ತುಮಕೂರು ಜಿಲ್ಲೆಯ ಅಹಿಂದ-ನಾಯಕ ಹಾಗೂ ಕಾಂಗ್ರೆಸ್ ಮುಖಂಡ ಡಾ ಸತೀಶ್ ಸಾಸಲು, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕೋಮು-ಸಾಮರಸ್ಯಕ್ಕೆ ಧಕ್ಕೆ ಉಂಟುಮಾಡಲು ಯತ್ನಿಸಿರುವ ಕೋಮುವಾದಿ ಷಡ್ಯಂತ್ರವೊಂದರ ಹುನ್ನಾರವನ್ನು ಬಯಲು ಮಾಡಿದ್ದಾರೆ.
ಫೆಬ್ರುವರಿ 23’ರಂದು ಸಾಸಲು ಗ್ರಾಮದ ತಮ್ಮ ತೋಟ’ದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಚರ್ಚ್-ವೀಕ್ಷಣೆಗೆ ತೆರಳಿದ್ದ ಶಾಲಾಮಕ್ಕಳು ಹಾಗೂ ಅಧ್ಯಾಪಕರ ವಿರುದ್ಧ ಸುಳ್ಳು-ವದಂತಿ ಹರಡಿ ಅಪಪ್ರಚಾರ ನಡೆಸಿ ಕೋಮು-ಸಾಮರಸ್ಯವ ಕದಡಲು ಯತ್ನಿಸಿದ ಕೋಮುವಾದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರಕರಣದ ಷಡ್ಯಂತ್ರಗಳನ್ನು ಅರಿತು, ಅದನ್ನು ಬೇಧಿಸಿ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿರುವ ತಾಲ್ಲೂಕು ಮತ್ತು ಜಿಲ್ಲೆಯ ಪೊಲೀಸರ ವಿಳಂಬ-ಧೋರಣೆಯನ್ನೂ ಅವರಿಲ್ಲಿ ಪ್ರಶ್ನಿಸಿದರು. ವಿನಾಕಾರಣ, ಶಾಲಾಮಕ್ಕಳಿಗೆ ಧರ್ಮ-ಬೋಧನೆ ನಡೆಯುತ್ತಿದೆ ಎಂಬಂತಹ ಸುಳ್ಳು-ವದಂತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಿ, ಸಮಾಜದ ಕೋಮು-ಸಾಮರಸ್ಯಕ್ಕೆ ಧಕ್ಕೆತಂದು, ಶಾಂತಿ ಕದಡಲು ಯತ್ನಿಸಿದ ಕೋಮು-ಕ್ರಿಮಿಗಳ ವಿರುದ್ಧ ಸುಮೊಟೊ-ದಾಖಲಿಸಿ ಪ್ರಕರಣದ ತನಿಖೆ ನಡೆಸದೇ ಪೊಲೀಸರು ಕಾಲಹರಣ ಮಾಡಿರುವುದಕ್ಕೆ ಅವರು ಅಸಮಾಧಾನ ವ್ಯಕ್ತಪಡಿಸಿದರು.
ತಾತಯ್ಯ-ಬಸವಯ್ಯ’ರ ನಾಡಿನಲ್ಲಿ ಶಾಂತಿ ಕದಡಲು ಯತ್ನಿಸುವ ಕೋಮುವಾದಿಗಳಿಗೆ ಇಲ್ಲಿ ಜಾಗವಿಲ್ಲ ಎಂದು ಎಚ್ಚರಿಸಿದ ಡಾ ಸತೀಶ್ ಸಾಸಲು ಹೇಳಿದರು.
ಘಟನೆ ಹಿನ್ನೆಲೆ :
ಫೆಬ್ರುವರಿ 11’ನೇ ತಾರೀಖಿನಂದು ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು-ಪಟ್ಟಣದ ಕೆಪಿಎಸ್-ಹೈಸ್ಕೂಲಿನ ಮಕ್ಕಳನ್ನು, ಅನುಭವಾತ್ಮಕ ಕಲಿಕೆಯ ಅಂಗವಾಗಿ ಪಟ್ಟಣದಲ್ಲೇ ಇರುವ ‘ಕಲ್ಪತರು ಬ್ರಿಕ್ಸ್ ಬೃಹತ್ ಇಟ್ಟಿಗೆ ಕಾರ್ಖಾನೆ’ ಹಾಗೂ ಅದರ ಎದುರಿಗೇ ಇರುವ ‘ವಿಶಾಲವಾದ ಸೋಲಾರ್ ಪ್ಲಾಂಟ್’ನ್ನು ತೋರಿಸಲು ಕರೆದುಕೊಂಡು ಹೋಗಲಾಗಿದೆ ಎಂದು ವಿವವರಿಸಿದರು.

