ನಾನಾ ಬೇಡಿಕೆಗಳ ಈಡೇರಿಕೆಗಾಗಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ 8 ಸಾವಿರ ದಾದಿಯರು ಮೂರು ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ವೇತನ ಹೆಚ್ಚಳಕ್ಕೆ ಆಗ್ರಹಿಸಿ ಸ್ಟಾಫ್ ನರ್ಸ್‌ಗಳು ಹಲವು ವರ್ಷಗಳಿಂದಲೂ ಪ್ರತಿಭಟನೆ ನಡೆಸಿದರೂ ಕೂಡ ಸರ್ಕಾರ ಅವರ ಬೇಡಿಕೆಗಳಿಗೆ ಸರಿಯಾಗಿ ಸ್ಪಂದಿಸಿಲ್ಲ. ಈ ಹಿನ್ನೆಲೆ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಪ್ರತಿಭಟನಾಕಾರರು ಪಟ್ಟನ್ನು ಹಿಡಿದಿದ್ದಾರೆ. ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.
ಕರ್ನಾಟಕ ರಾಜ್ಯ ಗುತ್ತಿಗೆ ಶುಶ್ರೂಷಾಧಿಕಾರಿಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಈ ಪ್ರತಿಭಟನೆ ಆಯೋಜನೆ ಮಾಡಲಾಗಿದೆ. ಹಲವು ಬೇಡಿಕೆಗಳನ್ನ ಮುಂದಿಟ್ಟು ಪ್ರತಿಭಟನಾಕಾರರು ಧರಣಿ ನಡೆಸುತ್ತಿದ್ದಾರೆ.
ತಾಲ್ಲೂಕು, ಜಿಲ್ಲಾ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸ್ಟಾಫ್ ನರ್ಸ್‌ಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದ ರಾಜ್ಯದ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆಯಲ್ಲಿ ವ್ಯತ್ಯಯವಾಗಿದೆ. ರೋಗಿಗಳು ಕೂಡ ಸಮಸ್ಯೆಯನ್ನ ಅನುಭವಿಸುವಂತಾಗುತ್ತಿದೆ. ಕಳೆದ ಮೂರು ದಿನದಿಂದ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದರೂ ಕೂಡ ಸರ್ಕಾರ ಇಲ್ಲಿಯವರೆಗೆ ಸ್ಪಂದಿಸಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಘದ ರಾಜ್ಯ ಘಟಕದ ಅಧ್ಯಕ್ಷೆ ರಾಧಾ ಸುರೇಶ್ ಪಿ.ಎನ್ ಈ ದಿನ.ಕಾಮ್ ಜತೆಗೆ ಮಾತನಾಡಿ, “ಸುಪ್ರೀಂ ಕೋರ್ಟ್ ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ನಿಗದಿಪಡಿಸಬೇಕು. ಈಗ ನಮಗೆ ₹15 ಸಾವಿರ ವೇತನ ನಿಗದಿಪಡಿಸಲಾಗಿದೆ. ಇಂದಿನ ಬೆಲೆ ಏರಿಕೆ ಪರಿಸ್ಥಿತಿಯಲ್ಲಿ ಈ ಹಣದಲ್ಲಿ ಜೀವನ ನಿರ್ವಹಣೆ ಕಷ್ಟವಾಗಿದೆ. ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಶುಶ್ರೂಷಾಧಿಕಾರಿಗಳಿಗೆ ನಿಗದಿಪಡಿಸಿರುವ ವೇತನವನ್ನು ನಮಗೂ ನೀಡಬೇಕು” ಎಂದು ಆಗ್ರಹಿಸಿದ್ದಾರೆ.
“ನೇರ ನೇಮಕಾತಿಯ ಸಂದರ್ಭದಲ್ಲಿ ಜೇಷ್ಠತೆಯ ಆಧಾರದ ಮೇಲೆ ಕೃಪಾಂಕ ಮತ್ತು ವಯೋಮಿತಿ ಸಡಿಲಿಕೆ ನೀಡಬೇಕು. ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ವರ್ಗಾವಣೆ ಸೌಲಭ್ಯ ಕಲ್ಪಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಸಂಘದ ಉಪಾಧ್ಯಕ್ಷ ಸಂಗಮೇಶ್ ಮಾತನಾಡಿ, “15 ವರ್ಷಗಳಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನದ (ಎನ್‌ಎಚ್ಎಮ್) ಅಡಿಯಲ್ಲಿ ಶುಶ್ರೂಷಾಧಿಕಾರಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದೇನೆ. ಬೇರೆ ಬೇರೆ ರಾಜ್ಯಗಳಲ್ಲಿ ಮಾಡಿದ ಹಾಗೇ ನಮ್ಮನ್ನು ಕೂಡ ಕಾಯಂ ಮಾಡಬೇಕು. ಕಾಯಂ ಪ್ರೋಸೆಸ್ ಮುಗಿಯುವವರೆಗೂ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ನಾನಾ ಆಯಾಮಗಳಲ್ಲಿ ಚಾಚಿಕೊಂಡ ಪ್ರವಾಹ ರೂಪದ ವ್ಯಕ್ತಿ ʼಋತ್ವಿಕ್ ಘಟಕ್ʼ
“ನಮಗೆ ಮೂಲವೇತನ ನೀಡಬೇಕು. ಒಂದು ವಾರ್ಡ್‌ನಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯ ನರ್ಸ್‌ಗಳು ಕೆಲಸ ಮಾಡುತ್ತಾರೆ. ಆರೋಗ್ಯ ಇಲಾಖೆಯವರು ಕೂಡ ಅದೇ ವಾರ್ಡ್‌ನಲ್ಲಿ ಅದೇ ಕೆಲಸವನ್ನ ಮಾಡುತ್ತೇವೆ. ಆದರೆ, ಅವರಿಗೆ ಮಾತ್ರ ಮೂಲ ವೇತನ ನೀಡುತ್ತಾರೆ. ನಮಗೆ 15ರಿಂದ 16 ಸಾವಿರ ಮಾತ್ರ ವೇತನ ನೀಡುತ್ತಿದ್ದಾರೆ. ನಾವು ಮಾಡಿರುವ ಸೇವೆಗಾದರೂ ಬೆಲೆ ನೀಡಿ” ಎಂದು ಕೇಳಿದ್ದಾರೆ.
“ಈ ಹಿಂದೆ ಕಾಂಗ್ರೆಸ್ ನಾಯಕರು ನಾವು ಅಧಿಕಾರಕ್ಕೆ ಬಂದರೆ, ನಿಮ್ಮ ಬೇಡಿಕೆಗಳನ್ನ ಈಡೇರಿಸುತ್ತೇವೆ ಎಂದು ಹೇಳಿದ್ದರು. ಆದರೆ, ಈಗ ನೋಡಿದರೇ, ಮಾಡೋಣ, ನೋಡೋಣ ಎಂದು ಹೇಳುತ್ತಿದ್ದಾರೆ. ಅವರು ಬಂದು ನಮ್ಮ ಬೇಡಿಕೆ ಈಡೇರಿಸುವವರೆಗೂ ನಾವು ಈ ಜಾಗ ಬಿಟ್ಟು ಹೋಗುವುದಿಲ್ಲ. ಕಳೆದ ಮೂರು ದಿನದಿಂದ 8 ಸಾವಿರ ನರ್ಸ್‌ಗಳು ಪ್ರತಿಭಟನೆ ಮಾಡುತ್ತಿದ್ದೇವೆ” ಎಂದು ತಿಳಿಸಿದ್ದಾರೆ.