ಬೆಂಗಳೂರಿನಲ್ಲಿ ನೆಲೆಸಿರುವ ಕರಾವಳಿಯ ಮುಸ್ಲಿಂ ಸಮುದಾಯ (ಬ್ಯಾರಿಗಳು) ಶುಕ್ರವಾರ ಬೆಂಗಳೂರಿನ ಶೃಂಗಾರ್ ಪ್ಯಾಲೇಸ್ ಮೈದಾನದಲ್ಲಿ ಒಟ್ಟಾಗಿದ್ದರು. ಬ್ಯಾರಿ ಕೂಟದಲ್ಲಿ ಸೇರಿ ಸಂತಸಪಟ್ಟರು, ಸಂಭ್ರಮಿಸಿದರು.
ಬ್ಯಾರೀಸ್ ಸೆಂಟ್ರಲ್ ಕಮಿಟಿ ಬೆಂಗಳೂರು ಸಂಘಟನೆಯೂ “ಇದ್ ಬೆಂಗಳೂರ್ ಬ್ಯಾರಿಙಲೋ ಗಮ್ಮತ್ತ್ …” ಎಂಬ ಧ್ಯೇಯವಾಕ್ಯವನ್ನಿಟ್ಟುಕೊಂಡು ‘ಬ್ಯಾರಿ ಕೂಟ’ ಕಾರ್ಯಕ್ರಮವನ್ನ ಹಮ್ಮಿಕೊಂಡಿತ್ತು. 9 ತಿಂಗಳ ಹಿಂದೆ ಆರಂಭಗೊಂಡು ಕಾರ್ಯನಿರ್ವಹಿಸುತ್ತಿರುವ ‘ಬ್ಯಾರಿಇನ್ಫೋ ಡಾಟ್ ಕಾಂ’ ( www.bearyinfo.com ) ವೆಬ್‌ಸೈಟ್‌ನ ಹೊಸ ವಿಭಾಗ ‘ಬ್ಯಾರಿ ಬ್ಯುಸಿನೆಸ್ ಡೈರೆಕ್ಟರಿ’ ಲೋಕಾರ್ಪಣೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಹಲವು ಕರಾವಳಿ ಭಾಗದ ಮುಸ್ಲಿಂ ಸಮುದಾಯದ ಬ್ಯಾರಿಗಳು ಭಾಗವಹಿಸಿದ್ದರು. ಹಲವಾರು ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿತ್ತು. ಚಿಕ್ಕಮಕ್ಕಳಿಗೆ ಆಟದ ಸ್ಫರ್ಧೆ ಏರ್ಪಡಿಸಲಾಗಿತ್ತು. ಗೆದ್ದ ಮಕ್ಕಳಿಗೆ ಬಹುಮಾನ ನೀಡಲಾಯಿತು. ಹಾಗೆಯೇ, ಮಹಿಳೆಯರ ಕೈ ರುಚಿ ಸ್ಪರ್ಧೆ ಕೂಡ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯ ವಿಶೇಷತೆ ಏನೆಂದರೆ, ಬೆಂಕಿ ಇಲ್ಲದೇ ಮಹಿಳೆಯರು ಅಡುಗೆ ಮಾಡುವ ಸ್ಪರ್ಧೆ ಇದಾಗಿತ್ತು. ಸಂಪೂರ್ಣವಾಗಿ ಆರೋಗ್ಯಕರವಾದ ಅಡುಗೆ ಪದಾರ್ಥಗಳನ್ನ ಬಳಸಿ ತಿಂಡಿ ತಯಾರು ಮಾಡಲಾಗಿತ್ತು.
ಬ್ಯಾರಿ ಕೂಟದ ಪ್ರಮುಖ ಆಕರ್ಷಣೆಗಳಲ್ಲಿ ಯಾಸಿರ್ ಕಲ್ಲಡ್ಕರವರು ಸಂಗ್ರಹಿಸಿದ ನಾಣ್ಯ, ನೋಟುಗಳ ಪ್ರದರ್ಶನ ಕೂಡ ಒಂದಾಗಿತ್ತು. ಸಾಹಿತಿ, ಮುಖ್ಯಮಂತ್ರಿಗಳು, ಪ್ರಧಾನಮಂತ್ರಿಗಳ ಹುಟ್ಟಿದ ದಿನಾಂಕ ಇರುವ ಸಂಖ್ಯೆಯ ನೋಟುಗಳನ್ನ ಸಂಗ್ರಹಿಸಿದ್ದರು. ಇನ್ನು ಸಾಂಸ್ಕೃತಿಕ ಕಾರ್ಯಕ್ರಮದ ಜೊತೆಗೆ ಕವಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು.ಈ ಎಲ್ಲ ಕಾರ್ಯಕ್ರಮದಲ್ಲಿ ಆಯಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಬ್ಯಾರಿ ಸಮುದಾಯದ ಸಾಧಕರು ಭಾಗವಹಿಸಿದ್ದರು. ಜತೆಗೆ, ಕರಾವಳಿ ತಿಂಡಿ ತಿನಿಸುಗಳು ಕೂಡ ಪ್ರಮುಖ ಆಕರ್ಷಣೆಯಾಗಿತ್ತು.