ಕೈಗಾರಿಕಾ-ವೀಕ್ಷಣೆಯ ಅನುಭವಾತ್ಮಕ ಕಲಿಕೆಯ ಉದ್ದೇಶದಿಂದ ಹೊರಡಿಸಲಾಗಿರುವ ಸರ್ಕಾರದ ಸುತ್ತೋಲೆಯ ಪ್ರಕಾರವಾಗಿ, ಆ ಶಾಲೆಯ ಶಿಕ್ಷಕ-ಶಿಕ್ಷಕಿಯರು ತಮ್ಮ ವಿದ್ಯಾರ್ಥಿಗಳನ್ನು ಅಲ್ಲಿಗೆ ಕರೆದುಕೊಂಡು ಹೋಗಿ, ವೀಕ್ಷಣೆ ಮತ್ತು ಅನುಭವಾತ್ಮಕ ಕಲಿಕೆ ಮುಗಿದ ನಂತರ ಹಿಂತಿರುಗಿ ಬರುವಾಗ, ಪಟ್ಟಣದ ಕನಕದಾಸ ಸರ್ಕಲ್ಲಿನಲ್ಲಿರುವ ಕಂಚಿನ-ಪುತ್ಥಳಿಯನ್ನೂ ತೋರಿಸಲಾಗಿದೆ. ಆಗ ಅಲ್ಲೇ ಸನಿಹದಲ್ಲೇ ಇದ್ದ ಚರ್ಚೊಂದನ್ನು ಕೆಲವು ವಿದ್ಯಾರ್ಥಿನಿಯರು ‘ಚರ್ಚ್ ಹೇಗಿರುತ್ತದೆ ಎಂಬುದನ್ನು ಅದರ ಒಳಗಿನಿಂದ ನೋಡಬೇಕು’ ಎಂಬ ಅಭಿಲಾಷೆಯನ್ನು ಶಿಕ್ಷಕರ ಎದುರು ತೋಡಿಕೊಂಡಿದ್ದಾರೆ. ಆದರೆ, ಊಟದ ಸಮಯವಾದ್ದರಿಂದ ಶಿಕ್ಷಕರು ಮತ್ತೆ ತಡವಾಗುತ್ತದೆ ಎಂದು ಮೊದಲು ಇನ್ನೊಮ್ಮೆ ನೋಡಬಹುದು ಎಂದು ಹೇಳಿ ಶಾಲೆಯ ಕಡೆಗೆ ಹೊರಡಲು ಸೂಚಿಸಿದ್ದಾರೆ. ಆಗ ಶಾಲಾಮಕ್ಕಳು ಚರ್ಚ್ ತೋರಿಸುವಂತೆ ಮತ್ತೆ ಒತ್ತಾಯಿಸಿದ್ದಾರೆ. ಮಕ್ಕಳ ಕುತೂಹಲ ಮತ್ತು ಆಸಕ್ತಿಗೆ ಶರಣಾದ ಶಿಕ್ಷಕರು, ಮಕ್ಕಳನ್ನು ಸನಿಹದಲ್ಲಿದ್ದ ಚರ್ಚ್ ತೋರಿಸಲು ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿಸಿದರು.
ಹುಳಿಯಾರು ಪಟ್ಟಣದ ಚರ್ಚು ಚಿಕ್ಕ ಗಾತ್ರದ್ದು. ಹಾಗಾಗಿ, ಒಳಗಡೆ ಕೇವಲ ಮೂವ್ವತ್ತು-ಮೂವ್ವತ್ತೈದು ಮಂದಿ ಮಕ್ಕಳಿಗೆ ಮಾತ್ರ ಸ್ಥಳಾವಕಾಶ ಸಿಕ್ಕಿದೆ. ಮಿಕ್ಕ ಮಕ್ಕಳು ಚರ್ಚಿನ ದ್ವಾರದ ಬಳಿ ಚರ್ಚ್ ನೋಡುತ್ತಾ ಕ್ಕಿರಿದು ನಿಂತಿದ್ದಾರೆ.ಎಂದಿನಂತೆ ತಮ್ಮ ಪ್ರಾರ್ಥನೆ-ಬೋಧನೆಯಲ್ಲಿ ತೊಡಗಿದ್ದ ಚರ್ಚಿನ ಪಾದ್ರಿಗಳು, ಒಳಬಂದ ಅತಿಥಿಗಳೆಲ್ಲರನ್ನೂ ಸವಿನಯದಿ ಸ್ವಾಗತಿಸಿ, ತಮ್ಮ ಪಾಡಿಗೆ ತಾವು ತಮ್ಮ ಕಾರ್ಯ-ಕಲಾಪಗಳನ್ನು ಮುಂದುವರೆಸಿದ್ದಾರೆ! ಶಾಲಾ-ಮಕ್ಕಳೂ ಕೂಡ ಕುತೂಹಲದಿಂದ ಅದನ್ನೆಲ್ಲ ವೀಕ್ಷಿಸುತ್ತಿದ್ದಾರೆ ಎಂದು ಹೇಳಿದರು.

