ಕ್ಷೇತ್ರ ಪುನರ್ ವಿಂಗಡಣೆ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, “ಕ್ಷೇತ್ರ ಪುನರ್ ವಿಂಗಡನೆ ಮಾಡುವಾಗ ದಕ್ಷಿಣ ರಾಜ್ಯಗಳಿಗೆ ನ್ಯಾಯಯುತ ಪಾಲು ಸಿಗಲಿದೆ. ಒಂದು ಸ್ಥಾನವೂ ಕೂಡಾ ಕಡಿಮೆಯಾಗಲ್ಲ” ಎಂದು ತಿಳಿಸಿದ್ದಾರೆ.
ಕ್ಷೇತ್ರ ಪುನರ್ ವಿಂಗಡನೆ ಮಾಡುವುದರಿಂದಾಗಿ ತಮಿಳುನಾಡಿನಲ್ಲಿ ಲೋಕಸಭೆ ಕ್ಷೇತ್ರಗಳ ಸಂಖ್ಯೆ ಕಡಿಮೆಯಾಗಬಹುದು. ಜನಗಣತಿಯ ಆಧಾರದ ಮೇಲೆ ಕ್ಷೇತ್ರಗಳ ಪುನರ್‌ವಿಂಗಡಣೆ ಮಾಡಿದರೆ ನಮ್ಮ ಜನಸಂಖ್ಯೆ ಕಡಿಮೆ ಇರುವುದರಿಂದ ತಮಿಳುನಾಡು 8 ಕ್ಷೇತ್ರಗಳನ್ನು ಕಳೆದುಕೊಳ್ಳುತ್ತದೆ. ಇದರಿಂದ ಸಂಸತ್ತಿನಲ್ಲಿ ತಮಿಳುನಾಡು ಪ್ರಾತಿನಿಧ್ಯ ಕಳೆದುಕೊಳ್ಳಲಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಹಿಂದಿ ಹೇರಿಕೆ | ಭಾಷಾ ಯುದ್ಧಕ್ಕೆ ತಮಿಳುನಾಡು ಸಿದ್ಧ: ಉದಯನಿಧಿ ಸ್ಟ್ಯಾಲಿನ್ ಘೋಷಣೆ
ಈ ನಿಟ್ಟಿನಲ್ಲಿ ಸ್ಟಾಲಿನ್ ಮಾರ್ಚ್ 5ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದ್ದಾರೆ. ಈ ಸಭೆಗೆ ಸುಮಾರು 40 ರಾಜಕೀಯ ಪಕ್ಷಗಳನ್ನು ಕರೆಯಲಾಗಿದೆ. ಪ್ರಸ್ತುತ ತಮಿಳುನಾಡು 39 ಸಂಸದರನ್ನು ಹೊಂದಿದೆ. ಆದರೆ ಜನಗಣತಿಯ ಆಧಾರದಲ್ಲಿ ಕ್ಷೇತ್ರಗಳ ಪುನರ್ ವಿಂಗಡಣೆ ಮಾಡಿದರೆ ಸಂಸದರ ಸಂಖ್ಯೆ 31ಕ್ಕೆ ಇಳಿಯಬಹುದು
ಈ ಬಗ್ಗೆ ಕೊಯಮತ್ತೂರು, ತಿರುವಣ್ಣಾಮಲೈ ಮತ್ತು ರಾಮನಾಥಪುರಂನಲ್ಲಿ ಬಿಜೆಪಿ ಕಚೇರಿಗಳ ಉದ್ಘಾಟನಾ ಸಮಾರಂಭದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, “ಕ್ಷೇತ್ರ ಪುನರ್ ವಿಂಗಡನೆ ಸಂದರ್ಭದಲ್ಲಿ ದಕ್ಷಿಣ ರಾಜ್ಯಗಳಿಗೆ ಯಾವುದೇ ನಷ್ಟವಾಗದಂತೆ ನೋಡಿಕೊಳ್ಳಲಾಗುವುದು” ಎಂದು ತಿಳಿಸಿದರು.
