಾರ ದೇಶದ ಸಂಪನ್ಮೂಲಗಳಲ್ಲಿ ಎಲ್ಲ ನಾಗರಿಕರೂ ಪಾಲು ಹೊಂದಿದ್ದಾರೆ. ದೇಶದಲ್ಲಿ ಸಂಪತ್ತಿನ ಮರುಹಂಚಿಕೆ ಆಗಬೇಕು. ಭೂಸುಧಾರಣೆಗಳು ಜಾರಿಗೆ ಬರಬೇಕು. ಈ ಮೂಲಭೂತ ಸುಧಾರಣೆಗಳಿಗೆ ಕೈಹಾಕಲು ಯಾವ ಸರ್ಕಾರವೂ ತಯಾರಿಲ್ಲ. ಬರಿದೇ ಬಡವರ ತುಟಿಗಳಿಗೆ ತುಪ್ಪ ಸವರುತ್ತ ಬರಲಾಗಿದೆ.


ಸೋಮವಾರ (ಫೆ.24) ಫ್ರೀಡಂ ಪಾರ್ಕಿನಲ್ಲಿ ಸೇರಿದ್ದ ಕೊಳೆಗೇರಿ ನಿವಾಸಿಗಳು ಕುಡಿಯುವ ನೀರು, ರಸ್ತೆ, ಚರಂಡಿ, ಬೀದಿ ದೀಪ, ಶೌಚಾಲಯ ಮುಂತಾದ ಮೂಲಸೌಲಭ್ಯಗಳಿಗಾಗಿ ಆಗ್ರಹಿಸಿದ್ದಾರೆ. ಈ ಕುರಿತು ರಾಜ್ಯ ಸರ್ಕಾರ ನಿರ್ಲಕ್ಷ್ಯ ತಳೆದಿದೆ ಎಂದು ಅವರು ವ್ಯಕ್ತಪಡಿಸಿರುವ ಆಕ್ರೋಶ ನ್ಯಾಯಬದ್ಧವಾಗಿದೆ. ಕೊಳೆಗೇರಿ ನಿವಾಸಿಗಳೂ ಘನತೆಯಿಂದ ಬದುಕುವ ಹಕ್ಕನ್ನು ಹೊಂದಿದ್ದಾರೆ.

ಜನಸಂಖ್ಯೆ ಹೆಚ್ಚಳಕ್ಕೆ ಅನುಗುಣವಾಗಿ ಕಾಲಕಾಲಕ್ಕೆ ವಸತಿಹೀನರಿಗೆ ಮನೆ ಕಟ್ಟಿಕೊಳ್ಳಲು ನಿವೇಶನ ಕೊಡುವ ವಿಷಯದಲ್ಲಿ ಸರ್ಕಾರಗಳು ವಿಫಲವಾಗಿರುವ ಕಾರಣ ಕೊಳೆಗೇರಿಗಳ ಸಂಖ್ಯೆ ಹೆಚ್ಚಾಗಿದೆ. ಇನ್ನು ಕೇವಲ ಎಂಟು ವರ್ಷ ಅಂದರೆ 2015ರೊಳಗೆ ನಮ್ಮ ರಾಜ್ಯ ಕೊಳೆಗೇರಿ ರಹಿತ ಕರ್ನಾಟಕವಾಗಲಿದೆ ಎಂದು ಅಂದಿನ ವಸತಿ ಸಚಿವ ದಿವಂಗತ ಡಿ.ಟಿ.ಜಯಕುಮಾರ್ 2007ರಲ್ಲಿ ಭರವಸೆ ನೀಡಿದ್ದುಂಟು. ಆಳುವವರು ದೀನ ದರಿದ್ರರ ಕುರಿತು ಇಂತಹ ಅನೇಕ ಜೋಕ್ ಗಳನ್ನು ಹಿಂದೆ ಮಾಡಿದ್ದಾರೆ, ಮುಂದೆಯೂ ಮಾಡಲಿದ್ದಾರೆ.

