ಹುಡುಕಾಟ | ಮಾರ್ಕ್ ಟಲಿಯ ಪುಸ್ತಕ ಮತ್ತು ಅದರ ಪರ್ಫೆಕ್ಟ್ ಓದುಗ…

Date:

Advertisements

ಆ ಪುಸ್ತಕ ಓದಿದಾಗಲೇ ಗೊತ್ತಾಗಿದ್ದು; ಆಯಾ ಪುಸ್ತಕಗಳಿಗೆ ಆಯಾ ಓದುಗರಿರ್ತಾರೆ, ಆಯಾ ಓದುಗರಿಗೆ ಅದರ ಅವಶ್ಯಕತೆ ಇರುತ್ತೆ. ಪುಸ್ತಕ ಎಷ್ಟೇ ಚೆನ್ನಾಗಿದ್ದರೂ, ಕೆಲವರಿಗೆ ಆ ವಿಷಯಗಳು ಆಗಲೇ ಗೊತ್ತಿರುವುದರಿಂದ ಇಷ್ಟ ಆಗದೇ ಇರಬಹುದು. ಆಯಾ ಪುಸ್ತಕಗಳು/ಲೇಖನಗಳು ಹಾಗೂ ಲೇಖಕರೂ ಆ ಒಬ್ಬ ಪರ್ಫೆಕ್ಟ್‌ ಓದುಗನ ಹುಡುಕಾಟದಲ್ಲಿರುತ್ತಾರೆ ಅನಿಸಿತು. ಹಾಗಾಗಿ ಆ ಪುಸ್ತಕವೇ ಆ ಪರ್ಫೆಕ್ಟ್‌ ಓದುಗನನ್ನು ಹುಡುಕುತ್ತ ನನ್ನ ಬಳಿ ಬಂತು

ನಾನು ಮುಂಬಯಿಯ ಮಲಾಡ ಪೂರ್ವದಲ್ಲಿರುವ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಆ ಆಸ್ಪತ್ರೆಯ ಪಕ್ಕದಲ್ಲೇ ಹಳೆ ಪುಸ್ತಕಗಳ ಅಂಗಡಿಯೊಂದಿತ್ತು. ಅಲ್ಲಿ ಯಾವುದೇ ʼಚೆನ್ನಾಗಿರುವʼ ಪುಸ್ತಕ ಕಂಡುಬಂದರೆ ಎತ್ತಿಕೊಳ್ಳುತ್ತಿದ್ದೆ. ನನ್ನ ಒಟ್ಟಾರೆ ಓದು ಅದೇ ರೀತಿಯಲ್ಲಿತ್ತು. ಕೈಗೆ ಸಿಕ್ಕ ಪುಸ್ತಕಗಳನ್ನು, ಚೆನ್ನಾಗಿ ಕಂಡ ಪುಸ್ತಕಗಳನ್ನು ಓದುವುದು. ಓದುವುದಕ್ಕೆ ಒಂದು ಕ್ರಮ ಇಟ್ಟುಕೊಂಡಿರಲಿಲ್ಲ. ಆಗ, ಅಂದರೆ. 2002ರಲ್ಲಿ ಮಾರ್ಕ್‌ ಟಲಿ ಅವರ ʼನೋ ಫುಲ್‌ ಸ್ಟಾಪ್ಸ್‌ ಇನ್‌ ಇಂಡಿಯಾʼ ಕಂಡಿತು. ಎತ್ತಿಕೊಂಡೆ.

ಆ ಪುಸ್ತಕ ಓದಿದಾಗಲೇ ಗೊತ್ತಾಗಿದ್ದು: ಆಯಾ ಪುಸ್ತಕಗಳಿಗೆ ಆಯಾ ಓದುಗರಿರ್ತಾರೆ, ಆಯಾ ಓದುಗರಿಗೆ ಅದರ ಅವಶ್ಯಕತೆ ಇರುತ್ತೆ. ಪುಸ್ತಕ ಎಷ್ಟೇ ಚೆನ್ನಾಗಿದ್ದರೂ, ಕೆಲವರಿಗೆ ಆ ವಿಷಯಗಳು ಆಗಲೇ ಗೊತ್ತಿರುವುದರಿಂದ ಇಷ್ಟ ಆಗದೇ ಇರಬಹುದು. ಆಯಾ ಪುಸ್ತಕಗಳು/ಲೇಖನಗಳು ಹಾಗೂ ಲೇಖಕರೂ ಆ ಒಬ್ಬ ಪರ್ಫೆಕ್ಟ್‌ ಓದುಗನ ಹುಡುಕಾಟದಲ್ಲಿರುತ್ತಾರೆ ಅನಿಸಿತು. ಹಾಗಾಗಿ ಆ ಪುಸ್ತಕವೇ ಆ ಪರ್ಫೆಕ್ಟ್‌ ಓದುಗನನ್ನು ಹುಡುಕುತ್ತ ನನ್ನ ಬಳಿ ಬಂದು ಸೇರಿತು.