ಅಷ್ಟೊತ್ತಿಗೆ ಅಲ್ಲಿಗೆ ಬಂದ ಕೋಮು-ಕ್ರಿಮಿಯೊಬ್ಬ ತನ್ನ ಮೊಬೈಲ್ ಕ್ಯಾಮೆರಾ ತೆಗೆದು ಅದೆಲ್ಲವನ್ನೂ ವಿಡಿಯೋ ಮಾಡಿ, ಅವರ ಎಲ್ಲ ಕಾರ್ಯ-ಕಲಾಪಗಳು ಮುಗಿದ ನಂತರ ಧರ್ಮ-ಬೋಧನೆ, ಮತಾಂತರ ಮತ್ತಿತ್ತ್ಯಾದಿ ಕ್ಯಾತೆ ತೆಗೆದಿದ್ದಾನೆ. ಶಾಲಾ ಮಕ್ಕಳು, ಶಾಲಾ-ಅಧ್ಯಾಪಕರು, ಚರ್ಚಿನ ಪಾದ್ರಿಗಳು ಹಾಗೂ ಅಕ್ಕಪಕ್ಕದವರು ಯಾರೆಲ್ಲ ಬಂದು ಎಷ್ಟೇ ಸ್ಪಷ್ಟವಾಗಿ ಸಮಝಾಯಿಷಿ ಕೊಟ್ಟರೂ, ಅಲಿ ಜರುಗುತ್ತಿದ್ದ ಸತ್ಯಸಂಗತಿಯನ್ನು ಪರಿಪರಿಯಾಗಿ ವಿವರಿಸಿದರೂ ಆತ ಅವರ ಮಾತುಗಳಿಗೆ ಬೆಲೆ ಕೊಡದೆ, ತಾನು ಚಿತ್ರೀಕರಿಸಿದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು, ಇಡೀ ಘಟನೆಯನ್ನೇ ತಿರುಚಿ ಅದಕ್ಕೊಂದು ಕೋಮುವಾದಿ ಆಯಾಮ ಕೊಟ್ಟು, ಕೋಮು-ಸಾಮರಸ್ಯ ಕದಡಲು ಯತ್ನಿಸಿದ್ದಾನೆ. ಇದನ್ನು ಅರ್ಥಮಾಡಿಕೊಳ್ಳಲಾಗದೆ ಮೌನಂ-ಸಮ್ಮತಿ-ಲಕ್ಷಣಂ ಎಂಬಂತಿರುವ ಜಿಲ್ಲೆಯ ಮತ್ತು ತಾಲ್ಲೂಕಿನ ಪೊಲೀಸ್ ವ್ಯವಸ್ಥೆಯದ್ದು ದುರಂತ ಎಂದು ಬೆಸರ ವ್ಯಕ್ತಪಡಿಸಿದರು.
ಆತ ಯಾರು, ಆತನ ಹಿನ್ನೆಲೆ ಏನು, ಆತನ ದಿನ ನಿತ್ಯದ ಚಟುವಟಿಕೆಗಳು ಏನೇನು, ಪೊಲೀಸ್ ರೆಕಾರ್ಡ್ಸ್’ನಲ್ಲಿ ಆತನ ರೆಪ್ಯೂಟೇಶನ್ ಏನು, ಇತ್ಯಾದಿ ಎಲ್ಲ ಮಾಹಿತಿಯನ್ನು ಪತ್ತೆಹಚ್ಚಿ ಆತನ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕಿದ್ದ ಸ್ಥಳೀಯ ಪೊಲೀಸ್ ವ್ಯವಸ್ಥೆ ನಿದ್ರೆಯಲ್ಲಿದ್ದಂತೆ ಕಾಣುತ್ತಿದೆ. ಧಾರ್ಮಿಕ ಕೇಂದ್ರವೊಂದರ ಒಳಭಾಗದಲ್ಲಿ ವಿಡಿಯೋ ಚಿತ್ರೀಕರಿಸುವ ಅನುಮತಿಯನ್ನು ಆತನಿಗೆ ಯಾರು ಕೊಟ್ಟವರು. ಆತ ಶಾಲಾಮಕ್ಕಳ ಜೊತೆಗೆ ಶಾಲೆಯ ಕಡೆಯಿಂದ ಬಂದವನೇ ಅಥವಾ ಪತ್ರಕರ್ತನೇ?, ಯಾರ ಅನುಮತಿ ಮತ್ತು ಯಾವ ಹಕ್ಕಿನಿಂದ ಆತ ಅಲ್ಲಿ ವಿಡಿಯೋ ಚಿತ್ರೀಕರಿಸಿದ್ದು, ಅಲ್ಲಿದ್ದ ಹೈ-ಸ್ಕೂಲ್ ಹೆಣ್ಣುಮಕ್ಕಳ ಸುರಕ್ಷೆಯ ಗ್ಯಾರಂಟಿ ಯಾರು ಕೊಡುತ್ತಾರೆ ಈಗ, ಶಾಲಾ ಮಕ್ಕಳೊಂದಿಗೆ ಅಲ್ಲಿ ಹಾಜರಿದ್ದ ಅಧ್ಯಾಪಕಿಯರ ಸುರಕ್ಷೆಯ ಗ್ಯಾರಂಟಿ ಯಾರದು, ಅಲ್ಪಸಂಖ್ಯಾತ ಸಮುದಾಯದ ಧರ್ಮ ಹಾಗೂ ಅವರ ಧಾರ್ಮಿಕ ಕೇಂದ್ರವೊಂದರ ಖಾಸಗಿ-ಹಕ್ಕುಗಳಿಗೆ ಹಾಗೂ ಪಾವಿತ್ರ್ಯತೆಗೆ ಭಂಗ ತರುವ ದುಷ್ಕಾರ್ಯಗಳನ್ನೇನಾದರೂ ಆತ ಅಲ್ಲಿ ಎಸಗಿದ್ದಾನೆಯೇ ? ಅಲ್ಲಿಗೆ ಆತನೇನಾದರೂ ಅಕ್ರಮ-ಪ್ರವೇಶ ಮಾಡಿದ್ದನೇ, ಪೊಲೀಸರು ಇದನ್ನು ಯಾವಾಗ ಪತ್ತೆಹಚ್ಚುವುದು, ಇನ್ನೂ ಎಷ್ಟು ದಿನಾ, ಸರ್ಕಾರಿ ಶಾಲೆಯೊಂದರ ಅಮಾಯಕ ಮಕ್ಕಳು ಮತ್ತು ಶಾಲೆಯ ಅಧ್ಯಾಪಕರ ಮೇಲೆ ಸುಳ್ಳು-ವದಂತಿ ಹರಡಿ ಅಪಪ್ರಚಾರ ನಡೆಸಿ ಅವರೆಲ್ಲರ ತೇಜೋವಧೆಗೆ ಯತ್ನಿಸಿದ ಕೋಮು-ಕ್ರಿಮಿಯ ಮೇಲೆ ಪೊಲೀಸರು ಯಾಕೆ ಇದುವರೆಗೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಡಾ ಸತೀಶ್ ಸಾಸಲು ಆಕ್ರೋಶ ವ್ಯಕ್ತಪಡಿಸಿದರು.
ಕೆಪಿಎಸ್ ಶಾಲೆಗಳ ತೇಜೋವಧೆ
ಅತ್ಯುತ್ತಮ ಇಂಗ್ಲಿಷ್ ಕಲಿಸುವ ಜಾಹೀರಾತು ಪ್ರಕಟಿಸಿ, ಕಡಿಮೆ ಸಂಬಳಕ್ಕೆ ಅರೆ-ಬರೆ ಪದವೀಧರರನ್ನು ತಂದು ಶಿಕ್ಷಕರನ್ನಾಗಿ ನೇಮಿಸಿಕೊಳ್ಳುವ ಲಾಭಕೋರ ಖಾಸಗಿ ಕಾನ್ವೆಂಟುಗಳಿಗೆ ಸೆಡ್ಡಹೊಡೆದು ತಲೆ ಎತ್ತುತ್ತಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್’ಗಳು, ಬಡವರ ಮಕ್ಕಳ ಪಾಲಿಗೆ ಇಂಗ್ಲಿಷ್ ಕಲಿಯಲು ಸಿಕ್ಕಿರುವ ವರದಾನವಾಗಿವೆ. ಇಂತಹ ಶಾಲೆಗಳ ವಿರುದ್ಧ ಇಲ್ಲಸಲ್ಲದ ಅಪಪ್ರಚಾರ ನಡೆಸಿ ಅವುಗಳ ತೇಜೋವಧೆ ಮಾಡುವ ಮೂಲಕ ಲಾಭಕೋರ ಖಾಸಗಿ ಕಾನ್ವೆಂಟುಗಳಿಗೆ ಪರೋಕ್ಷ ಪ್ರಯೋಜನಗಳನ್ನು ಒದಗಿಸುವ ಷಡ್ಯಂತ್ರದ ವಾಸನೆ ಬಡಿಯುತ್ತಿದೆ. ಇದರ ಹಿಂದೆ ಬಹಳಷ್ಟು ಉಳ್ಳವರ ಕೈವಾಡ ಇದ್ದಿರುವಂತೆ ಗೋಚರಿಸುತ್ತಿದೆ. ಕೆಪಿಎಸ್ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಓದಿಸುತ್ತಿರುವ ಪೋಷಕರಲ್ಲಿ ‘ಜಾತಿ-ಧರ್ಮ-ದೇವರು…. ಮುಂತಾದ ಕೋಮು-ಭಾವನೆಗಳನ್ನು ಕೆರಳಿಸಿದಾಗ, ಸಹಜವಾಗೇ ಕೆರಳುವ ಪೋಷಕರು ತಮ್ಮ ಮಕ್ಕಳನ್ನು ಕೆಪುಎಸ್-ಶಾಲೆಗಳಿಂದ ಬಿಡಿಸಿ ಈ ಲಾಭಕೋರ ಕಾನ್ವೆಂಟುಗಳಿಗೇ ತಂದು ಸೇರಿಸುತ್ತಾರೆ. ಆಗ ಕೋಮು-ಕ್ರಿಮಿಗಳು ಹಾಗೂ ಲಾಭಕೋರ ಖಾಸಗಿ ಕಾನ್ವೆಂಟುಗಳು ಇಬ್ಬರ ಹಿಕ್ಮತ್ತುಗಳೂ ಸಾಧಿಸಿಕೊಂಡಂತಲ್ಲವೇ….!! ಇದನ್ನು ಅರಿಯದಾದ ಸಮಾಜ ಹಾಗೂ ತಾಲ್ಲೂಕಿನ ಪೋಷಕರ ಮನಃಸ್ಥಿತಿಯ ಬಗ್ಗೆ ಏನು ಹೇಳಲಿ ಎಂದು ಡಾ ಸತೀಶ್ ಸಾಸಲು ಬೇಸರ ವ್ಯಕ್ತಪಡಿಸಿದರು.