ಸಂವಿಧಾನದ 19(1)(ಇ) ಮತ್ತು 21ನೆಯ ಅನುಚ್ಛೇದಗಳು ದೇಶದಲ್ಲಿ ಯಾರು ಎಲ್ಲಿ ಬೇಕಾದರೂ ವಾಸಿಸುವ ಮತ್ತು ನೆಲೆಸುವ ಮೂಲಭೂತ ಸ್ವಾತಂತ್ರ್ಯವನ್ನು ಮತ್ತು ಪ್ರಾಣ ಸಂರಕ್ಷಣೆಯ ಹಕ್ಕನ್ನು ನಾಗರಿಕರಿಗೆ ನೀಡಿವೆ. ಈ ಹಕ್ಕುಗಳನ್ನು ಯಾವುದೇ ತಾರತಮ್ಯವಿಲ್ಲದೆ ಆಚರಣೆಗೆ ತರುವುದು ಸರ್ಕಾರಗಳ ಕರ್ತವ್ಯ.

ಭಾರತದ ಸಂವಿಧಾನದ ಪ್ರಕಾರ ದೇಶದ ಸಂಪನ್ಮೂಲಗಳಲ್ಲಿ ಎಲ್ಲ ನಾಗರಿಕರೂ ಪಾಲು ಹೊಂದಿದ್ದಾರೆ. ದೇಶದಲ್ಲಿ ಸಂಪತ್ತಿನ ಮರುಹಂಚಿಕೆ ಆಗಬೇಕು. ಭೂಸುಧಾರಣೆಗಳು ಜಾರಿಗೆ ಬರಬೇಕು. ಈ ಮೂಲಭೂತ ಸುಧಾರಣೆಗಳಿಗೆ ಕೈಹಾಕಲು ಯಾವ ಸರ್ಕಾರವೂ ತಯಾರಿಲ್ಲ. ಬರಿದೇ ಬಡವರ ತುಟಿಗಳಿಗೆ ತುಪ್ಪ ಸವರುತ್ತ ಬರಲಾಗಿದೆ.

ಚಿಂದಿ ಆಯುವವರು, ದಿನಗೂಲಿ ಕಾರ್ಮಿಕರು, ಮನೆಗೆಲಸದವರು ಮುಂತಾದವರೇ ಮುಖ್ಯವಾಗಿ ಕೊಳೆಗೇರಿ ನಿವಾಸಿಗಳು. ಇವರ ಪೈಕಿ ಬಹುತೇಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು, ಹಿಂದುಳಿದ ವರ್ಗಗಳ ಬಡವರು ಬಹುಜನರೇ ಇದ್ದಾರೆ. ಮಲವಿಸರ್ಜನೆಗೆ ದೂರ ದೂರ ಹೋಗಬೇಕು. ಕತ್ತಲಾದ ಮೇಲೆ ಮೇಣದ ಬತ್ತಿ ಉರಿಸಬೇಕು, ಕುಡಿಯುವ ನೀರನ್ನು ಖರೀದಿಸಬೇಕು.

ಕೊಳೆಗೇರಿಗಳ ನಿವಾಸಿಗಳು ಇಷ್ಟಪಟ್ಟು ಅಲ್ಲಿ ನೆಲೆಸಿಲ್ಲ. ಮನುಷ್ಯ ವಾಸಕ್ಕೆ ಯೋಗ್ಯ ಅಲ್ಲದ ವಾತಾವರಣದಲ್ಲಿ ಬದುಕಲು ಯಾರು ತಾನೇ ಬಯಸುತ್ತಾರೆ? ಹೊಟ್ಟೆ ಹೊರೆಯುವುದೇ ದುಸ್ತರವಾಗಿ ಬದುಕುಗಳ ಭಾರದಲ್ಲಿ ಕುಗ್ಗಿ ಹೋಗಿರುವ ಈ ಜನರಿಗೆ ಬೇರೆ ಯಾವ ಆಯ್ಕೆಗಳೂ ಇಲ್ಲ. ಬೇರೆ ದಾರಿಯೇ ಇಲ್ಲದ ಅನಿವಾರ್ಯದ ಪರಿಸ್ಥಿತಿ ಅವರನ್ನು ಕೊಳೆಗೇರಿಗಳಿಗೆ ತಳ್ಳಿದೆ. ಅವರನ್ನು ಕೊಳೆಗೇರಿಗಳಿಂದ ಮೇಲೆತ್ತಿ ಘನತೆಯ ಬದುಕಿಗೆ ಕರೆತರುವುದು ಯಾವುದೇ ಕಲ್ಯಾಣ ರಾಜ್ಯದ ಮೂಲಭೂತ ಕರ್ತವ್ಯ. ಉಳ್ಳವರ ಸಾಮಾಜಿಕ ಬಾಧ್ಯತೆ.