ಈ ಸುದ್ದಿ ಓದಿದ್ದೀರಾ? ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ : ಶುಶ್ರೂಷಾಧಿಕಾರಿಗಳ ಪ್ರತಿಭಟನೆ
ಬ್ಯಾರೀಸ್ ಸೆಂಟ್ರಲ್ ಕಮಿಟಿ ಬೆಂಗಳೂರು ಅಧ್ಯಕ್ಷರಾದ ಶಬೀರ್ ಬ್ರಿಗೇಡ್ ಈ ದಿನ.ಕಾಮ್ ಜತೆಗೆ ಮಾತನಾಡಿ, “ಬೆಂಗಳೂರಿನಲ್ಲಿ ನೆಲೆಸಿರುವ ಎಲ್ಲರನ್ನೂ ಒಂದುಗೂಡಿಸಲು ಹಾಗೂ ವ್ಯಾಪಾರ ಏಳಿಗೆಗಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮ ರೂಪಿಸಿರುವುದು ಬೆಂಗಳೂರಿನಲ್ಲಿ ವಾಸಿಸುವ ಬ್ಯಾರಿಗಳ ಸಮಗ್ರ ಅಭಿವೃದ್ಧಿಯ ದೃಷ್ಟಿಕೋನ ಇಟ್ಟುಕೊಂಡು ಸಂಘಟನೆ ಸ್ಥಾಪನೆ ಮಾಡಲಾಗಿದೆ. ಈ ವೇದಿಕೆಯಿಂದ ನಾವು ಸರ್ಕಾರಕ್ಕೆ ಕೆಲವು ಬ್ಯಾರಿಗಳ ಬೇಡಿಕೆಯನ್ನ ಇಡುತ್ತೇವೆ. ಬ್ಯಾರಿ ಸಮುದಾಯ ದೊಡ್ಡ ಸಮುದಾಯ. ಬ್ಯಾರಿಗಳು ಎಲ್ಲ ಕಡೆಯೂ ಇದ್ದಾರೆ. ಬ್ಯಾರಿ ಎಂದರೆ, ವ್ಯಾಪಾರ ಮಾಡುವವರು, ಇದರ ಅರ್ಥ ನಮ್ಮ ರಕ್ತದಲ್ಲಿಯೇ ವ್ಯಾಪಾರ ಇದೆ” ಎಂದರು.
ಈ ದಿನ.ಕಾಮ್ ಜತೆಗೆ ಮಾತನಾಡಿದ ಟೀಕೆಸ್ ಗ್ರೂಪ್‌ನ ಅಧ್ಯಕ್ಷ ಉಮರ್ ಟೀಕೆ ಅವರು, “ ಬ್ಯಾರಿಗಳು ಸಂಘಟಿತರಾಗುವುದರಿಂದ ಸಾಮೂಹಿಕ ಪ್ರಗತಿ ಕಾಣಲು ಸಾಧ್ಯವಿದೆ. ಬ್ಯಾರಿ ಸಮುದಾಯದವರು ಈಗಾಗಲೇ ವ್ಯಾಪಾರದಲ್ಲಿ ಪ್ರಗತಿಯನ್ನು ಸಾಧಿಸುತ್ತಿದ್ದಾರೆ. ಶಿಕ್ಷಣದಲ್ಲೂ ಮಹತ್ವದ ಹೆಜ್ಜೆಯನ್ನಿಟ್ಟಿದ್ದಾರೆ. ಕೆನಡಾ, ಲಂಡನ್, ನ್ಯೂಝಿಲೆಂಡ್, ಅಮೆರಿಕ ಸಹಿತ ನಾನಾ ದೇಶಗಳಲ್ಲಿ ಬ್ಯಾರಿಗಳು ವ್ಯಾಪಾರ ನಡೆಸುತ್ತಿದ್ದಾರೆ. ಶೈಕ್ಷಣಿಕ ಪ್ರಗತಿ, ವ್ಯಾಪಾರ, ಶಿಕ್ಷಣ ಕ್ಷೇತ್ರದ ಅಭಿವೃದ್ಧಿಯಲ್ಲಿ ಬ್ಯಾರಿ ಸಮುದಾಯ ತೊಡಗಿಸಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಮುಸ್ಲಿಂ ಆಡಳಿತದ ಅಧೀನದಲ್ಲಿರುವ 160 ಕ್ಕೂ ಅಧಿಕ ಶಾಲೆಗಳಲ್ಲಿ ಕಡಿಮೆ ಶುಲ್ಕ, ಉಚಿತ ಶಿಕ್ಷಣ ನೀಡಲಾಗುತ್ತಿದೆ” ಎಂದರು.