ತಾಲ್ಲೂಕಿನ ಕೆಲಮಂದಿ ಜನ-ಪ್ರತಿನಿಧಿಗಳು ತಮಗೆ ಸಿಕ್ಕಿದ ಸಾಂವಿಧಾನಿಕ ಹುದ್ದೆ ಮತ್ತು ಶಾಸಕೀಯ ಅಧಿಕಾರಗಳನ್ನು ಬಳಸಿಕೊಂಡು ಬಡವರ ಮಕ್ಕಳ ಶಿಕ್ಷಣಕ್ಕೆ ಆಧುನಿಕ ಸೌಕರ್ಯಗಳನ್ನು ಒದಗಿಸಿಕೊಡಬೇಕಿತ್ತು. ಚುನಾವಣೆಯ ಸಂದರ್ಭದಲ್ಲಿ ಮತ ಕೇಳಲು ಬರುವಾಗ ಅವರ ಘೋಷಣೆಗಳೂ ಅವೇ ಆಗಿದ್ದವು! ಆದರೆ, ಗೆದ್ದು ಅಧಿಕಾರ ಸವಿದಿರುವ ಇವರು, ಬಡವರ ಮಕ್ಕಳ ಶಿಕ್ಷಣಕ್ಕೆ ಕಂಟಕರಂತೆ ಕಾಣುತ್ತಿದ್ದಾರೆ! ಇವರೇ ಮುಂದೆನಿಂತು ಸ್ಪರ್ಧೆಯೋಪಾದಿಯಲ್ಲಿ ಇಂಟರ್-ನ್ಯಾಶನಲ್ ಲೆವೆಲ್ಲಿನ ಇಂಗ್ಲಿಷ್ ಖಾಸಗಿ ಶಾಲೆಗಳನ್ನು ತೆರೆದು, ಶಿಕ್ಷಣದ ವ್ಯಾಪಾರದಲ್ಲಿ ಮೊದಲಿಗರಾಗಿದ್ದಾರೆ. ಇಂದು ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಮತದಾರರು ಮತ್ತು ಪೋಷಕರ ದುರಾದೃಷ್ಟ ಎಂದು ಡಾ ಸತೀಶ್ ಸಾಸಲು ಜಾಗ್ರತೆಯನ್ನು ನುಡಿದರು.
ಸೌಹಾರ್ದ-ಸಾಮರಸ್ಯದ ಸೀಮೆ
ತಾತಯ್ಯ-ನಿರ್ವಾಣಪ್ಪಂದಿರ ಪರಂಪರೆಯನ್ನು ಉಸಿರಾಡಿದ ಬಸವಯ್ಯನವರ ಈ ನಾಡಿನಲ್ಲಿ ಇಷ್ಟು ತುಚ್ಛಮಟ್ಟದ ಕೋಮುವಾದಿ-ಪುಢಾರಿಗಿರಿ ಸಲ್ಲದು. ಇದು ಭ್ರಾತೃತ್ವ, ಭಾವೈಕ್ಯದ ಸೂಫಿ-ಶರಣ-ಶ್ರಮಣ-ಅವಧೂತ ಪರಂಪರೆಗಳು ಗದ್ದಿಗೆಯಾಗಿರುವ-ಕ್ಷೇತ್ರ. ಇಲ್ಲಿ ರಾಷ್ಟ್ರಕವಿ ಕುವೆಂಪುರವರ ‘ಮನುಜ ಮತ-ವಿಶ್ವ ಪಥ’ದ ವಿಶ್ವಮಾನವತೆ ನೆಲೆಸಿದೆ. ಇದು ಸರ್ವ-ಜನಾಂಗದ ಶಾಂತಿಯ ತೋಟ’ದಂತೆ ಸಾಮರಸ್ಯದಲ್ಲಿದೆ. ಇಲ್ಲಿನ ಶಾಂತಿ ಕದಡಲು ಯತ್ನಿಸುವ ಯಾವನೇ ಒಬ್ಬ ಕೋಮು-ಕ್ರಿಮಿಯನ್ನೂ ಪೊಲೀಸ್ ಇಲಾಖೆ ಇಲ್ಲಿ ಬೆಳೆಯಲು ಬಿಡಬಾರದು. ಎಲ್ಲ ವಸ್ತು ವಿಷಯಗಳಲ್ಲೂ ಕೋಮುವಾದ ಕಕ್ಕುವ ಇರುವ ವಿಷಕಾರಿ ಮನಃಸ್ಥಿತಿಗೆ ಶಾಲಾ-ಮಕ್ಕಳ ಸಹಜತೆಯೇ ಮಾದರಿಯಾಗಬೇಕಿತ್ತು ಎಂದರು.