ಘೋಷಿತ ಮತ್ತು ಅಘೋಷಿತ ಎಂಬ ಎರಡು ಬಗೆಯ ಕೊಳೆಗೇರಿಗಳಿವೆ. ಪುರಸಭೆಗಳು, ನಗರಪಾಲಿಕೆಗಳು, ಸ್ಥಳೀಯ ಸಂಸ್ಥೆಗಳು ಅಥವಾ ಅಭಿವೃದ್ಧಿ ಪ್ರಾಧಿಕಾರಗಳಿಂದ ಅಧಿಕೃತ ಮಾನ್ಯತೆ ದೊರಕಿರುವ ಕೊಳೆಗೇರಿಗಳು ಘೋಷಿತ ಕೊಳೆಗೇರಿಗಳು. ನಿರ್ದಿಷ್ಟ ಕೊಳೆಗೇರಿಗೆ ಸರ್ಕಾರದ ಮೂಲಭೂತ ಸೌಕರ್ಯಗಳು ದೊರೆಯಬೇಕಿದ್ದರೆ, ಅದು ಮಾನ್ಯತೆ ಪಡೆದ ಕೊಳೆಗೇರಿಯಾಗಿರಬೇಕು ಎನ್ನುತ್ತದೆ 1973ರ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಕಾಯಿದೆ. ಅಘೋಷಿತ ಅಥವಾ ಮಾನ್ಯತೆ ಇಲ್ಲದ ಕೊಳೆಗೇರಿಗಳಿಗೆ ಯಾವ ಸೌಲಭ್ಯವನ್ನೂ ನೀಡಲು ಸಾಧ್ಯವಿಲ್ಲವೆಂದು ಕೊಳಗೇರಿ ನಿರ್ಮೂಲನ ಮಂಡಳಿ ಕೈ ಚೆಲ್ಲಿಬಿಡಬಹುದಾಗಿದೆ.

ಮಾನ್ಯತೆ ಪಡೆಯದ ಅನಧಿಕೃತ ಕೊಳೆಗೇರಿಗಳಲ್ಲಿ ಬದುಕುವವರು ಸರ್ಕಾರಿ ಸೌಲಭ್ಯಗಳಿಗೆ ಅರ್ಜಿ ಹಾಕಿಕೊಳ್ಳುವಂತಿಲ್ಲ. ಅಧಿಕೃತ ಮಾನ್ಯತೆ ಪಡೆದ ಕೊಳೆಗೇರಿಗಳಲ್ಲಿಯೂ ಬದುಕು ಸಲೀಸಲ್ಲ, ಸ್ವಚ್ಛ ವಾತಾವರಣವೇನೂ ಇಲ್ಲ. ರಸ್ತೆ, ನೀರು, ವಿದ್ಯುಚ್ಛಕ್ತಿ ಸಂಪರ್ಕ, ವಸತಿ ಒದಗಿಸಲಾಗಿರುವ ಕೊಳೆಗೇರಿಗಳಲ್ಲಿ ಕಾಲಕಾಲಕ್ಕೆ ನಿರ್ವಹಣೆಯಿಲ್ಲ. ಈ ಕೊರತೆಯ ಕಾರಣ ಸೌಲಭ್ಯಗಳು ಹಾಳುಬಿದ್ದಿವೆ. ಒಳಚರಂಡಿ ನೀರು ತುಂಬಿ ರಸ್ತೆಗೆ ಹರಿಯುವುದು, ರಸ್ತೆಗಳು ಹದಗೆಟ್ಟಿರುವುದು ಸರ್ವೇ ಸಾಮಾನ್ಯ ಸಮಸ್ಯೆ.

ರಾಜ್ಯದ ಶೇ.40ರಷ್ಟು ಜನಸಂಖ್ಯೆ ಕೊಳೆಗೇರಿಗಳಲ್ಲಿ ವಾಸಿಸುತ್ತಿದೆ. ಆದರೂ ಅವರನ್ನು ನಗರಪ್ರದೇಶದ ಮೂಲಸೌಲಭ್ಯಗಳು ಮತ್ತು ಸೇವೆಗಳಿಂದ ವಂಚಿತರನ್ನಾಗಿ ಇಡಲಾಗಿದೆ ಎಂಬುದು ಸ್ಲಮ್ ಜನಾಂದೋಲನ ಕರ್ನಾಟಕದ ಸಂಚಾಲಕ ಎ. ನರಸಿಂಹಮೂರ್ತಿಯವರ ಹೇಳಿಕೆ.

