ಆನ್‌ಲೈನ್‌ನಲ್ಲಿ ಮಹಿಳಾ ರೋಗಿಗಳ ಸಿಸಿಟಿವಿ ವೀಡಿಯೋಗಳನ್ನು ಮಾರಾಟ ಮಾಡಿದ ಆರೋಪದಲ್ಲಿ ಗುಜರಾತ್ ಪೊಲೀಸರು ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದು ಬುಧವಾರ ತಿಳಸಿದ್ದಾರೆ. ಸಿಸಿಟಿವಿ ನೆಟ್‌ವರ್ಕ್ ಅನ್ನು ಹ್ಯಾಕ್ ಮಾಡಿ ವೀಡಿಯೋಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಬುಧವಾರ ದೆಹಲಿ ನಿವಾಸಿ ರೋಹಿತ್ ಸಿಸೋಡಿಯಾ ಅವರ ಬಂಧನ ಮಾಡಲಾಗಿದ್ದು, ಬಂಧಿತರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ. ಸಿಸೋಡಿಯಾ ಹ್ಯಾಕ್ ಮಾಡಿದ ಸಿಸಿಟಿವಿ ದೃಶ್ಯಾವಳಿಗಳನ್ನು ಕ್ಯೂಆರ್ ಕೋಡ್‌ಗಳಾಗಿ ಪರಿವರ್ತಿಸಿ, ಅವುಗಳನ್ನು ಯೂಟ್ಯೂಬ್ ಮತ್ತು ಟೆಲಿಗ್ರಾಮ್ ಚಾನೆಲ್‌ಗಳ ಮೂಲಕ ಮಾರಾಟ ಮಾಡಿದ್ದಾರೆ ಎಂದು ಅಹಮದಾಬಾದ್ ಸೈಬರ್ ಕ್ರೈಮ್ ಬ್ರಾಂಚ್ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನು ಓದಿದ್ದೀರಾ? ದೆಹಲಿ ಚುನಾವಣೆ | ಚೀನೀ ಸಿಸಿಟಿವಿ ಕ್ಯಾಮೆರಾ ಬಳಕೆ, ಪಂಜಾಬ್ ಆಡಳಿತ ದುರುಪಯೋಗ: ಎಎಪಿ, ಬಿಜೆಪಿ ವಾಕ್ಸಮರ
ಆಸ್ಪತ್ರೆಯ ಹೆರಿಗೆ ಕೋಣೆಯೊಳಗೆ ವೈದ್ಯರು ಮಹಿಳಾ ರೋಗಿಗಳನ್ನು ಪರೀಕ್ಷಿಸುತ್ತಿರುವ ವೀಡಿಯೋಗಳನ್ನು ಯೂಟ್ಯೂಬ್ ಮತ್ತು ಟೆಲಿಗ್ರಾಮ್ ಚಾನೆಲ್‌ಗಳಲ್ಲಿ ಪ್ರಸಾರ ಮಾಡಿರುವುದು ಕಂಡುಬಂದ ನಂತರ ದೂರು ದಾಖಲಾಗಿದೆ.
ಸೂರತ್‌ನ ಪರಿತ್ ಧಮೇಲಿಯಾ ಎಂಬ ಹ್ಯಾಕರ್ ಮತ್ತು ಮಹಾರಾಷ್ಟ್ರದ ಲಾತೂರ್ ನಿವಾಸಿ ಯೂಟ್ಯೂಬ್ ಚಾನೆಲ್‌ನ ಮಾಲೀಕ ಪ್ರಜ್ವಲ್ ಟೈಲಿ ಸೇರಿದಂತೆ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಕ್ಲಿಪ್‌ಗಳನ್ನು ಕ್ಯೂಆರ್ ಕೋಡ್‌ಗಳಾಗಿ ಪರಿವರ್ತಿಸಿದ ನಂತರ, ಸಿಸೋಡಿಯಾ ಅವುಗಳನ್ನು ಟೈಲಿ ಮತ್ತು ಇತರ ಕೆಲವರಿಗೆ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಟೈಲಿ ಒಡೆತನದ ಮೂರು ಯೂಟ್ಯೂಬ್ ಚಾನೆಲ್‌ಗಳು ಕೆಲವು ಕ್ಲಿಪ್‌ಗಳನ್ನು ಹಂಚಿಕೊಂಡಿದೆ. ಟೆಲಿಗ್ರಾಮ್ ಗುಂಪಿನ ಸದಸ್ಯರಿಗೆ ಪ್ರತಿ ವೀಡಿಯೋಗೆ ಎರಡು ಸಾವಿರ ರೂಪಾಯಿ ಶುಲ್ಕ ವಿಧಿಸಿದೆ ಎಂದು ವರದಿಯಾಗಿದೆ.