ಸರ್ಕಾರಿ-ಶಾಲೆ ಎಂದರೆ ಬಹುತ್ವದ ಪ್ರತೀಕ
ಎಲ್ಲ ಜಾತಿ-ಧರ್ಮ-ಜನಾಂಗದ ಸಾರ್ವಜನಿಕರ ತೆರಿಗೆ ಹಣದಲ್ಲಿ ಕರ್ನಾಟಕ-ಸರ್ಕಾರ ಶಾಲಾಮಕ್ಕಳಿಗೆ ಒದಗಿಸುತ್ತಿರುವ ಬಿಸಿಯೂಟ ಸೇವಿಸುವ ಮೊದಲು, ಅನ್ನದ ತಟ್ಟೆಯ ಎದುರು ತಮ್ಮೆರಡೂ ಕೈಗಳನ್ನು ಮುಗಿದು ಕೂರುವ ಸರ್ಕಾರಿ ಶಾಲೆ ಮಕ್ಕಳು, ‘ಅನ್ನದಾತೋ-ಸುಖೀಭವ’ ಎಂಬ ಶ್ಲೋಕ-ಮಂತ್ರವೊಂದನ್ನು ರಾಗಬದ್ಧವಾಗಿ ಏಕಸ್ವರದಲ್ಲಿ ಉಚ್ಛರಿಸಿದ ನಂತರ, ಸಹಪಂಕ್ತಿಯಲ್ಲಿ ಸಾಮೂಹಿಕವಾಗಿ ಕೂಡಿ-ಕುಂತು ಬಿಸಿಯೂಟ ಸೇವನೆ ಪ್ರಾರಂಭಿಸುತ್ತಾರೆ. ನೆನಪಿಡಬೇಕಾದ ಸಂಗತಿ ಎಂದರೆ, ಇಲ್ಲಿ ಎಲ್ಲ ಜಾತಿ-ಜನಾಂಗ-ಧರ್ಮಕ್ಕೆ ಸೇರಿದ ಮಕ್ಕಳೂ ಇರುತ್ತಾರೆ ಎಂದರು.
ಹೀಗೆ ಬಿಸಿಯೂಟಕ್ಕೂ ಮೊದಲು ಕಂಠಪಾಠ ಮಾಡಿಸಲಾದ ಸಂಸ್ಕೃತ ಶ್ಲೋಕವನ್ನು ಏಕಸ್ವರದಲ್ಲಿ ಉಚ್ಛರಿಸುವ ಮಕ್ಕಳು, ವಾರಾವಾರ ಶುಕ್ರವಾರದ ಶಾರದಾಪೂಜೆ, ಸರಸ್ವತಿ ಪೂಜೆ, ವರ್ಷಾವರ್ಷಾ ಶಾಲಾ ಗಣೇಶೋತ್ಸವ, ಪ್ರತಿ ಕಾರ್ಯಕ್ರಮದ ಮೊದಲಿನ ಪ್ರಾರ್ಥನೆ, ಜ್ಯೋತಿ ಬೆಳಗುವುದು, ಪೂಜೆ-ಮಂಗಳಾರತಿ ಮಾಡುವುದು, ಆರತಿ ತಗಳುವುದು, ಕರ್ಪೂರ ಹಚ್ಚುವುದು. ಇತ್ಯಾದಿ ಇತ್ಯಾದಿ ಎಲ್ಲವನ್ನೂ ಯಾವುದೇ ಭಿನ್ನ-ಬೇಧ ಎಣಿಸದೆ, ಸರ್ಕಾರಿ ಶಾಲೆಗಳ ಈಯೆಲ್ಲ ಜಾತಿ-ಧರ್ಮ-ಜನಾಂಗದ ಮಕ್ಕಳು ವರ್ಷವಿಡೀ ಮಾಡುತ್ತಾ, ಅದರಲ್ಲಿ ಪಾಲ್ಗೊಳ್ಳುತ್ತಾ, ಕಲಿಯುತ್ತಾ ಮನುಜಮತ-ವಿಶ್ವಪಥ ಬೆಳಗುತ್ತಾರೆ ಎಂದರು.