ಅದೇ ಕಾಲದಲ್ಲಿ ನಾನು ವಿನಾಕಾರಣ ಸಿನಿಕನೂ ಆಗಿದ್ದೆ ಅನಿಸುತ್ತೆ. ಅದರಲ್ಲೂ ವಿಶೇಷವಾಗಿ ಧರ್ಮದ ವಿಷಯ ಬಂದಾಗ. ಮನೆಯಲ್ಲಿ ನಾಸ್ತಿಕ ವಾತಾವರಣ ಇದ್ದುದರಿಂದ ನಾನೂ ಸಹಜವಾಗಿಯೇ ಧರ್ಮದ ಬಗ್ಗೆ ಅಸಹನೆಯನ್ನು ಬೆಳೆಸಿಕೊಂಡಿದ್ದೆ. ಧರ್ಮದ ಜೊತೆಗಿರುವ ಎಲ್ಲರೂ, ಎಲ್ಲಾ ವಿಷಯಗಳೂ ಮೂರ್ಖರು, ಮೂರ್ಖತನದ ವಿಷಯಗಳು ಎಂದುಕೊಂಡಿದ್ದೆ. ಸಾಮಾಜಿಕ ವಿಷಯಗಳಲ್ಲಿ ʼಅರಿವುʼ ಬೆಳೆಸಿಕೊಳ್ಳುತ್ತಿದ್ದ, ಆಯಾ ವಿಷಯಗಳನ್ನು, ಸಮಸ್ಯೆಗಳನ್ನು ಅರ್ಥಮಾಡಿಕೊಂಡು, ಅದಕ್ಕೆ ಪರಿಹಾರ ಏನಿರಬೇಕು ಎಂಬ ಹುಡುಕಾಟವನ್ನೂ ಮಾಡುತ್ತಿದ್ದ ನನಗೆ, ದೇವರನ್ನು ನಂಬುವ, ಧಾರ್ಮಿಕ ಆಚರಣೆಗಳನ್ನು ಮಾಡುವ ಎಲ್ಲರನ್ನೂ ʼಮೂರ್ಖʼರೆಂದು ʼತೀರ್ಪುʼ ಕೊಟ್ಟು, ಸಮಾಜದ ಬಹುಸಂಖ್ಯಾತರನ್ನು ಜರಿದು ಸಮಾಜವನ್ನು ಹೇಗೆ ಅರ್ಥಮಾಡಿಕೊಳ್ಳಬಲ್ಲೇ, ಅವುಗಳಿಗೆ ಹೇಗೆ ಉತ್ತರ ಕಂಡುಕೊಳ್ಳಬಲ್ಲೇ ಎಂಬ ಪ್ರಶ್ನೆಯೇ ಹೊಳೆದಿರಲಿಲ್ಲ.
ಅಂದಹಾಗೆ ಒಂದು ಡಿಸ್‌ಕ್ಲೇಮರ್;‌ ಈ ಲೇಖನ ಮಾರ್ಕ್‌ ಟಲಿ ಅವರ ವಿಚಾರಗಳು ಎಷ್ಟು ಅದ್ಭುತ ಅಥವಾ ಅವರ ವಿಚಾರಧಾರೆ ಭಾರತಕ್ಕೆ ಸೂಕ್ತ ಎಂಬುದನ್ನು ವಿವರಿಸಲು ಇದನ್ನು ಬರೆಯುತ್ತಿಲ್ಲ. ಆ ಪುಸ್ತಕ ನನಗೆ ಏನು ಕೊಟ್ಟಿತು ಎಂಬುದನ್ನು ಮಾತ್ರ ದಾಖಲಿಸುವ ಪ್ರಯತ್ನ ಮಾಡುತ್ತಿದ್ದೇನೆ ಹಾಗೂ ಅವರ ಸೈದ್ಧಾಂತಿಕ ನಿಲುವುಗಳನ್ನು ನಾನು ಸಮರ್ಥಿಸಿಕೊಳ್ಳುವ ಯಾವ ಪ್ರಯತ್ನವನ್ನೂ ಮಾಡುತ್ತಿಲ್ಲ.