ರಾಜ್ಯದಲ್ಲಿ ಸುಮಾರು 709 ಕೊಳೆಗೇರಿಗಳು ಖಾಸಗಿ ಜಮೀನಿನಲ್ಲಿವೆ. ಇವುಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲ. ಮಾನ್ಯತೆ ದೊರೆಯದೆ ಕರ್ನಾಟಕ ಕೊಳೆಗೇರಿ ನಿರ್ಮೂಲನ ಮಂಡಳಿ ಯಾವುದೇ ಮೂಲಭೂತ ಸೌಕರ್ಯಗಳನ್ನು ಈ ಕೊಳೆಗೇರಿಗಳಿಗೆ ನೀಡುವಂತಿಲ್ಲ. ಮಾನ್ಯತೆ ನೀಡುವುದೆಂದರೆ ತಕ್ಷಣ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದೇ ಆಗಿದೆ. ಸೌಲಭ್ಯಗಳನ್ನು ಒದಗಿಸಲು ಹಣ ಬೇಕು. ಸರ್ಕಾರದಿಂದ ವಾರ್ಷಿಕ ಬಜೆಟ್ಟಿನಲ್ಲಿ ಹೆಚ್ಚಿನ ಹಣದ ಹಂಚಿಕೆಯಿಲ್ಲದೆ ಈ ಕೆಲಸ ನಡೆಯದು ಸಾವಿತ್ರಿ ಬಾಯಿ ಫುಲೆ ಮಹಿಳಾ ಸಂಘಟನೆಯ ಸಂಚಾಲಕಿ ಚಂದ್ರಮ್ಮ. ಖಾಸಗಿ ಜಮೀನಿನಲ್ಲಿರುವ ಕೊಳೆಗೇರಿಗಳಿಗೆ ಕೂಡ ಅಧಿಕೃತ ಮಾನ್ಯತೆ ನೀಡಬಹುದಾಗಿದೆ. ಈ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವಂತೆ ಮಂಡಳಿಯು ಸರ್ಕಾರಕ್ಕೆ ಶಿಫಾರಸು ಮಾಡುವ ಅವಕಾಶವಿದೆ. ಆದರೆ ಈ ಈ ಪ್ರಕ್ರಿಯೆಗೆ ಹೆಚ್ಚು ಕಾಲ ಬೇಕು.

ಖಾಸಗಿ ಮಾಲೀಕತ್ವದ ಕೊಳಚೆ ಪ್ರದೇಶಗಳ ಘೋಷಣೆಗೆ ತೊಡಕಾಗಿರುವ ವಸತಿ ಇಲಾಖೆಯ ಸುತ್ತೋಲೆಯನ್ನು ಹಿಂದಕ್ಕೆ ಪಡೆದು ಭೂಸ್ವಾಧೀನಕ್ಕೆ ಹಣ ಒದಗಿಸಬೇಕು. ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಸುವರ್ಣ ಸಂಭ್ರಮದ ನೆನಪಿಗಾಗಿ ಮಂಡಳಿಯ ಕಾಯಿದೆಗೆ ತಿದ್ದುಪಡಿ ತರುವ ಜೊತೆಗೆ ಕೊಳೆಗೇರಿಗಳ ಅಭಿವೃದ್ಧಿಗಾಗಿ 5 ಸಾವಿರ ಕೋಟಿ ರುಪಾಯಿಗಳನ್ನು ಮುಂಬರುವ ಬಜೆಟ್ಟಿನಲ್ಲಿ ಹಂಚಿಕೆ ಮಾಡಬೇಕು ಎಂಬುದು ಈ ಸಂಘಟನೆಗಳ ಆಗ್ರಹ.

ಕೊಳೆಗೇರಿ ನಿವಾಸಿಗಳ ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣಕ್ಕಾಗಿ ಪ್ರತ್ಯೇಕ ಸಚಿವಾಲಯ ಆರಂಭಿಸಬೇಕು. ಈ ಜನರ ಜೀವನೋಪಾಯಕ್ಕಾಗಿ ನಗರ ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಇತರೆ ವಂಚಿತ ಸಮುದಾಯಗಳಿಗೆ ವಸತಿ ಸೌಲಭ್ಯ ಕಲ್ಪಿಸಲು 2017-18ರ ಬಜೆಟ್ ಘೋಷಣೆಯಂತೆ ನಗರ ಭೂ ಬ್ಯಾಂಕ್ ಯೋಜನೆ ಜಾರಿಗೆ ತರಬೇಕು ಎಂಬ ಹಕ್ಕೊತ್ತಾಯವನ್ನೂ ಅವರು ಸರ್ಕಾರದ ಮುಂದಿಟ್ಟಿದ್ದಾರೆ.