ಸದಾ ಧರ್ಮ-ಬೋಧನೆ, ಧರ್ಮ ಪರಿವರ್ತನೆ ಎಂದೆಲ್ಲಾ ಅನ್ಯಧರ್ಮೀಯರ ವಿರುದ್ಧ ವಿಷಕಾರುವ ಕೋಮುವಾದಿ ಕ್ರಿಮಿಗಳು, ಸರ್ಕಾರಿ ಶಾಲೆಗಳ ಈ ಎಳೆಯ ಮಕ್ಕಳಿಂದ ಕನಿಷ್ಟಮಟ್ಟದ ತಿಳುವಳಿಕೆ ಕಲಿಯಬೇಕು. ಅದೇರೀತಿ, ಘಟನೆಯ ಪೂರ್ವಾಪರ ವಿಚಾರಿಸದೆ, ಕನಿಷ್ಟ ತನಿಖೆಯನ್ನೂ ನಡೆಸದೆ, ಏಕಪಕ್ಷೀಯವಾಗಿರುವ ಅದೇ ಸುಳ್ಳು ಆರೋಪಗಳನ್ನು ಯಥಾವತ್ ವರದಿ-ಮಾಡುತ್ತಿರುವ ವರದಿಗಾರರು ಹಾಗೂ ಅಂಥ ಬಯಾಸ್ಡ್ ವರದಿಗಳನ್ನೇ ಯಥಾವತ್ ಪ್ರಕಟಿಸುತ್ತಿರುವ ಮಾಧ್ಯಮಗಳೂ, ಸರ್ಕಾರಿ ಶಾಲೆಗಳ ಈ ಎಳೆಯ ಮಕ್ಕಳಿಂದ ಕನಿಷ್ಟಮಟ್ಟದ ಮನುಷ್ಯತ್ವವನ್ನು ಕಲಿಯಬೇಕಿದೆ. ಸರ್ಕಾರಿ-ಶಾಲೆ ಎಂದರೇನೇ ಬಹುತ್ವದ ಒಂದು ವ್ಯವಸ್ಥೆ. ಅದು ಬಹುತ್ವದ ಪ್ರತೀಕ ಎಂದು ಡಾ ಸತೀಶ್ ಸಾಸಲು ವಿವರಿಸಿದರು.
ಸತತ ವೈಫಲ್ಯಗಳ ಬಿಇಓ
ಮಕ್ಕಳ ಅನುಭವಾತ್ಮಕ-ಕಲಿಕೆಗೆ ಸಂಬಂಧಿಸಿದ ಕಲಿಕಾ-ಅವಕಾಶವನ್ನೇ ನಿರ್ಬಂಧಿಸಲು ಪ್ರಯತ್ನಿಸಿದ ಬಡವರ ಮಕ್ಕಳ ಶಿಕ್ಷಣ ವಿರೋಧಿ ದುಷ್ಕಾರ್ಯ ನಡೆಸುವ ಇಂಥ ಸಮಾಜ-ಘಾತುಕ ವಿಕೃತಿಗಳ ವಿರುದ್ಧ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ಸರ್ಕಾರ ಹಾಗೂ ಪ್ರಾಜ್ಞವಂತ ಸಮಾಜ ಒಟ್ಟಾಗಿ ಎದುರು ನಿಲ್ಲಬೇಕಿದೆ ಎಂದು ಹೇಳಿದರು.
ಇಂಥವರ ವಿರುದ್ಧ ಇದುವರೆಗೂ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಿದೆ ಹೊಣೆಗೇಡಿತನ ತೋರಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಸಿ ಎಸ್ ಕಾಂತರಾಜು ಇಲ್ಲೀಗ ಬೇಗನೇ ಎಚ್ಚೆತ್ತುಕೊಳ್ಳಬೇಕು. ಇಂತಹ ಘಟನೆಗಳ ಜೊತೆಗೆ, ಶಾಲೆಗೆ ಹಾಜರಾಗದೆ ರಾಜಕೀಯ ಪ್ರಭಾವ ಬೆಳೆಸಿಕೊಂಡು ಓಡಾಡುತ್ತಿರುವ ಕೆಲವು ಅಧ್ಯಾಪಕರ ಬಗ್ಗೆ ಮಾಹಿತಿಯಿದೆ. ಇನ್ನು ಕೆಲವರು ತಮ್ಮ ಜಾಗಕ್ಕೆ ಬಾಡಿಗೆ ಶಿಕ್ಷಕರನ್ನು ನೇಮಿಸಿಕೊಂಡಿದ್ದಾರೆ. ಮಕ್ಕಳಿಗೆ ಪಾಠ ಮಾಡದೆ-ತಮ್ಮ ಕರ್ತವ್ಯವನ್ನೇ ನಿರ್ವಹಿಸದೆ ಸರ್ಕಾರಿ ಸಂಬಳ ಪಡೆಯುತ್ತಿರುವ ಇಂಥವರು, ತಮಗೆ ಬರುವ ಸಂಬಳದಲ್ಲಿ ಒಂದಷ್ಟನ್ನು ಈ ಬಾಡಿಗೆ ಶಿಕ್ಷಕರಿಗೆ ನೀಡುತ್ತಿದ್ದಾರೆ. ಇಂತಹ ಪ್ರಾಕ್ಸಿ-ಟೀಚರಿಕೆ ಮತ್ತು ಬಾಡಿಗೆ-ಶಿಕ್ಷಕರ ಬಗ್ಗೆ ಬಿಇಓ ಮೊದಲು ಕ್ರಮ ಕೈಗೊಳ್ಳಬೇಕಿದೆ. ಇಂತಹ ಮಾಹಿತಿಯನ್ನು ಕ್ಷೇತ್ರ-ಶಿಕ್ಷಣಾಧಿಕಾರಿಗೆ ಈಗಾಗಲೇ ತಿಳಿಸಲಾಗಿದೆ. ಆದರೂ ಪ್ರಗತಿ ಕಂಡಿಲ್ಲ. ಅದರೆಲ್ಲ ಒಟ್ಟೂ ಪರಿಣಾಮವೇ ಇಂತಹ ಕೃತ್ರಿಮ ಘಟನೆಗಳಿಗೆ ಕಾರಣವಾಗುತ್ತಿದೆ ಎಂದು ವಿವವರಿಸಿದರು.