“ತಮಿಳುನಾಡಿನಲ್ಲಿ ಜನರು ಗೊಂದಲಕ್ಕೆ ಒಳಗಾಗಿದ್ದಾರೆ. ಆದ್ದರಿಂದಾಗಿ ತಮಿಳುನಾಡು ಸಿಎಂ ಎಂ ಕೆ ಸ್ಟಾಲಿನ್ ಮತ್ತು ಅವರ ಪುತ್ರ ಉದಯನಿಧಿ ಸ್ಟಾಲಿನ್ ಜನರ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಹಿಂದಿ ಹೇರಿಕೆ | ಬಿಜೆಪಿ ತೊರೆದ ತಮಿಳು ನಟಿ ರಂಜನಾ ನಾಚಿಯಾರ್ ವಿಜಯ್‌ರ ಟಿವಿಕೆ ಸೇರ್ಪಡೆ
“ಸ್ಟಾಲಿನ್ ಅವರೇ ಅನುಪಾತದ ಆಧಾರದ ಮೇಲೆ ಮಾಡಲಾಗುವುದು, ಇದರಿಂದ ಒಂದು ಕ್ಷೇತ್ರವು ಕಡಿಮೆಯಾಗದು ಎಂದು ಮೋದಿ ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ. ದಕ್ಷಿಣ ರಾಜ್ಯಗಳಿಗೆ ನ್ಯಾಯಯುತ ಪಾಲು ಸಿಗಲಿದೆ. ಈ ವಿಚಾರದಲ್ಲಿ ಯಾವುದೇ ಅನುಮಾನ ಬೇಡ” ಎಂದು ತಿಳಿಸಿದ್ದಾರೆ.
“ಸ್ಟಾಲಿನ್ ತಮಿಳುನಾಡು ಜನರಿಗೆ ಸುಳ್ಳು ಹೇಳುತ್ತಿದ್ದಾರೆ. ತಪ್ಪು ಮಾಹಿತಿ ನೀಡಿ ಜನರನ್ನು ಕ್ಷೇತ್ರ ಪುನರ್ ವಿಂಗಡನೆ ವಿಚಾರದಲ್ಲಿ ಸ್ಟಾಲಿನ್ ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ನನಗೆ ಈ ಬಗ್ಗೆ ಪ್ರತಿಕ್ರಿಯೆ ಬೇಕು. ನೀವು ಯಾಕೆ ಈ ರೀತಿ ಸುಳ್ಳು ಹೇಳುತ್ತಿದ್ದೀರಿ” ಎಂದು ಅಮಿತ್ ಶಾ ಪ್ರಶ್ನಿಸಿದ್ದಾರೆ.
ತಮಿಳುನಾಡು ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವೆ ಈಗಾಗಲೇ ಹಲವು ವಿಚಾರಗಳ ವಾಕ್ಸಮರ ನಡೆಯುತ್ತಲೇ ಇದೆ. ಹಿಂದಿ ಹೇರಿಕೆ, ಜಿಎಸ್‌ಟಿಯಲ್ಲಿ ರಾಜ್ಯದ ಪಾಲು ವಿಚಾರದಲ್ಲಿ ಶೀತಲ ಸಮರ ನಡೆಯುತ್ತಿದೆ. ಇದೀಗ ಕ್ಷೇತ್ರ ಪುನರ್ ವಿಂಗಡಣೆ ವಿಚಾರದಲ್ಲಿಯೂ ಕೇಂದ್ರ ಬಿಜೆಪಿ ಸರ್ಕಾರ ಮತ್ತು ತಮಿಳುನಾಡು ಸರ್ಕಾರದ ನಡುವೆ ವಾಕ್ಸಮರ ನಡೆಯುತ್ತಿದೆ.