ಕೊಳೆಗೇರಿಗಳಲ್ಲಿ ವಾಸಿಸುವ 3.36 ಲಕ್ಷ ಕುಟುಂಬಗಳ ಪೈಕಿ 1.64 ಲಕ್ಷ ಕುಟುಂಬಗಳಿಗೆ ಮಾತ್ರವೇ ಜಮೀನು ಒಡೆತನದ ಹಕ್ಕು ನೀಡಲಾಗಿದೆ. ರಾಜ್ಯದ ಅರ್ಧದಷ್ಟು ಕೊಳೆಗೇರಿಗಳು ಬೆಂಗಳೂರು ನಗರದಲ್ಲಿದ್ದು, ಇಲ್ಲಿನ ನಿವಾಸಿಗಳ ಮರುವಸತಿಗಾಗಿ ಭೂ ಮಂಜೂರಾತಿ ನೀಡಲು ಜಿಲ್ಲಾಧಿಕಾರಿಗೆ ಸೂಚಿಸಬೇಕು ಎಂಬುದು ಅವರ ಒತ್ತಾಯ. ರಾಜ್ಯದಲ್ಲಿ ಕೊಳಚೆ ಪ್ರದೇಶಗಳನ್ನು ಗುರುತಿಸಿ, ಅವುಗಳನ್ನು ಕಾಯ್ದೆಯಡಿ ಘೋಷಿಸಲು ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವುದು. ಕೊಳಗೇರಿ ನಿವಾಸಿಗಳ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ಅರಿಯಲು ಕೊಳಚೆ ಪ್ರದೇಶಗಳ ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆ ಕೈಗೊಳ್ಳುವುದು. ಕೊಳಚೆ ಪ್ರದೇಶಗಳ ಅಭಿವೃದ್ಧಿಗೆ ಪರಿಸರ ಸುಧಾರಣೆ ಮತ್ತು ಅಭಿವೃದ್ದಿ ಯೋಜನೆಗಳನ್ನು ಕೈಗೊಳ್ಳುವುದು. ಕೊಳಗೇರಿ ನಿವಾಸಿಗಳು ಉತ್ತಮ ವಾತಾವರಣದಲ್ಲಿ ನೆಲೆಸುವಂತೆ ಮಾಡಲು ಅಗತ್ಯ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ಬೀದಿ ದೀಪ, ರಸ್ತೆ, ಚರಂಡಿ, ಸಾರ್ವಜನಿಕ ಶೌಚಗೃಹ ಮತ್ತು ಪ್ರವಾಹ ನೀರಿನ ಚರಂಡಿ ಹಾಗೂ ಸಮುದಾಯ ಭವನ ನಿರ್ಮಾಣ ಮಾಡುವುದು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದಿಂದ ಮನೆಗಳನ್ನು ನಿರ್ಮಿಸಿ, ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡುವುದು ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಮುಖ್ಯ ಉದ್ದೇಶಗಳು.

ಈ ಮಂಡಳಿಯ ಸ್ಥಾಪನೆಯಾಗಿ 50 ವರ್ಷಗಳು ತುಂಬುತ್ತ ಬಂದಿವೆ. ತನ್ನ ಮೂಲಭೂತ ಕರ್ತವ್ಯ ಪಾಲನೆಯನ್ನು ಮಂಡಳಿ ಎಷ್ಟರಮಟ್ಟಿಗೆ ಪಾಲಿಸಿದೆ ಎಂಬುದು ಬಹುದೊಡ್ಡ ಪ್ರಶ್ನೆ. ಕೊಳೆಗೇರಿ ನಿವಾಸಿಗಳು ಬಹುತೇಕ ದನಿ ಸತ್ತವರು. ಚುನಾವಣೆಗಳು ಸಮೀಪಿಸಿದಾಗಷ್ಟೇ ರಾಜಕಾರಣಿಗಳು, ಜನಪ್ರತಿನಿಧಿಗಳು ಕೊಳೆಗೇರಿಗಳಿಗೆ ಕಾಲಿಡುತ್ತಾರೆ. ಒಣ ಭರವಸೆಗಳನ್ನು ಅವರ ಕೊರಳಿಗೆ ತೊಡಿಸಿ ಮತ್ತೆ ಐದು ವರ್ಷಗಳ ಕಾಲ ಮರೆಯಾಗುತ್ತಾರೆ.