ಶಿಕ್ಷಣ ಇಲಾಖೆ, ಶಿಕ್ಷಕರ ಸಂಘ, ಶಾಲಾಮಕ್ಕಳ ರಕ್ಷಣಾ ಸಮಿತಿ, ಶಾಲಾ ಅಭಿವೃದ್ಧಿ ಮಂಡಳಿ, ತಾಲ್ಲೂಕು ಆಡಳಿತ, ಮಕ್ಕಳ ಹಕ್ಕುಗಳ ಆಯೋಗ, ಮಹಿಳೆ ಮತ್ತು ಮಕ್ಕಳ ಹಕ್ಕುಗಳ ಆಯೋಗ ಇವರೆಲ್ಲರೂ ಹುಳಿಯಾರು-ಪಟ್ಟಣದ ಕೆಪಿಎಸ್-ಹೈಸ್ಕೂಲ್ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮಗಳನ್ನು ಜರುಗಿಸಬೇಕು ಎಂದು ಡಾ ಸತೀಶ್ ಸಾಸಲು ಸರ್ಕಾರವನ್ನು ಒತ್ತಾಯಿಸಿದರು.
ಹೆಣ್ಣುಮಕ್ಕಳ ಶಿಕ್ಷಣಕ್ಕೆ ವಿರೋಧ
ಇದು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಅಡ್ಡಿಪಡಿಸುವ ಕೊಳಕು ಪುರುಷಪ್ರಧಾನ ಮನಸ್ಥಿತಿ ಕೂಡ. ಯಾಕೆಂದರೆ, ಚಿಕ್ಕನಾಯಕನಹಳ್ಳಿ-ಹುಳಿಯಾರು ಸದರಿ ಕೆಪಿಎಸ್ ಪ್ರೌಢಶಾಲೆಯ ಹೆಣ್ಣುಮಕ್ಕಳು ಚರ್ಚ್ ನೋಡುವ ಕುತೂಹಲವನ್ನು ವ್ಯಕ್ತಪಡಿಸಿದ್ದರಿಂದಲೇ, ಅಧ್ಯಾಪಕರು ತಮ್ಮ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಚರ್ಚನ್ನು ತೋರಿಸಲು ಕರೆದುಕೊಂಡು ಹೋಗಿರುವುದು. ಮತ್ತು, ಕೇವಲ ಚರ್ಚನ್ನು ತೋರಿಸಲಷ್ಟೇ ಅಲ್ಲಿಗೆ ಮಕ್ಕಳನ್ನು ಕರೆದುಕೊಂಡು ಹೋಗಿರುವುದು. ಧರ್ಮ-ಬೋಧನೆ ಮತ್ತು ಧರ್ಮ-ಪರಿವರ್ತನೆ ಎಂಬುದೆಲ್ಲ ಪುರುಷಪ್ರಧಾನ ಮನೋಭಾವನೆಯ ಕೋಮು-ಕ್ರಿಮಿಗಳು ಕಟ್ಟಿರುವ ಕತೆಯಷ್ಟೆ ಎಂದು ಹೇಳಿದ ಡಾ ಸತೀಶ್ ಸಾಸಲು, ಮುಂದಿನ ದಿನಗಳಲ್ಲಿ ತಾವು ತಾಲ್ಲೂಕಿನಲ್ಲಿ ನಡೆಯಲಿಚ್ಛಿಸಿರುವ ಸಾಮಾಜಿಕನ್ಯಾಯ ಹಾಗೂ ಸರ್ವೋದಯದ ಹಾದಿಗಳನ್ನು ಗುರುತಿಸಿಕೊಂಡಿರುವ ಸ್ಪಷ್ಟತೆಯಲ್ಲಿ ಮಾತನಾಡಿದರು.
ವರದಿ– ಸಂಚಲನ
ಚಿಕ್ಕನಾಯಕನ ಸೀಮೆಯಿಂದ