31399543554

ಆ ಪುಸ್ತಕದಲ್ಲಿ ಹತ್ತು ಪ್ರಬಂಧಗಳಿವೆ, ಪ್ರಬಂಧಗಳಿಗಿಂತ ಸ್ಟೋರಿ ಎಂದು ಕರೆಯಲು ನಾನು ಇಷ್ಟಪಡುತ್ತೇನೆ. ಮೊದಲನೆಯ ಸ್ಟೋರಿ ರಾಮಚಂದರ್‌ ಸ್ಟೋರಿ ಎಂಬುದು. ಅದರಲ್ಲಿ ಮಾರ್ಕ್‌ ಟಲಿ ಅವರ ʼಸೇವಕʼನಾದ ರಾಮಚಂದರ್‌ ಅವರ ಬಗ್ಗೆ ಬರೆಯುತ್ತಾರೆ. ರಾಮಚಂದರ್‌ ಹೇಗೆ ಅವರ ಮನೆ ಸೇರಿಕೊಂಡ, ಹೇಗೆ ಬೇರೆ ಕೆಲಸದಿಂದ ಮನೆಯ ಮಹರಾಜನಾಗಿ (ಅಡುಗೆ ಮಾಡುವ), ಇತರ ಕೆಲಸ ಮಾಡುವ ವ್ಯಕ್ತಿಯಾಗಿ ಬಡ್ತಿ ಪಡೆದುಕೊಂಡ ಎಂಬುದನ್ನು ವಿವರಿಸಿ, ನಂತರ ರಾಮಚಂದರ್‌ ಅವರ ಮಗಳ ಮದುವೆಯ ಬಗ್ಗೆ ಬರೆಯುತ್ತಾರೆ. ದೆಹಲಿಯಿಂದ ದೂರದ ಊರಲ್ಲಿಯ ಆ ಮದುವೆಗೆ ತಾವು ಹೋಗಿದ್ಹೇಗೆ, ಅಲ್ಲಿ ಅವರಿಗೆ ಯಾವೆಲ್ಲ ವ್ಯವಸ್ಥೆಗಳನ್ನು ಮಾಡಲಾಗಿತ್ತು, ಮದುವೆ ಶಾಸ್ತ್ರಗಳು ಹೇಗೆಲ್ಲ ಆದವು, ಅಲ್ಲಿ ಹೋದಾಗ ಅವರು ಭೇಟಿಯಾದ ಜನರು, ಅವರ ಸಮಸ್ಯೆಗಳು ಮುಂತಾದ ವಿಷಯಗಳ ಬಗ್ಗೆ ಸರಳವಾಗಿ ಬರೆಯುತ್ತಾರೆ.

ನಾನು ಮುಂಬಯಿಯಲ್ಲಿ ಈ ಪುಸ್ತಕವನ್ನು ಒಬ್ಬರಿಗೆ ರೆಕಮಂಡ್‌ ಮಾಡಿದಾಗ ಅವರು ಓದಿ, ನಂತರ ಭೇಟಿಯಾಗಿ, ʼಹೌದು, ಪುಸ್ತಕ ಚೆನ್ನಾಗಿತ್ತು, ಆದರೆ ಆ ರಾಮಚಂದರ್‌ ಸ್ಟೋರಿ ಯಾಕೆ ಬರೆದರು, ಅದರಲ್ಲೇನಿದೆ ಎಂಬುದು ತಿಳಿಯಲಿಲ್ಲʼ ಎಂದು ಆಶ್ಚರ್ಯ ವ್ಯಕ್ತಪಡಿಸಿದರು. ನನಗೆ ತುಂಬಾ ಇಷ್ಟವಾದ ಸ್ಟೋರಿಗೆ ʼಇದನ್ಯಾಕೆ ಬರೆದರುʼ ಎಂದು ಆಶ್ಚರ್ಯ ಸೂಚಿಸಿದ್ದಕ್ಕೆ ನಾನು ಆಶ್ಚರ್ಯ ಪಡಲಿಲ್ಲ. ಆ ಒಟ್ಟಾರೆ ಕಥೆಯಲ್ಲಿ ಯಾವ ವಿಶೇಷವೂ ಇದ್ದಿಲ್ಲ. ಅದು ಎಂಬತ್ತರ ದಶಕದ ಉತ್ತರಭಾರತದ ಒಂದು ಗ್ರಾಮದಲ್ಲಿ ನಡೆಯುತ್ತಿರುವ ಮದುವೆಯ ದಾಖಲೆಯಷ್ಟೇ. ಯಾವ ವಿಶೇಷವಿಲ್ಲದಿದ್ದರೂ ನನಗೇಕೆ ವಿಶೇಷವೆನಿಸಿತು? ಮೊದಲೇ ಹೇಳಿದಂತೆ, ನಾನು ಅದರ ಪರ್ಫೆಕ್ಟ್‌ ಓದುನಗನಾಗಿದ್ದೆ. ನನಗೆ ಅದು ಅತ್ಯಂತ ವಿಶೇಷ ಸ್ಟೋರಿ ಏಕೆ ಎಂದರೆ, ಆ ಕಥೆಯು ಭಾರತದ ಹಳ್ಳಿಯ ಅತ್ಯಂತ ಸಾಮಾನ್ಯ ವ್ಯಕ್ತಿ, ಆಚರಣೆಗಳನ್ನು ಪಾಲಿಸುವ ವ್ಯಕ್ತಿ, ಓದುಬರಹ ಕಲಿಯದ ವ್ಯಕ್ತಿ, ಯಾವುದೇ ವಿಶೇಷ ʼಜಾಣ್ಮೆʼಯನ್ನು ಹೊಂದಿರದ ವ್ಯಕ್ತಿಯನ್ನು ಮನುಷ್ಯನನ್ನಾಗಿಸಿತ್ತು. ಸಿನೆಮಾದಲ್ಲಿ ಪಾಸಿಂಗ್‌ ಶಾಟ್‌ ಆಗಿ ಸಾಗುವ ವ್ಯಕ್ತಿಯನ್ನು ಪ್ರೊಟಾಗನಿಸ್ಟ್‌ ಆಗಿಸಿತ್ತು, ಮಾಸಿದ ಬಟ್ಟೆ ಧರಿಸಿ, ಮುಖದಲ್ಲಿ, ಹಾವಭಾವದಲ್ಲಿ ಯಾವ ವಿಶೇಷತೆಯನ್ನೂ ಹೊಂದದೆ, ರಸ್ತೆಯಲ್ಲಿ ಜನಜಂಗುಳಾಗಿ ಕಣ್ಣಿಗೆ ಕಾಣದಿರುವ ವ್ಯಕ್ತಿ ಮನುಷ್ಯನಾಗಿದ್ದ. ಅಂಥ ಮನುಷ್ಯನ ವಿಷಯಗಳೂ, ಸಮಸ್ಯೆಗಳೂ ಸಮಸ್ಯೆಗಳಲ್ಲವೇ ಎಂಬುದು ಕಂಡಿತ್ತು.

