ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ತೆರಿಗೆ ವಸೂಲಿ ಮಾಡುವಲ್ಲಿ ಬೇಜವಾಬ್ದಾರಿ ತಳೆದು, ಸರಿಯಾಗಿ ಕಾರ್ಯನಿರ್ವಹಿಸಿಲ್ಲ ಎಂಬ ಆರೋಪದ ಮೇಲೆ ಮೂವರು ಪಿಡಿಒಗಳ ಬಡ್ತಿಗೆ ತಡೆ ನೀಡಲಾಗಿದೆ. ಚಿತ್ರದುರ್ಗ ಜಿಲ್ಲಾ ಪಂಚಾಯತಿ ಸಿಇಒ ಎಸ್.ಜೆ ಸೋಮಶೇಖರ್ ಅವರು ತಡೆ ಆದೇಶ ಹೊರಡಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹಿರೇಹಳ್ಳಿ ಗ್ರಾಮ ಪಂಚಾಯತಿ ಪಿಡಿಒ ನರಸಿಂಹಪ್ಪ ಮತ್ತು ದೇವರೆಡ್ಡಿಹಳ್ಳಿ ಪಂಚಾಯತಿ ಪಿಡಿಒ ವೇದವ್ಯಾಸಲು ಹಾಗೂ ಹೊಸದುರ್ಗ ತಾಲೂಕಿನ ಗುಡ್ಡದ ನೇರಲಕೆರೆ ಪಂಚಾಯತಿ ಪಿಡಿಒ ಕುಮಾರ್ ಅವರ ಬಡ್ತಿಗೆ ತಡೆ ನೀಡಲಾಗಿದೆ. ವಾರ್ಷಿಕ ವೇತನ ಬಡ್ತಿಯ ತಡೆಯ ಜೊತೆಗೆ ಸಂಚಿತ ಪರಿಣಾಮಗಳನ್ನೂ ಅನ್ವಯಿಸಲಾಗಿದೆ.
ಚಿತ್ರದುರ್ಗ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಕರ ವಸೂಲಿಗಾಗಿ ಆಂದೋಲನ ಹಮ್ಮಿಕೊಳ್ಳಲಾಗಿತ್ತು. ಎಲ್ಲ ಪಿಡಿಒಗಳು ತಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯನ್ನು ಆಂದೋಲನವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಹೆಚ್ಚಿನ ತೆರಿಗೆ ವಸೂಲಿ ಮಾಡಬೇಕು ಎಂದು ಜಿಲ್ಲಾ ಪಂಚಾಯತಿ ಸೂಚಿಸಿತ್ತು. ಆದರೂ, ಮೇಲೆ ಹೆಸರಿಸಲಾದ ಮೂವರು ಪಿಡಿಒಗಳು ಕರ್ತವ್ಯದಲ್ಲಿ ಬೇಜವ್ದಾರಿತನ ಪ್ರದರ್ಶಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಮೂವರು ಪಿಡಿಒಗಳಿಗೆ ತಮ್ಮ ಕರ್ತವ್ಯಲೋಪಕ್ಕೆ ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು. ಆದರೆ, ಸಮರ್ಥನೀಯ ಉತ್ತರ ನೀಡುವಲ್ಲಿ ಮೂವರೂ ವಿಫಲರಾಗಿದ್ದಾರೆ ಎಂದು ಹೇಳಲಾಗಿದೆ.