ಕೊಳೆಗೇರಿ ಜನರಿಗೆ ವಸತಿ ಸಮುಚ್ಚಯ ನಿರ್ಮಿಸಿ ಕೊಡುವ ಅಥವಾ ನಿವೇಶನಗಳನ್ನು ನೀಡಲು ಸರ್ಕಾರ ಯೋಜನೆ ರೂಪಿಸಿ ಜಾರಿಗೆ ತರಬೇಕು. ಇದು ನಿರಂತರವಾಗಿ ಮಾಡುತ್ತಲೇ ಇರಬೇಕಾದ ಕೆಲಸ. ಇದು ಸರ್ಕಾರ ಮತ್ತು ಸಮಾಜದ ಆದ್ಯ ಕರ್ತವ್ಯವೇ ವಿನಾ ಕೊಳೆಗೇರಿಗಳಿಗೆ ಮಾಡುವ ಉಪಕಾರ ಅಲ್ಲ.


ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಬೂಸುದಾರಣೆಯನ್ನು ನಾಡಿನ ಎಲ್ಲೆಡೆ ಒಂದೇ ಬಗೆಯಲ್ಲಿ ಮಾಡಲಾಗದು. ನಾಡಿನ ದೊಡ್ಡ‌ಊರುಗಳ ಅಂಚಿನಲ್ಲಿರುವ ನೆಲದಲ್ಲಿ ಹೆಚ್ಚಿನ ಕಡೆ ಬೇಸಾಯ ಮಾಡಲಾಗುತ್ತಿಲ್ಲ. ಇದನ್ನು ನೆಲದೊಡೆಯರು ತಮಗೆ ಬೇಕಾದಾಗ ಮಾರಿಕೊಳ್ಳುತ್ತಾರೆ. ದೊಡ್ಡ‌ಊರುಗಳಿಗೆ ಹೊಂದಿಕೊಂಡತ್ತಿರುವ ನೆಲವನ್ನು ಆಳ್ವಿಕೆ ತನ್ನ ತೆಕ್ಕೆಗೆ ಪಡೆದು, ಬೆಂಗಳೂರು, ಮಯ್ಸೂರು ಸೇರಿದಂತೆ ಜಿಲ್ಲೆ,ತಾಲ್ಲೂಕು ನೆಲೆಗಳಲ್ಲಿ ತಾನೇ ಅಪಾರ್ಟ್‌ಮೆಂಟ್ ಬಗೆಯ ಮನೆಗಳನ್ನು ಕಟ್ಟಿಸಿ ಮಾರಬೇಕು. ಬಡವರಿಗೆ ರಿಯಾಯಿತಿ ಕೊಡಬೇಕು. ಕಡು ಬಡವರಿಗೆ ಅತಿ ಕಡಿಮೆ ಬಾಡಿಗೆಯಲ್ಲಿ ಮನೆಗಳು ದೊರೆಯಬೇಕು. ಒಡೆತನ ಕೊಡುವುದು ಸರಿಯಲ್ಲ.ಕೆಲವು ಏಡುಗಳ ತರುವಾಯ ಮಾರಾಟಮಾಡುತ್ತಾರೆ.
    ಚಿಕ್ಕ‌ಊರುಗಳಲ್ಲಿ ಸೂರು ಒದಗಿಸಲು ಊರಿಗೆ ಹೊಂದಿಕೊಂಡತ್ತಿರುವ ನೆಲವನ್ನು ಪಡೆದು ಬಡಾವಣೆಮಾಡಬೇಕು.ನೀರಿ,ದಾರಿ,ಕರೆಂಟು, ಮಂದಿಯ ಒಡನಾಟ ಎಲ್ಲರಿಗೂ ದೊರಕಬೇಕು. ಈಗ ಚಿಕ್ಕ‌ಂರುಗಳಲ್ಲಿ ಅಲ್ಲಲ್ಲಿ ಬಿಡಿಮನೆಗಳನ್ನು ನೆಲ‌ಉಳ್ಳವರು ಅಡ್ಡಾದಿಡ್ಡಿಯಾಗಿ ಕಟ್ಟಿಕೊಂಡು ತಳಮಟ್ಟದ ಸವಲತ್ತುಗಳನ್ನು ಒದಗಿಸಲು ತೊಡಕಾಗುತ್ತಿದೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X