ಅದೇ ಪುಸ್ತಕದ ಇನ್ನೊಂದು ಕಥೆ ʼರಿಟರ್ನ್‌ ಆಫ್‌ ಅನ ಆರ್ಟಿಸ್ಟ್‌ʼ. ಈ ಕಥೆಯಲ್ಲಿ ಬುಡಕಟ್ಟು ಸಮುದಾಯದ ಒಬ್ಬ ಕಲಾವಿದನ ಬಗ್ಗೆ ಬರೆಯುತ್ತಾರೆ. ಹೇಗೆ ಆ ಕಲಾವಿದನ ಕಲೆಯನ್ನು ಗುರುತಿಸಿದ್ದು, ನಂತರ ಅವರಿಗೆ ಖ್ಯಾತಿ ಬಂದಿದ್ದು ಎಂಬುದರ ಬಗ್ಗೆ ಬರೆದು. ಆ ಕಲಾವಿದ, ಇನ್ನೊಬ್ಬ ವ್ಯಕ್ತಿಯೊಂದಿಗೆ ಕಲಾವಿದನ ಊರಿಗೆ ಪ್ರಯಾಣ ಬೆಳೆಸುತ್ತಾರೆ ಮಾರ್ಕ್‌ ಟಲಿ, ಆ ಪ್ರಯಾಣದ ದಾಖಲೆಯೇ ಈ ಕಥೆ. ಈ ಕಥೆಯ ಪ್ರೊಟಾಗನಿಸ್ಟ್‌ ವಿಶೇಷ ವ್ಯಕ್ತಿ, ಈಗಾಗಲೇ ಖ್ಯಾತಿ ಸಿಕ್ಕಿದೆ. ಖ್ಯಾತಿವೆತ್ತ ಕಲಾವಿದನ ಮೂಲವನ್ನು ಹುಡುಕುತ್ತ, ಆ ಊರುಗಳು, ಅಲ್ಲಿನ ಜನರನ್ನು ಕಂಡುಕೊಳ್ಳುತ್ತಾರೆ. ಕಲಾವಿದನ ಊರಿನ ವ್ಯಕ್ತಿಗಳನ್ನು ನೋಡಿದಾಗ ʼಈ ಎಲ್ಲ ಜನರನ್ನು ನಾನು ಕಟ್ಟಡ ನಿರ್ಮಾಣದ ಕಾರ್ಮಿಕರೋ ಅಥವಾ ಅಂಥದೇ ಇನ್ನಾವುದೋ ಕೆಲಸದಲ್ಲಿ ತೊಡಗಿದವರು ಎಂದಷ್ಟೇ ನೋಡುತ್ತಿದ್ದೆ. ಈಗ ಇವರನ್ನು ನೋಡಿದಾಗ ʼಆ ಒಬ್ಬ ಕಟ್ಟಡ ಕಟ್ಟುವ ಕಾರ್ಮಿಕನೂ ಕಲಾವಿದನಾಗಿರಬಹುದಲ್ಲʼ ಎಂದು ಬರೆದುಕೊಂಡಿದ್ದಾರೆ. ಈ ಕಥೆಯಲ್ಲಿ ಆ ಪ್ರದೇಶದ ಜನರ ಹೇಗೆ ನೋಡಿದರು ಎಂಬುದರ ಜೊತೆಗೆ ಈ ಕಲಾವಿದನ ಚಿತ್ರಣ ಕೊಡುವಾಗ ಒಂದು ಪ್ರಸಂಗವನ್ನು ಉಲ್ಲೇಖಿಸುತ್ತಾರೆ. ಟಲಿ ಅವರೊಂದಿಗೆ ಪ್ರಯಾಣ ಮಾಡುತ್ತಿದ್ದ ಒಬ್ಬ ವ್ಯಕ್ತಿಯು ಈ ಬುಡಕಟ್ಟು ಸಮುದಾಯದ ಕಲಾವಿದನ ಖ್ಯಾತಿಯ ಒಟ್ಟಾರೆ ಕ್ರೆಡಿಟ್‌ಅನ್ನು ಕಲೆಯನ್ನು ಗುರುತಿಸಿದ ಒಬ್ಬ ಪ್ರೊಫೆಸರ್‌ಗೆ ಸಲ್ಲಿಸುತ್ತಾರೆ, ಅದನ್ನು ಕಲಾವಿದ ಒಪ್ಪುವುದಿಲ್ಲ. ಎಲ್ಲವನ್ನೂ ʼಎಜ್ಯುಕೇಟೆಡ್‌ʼ ವ್ಯಕ್ತಿಗಳ ದೃಷ್ಟಿಯಿಂದಲೇ ನೋಡುವ ರೂಢಿಯನ್ನು ಮಾಡಿಕೊಂಡ ನಮಗೆ ಮತ್ತು ಇನ್ನೊಬ್ಬ ವ್ಯಕ್ತಿಗೆ ಕಲಾವಿದ ದುರಹಂಕಾರಿ ಅನ್ನಿಸಬಹುದು ಆದರೆ ಮಾರ್ಕ್‌ ಟಲಿ ಹಾಗೆ ನೋಡುವುದಿಲ್ಲ. ಪ್ರೊಫೆಸರ್‌ ಮತ್ತು ಈ ಕಲಾವಿದನನ್ನು ನೋಡುವಾಗ ಯಾವುದೇ ಬಯಾಸ್‌ ಇಟ್ಟುಕೊಳ್ಳದೇ ನೋಡಿ, ನನ್ನಂತಹ ಪರ್ಫೆಕ್ಟ್‌ ಓದುಗನಿಗೆ ಹೊಸ ಆಯಾಮ ನೀಡುತ್ತಾರೆ.

