ತಮಿಳುನಾಡು ಆನ್‌ಲೈನ್ ಗೇಮಿಂಗ್ ಪ್ರಾಧಿಕಾರ (ರಿಯಲ್ ಮನಿ ಗೇಮ್ಸ್) ನಿಯಮಗಳು, 2025ರ ಕೆಲವು ನಿಬಂಧನೆಗಳನ್ನು ಅಸಂವಿಧಾನಿಕ ಎಂದು ಘೋಷಿಸುವಂತೆ ಕೋರಿ ಆನ್‌ಲೈನ್ ಗೇಮಿಂಗ್ ಕಂಪನಿಗಳು ಬುಧವಾರ ಮದ್ರಾಸ್ ಹೈಕೋರ್ಟ್‌ಗೆ ಮೊರೆ ಹೋಗಿವೆ.
ನವದೆಹಲಿಯ ಹೆಡ್ ಡಿಜಿಟಲ್ ವರ್ಕ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಇತರ ಎರಡು ಕಂಪನಿಗಳು ಸಲ್ಲಿಸಿದ ಅರ್ಜಿಗಳನ್ನು ವಿಚಾರಣೆಗೆ ತೆಗೆದುಕೊಂಡ ನ್ಯಾಯಮೂರ್ತಿಗಳಾದ ಎಸ್ ಎಂ ಸುಬ್ರಮಣಿಯಂ ಮತ್ತು ಕೆ ರಾಜಶೇಖರ್ ಅವರನ್ನೊಳಗೊಂಡ ವಿಭಾಗೀಯ ಪೀಠವು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತಿ ಅಫಿಡವಿಟ್‌ಗಳನ್ನು ಸಲ್ಲಿಸಲು ಅನುವು ಮಾಡಿಕೊಟ್ಟು ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿದೆ.
ಇದನ್ನು ಓದಿದ್ದೀರಾ? ಹಾಸನ | ಆನ್‌ಲೈನ್ ಗೇಮಿಂಗ್; ಲಕ್ಷಾಂತರ ಹಣ ಕಳೆದುಕೊಂಡ ಯುವಕ ಅತ್ಮಹತ್ಯೆ
ಆಧಾರ್ ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡಲಾದ ಫೋನ್ ಸಂಖ್ಯೆಗೆ ಕಳುಹಿಸಲಾಗುವ ಒಟಿಪಿಯೊಂದಿಗೆ ಲಾಗಿನ್ ಮಾಡಲು ಕೆವೈಸಿ ಪರಿಶೀಲನೆ ಕಡ್ಡಾಯ ಎಂದು ಹೇಳುವ ನಿಯಮ 4 (iii) ಮತ್ತು ರಿಯಲ್ ಮನಿ ಆಟಗಳಿಗೆ ಮಧ್ಯರಾತ್ರಿ 12ರಿಂದ ಬೆಳಿಗ್ಗೆ 5 ರವರೆಗೆ ನಿರ್ಬಂಧ ವಿಧಿಸಲಾಗುವ ನಿಯಮ 4 (viii) ಅನ್ನು ಕಂಪನಿಗಳು ಪ್ರಶ್ನಿಸಿವೆ.
ಹಾಗೆಯೇ ಕೆಲವು ನಿಯಮಗಳ ಬಗ್ಗೆ ಸಂಪೂರ್ಣ ಸ್ಪಷ್ಟತೆಯನ್ನು ನೀಡದ ಕಾರಣ, ಆ ಬಗ್ಗೆ ಸ್ಪಷ್ಟಪಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರಲಾಗಿದೆ.
ಈ ಹಿಂದೆ ಎರಡು ಸಂದರ್ಭಗಳಲ್ಲಿ ತಮಿಳುನಾಡು ಸರ್ಕಾರವು ಕಾನೂನುಬದ್ಧವಾಗಿ ಅನುಮತಿಸಲಾದ ಆಟಗಳನ್ನು ನಿಷೇಧಿಸಿದೆ. ಆದರೆ ನ್ಯಾಯಾಲಯವು ನಿಷೇಧ ರದ್ದುಗೊಳಿಸಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಆನ್‌ಲೈನ್ ಬೆಟ್ಟಿಂಗ್, ಗೇಮಿಂಗ್‌ಗಳಿಂದ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡು ಜನರು ಆತ್ಮಹತ್ಯೆಯಂತಹ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರಗಳು ಆನ್‌ಲೈನ್ ಗೇಮಿಂಗ್‌ಗೆ ಕೆಲವು ನಿಯಮಗಳನ್ನು ರೂಪಿಸಿದೆ. ಆದರೆ ಈ ನಿಯಮಗಳನ್ನು ಇನ್ನಷ್ಟು ಬಲಪಡಿಸುವ ಮತ್ತು ಜನರ ಹಣ ದೂಚಿ ಬೀದಿಗೆ ತಳ್ಳುವ ಗೇಮಿಂಗ್ ಅನ್ನು ಮಟ್ಟ ಹಾಕುವ ಅಗತ್ಯವಿದೆ. ಜೊತೆಗೆ ಜನರು ಕೂಡಾ ಈ ಅಪಾಯದ ಬಗ್ಗೆ ಅರಿತು ಈ ಮೋಸಕ್ಕೆ ಬಲಿಯಾಗದಿರುವಂತೆ ಎಚ್ಚರ ವಹಿಸಬೇಕು.