ಹೌದು, ಭಾರತೀಯ ವಿಷಯಗಳನ್ನು ನೋಡುವಾಗ ಕೆಲವೊಮ್ಮೆ ಅವುಗಳನ್ನು ರೋಮಾಂಟಿಸೈಜ್‌ ಮಾಡುತ್ತಾರೆ ಎಂಬ ಟೀಕೆಯಲ್ಲಿ ಹುರುಳಿದೆ. ಸೂರ್ಯ ಉದಯಿಸುವ ಸಮಯದಲ್ಲಿ ನದಿಯಲ್ಲಿಯೋ ಹೊಳೆಯಲ್ಲಿಯೋ ನಡುನೀರಲ್ಲಿ ಮುಳುಗಿ ಸೂರ್ಯನಿಗೆ ನಮಸ್ಕರಿಸುವ ವ್ಯಕ್ತಿಯನ್ನು ನೋಡಿ ಪುಳಕಿತರಾಗುತ್ತಾರೆ, ಈ ದೇಶವನ್ನು ನಾನು ಹೇಗೆ ಬಿಟ್ಟುಹೋಗಬಲ್ಲೇ ಎಂದು ಕೇಳಿಕೊಳ್ಳುತ್ತಾರೆ. ಹಾಗೆಯೇ ಮುಂದುವರೆದು ಟಿವಿಯಲ್ಲಿ ಬಂದ ರಾಮಾನಂದ ಸಾಗರ ಅವರ ಧಾರಾವಾಹಿ ರಾಮಾಯಣದ ಬಗ್ಗೆ ಬರೆಯುತ್ತಾರೆ. ಹೇಗೆ ರಾಮಾನಂದ ಸಾಗರ ಕೆಟ್ಟದಾಗಿ ತಮ್ಮದೇ ಆದ ರಾಮಾಯಣವನ್ನು ಬರೆದು, ಕ್ಯಾಲೆಂಡರ್‌ನಲ್ಲಿ ಕಾಣುವಂತಹ ದೇವರಂತೆ ಪಾತ್ರಗಳನ್ನು ಚಿತ್ರಿಸಿ ಇಡೀ ದೇಶದಲ್ಲಿ ಸಂಚಲನ ಮೂಡಿಸಿದ್ದನ್ನು ದಾಖಲಿಸುತ್ತಾರೆ. ಇನ್ನೂ ಹಳ್ಳಿಗಳಲ್ಲೇ ಇದ್ದ ಭಾರತವು ಹೇಗೆ ʼನ್ಯೂಕ್ಲಿಯರ್‌ ಫ್ಯಾಮಿಲಿʼಯ ಸಾಬೂನಿನ, ಶಾಂಪೂವಿನ ಜಾಹೀರಾತುಗಳನ್ನು ನೋಡಿದರು ಎಂಬುದರ ಬಗ್ಗೆ, ಜನರೆಲ್ಲ ಹುಚ್ಚೆದ್ದು ಟಿವಿ ಇದ್ದ ಮನೆಗಳನ್ನು ಹುಡುಕಿ ಧಾರಾವಾಹಿಯನ್ನು ನೋಡಿದ್ದು, ಟಿವಿಯನ್ನು ನೋಡಿದ್ದನ್ನು ವಿವರಿಸುತ್ತಾರೆ. ರಾಮಾಯಣ ಶುರುವಾದ ಸಮಯದಲ್ಲೇ ಕಣ್ತೆರೆದ ನನಗೆ ಇವುಗಳ ಅಸ್ಪಷ್ಟ ನೆನಪಿದೆ. ಆದರೆ, ಯಾಕ್ಹಿಂಗೆ ಮುಗಿಬಿದ್ದು ಕೆಟ್ಟದಾಗಿ ಚಿತ್ರಿಸಿದ್ದ ಧಾರಾವಾಹಿಯನ್ನು ನೋಡಿದರು ಎಂಬ ಪ್ರಶ್ನೆ ಕೇಳಿಕೊಂಡರೆ, ಸಮೂಹ ಸನ್ನಿ ಎಂದು ಉತ್ತರಿಸುತ್ತಿದ್ದೆನೇನೋ. ಆ ಒಟ್ಟಾರೆ ವಿದ್ಯಮಾನವನ್ನೂ ಸಕಾರಾತ್ಮವಾಗಿ ನೋಡಲು ಸಾಧ್ಯ ಎಂದು ತೋರಿಸಿಕೊಟ್ಟರು. ಅಂದಹಾಗೆ, ಕೆಲವು ದಶಕಗಳ ನಂತರ ಈ ವಿಷಯಕ್ಕೆ ಮರಳಿ, ತಾನು ನೋಡುವ ರೀತಿಯಲ್ಲಿ ತಪ್ಪಿತ್ತೇನೋ ಎಂಬುದನ್ನು ಶೋಧಿಸುವ ಪ್ರಯತ್ನವನ್ನು ಇನ್ನೊಂದು ಪುಸ್ತಕದಲ್ಲಿ ಮಾಡಿದ್ದಾರೆ.

ಇದೇ ರೀತಿ ಕುಂಭ ಮೇಳವನ್ನೂ, ರೂಪ್‌ ಕನ್ವರ್‌ ಸತಿ ಪ್ರಕರಣವನ್ನೂ, ಆಪರೇಷನ್‌ ಬ್ಲ್ಯಾಕ್‌ ಥಂಡರ್‌ ಅನ್ನೂ ಕವರ್‌ ಮಾಡುತ್ತಾರೆ. ಯಾವುದರ ಬಗ್ಗೆಯೂ ಜಜ್‌ಮೆಂಟಲ್‌ ಆಗದೇ, ವಿಷಯದ ಆಳಕ್ಕೆ ಹೋಗುವ ಪ್ರಯತ್ನ ಮಾಡುತ್ತಾರೆ. ಈಗ ಆದ ಕುಂಭಮೇಳಕ್ಕೂ ಎಂಬತ್ತರ ದಶಕದಲ್ಲಿ ಆದ ಕುಂಭಮೇಳಕ್ಕೂ ವ್ಯತ್ಯಾಸವಿದೆ ಎಂದುಕೊಳ್ಳೋಣ. ಆಗಿನ ಕುಂಭಮೇಳವನ್ನು ರಾಜಕೀಯ ಲಾಭಕ್ಕೋಸ್ಕರ ಬಳಸಿಕೊಂಡಿದ್ದಿಲ್ಲ ಎಂದು ನಾನು ನಂಬಲೆತ್ನಿಸುತ್ತಿದ್ದೇನೆ.‌

Advertisements
ದಿಗ್ವಿಜಯ್‌ ಸಿಂಗ್

ಪುಸ್ತಕದ ಕೊನೆಯಲ್ಲಿ ಬರುವ ಡೆಥ್‌ ಆಫ್‌ ಅ ಕಾಂಗ್ರೆಸ್‌ಮನ್‌ ಎಂಬ ಕಥೆಯು ಬಿಹಾರದ ಫ್ಯೂಡಲ್‌ ವ್ಯವಸ್ಥೆಯನ್ನು ಪ್ರತಿನಿಧಿಸುವ ರಾಜಕಾರಣಿ, ದಿಗ್ವಿಜಯ್‌ ನಾರಾಯಣ ಸಿಂಗ್‌ ಎಂಬ ಶ್ರೀಮಂತ ಜಮೀನುದಾರ, ಅನೇಕ ದಶಕಗಳ (ಆರು ಬಾರಿ) ಕಾಲ ಲೋಕಸಭೆಯಲ್ಲಿ ಬಿಹಾರವನ್ನು ಪ್ರತಿನಿಧಿಸಿದ ʼಪ್ರಾಮಾಣಿಕʼ ರಾಜಕಾರಣಿ. ಪಕ್ಷದಿಂದ ಹಣ ಪಡೆಯದೇ ನೂರಾರು ಎಕರೆ ಜಮೀನನ್ನು ದಾನ ಮಾಡಿದ ವ್ಯಕ್ತಿ. ಮಾರ್ಕ್‌ ಟಲಿ ಈ ಸ್ಟೋರಿ ಬರೆಯದಿದ್ದರೆ, ಈ ದಿಗ್ವಿಜಯ್‌ ಸಿಂಗ್‌ ಅವರನ್ನು ಹೇಗೆ ನೋಡುತ್ತಿದ್ದೆ? ಮೊದಲನೆಯದಾಗಿ, ಇಂತಹ ಒಬ್ಬ ವ್ಯಕ್ತಿ ಇದ್ದರು ಎಂಬುದೇ ನನಗೆ ಗೊತ್ತಾಗುತ್ತಿರಲಿಲ್ಲ. ಒಂದು ವೇಳೆ, ಯಾವುದೋ ಒಂದು ಆಕಸ್ಮಿಕದ ಕಾರಣದಿಂದ ಇವರ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರೆ? ಸ್ವಾತಂತ್ರೋತ್ತರ ಕಾಲದ ಒಬ್ಬ ಪ್ರಭಾವಿ ರಾಜಕಾರಿಣಿ, ಅಧಿಕಾರ ಕೇಂದ್ರದೊಂದಿಗೆ ನಿಕಟ ಸಂಬಂಧವಿಟ್ಟುಕೊಂಡಿದ್ದ, ಬೂತ್‌ ಕ್ಯಾಪ್ಚರಿಂಗ್‌ ಮಾಡಿದ್ದ, ದೇಶಕ್ಕೆ ಸ್ವಾತಂತ್ರ ಬಂದ ಸುವರ್ಣ ಅವಕಾಶವನ್ನು ಬಳಸಿಕೊಳ್ಳದ ಇನ್ನೊಬ್ಬ ರಾಜಕಾರಣಿ ಎಂದು ಸಂಖ್ಯೆಯಲ್ಲಿ ಜೋಡಿಸಿಬಿಡುತ್ತಿದ್ದೆ. ಮಾರ್ಕ್‌ ಟಲಿ ಅವರ ಕಥೆ ಓದಿದ ನಂತರ ನಾನೇನು ಅಭಿಮಾನಿಯಾಗಿಲ್ಲ, ಎಂಥ ಅದ್ಭುತ ವ್ಯಕ್ತಿ ಎಂದು ಉದ್ಗಾರ ಎತ್ತುತ್ತಿಲ್ಲ. ಆ ಕಾಲವನ್ನು, ಅಲ್ಲಿನ ಪರಿಸ್ಥಿತಿಯನ್ನು, ಆ ಜಾಗವನ್ನು ನನ್ನದಾಗಿ ನೋಡುತ್ತಿದ್ದೇನೆ, ಅರ್ಥಮಾಡಿಕೊಳ್ಳುತ್ತಿದ್ದೇನಷ್ಟೆ. ಹಾಗೂ, ಒಂದು ಸಾಹಿತ್ಯದ(ಇದನ್ನು ಸಾಹಿತ್ಯ ಎಂದು ಕರೆಯಬಹುದಾದರೆ) ಉತ್ಕೃಷ್ಟ ತುಣಕನ್ನು ಆನಂದಿಸಿದೆ ಎನ್ನಬಹುದು.

ಹುಡುಕಾಟ | ‘ಸುಳ್ಳು ಕಾರಣಗಳನ್ನು ಬಿಡೋಣ, ಸತ್ಯವನ್ನು ಒಪ್ಪಿಕೊಳ್ಳೋಣ’

ಆಚರಣೆಯ ಧರ್ಮದಲ್ಲಿ ಅಡಗಿರುವ ಕಂದಾಚಾರವನ್ನು, ಅನ್ಯಾಯವನ್ನು, ಅಸಮಾನತೆಯನ್ನು ನೋಡುತ್ತ ಬೆಳೆದ, ಅದರ ಬಗ್ಗೆಯೇ ಓದುತ್ತ ಬೆಳೆದ ನನಗೆ ಇವೆಲ್ಲವನ್ನು ಸೆಲಬ್ರೇಟ್‌ ಮಾಡುವ ಅವಶ್ಯಕತೆ ಬಹುಶಃ ಇಲ್ಲ. ಆದರೆ, ಇವೆಲ್ಲವನ್ನು ನನ್ನದ್ದಾಗಿ ನೋಡದೇ ಹೋದರೆ. ಈ ಎಲ್ಲವನ್ನು ಕಂಪ್ಯಾಷನೇಟ್‌ ಆಗಿ ನೋಡದೇ ಹೋದರೆ? ಒಟ್ಟಾರೆ ಜನಸಂಖ್ಯೆಯ ತೊಂಬತ್ತು ಪರ್ಸೆಂಟ್‌ ಜನರು ಮೂರ್ಖರು ಎಂದು ತೀರ್ಪು ಕೊಟ್ಟರೆ, ನಾನೇನಾದರೂ ಸಮಾಜಕ್ಕೆ ಕೊಡಬಲ್ಲೆನೆ?
ಈ ಪುಸ್ತಕದಲ್ಲಿ ಇನ್ನೂ ಹಲವು ವಿಷಯಗಳಿವೆ. ಭಾರತವು ಜಾಗತೀರಣಕ್ಕೆ ತೆರೆದುಕೊಳ್ಳುತ್ತಿರುವ ಸಮಯದಲ್ಲಿ ಬಂದ ಈ ಪುಸ್ತಕದಲ್ಲಿ ʼಈ ಉದಾರೀಕರಣʼ ಪರಿಣಾಮವಾಗಿ ಒಂದು ʼegalitarian’ ಸಮಾಜದ ಕಲ್ಪನೆ ಹುಟ್ಟಿಸಿ, ಅದರಲ್ಲಿ ʼಅನಿವಾರ್ಯವಾಗಿ ವಿಫಲʼರಾಗುವ (inevitable failures) ಹೆಚ್ಚಿನವರ ಬಗ್ಗೆ ಏನಾಗಬಹುದು ಎಂದು ಎಚ್ಚರಿಸುತ್ತಾರೆ. ಆ ಎಲ್ಲದರ ಬಗ್ಗೆ ಬರೆಯುತ್ತಿಲ್ಲ ಏಕೆಂದರೆ ಈ ಪುಸ್ತಕ ನನ್ನ ಮೇಲೆ ಬೀರಿದ ಪರಿಣಾಮದ ಬಗ್ಗೆಯಷ್ಟೇ ಬರೆಯುವ ಪ್ರಯತ್ನ ಮಾಡಿದ್ದೇನೆ. ಓದಿ ಇಪ್ಪತ್ತು ವರ್ಷಗಳ ನಂತರವೂ ಪರಿಣಾಮದ ಮಹತ್ವ ಇನ್ನೂ ಉಳಿದಿದ್ದರಿಂದ ಇದನ್ನು ದಾಖಲಿಸಿದ್ದೇನೆ.

WhatsApp Image 2023 05 02 at 1.02.32 PM
ರಾಜಶೇಖರ್‌ ಅಕ್ಕಿ
+ posts

ಸಾಮಾಜಿಕ ಕಾರ್ಯಕರ್ತ. ನಾಟಕ ಮತ್ತು ಸಿನೆಮಾ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ʼಜಾಗೃತ ಕರ್ನಾಟಕʼದ ಸಕ್ರಿಯ ಸದಸ್ಯ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ರಾಜಶೇಖರ್‌ ಅಕ್ಕಿ
ರಾಜಶೇಖರ್‌ ಅಕ್ಕಿ
ಸಾಮಾಜಿಕ ಕಾರ್ಯಕರ್ತ. ನಾಟಕ ಮತ್ತು ಸಿನೆಮಾ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ʼಜಾಗೃತ ಕರ್ನಾಟಕʼದ ಸಕ್ರಿಯ ಸದಸ್ಯ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಚನಯಾನ | ಸನಾತನ ಧರ್ಮವು ಶರಣ ಧರ್ಮಕ್ಕೆ ಶರಣಾಗತವಾಗಿದೆ

ಶರಣರು ಸನಾತನ ಬ್ರಾಹ್ಮಣ ಧರ್ಮದ ಷಡ್ದರ್ಶನ ಪರಿಕಲ್ಪನೆಯನ್ನು ಹಾಗೂ ಸಮಯಾದಿ ಶೈವಗಳೆಲ್ಲವನ್ನು...

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

Download Eedina App Android / iOS

X